ರಾಮನಗರ ಜಿಲ್ಲೆಯ ಮನೆಗಳಿಗೆ ನದಿ ನೀರು ಪೂರೈಕೆ ಯೋಜನೆಗೆ 3 ತಿಂಗಳಲ್ಲಿ ಡಿಪಿಆರ್‌: ಡಾ.ಸಿ.ಎನ್‌.ಅಶ್ವತ್ಥನಾರಾಯಣ

0
103

ಬೆಂಗಳೂರು: ನದಿ ಮೂಲದ‌ ನೀರೊದಗಿಸುವ ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಕಾರ್ಯಗತವಾಗುತ್ತಿರುವ ಯೋಜನೆಗೆ ಅಗತ್ಯ ಇರುವ ಜಲಮೂಲಗಳು ರಾಮನಗರ ಜಿಲ್ಲೆಯಲ್ಲಿ ಇವೆ. ಹೀಗಾಗಿ ಯೋಜನೆಯನ್ನು ಎರಡು ವರ್ಷದೊಳಗೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಜಲಜೀವನ್‌ ಮಿಷನ್‌ ಅಧಿಕಾರಿಗಳು ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆಗೂಡಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಗೆ ಯೋಜನೆ ಅಡಿಯಲ್ಲಿ ಪೂರೈಸಬಹುದಾದಷ್ಟು ನದಿ ಜಲ ಸಂಪತ್ತು ಲಭ್ಯವಿದೆ ಎಂಬ ಅಂಶವನ್ನು ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲೆಯ ನಾಲ್ಕು ತಾಲೂಕುಗಳ 127 ಗ್ರಾಮ ಪಂಚಾಯಿತಿಗಳ 850 ಗ್ರಾಮಗಳಿಗೆ ನೀರೊದಗಿಸಲಾಗುತ್ತದೆ. ಇದರಿಂದ‌ 2,08,544 ಮನೆಗಳ 8,85,520 ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ. 675 ಕೋಟಿ ರೂ. ಬೇಕಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

3 ತಿಂಗಳಲ್ಲಿ ಡಿಪಿಆರ್

ಹದಿನೈದು ದಿನಗಳ ಒಳಗಾಗಿ ಯೋಜನಾ ಸಮೀಕ್ಷಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಮೂರು ತಿಂಗಳಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್)‌ ಸಲ್ಲಿಸುವಂತೆ ಸೂಚಿಸಲಾಗಿದೆ. ಇನ್ನು ಒಂದೂವರೆ ವರ್ಷದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಇದೆ. ಇದಕ್ಕೆ ಪೂರಕವಾಗಿ ಕೆಮೂಲದ‌ಯ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಈ ಯೋಜನೆಗೆ ಅಗತ್ಯವಾದ ಜಲಮೂಲವು ನದಿಗಳಿಂದ ಸಿಗುವ ಬಗ್ಗೆ ಕೆಲ ಪ್ರಶ್ನೆಗಳನ್ನು ಜಲಮಿಷನ್‌ ಅಧಿಕಾರಿಗಳು ಎತ್ತಿದ್ದರು. ಆ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗಿದ್ದು, ನೀರಿನ ಲಭ್ಯತೆಯ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.

ಮುಖ್ಯವಾಗಿ ರಾಮನಗರ ಮತ್ತು ಮಾಗಡಿ ತಾಲೂಕುಗಳು, ಕನಕಪುರ ತಾಲೂಕಿನ ದೊಡ್ಡ ಮರಳವಾಡಿ ವ್ಯಾಪ್ತಿಯಲ್ಲಿ ಯೋಜನೆ ಕಾರ್ಯಗತವಾಗುತ್ತಿದೆ. ಜಿಲ್ಲೆಯ 2,08,544 ಮನೆಗಳ ಬಳಿಕ ಉಳಿಯುವ ಚನ್ನಪಟ್ಟಣ ತಾಲೂಕಿನ 12,764, ರಾಮನಗರ ತಾಲೂಕಿನ 91,984 ಮನೆಗಳಿಗೆ ನೀರೊದಿಗಿಸುವ ಯೋಜನೆಯನ್ನು ಈ ವರ್ಷವೇ ʼಏಕ ಕಣಿವೆ ಯೋಜನೆʼ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here