ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರ, ಆರೋಗ್ಯ ನಂದನ ಅಡಿಯಲ್ಲಿ ಉಚಿತ ಚಿಕಿತ್ಸೆ: ಜಿಪಂ ಸಿಇಒ ನಂದಿನಿ ಕೆ.ಆರ್

0
107

ಬಳ್ಳಾರಿ,ಅ.01: ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಮಗು ಹುಟ್ಟಿದ ಮೂರು ವರ್ಷಗಳ ಕಾಲ ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳ ತಜ್ಞರಿಂದ ಪರೀಕ್ಷೆ ಮಾಡಿಸಿ ಎಂದು ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯಲ್ಲಿ ಆರೋಗ್ಯ ನಂದನ ಅಭಿಯಾನದಡಿಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಆವರಣದ ಮಕ್ಕಳ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮಗು ಹುಟ್ಟಿದ ಮೂರು ವರ್ಷಗಳ ಕಾಲ ಯಾವುದೇ ನಿರ್ಲಕ್ಷ್ಯ ವಹಿಸಿದೆ ಮಕ್ಕಳ ತಜ್ಞರಿಂದ ಅಗತ್ಯ ಚಿಕಿತ್ಸೆ ಪಡೆಯಿರಿ. ಚಿಕಿತ್ಸೆಗಾಗಿ ಹಣ ಖರ್ಚಾಗಬಹುದು ಎಂದು ಯಾರೂ ಚಿಂತಿಸಬೇಡಿ, ಆರೋಗ್ಯ ನಂದನ ಕಾರ್ಯಕ್ರಮದಡಿಯಲ್ಲಿ ಎಲ್ಲ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.
ಇಂದು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರಿದ್ದಾರೆ;ಅವರಿಂದ ಚಿಕಿತ್ಸೆ ಪಡೆಯಿರಿ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶೇ.90 ರಷ್ಟು ರೋಗಗಳನ್ನು ತಡೆಗಟ್ಟಬಹುದಾದ ವೈದ್ಯಕೀಯ ಸೌಲಭ್ಯಗಳಿವೆ. ಇದರ ಸದುಪಯೋಗ ಪಡೆದುಕೊಂಡು ಎಲ್ಲಾ ಮಕ್ಕಳಿಗೆ ಉತ್ತಮ ಆರೋಗ್ಯ ನೀಡೋಣ ಎಂದರು.
ಅಪೌಷ್ಟಿಕತೆ ಮಕ್ಕಳಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿ, ಜಿಲ್ಲೆಯ ಎಲ್ಲ ಮಕ್ಕಳಿಗೆ ಒಂದಲ್ಲ ಒಂದು ಸಮಸ್ಯೆಯಿದೆ ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡುವ ಕೆಲಸ ಮಾಡಿ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಮಾತನಾಡಿ ಅಂಗವಿಕಲತೆ ಸಾಧನೆಗೆ ತೊಂದರೆ ಯಾಗಬಾರದು. ಅಂಗವಿಕಲತೆ ಮುನ್ನಟ್ಟಿ ಮುಂದೆ ಸಾಗಬೇಕು. ಕಾಯಿಲೆ ಕಾಣಿಸಿಕೊಂಡ ಪ್ರಾರಂಭದಲ್ಲಿಯೇ ಅದನ್ನು ಗುರುತಿಸಿ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುತ್ತದೆ. ಇಂದಿನ ಶಿಬಿರದಲ್ಲಿ 275 ಮಕ್ಕಳನ್ನು ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಪೋಷಕರು ಎದೆಗುಂದದೆ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ಆರೋಗ್ಯ ನಂದನ ಅಡಿಯಲ್ಲಿ ಮಕ್ಕಳಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಿದ್ದು, ಈ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು
ಈ ಸಮಯದಲ್ಲಿ ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಮಕ್ಕಳ ತಜ್ಞ ಡಾ.ಬಸವಪ್ರಭು ಅವರು ಮಾತನಾಡಿದರು.
ಈ ಸಮಯದಲ್ಲಿ ಜಿಲ್ಲಾ ಆರ್ಸಿಹೆಚ್‍ಒ ಅಧಿಕಾರಿ ಡಾ.ಅನಿಲ್ ಕುಮಾರ್ ಮತ್ತು ವೈದ್ಯಕೀಯ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here