ಕರಾಟೆ ಕಲೆ ಆತ್ಮ ರಕ್ಷಣೆಗೆ ಸಹಕಾರಿ
-ಯಶ್ವಂತ ವಿ.ಗುರುಕರ್

0
94

ಕಲಬುರಗಿ.8.ವಸತಿ ನಿಲಯದ ಬಾಲಕೀಯರಿಗೆ ನೀಡಲಾಗುತ್ತಿರುವ ಕರಾಟೆ ಕೌಶಲ್ಯ ತರಬೇತಿ ಸ್ವಯಂ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ತಿಳಿಸಿದರು.

ಮಂಗಳವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿದ “ಓಬವ್ವ ಸ್ವಯಂ ಆತ್ಮ ರಕ್ಷಣೆ ಕೌಶಲ್ಯ” ತರಬೇತಿ ಕಾರ್ಯಕ್ರಮವನ್ನು ಬಲೂನ್‍ಗಳನ್ನು ಗಾಳಿಯಲ್ಲಿ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕರಾಟೆ ಕಲೆ ಆತ್ಮ ರಕ್ಷಣೆಗಿದ್ದು, ಇದನ್ನು ದುರಪಯೋಗ ಮಾಡಿಕೊಳ್ಳಬಾರದು. ಕರಾಟೆ ತರಬೇತಿ ಪಡೆಯುವುದರಿಂದ ಆತ್ಮ ಬಲ ಮತ್ತು ಮಾನಸಿಕವಾಗಿ ಸದೃಢವಾಗಲು ಮತ್ತು ಉತ್ತಮ ಆರೋಗ್ಯ ಸಹ ಕಾಪಾಡಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ ಮಾತನಾಡಿ ವಸತಿ ನಿಲಯದ ವಿದ್ಯಾರ್ಥಿನಿಯರ ರಕ್ಷಣೆಗಾಗಿ ನಮ್ಮ ಸರ್ಕಾರ ಆತ್ಮ ರಕ್ಷಣೆಯ ಕೌಶಲ್ಯ ತರಬೇತಿ ನೀಡುವ ಹೊಸ ಯೋಜನೆ ಆರಂಭಿಸಿದ್ದು, ಎಲ್ಲಾ ವಿದ್ಯಾರ್ಥಿನಿಯರು ಇದರ ಲಾಭ ಪಡೆಯಬೇಕು. ಕರಾಟೆ ತರಬೇತಿಯಿಂದ ಉತ್ತಮ ಆರೋಗ್ಯ ವೃದ್ಧಿಯಾಗಲಿದೆ ಎಂದರು.

7 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ತರಬೇತಿ:

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ 29 ವಸತಿ ನಿಲಯದ 3000, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 13 ವಸತಿ ನಿಲಯದ 1500 ಹಾಗೂ ಕ್ರೈಸ್ ಸಂಸ್ಥೆಯ 11 ವಸತಿ ಶಾಲೆಗಳ 2750 ಸೇರಿ 7 ಸಾವಿರಕ್ಕೂ ಹೆಚ್ಚಿನ ಜಿಲ್ಲೆಯ ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆಯುತ್ತಿದ್ದಾರೆ. 6ನೇ ತರಗತಿಯಿಂದ ಮೇಲ್ಪಟ್ಟ ಬಾಲಕೀಯರಿಗೆ ವಾರಕ್ಕೆ 2 ಅವಧಿಯ ಕ್ಲಾಸ್ ಮತ್ತು ಮಾಹೆಗೆ 8 ಅವಧಿಯ ತರಬೇತಿ ನೀಡಲಾಗುತ್ತಿದೆ. ವಿವಿಧ ಸಂಸ್ಥೆಗಳ ಮಹಿಳಾ ಕರಾಟೆ ಶಿಕ್ಷಕರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿದ್ದು, ತರಬೇತಿದಾರರಿಗೆ ಮಾಹೆಯಾನ 4800 ರೂ. ಗೌರವ ಧನ ನೀಡಲಾಗುತ್ತದೆ ಎಂದು
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ರಮೇಶ ಸಂಗಾ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರಿಂದ ಕರಾಟೆ ಪ್ರದರ್ಶನ:

ವಿದ್ಯಾರ್ಥಿನಿಯರಿಗೆ ಕಳೆದ ಜನವರಿ ಒಂದರಿಂದಲೆ ಕರಾಟೆ ತರಬೇತಿ ಆರಂಭವಾಗಿದ್ದು, ಇಂದು ಅಧಿಕೃತ ತರಬೇತಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಒಂದು ತಿಂಗಳಿಂದ ತರಬೇತಿ ಪಡೆಯುತ್ತಿರುವ ಮಕ್ಕಳು ಇಂದಿಲ್ಲಿ ಉತ್ತರ ಕರ್ನಾಟಕ ಜೆನ್ ಶಿಟೋರಿಯಾ ಕರಾಟೆ ಶಾಲೆಯ ಉಪಾಧ್ಯಕ್ಷ ದಶರಥ ಎಸ್. ದುಮ್ಮನಸೂರ ಮತ್ತು ಬೋಧಕರ ಮಾರ್ಗದರ್ಶನದಲ್ಲಿ ಕಟಾ, ಟೈಲ್ಸ್ ಬ್ರೆಕ್, ಫೈರ್ ಟೈಲ್ಸ್ ಬ್ರೆಕ್, ಬ್ರಿಕ್ಸ್ ಬ್ರೆಕ್, ವುಡನ್ ಬ್ರೆಕ್, ಕೊಕೊನಟ್ ಬ್ರೆಕ್, ಸ್ಟೋನ್ ಬ್ರೆಕ್, ಅಫೆನ್ಸ್-ಡಿಫೆನ್ಸ್ ಕಲೆ ಪ್ರದರ್ಶಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಸಂಸ್ಥೆ ಆಯೋಜಿಸಿದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ ಆಕಾಂಕ್ಷಾ ಪ್ರಮೋದ ಪುರಾಣಿಕ್ ಅವರ ಕಟಾ ಪ್ರದರ್ಶನ ಸಭಿಕರ ಗಮನ ಸೆಳೆಯಿತು.

ಕ್ರೈಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಶಿವರಾಂ ಸೇರಿದಂತೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಕ್ರೈಸ್ ಸಂಸ್ಥೆಯ ವಸತಿ ಶಾಲೆಯ ಪ್ರಾಂಶುಪಾಲರು, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು.

LEAVE A REPLY

Please enter your comment!
Please enter your name here