ಗಂಗಾಕಲ್ಯಾಣ ವಿಶೇಷ ಸದನ ಸಮಿತಿ ವಿವಿಧೆಡೆ ಭೇಟಿ ಪರಿಶೀಲನೆ, ಗಂಗಾ ಕಲ್ಯಾಣ ಲೋಪದೋಷಗಳ ಅನಾವರಣ:ವಿಶೇಷ ತನಿಖೆಗೆ ಸೂಚನೆ.

0
76

ಬಳ್ಳಾರಿ,ನ.09 : ಗಂಗಾಕಲ್ಯಾಣ ಯೋಜನೆಗಳ ಅನಷ್ಠಾನದಲ್ಲಾಗಿರುವ ಮತ್ತು ಅನುಷ್ಠಾನದಲ್ಲಾಗುತ್ತಿರುವ ಲೋಪದೋಷಗಳು,ಅವ್ಯವಹಾರಗಳು, ನಿಯಮಬಾಹಿರ ಕ್ರಮಗಳ ಕುರಿತ ತನಿಖೆ ಮತ್ತು ನೈಜ ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಆಗಬೇಕಾದ ಕ್ರಮಗಳ ಕುರಿತು ರಚನೆಯಾಗಿರುವ ಕರ್ನಾಟಕ ವಿಧಾನಪರಿಷತ್‍ನ ಗಂಗಾಕಲ್ಯಾಣ ವಿಶೇಷ ಸದನ ಸಮಿತಿಯು ಬಳ್ಳಾರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಧ್ಯಕ್ಷ ಡಾ.ವೈ.ಎ.ನಾರಾಯಣಸ್ವಾಮಿ ನೇತೃತ್ವದ ಸದನ ಸಮಿತಿಗೆ ಬಳ್ಳಾರಿ ಜಿಲ್ಲೆಯಲ್ಲಿನ ಗಂಗಾಕಲ್ಯಾಣ ಯೋಜನೆಗಳ ಲೋಪದೋಷಗಳ ಅನಾವರಣಗೊಂಡವು. ಬಳ್ಳಾರಿ ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ,ದೇವರಾಜ ಅರಸು ನಿಗಮ, ಅಲ್ಪಸಂಖ್ಯಾತ ನಿಗಮ, ಆದಿಜಾಂಭವ ನಿಗಮ ಮತ್ತು ತಾಂಡಾ ಅಭಿವೃದ್ಧಿ ನಿಗಮದಡಿ 2015ರಿಂದ ಇಲ್ಲಿಯವರೆಗೆ 6 ಸಾವಿರ ಬೋರವೆಲ್‍ಗಳನ್ನು ಕೊರೆಸಲಾಗಿದ್ದು,ಅವುಗಳಲ್ಲಿ 1630 ಕೊಳವೆಬಾವಿಗಳಿಗೆ ಮೋಟಾರ್,ಪಂಪ್,ಪೈಪ್‍ಲೈನ್ ಸಂಪರ್ಕವೇ ಕಲ್ಪಿಸಿಲ್ಲ ಮತ್ತು ಅದೇ ರೀತಿ 474 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವೇ ಕಲ್ಪಿಸಲಾಗಿಲ್ಲ. ಕಳೆದ ಐದು ವರ್ಷಗಳಲ್ಲಿ 2ಸಾವಿರ ಬೋರವೆಲ್‍ಗಳಿಂದ ಇದುವರೆಗೆ ಒಂದು ಹನಿ ನೀರು ಕೂಡ ಮೇಲತ್ತದಿರುವ ವಿಷಯವನ್ನು ಸದನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಿಳಿದು ಆಶ್ಚರ್ಯಚಕೀತರಾದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ ಅಧ್ಯಕ್ಷ ಡಾ.ವೈ.ಎ.ನಾರಾಯಣಸ್ವಾಮಿ ಅವರು ಜಿಲ್ಲೆಯಲ್ಲಿ ಎಲ್ಲ ಅಭಿವೃದ್ಧಿ ನಿಗಮಗಳಡಿ ಕೊರೆಸಲಾದ ಬಾವಿಗಳಿಗೆ ವಿಶೇಷ ತನಿಖೆ ಮಾಡಿ ಸಮಿತಿಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ,ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದರು. ಈ ವಿಷಯವನ್ನು ನಮ್ಮ ಸಮಿತಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು,ಇದರಡಿ ಭಾಗಿಯಾದ ಅಧಿಕಾರಿಗಳು, ಬೋರವೆಲ್ ಏಜೆನ್ಸಿ, ಮೋಟಾರ್ ಏಜೆನ್ಸಿ ಸೇರಿದಂತೆ ಎಲ್ಲರ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಲಕುಂದಿ, ಜಾನೆಕುಂಟೆ, ಬೆಳಗಲ್ಲು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ನಿಗಮಗಳ ಕೊಳವೆಬಾವಿಗಳನ್ನು ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪರಿಶೀಲನೆ ನಡೆಸಿದರು.
ಆಕಾಶವಾಣಿ ಕೇಂದ್ರ ಹತ್ತಿರದ ಬೆಳಗಲ್ ಪ್ರದೇಶದ ಶೇಖ್ ಸಾಬ್ ಎನ್ನುವವರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 420 ಅಡಿ ಬೋರವೆಲ್ ಕೊರೆಸಲಾಗಿದೆ ಆದ್ರೇ ಬಿಲ್‍ನಲ್ಲಿ 620 ಅಡಿ,20 ಅಡಿ ಕೇಸಿಂಗ್ ಇದ್ರೆ 120 ಕೇಸಿಂಗ್ ಅಂತ ಬಿಲ್‍ನಲ್ಲಿ ನಮೂದಿಸದಿರುವುದು ಮತ್ತು ಮೋಟಾರ್ ನೀಡದಿರುವುದು ಗೊತ್ತಾಯಿತು. ಈ ಯೋಜನೆ ಇರುವುದು ಬಡಫಲಾನುಭವಿಗಳ ಉದ್ದಾರಕ್ಕೆ ಆದ್ರೇ ಸದರಿ ವ್ಯಕ್ತಿ ಶ್ರೀಮಂತನಿರುವುದು ತಿಳಿದುಬಂದ ಹಿನ್ನೆಲೆ ಪರಿಶೀಲನೆ ನಡೆಸಿ ವರದಿ ನೀಡಲು ಸಮಿತಿ ಅಧ್ಯಕ್ಷ ಡಾ.ವೈ.ಎ.ನಾರಾಯಣಸ್ವಾಮಿ ಅವರು ಸೂಚನೆ ನೀಡಿದರು. ಈ ಅಕ್ರಮವೆಸಗಿದ ಸುಜಾ ಎಂಟ್ರರ್‍ಪ್ರೈಸಸ್ ಮತ್ತು ಯುನೈಟೆಡ್ ಮೋಟಾರ್ ಕನೆಕ್ಷನ್‍ಗೆ ನೋಟಿಸ್ ಜಾರಿ ಮಾಡಿ ಕಪ್ಪುಪಟ್ಟಿಗೆ ಸೇರಿಸಲು ಅಧ್ಯಕ್ಷರು ಕಟ್ಟುನಿಟ್ಟಾಗಿ ಸೂಚಿಸಿದರು.
ಹಲಕುಂದಿ ಗ್ರಾಮದಲ್ಲಿ ನಾಗವೇಣಿ ಎನ್ನುವ ಮಹಿಳೆ ಜಮೀನಿನಲ್ಲಿ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಕೊಳವೆಬಾವಿ ಕೊರೆಸಲಾಗಿದ್ದು, 340 ಅಡಿ ಕೊರೆಯಲಾಗಿದೆ ಆದ್ರೇ ಬಿಲ್‍ನಲ್ಲಿ 540 ಅಡಿ ನಮೂದಿಸಲಾಗಿದೆ. ಕೇಸಿಂಗ್ 24 ಆದ್ರೇ ಬಿಲ್‍ನಲ್ಲಿ 80 ಕೇಸಿಂಗ್ ನಮೂದಿಸಲಾಗಿದೆ. ಕಳಪೆ ಕೇಬಲ್ ನೀಡಿರುವುದು ಕಂಡುಬಂದಿತು.
ವಿವಿಧೆಡೆ ಪರಿಶೀಲನೆ ನಡೆಸಿ ನಗರದ ಜಿಪಂ ನಜೀರ್ ಸಭಾಂಗಣಕ್ಕೆ ಆಗಮಿಸಿದ ಸದನ ಸಮಿತಿಯು ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸಭೆ ಮುಂದೂಡಲಾಯಿತು.
ಸಭೆ ಮುಂದೂಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಡಾ.ವೈ.ಎ.ನಾರಾಯಣಸ್ವಾಮಿ ಅವರು ಬಳ್ಳಾರಿಯಲ್ಲಿ ಕೊಳವೆಬಾವಿ ಕೊರೆಸುವಿಕೆಗೆ ಸಂಬಂಧಿಸಿದಂತೆ ಬಹುದೊಡ್ಡ ಜಾಲವೊಂದಿದ್ದು, ಅದನ್ನು ಮಟ್ಟಹಾಕಿ ನೈಜಫಲಾನುಭವಿಗಳಿಗೆ ಸರಕಾರದ ಮಾರ್ಗಸೂಚಿ ಅನ್ವಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
6 ಸಾವಿರ ಕೊಳವೆಬಾವಿಗಳಲ್ಲಿ 2 ಸಾವಿರ ಕೊಳವೆಬಾವಿಗಳಲ್ಲಿ ಇದುವರೆಗೆ ನೀರು ಮೇಲತ್ತದಿರುವುದಕ್ಕೆ ಸಮಿತಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ಇದನ್ನು ಗಂಭೀರವಾಗಿಯೂ ಪರಿಗಣಿಸಿದೆ. ಅಧಿಕಾರಿಗಳು,ಮಧ್ಯವರ್ತಿಗಳು,ಪಟ್ಟಭದ್ರ ಹಿತಾಸಕ್ತಿಗಳು ಸೇರಿದಂತೆ ಈ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದರು.
ಬಳ್ಳಾರಿಯಲ್ಲಿ 40 ಕೋಟಿ ರೂ.ಗಳಷ್ಟು ಗೋಲ್‍ಮಾಲ್ ಆಗಿರುವುದನ್ನು ಸಮಿತಿ ಪತ್ತೆಹಚ್ಚಿದೆ. ಈ ಜಿಲ್ಲೆಯಲ್ಲಿ ಡ್ರೀಲ್ಲರ್ ಅವರೇ ಪ್ರಮಾಣಪತ್ರ ದೃಢೀಕರಿಸಿ ನೀಡುವುದು ನನ್ನ ಜೀವನದಲ್ಲಿ ನೋಡಿದ್ದು ಮೊದಲ ಬಾರಿ ಒಂದು ರೀತಿ ಕಳ್ಳನಿಗೆ ತೋಟ ಕಾಯಲು ಜವಾಬ್ದಾರಿ ವಹಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ,ಕೆ.ಪ್ರತಾಪ್‍ಸಿಂಹನಾಯಕ್,ಎನ್.ವೈ.ಗೋಪಾಲಸ್ವಾಮಿ, ವಿಧಾನಪರಿಷತ್ ಸಚಿವಾಲಯದ ಕಾರ್ಯದರ್ಶಿ ನಿರ್ಮಲಾ,ಗಂಗಾಕಲ್ಯಾಣ ಯೋಜನೆಯ ಸಲಹೆಗಾರ ಚಿದಾನಂದ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ದಿವಾಕರ್ ಸೇರಿದಂತೆ ವಿವಿಧ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಹಾಗೂ ಮ್ಯಾನೇಜರ್‍ಗಳು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here