ಮೂರು ತಿಂಗಳಲ್ಲಿ ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ:ಪಿ.ರಾಜೀವ

0
130

ಕಲಬುರಗಿ.ಅ.11-ಕಲಬುರಗಿ ಜಿಲ್ಲೆಯಲ್ಲಿರುವ ತಾಂಡಾಗಳನ್ನು 3 ತಿಂಗಳೊಳಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಹೇಳಿದರು.
ಸೋಮವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಸಂಬಂಧ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ರಾಜ್ಯದಾದ್ಯಂತ 1200 ತಂಡಾಗಳನ್ನು ಕಂದಾಯ ಗ್ರಾಮವನ್ನಾಗಿಸಬೇಕಾಗಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯ ಲಂಬಾಣಿ ತಾಂಡಾ, ಗೊಲ್ಲಹಟ್ಟಿದಂತಹ 483 ಅನಧಿಕೃತ ಜನವಸತಿ ಪ್ರದೇಶಗಳಿವೆ. ಇಂತಹ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಉಪ ಗ್ರಾಮವನ್ನಾಗಿ ಪರಿಗಣಿಸಿ ಅಲ್ಲಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ಸರ್ಕಾರದ ಆಶಯ ಮತ್ತು ಪ್ರಥಮಾದ್ಯತೆವಾಗಿದೆ. ಈ ಕಾರ್ಯದಲ್ಲಿ ಕಲಬುರಗಿ ಜಿಲ್ಲೆ ಮುಂಚೂಣಿಯಲ್ಲಿರುವ ಕಾರಣ ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಂಡಿದ್ದು, ಮುಂದಿನ 3 ತಿಂಗಳೊಳಗೆ ಇಲ್ಲಿ ಕಂದಾಯ ಸಚಿವರಿಂದ ಹಕ್ಕು ಪತ್ರ ವಿತರಿಸುವ ಯೋಜನೆ ಹೊಂದಿದ್ದೇವೆ ಎಂದರು.
ಸ್ವಾಮಿತ್ವ ಯೋಜನೆ ಬಳಸಿಕೊಂಡು 483 ತಾಂಡಾಗಳಲ್ಲಿ ಏಕಕಾಲದಲ್ಲಿ ಸರ್ವೇ ಮಾಡಿ ಹಕ್ಕು ಪತ ವಿತರಣೆ ಕ್ರಮ ವಹಿಸಬೇಕು. ಇದಕ್ಕೆ ಅಗತ್ಯವಿರವ 35 ಸರ್ವೇಯರ್‍ಗಳ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಸರ್ವೇಯರ್‍ಗಳನ್ನು ಪೂರೈಸಲಾಗುವುದು ಎಂದ ಪಿ. ರಾಜೀವ ಅವರು ಈ ಸಂಬಂಧ ತಾಂಡಾ ಹಕ್ಕು ಪತ್ರ ವಿತರಣೆ ಕುರಿತಂತೆ ವಹಿ ನಿರ್ವಹಣೆ ಮತ್ತು ದಾಖಲೀಕರಣ ಕುರಿತು ಎಲ್ಲಾ ತಹಶೀಲ್ದಾರರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಂಡಾ ಅಭಿವೃದ್ಧಿ ನಿಗಮವು ಜಿಲ್ಲೆಯಲ್ಲಿ ಕಂದಾಯ ಗ್ರಾಮಕ್ಕಾಗಿ 483 ತಾಂಡಾಗಳನ್ನು ಗುರುತಿಸಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಕಂದಾಯ ಇಲಾಖೆ 439 ಜನವಸತಿ ಪ್ರದೇಶಗಳನ್ನು ಮಾತ್ರ ಗುರುತಿಸಿದೆ. ಈ ವ್ಯತ್ಯಾಸವನ್ನು ಅಧಿಕಾರಿಗಳ ಪರಸ್ಪರ ಸಮನ್ವಯ ಸಾಧಿಸಿ ಬಗೆಹರಿಸಿಕೊಳ್ಳಬೇಕು ಎಂದು ಪಿ. ರಾಜೀವ ತಿಳಿಸಿದರು.
100 ಮನೆಗಳಿರುವ ತಾಂಡಾಗಳಲ್ಲಿ ಪಡಿತರ ಅಂಗಡಿ ಸ್ಥಾಪಿಸಿ: 100 ಮನೆಗಳಿರುವ ತಾಂಡಾಗಳಲ್ಲಿಯೆ ಪಡಿತರ ಅಂಗಡಿ ಸ್ಥಾಪಿಸಿ ಪಡಿತರ ಪದಾರ್ಥಗಳನ್ನು ನೀಡಬೇಕೆಂದು ಆಹಾರ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಂತೆ ಜಿಲ್ಲೆಯ ತಾಂಡಾ ಪ್ರದೇಶಗಳಲ್ಲಿ ಪಡಿತರ ಅಂಗಡಿ ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಪಿ. ರಾಜೀವ ಸೂಚಿಸಿದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೆ 19 ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಅಚಿತಿಮ ಅಧಿಸೂಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ತಾಂಡಾಗಳಲ್ಲಿ ಪ್ರತಿ ತಾಲೂಕಿನಲ್ಲಿ ಒಂದು ತಾಂಡಾ ಆಯ್ಕೆ ಮಾಡಿಕೊಂಡು ಕೂಡಲೆ ಸರ್ವೇ ಕಾರ್ಯ ಶುರು ಮಾಡಬೇಕು. ಇದರ ಸಾಧಕ-ಬಾಧಕ ನೋಡಿ ಉಳಿದ ಎಲ್ಲಾ ತಾಂಡಾಗಳನ್ನು ಹಂತ ಹಂತವಾಗಿ ತ್ವರಿತಗತಿಯಲ್ಲಿ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ, ಕಲಬುರಗಿ ಎ.ಸಿ. ಮೋನಾ ರೂಟ್, ಸೇಡಂ ಎ.ಸಿ. ಬಿ.ವಿ.ಅಶ್ವಿಜಾ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯಕ್, ನಿಗಮದ ನಿರ್ದೇಶಕರುಗಳಾದ ಮನೋಹರ ಪವಾರ, ಹಣಮಂತ ಉದನೂರ, ಸಂಯೋಜಕರಾದ ಕೆ.ಎಲ್.ಪೂಜಾರ, ಡಾ.ರಮೇಶ ನಾಯಕ್, ಬೆಳಗಾವಿ ವಿಭಾಗದ ಅಪರ ಪ್ರಾದೇಶಿಕ ಆಯುಕ್ತೆ ನಜ್ಮಾ ಫಿರ್ಜಾದೆ, ಡಿ.ಡಿ.ಎಲ್.ಆರ್ ಶಂಕರ, ನಿಗಮದ ಜಿಲ್ಲಾ ಅಧಿಕಾರಿ ಸೂರ್ಯಕಾಂತ ರಾಠೋಡ ಸೇರಿದಂತೆ ತಾಲೂಕಿನ ತಹಶೀಲ್ದಾರರು ಇದ್ದರು.

LEAVE A REPLY

Please enter your comment!
Please enter your name here