ಬಳ್ಳಾರಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ ಡಿಸಿಎಂ ಅಶ್ವತ್‍ನಾರಾಯಣ “ಹೋಂಐಸೋಲೇಶನ್‍ನಲ್ಲಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ; ತೀವ್ರ ನಿಗಾವಹಿಸಿ”

0
126

ಬಳ್ಳಾರಿ,ಏ.28: ಕೋವಿಡ್ ಸೊಂಕಿತರಾಗಿ ಹೋಂಐಸೋಲೇಶನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಿ ಮತ್ತು ಗುಣಮುಖರಾಗುವವರೆಗೆ ಅವರ ಆರೋಗ್ಯದ ಮೇಲೆ ಸದಾ ನಿಗಾವಹಿಸುವ ಕೆಲಸ ಮಾಡಬೇಕು. ಈಗ ನೀಡಲಾಗುತ್ತಿರುವ ಹೋಂ ಐಸೋಲೇಶನ್ ಕಿಟ್‍ನಲ್ಲಿ ಇನ್ನೂ ಕೆಲ ಔಷಧಗಳನ್ನು ಸೇರಿಸಿ ನೀಡುವಂತೆ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಆಗಿರುವ ಡಾ.ಸಿ.ಎನ್.ಅಶ್ವತ್‍ನಾರಾಯಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳ್ಳಾರಿ/ವಿಜಯನಗರ ಜಿಲ್ಲೆಯ ಕೋವಿಡ್ ಸ್ಥಿತಿಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು,ವಿಶೇಷಾಧಿಕಾರಿಗಳು,ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಹೋಂ ಐಸೋಲೇಶನ್‍ನಲ್ಲಿರುವವ ಆರೋಗ್ಯದ ಮೇಲೆ ಸದಾ ನಿಗಾವಹಿಸಬೇಕು ಮತ್ತು ಏರಿಳಿತ ಕಂಡುಬಂದಲ್ಲಿ ತಕ್ಷಣ ಶಿಫಾರಸ್ಸು ಮಾಡಿ ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಬೇಕು. ಅಂದಾಗ ಮಾತ್ರ ಪ್ರಾಣಗಳನ್ನು ಕಾಪಾಡಲು ಸಾಧ್ಯ ಎಂಬುದನ್ನು ಹೇಳಿದ ಡಿಸಿಎಂ ಅಶ್ವತ್‍ನಾರಾಯಣ ಅವರು ಲಾಕ್‍ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ನಗರಗಳಿಂದ ವಲಸೆ ಕಾರ್ಮಿಕರು ಹಳ್ಳಿಗಳತ್ತ ಬರುತ್ತಿದ್ದು,ಅವರಿಂದ ಕೊರೊನಾ ಸೊಂಕು ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.
ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಬೇಕಾದ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ ಡಿಸಿಎಂ ಅವರು ಕೋವಿಡ್ ಸೊಂಕು ವ್ಯಾಪಿಸದಂತೆ ತಹಬದಿಗೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳು,ಎಸ್ಪಿ ಮತ್ತು ಡಿಹೆಚ್‍ಒ ಅವರೊಂದಿಗೆ ಜಿಲ್ಲೆಯಾದ್ಯಂತ ಐದು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಲಾಗಿದೆ ಮತ್ತು ಸಭೆ ನಡೆಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಇನ್ನೂಳಿದ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆ ನೀಡಲಾಗುವುದು ಎಂದರು.
ಗ್ರಾಮೀಣ ಭಾಗಕ್ಕೆ ಕೋವಿಡ್ ಹರಡದಂತೆ ನೋಡಿಕೊಳ್ಳಿ,ಎಲ್ಲರೂ ಒಟ್ಟಾಗಿ ಹತ್ತು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ,ಕೊರೋನ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆಗಳು, ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳು ಮತ್ತು ಮುಂದೆ ಕೈಗೊಳ್ಳಲಿರುವ ಕ್ರಮಗಳ ಕುರಿತು ಉಪಮುಖ್ಯಮಂತ್ರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್, ಜಿಪಂ ಸಿಇಒ ಕೆ.ಆರ್.ನಂದಿನಿ, ಡಿಎಚ್‍ಒ ಡಾ.ಜನಾರ್ಧನ್,ಸಹಾಯಕ ಆಯುಕ್ತರಾದ ರಮೇಶ್ ಕೋನರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಎಎಸ್ಪಿ ಬಿ.ಎನ್.ಲಾವಣ್ಯ, ವಿಮ್ಸ್ ನಿರ್ದೇಶಕರಾದ ಗಂಗಾಧರ ಗೌಡ,ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನಿಲ್‍ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here