ಮಾರ್ಚ್ 2021 ನೇ ತ್ರೈಮಾಸಿಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ

0
72

ಮಡಿಕೇರಿ ಜು.19:-ಮಾರ್ಚ್ 2021 ನೇ ತ್ರೈಮಾಸಿಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಜರಗಿತು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಉಪ ಕ್ಷೇತ್ರೀಯ ವ್ಯವಸ್ಥಾಪಕರಾದ ಸೆಲ್ವಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಬ್ಯಾಂಕಿನ ಒಟ್ಟು ಆರ್ಥಿಕ ವಹಿವಾಟಿನ ಚಿತ್ರಣವನ್ನ ಸಭೆಗೆ ನೀಡಿದರು. ತದನಂತರ ಜಿಲ್ಲಾಧಿಕಾರಿಯವರು ಜಿಲ್ಲಾವಾರು ಬ್ಯಾಂಕುಗಳ ಪ್ರಗತಿ ಪರಿಶೀಲನೆ ನಡೆಸಿ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು.

ಜಿಲ್ಲಾ ಅಗ್ರಣೀ ಬ್ಯಾಂಕಿನ ಮುಖ್ಯಸ್ಥರಾದ ಆರ್.ಕೆ.ಬಾಲಚಂದ್ರ ಅವರು 2020-21 ನೇ ಸಾಲಿನ ಜಿಲ್ಲಾ ಅಂಕಿ ಅಂಶಗಳ ಕುರಿತು ಮಾತನಾಡಿ ಮಾರ್ಚ್ ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ಶಾಖೆಗಳ ಒಟ್ಟು ಸಂಖ್ಯೆ 176 ಆಗಿದ್ದು, ಒಟ್ಟು ಠೇವಣಿಗಳು ರೂ. 7198 ಕೋಟಿ, ಮುಂಗಡ ರೂ. 5321 ಕೋಟಿ, ಮುಂಗಡ ಹಾಗೂ ಠೇವಣಿಗಳ ಅನುಪಾತ ಪ್ರತಿಶತ 74 ಆಗಿರುತ್ತದೆ ಎಂದು ತಿಳಿಸದರು.

ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ವಯ ರೂ.4275 ಕೋಟಿ ಗುರಿ ನಿಗದಿಪಡಿಸಿದ್ದು, ಅದರಲ್ಲಿ 85 ಪ್ರತಿಶತ (ರೂ. 3650 ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು, ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.2565 ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.809 ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ. 276 ಕೋಟಿ ಗುರಿ ನಿಗದಿಪಡಿಸಿದ್ದು ಕ್ರಮವಾಗಿ ರೂ.2929 ಕೋಟಿ ಒಟ್ಟು ಸಾಲ ವಿತರಣೆ, ಅವುಗಳಲ್ಲಿ ಆದ್ಯತಾ ವಲಯಕ್ಕೆ ರೂ.2378 ಕೋಟಿ, ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.1699 ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.400 ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ. 280 ಕೋಟಿ ಗುರಿ ಸಾಧಿಸಲಾಗಿದೆ.

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಬ್ಯಾಂಕುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯತೆಯನ್ನು ಸಾಧಿಸುವುದರ ಮೂಲಕ ಸರ್ಕಾರಿ ಪ್ರಾಯೋಜಿತ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ರಾಮಚಂದ್ರ ನಾಯಕ್, ಜಿ.ಪಂ ಯೋಜನಾ ನಿರ್ದೇಶಕರಾದ ಶ್ರಿಕಂಠಮೂರ್ತಿ ವಿವಿಧ ಬ್ಯಾಂಕುಗಳ ಕ್ಷೇತ್ರೀಯ ಕಾರ್ಯಾಲಯದ ಪ್ರತಿನಿಧಿಗಳು, ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here