ಬಳ್ಳಾರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರಿಗೆ ಸಿಂಹ ಸ್ವಪ್ನದಂತೆ ಕಾಡಿದವರು: ಶಾಸಕ ಸೋಮಶೇಖರ ರೆಡ್ಡಿ

0
104

ಬಳ್ಳಾರಿ,ಅ.22 : ಧೈರ್ಯದಿಂದ ಮುನ್ನಡೆದರೆ ಯಾವುದೇ ಹೋರಾಟವಾದರು ಗೆದ್ದೇ ಗೆಲ್ಲುತ್ತೇವೆ ಎನ್ನುವುದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಒಂದು ಸೂಕ್ತ ನಿದರ್ಶನ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟೀμï ಸೈನಿಕರಿಗೆ ಸಿಂಹ ಸ್ವಪ್ನದಂತೆ ಕಾಡಿದವರು ಕಿತ್ತೂರು ರಾಣಿ ಚೆನ್ನಮ್ಮ. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ಕೇವಲ ಒಂದು ಕುಲಕ್ಕೆ, ಪಂಗಡಕ್ಕೆ ಸೀಮಿತವಲ್ಲ, ಸಮಾಜದ ಎಲ್ಲ ಸಮುದಾಯದವರು ಚೆನ್ನಮ್ಮ ಅವರ ಜಯಂತಿಯಲ್ಲಿ ಪಾಲ್ಗೊಳ್ಳಬೇಕು. ಎಲ್ಲರು ಸೇರಿ ಜಯಂತಿ ಆಚರಿಸುವುದು ನಮ್ಮ ಕರ್ತವ್ಯ ಎಂದರು.
ಮುಂದಿನ ಹಲವು ಪೀಳಿಗೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರು ಇರುತ್ತದೆ. ಹಲವಾರು ಹೋರಾಟಗಳು, ಅನೇಕರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರೆತಿದೆ. ಪ್ರತಿಯೊಬ್ಬರು ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ವಿಚಾರಗಳನ್ನು ಅರಿತು ಬಾಳಬೇಕಿದೆ. ಸ್ವಾತಂತ್ರ್ಯದ ಬಗ್ಗೆ ಮಾಹಿತಿ ಇಲ್ಲದವರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಿ, ಚೆನ್ನಮ್ಮ ಅವರ ಗುಣಗಳನ್ನು ಅಳವಡಿಸಿಕೊಂಡು, ಸ್ವಾತಂತ್ರ್ಯದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಸ್ವದೇಶಿ ವಸ್ತುಗಳ ಬಗ್ಗೆ ಆಸಕ್ತಿ ತೋರಿಸಿ, ನಮ್ಮ ದೇಶದಲ್ಲಿ ತಯಾರಿಸಿದ ವಸ್ತುಗಳನ್ನು ಬಳಕೆ ಮಾಡುತ್ತಾ, ದೇಶದ ಆರ್ಥಿಕ ಬೆಳವಣಿಗೆಗೆ ಕೈಜೋಡಿಸುವ ಮೂಲಕ ದೇಶವನ್ನು ಅಚ್ಚುಕಟ್ಟಾಗಿ ಕಟ್ಟಲು ಯುವಕರು ಮುಂದಾಗಿ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಹಲವು ವಿಚಾರಗಳಲ್ಲಿ ಇಂದಿನ ಯುವ ಜನತೆಗೆ ಆದರ್ಶ. ಇಂದಿನ ಯುವಕರು ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು, ದೇಶದ ಏಕತೆಗಾಗಿ, ಸಮಗ್ರತೆಗಾಗಿ ಕಾರ್ಯನಿರ್ವಹಿಸಲಿ ಎನ್ನುವ ಉದ್ದೇಶದಿಂದ ಇಂತಹ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಸ್ವಾಭಿಮಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಆದರ್ಶ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಕೇವಲ ಒಂದು ಜಾತಿಗೆ ಸೀಮಿತಿವಲ್ಲ; ಸಮಾಜಕ್ಕೆ ಕೀರ್ತಿ ತಂದವರು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಮನೋಭಾವ ಬದಲಾಗಬೇಕಿದೆ. ಇಂದಿನ ಮಕ್ಕಳು ದೇಶದ ಸಂಪತ್ತು, ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಿ ಎಂದರು.
ಮುನ್ಸಿಪಲ್ ಹೈಸ್ಕೂಲ್‍ನ ಜಾನಪದ ಸಂಶೋಧಕರು ಹಾಗೂ ಪ್ರಾಧ್ಯಾಪಕರಾದ ಡಾ.ಸಿ.ಎನ್.ಸಿದ್ದೇಶ್ವರಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಚೋರನೂರು ಕೊಟ್ರಪ್ಪ, ಕನ್ನಡ. ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್, ಮುಖಂಡರಾದ ರಾಜಶೇಖರ್ ಮಲಾಲಿ ಸೇರಿದಂತೆ ಸಮುದಾಯದ ಇತರೆ ಮುಖಂಡರು, ವಿದ್ಯಾರ್ಥಿಗಳು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here