ಗಡಿ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

0
48

ಕಲಬುರಗಿ,ಫೆ.6: ತೆಲಂಗಾಣಾ ಗಡಿಗೆ ಹತ್ತಿಕೊಂಡ ಸೇಡಂ ಮತ್ತು ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಆಳಂದ ಗಡಿ ತಾಲೂಕಿನಲ್ಲಿ ಮಂಗಳವಾರ ಸಂವಿದಾನ ಜಾಗೃತಿ ಜಾಥಾ ಸಂಚರಿಸಿ ಸಂವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಸಂವಿಧಾನ ಜಾಗೃತಿ ಜಾಥಾ ಹದಿಮೂರನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಸೇಡಂ ತಾಲ್ಲೂಕಿನ ರಿಬ್ಬನಪಲ್ಲಿ, ಲಿಂಗಂಪಲ್ಲಿ, ಮುಧೋಳ ಗ್ರಾಮಗಳಲ್ಲಿ ಹಾಗೂ ಆಳಂದ ತಾಲ್ಲೂಕಿನ ರುದ್ರವಾಡಿ, ಹೊದಲೂರ, ಅಳಂದ, ಖಜೂರಿ, ತಡೋಳ ಗ್ರಾಮಗಳಲ್ಲಿ ಸಂಚರಿಸಿ‌ ಸಂವಿಧಾನ ಮತ್ತು ಬಸವಣ್ಣನವರ ಸಮಾನತೆ ಸಂದೇಶ ಸಾರಿತು. ಮುದೋಳ ಗ್ರಾಮದಲ್ಲಿ ಸುಮಾರು 1,500 ಶಾಲಾ ಮಕ್ಕಳು ಉತ್ಸಾಹದಿಂದ ಜಾಥಾದಲ್ಲಿ ಭಾಗವಹಿಸಿದ್ದರು.

ಇದೇ‌ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು.

ಎತ್ತಿನ‌ ಬಂಡಿಯಲ್ಲಿ ಬಂದು ಸ್ವಾಗತ

ಸೇಡಂ ತಾಲೂಕಿನ ಗಡಿ ಗ್ರಾಮ ರಿಬ್ಬನಪಲ್ಲಿ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ಸ್ವಾಗತಕ್ಕೆ ಊರಿನ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಅಗಮಿಸಿ ಜಾಥಾಕ್ಕೆ‌ ಬರಮಾಡಿಕೊಂಡರು. ಎತ್ತಿನ‌ ಚಕಡಿಗೆ ಹಸಿರ ತೋರಣ ಕಟ್ಟಿ, ಹೂವಿನಿಂದ ಸಿಂಗರಿಸಲಾಗಿತ್ತು. ಸೇಡಂ ತಾಲೂಕ ಪಂಚಾಯತ್ ಇ.ಓ. ಚನ್ನಪ್ಪ ರಾಯಣ್ಣ, ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಮ್ಯಾನೇಜರ್ ಸಂತೋಷ್ ಸಿಂಧೆ ಅವರು ಎತ್ತಿನ ಬಂಡಿಯಲ್ಲಿ ಗ್ರಾಮದ ಪ್ರವೇಶ ದ್ವಾರಕ್ಕೆ ಬಂದು‌ ಜಾಥಾಕ್ಕೆ ಬರಮಾಡಿಕೊಂಡರು.

LEAVE A REPLY

Please enter your comment!
Please enter your name here