ಅಧಿಕಾರಿಗಳ ಜತೆಗೂಡಿ ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ;ರೈತರ ಅಹವಾಲು ಆಲಿಕೆ ಅಕಾಲಿಕ ಮಳೆಗೆ ಬಳ್ಳಾರಿ ಜಿಲ್ಲೆಯಲ್ಲಿ 230183 ಹೆಕ್ಟೇರ್ ಬೆಳೆ ಹಾನಿ:ಜಿಲ್ಲಾಧಿಕಾರಿ ಮಾಲಪಾಟಿ

0
111

ಬಳ್ಳಾರಿ,ನ.21:ಕಳೆದ ಮೂರು ದಿನಗಳಿಂದ ಅಕಾಲಿಕವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿ,ಮನೆಗಳ ಕುಸಿತ, ರಸ್ತೆ,ಸೇತುವೆ,ವಿದ್ಯುತ್ ಕಂಬಗಳ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ 230183 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈಗಾಗಲೇ ಕಂದಾಯ ಇಲಾಖೆ,ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಂಟಿ ಸಮೀಕ್ಷೆಯನ್ನು ಕಳೆದೆರಡು ದಿನಗಳಿಂದ ಶುರುಮಾಡಿದ್ದಾರೆ.
ಕೃಷಿ ಇಲಾಖೆಯ ಬೆಳೆಗಳಾದ ಭತ್ತ 11563 ಹೆಕ್ಟೇರ್, 1209 ಹೆಕ್ಟೇರ್ ಕಡಲೆ,66 ಹೆಕ್ಟೇರ್ ಜೋಳ,170 ಹೆಕ್ಟೇರ್ ಹತ್ತಿ,9 ಹೆಕ್ಟೇರ್ ಕಬ್ಬು ಬೆಳೆ ಸೇರಿದಂತೆ ಒಟ್ಟು 13017 ಹೆಕ್ಟೇರ್ ಬೆಳೆಹಾನಿ ಹಾಗೂ ತೋಟಗಾರಿಕೆ ಇಲಾಖೆ ಬೆಳೆಗಳಾದ ಮೆಣಸಿನಕಾಯಿ 10032 ಹೆಕ್ಟೇರ್, 80 ಹೆಕ್ಟೇರ್ ಈರುಳ್ಳಿ ಮತ್ತು 24 ಹೆಕ್ಟೇರ್ ಪಪ್ಪಾಯ,06 ಹೆಕ್ಟೇರ್ ಬಾಳೆ ಬೆಳೆ ಸೇರಿದಂತೆ ಒಟ್ಟು 10166 ಹೆಕ್ಟೇರ್ ಬೆಳೆಹಾನಿಯಾಗಿದೆ. 230183 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದ್ದಾರೆ.
210 ಮನೆಗಳಿಗೆ ಹಾನಿ;ಜೀವ ಕಳೆದುಕೊಂಡ 106 ಪ್ರಾಣಿಗಳು:
ಜಿಲ್ಲೆಯಲ್ಲಿ ಕಳೆದ 72 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಅಂದಾಜು 40 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಬಟ್ಟೆ-ಆಹಾರ ಸಾಮಗ್ರಿಗಳಿಗೆ ಹಾನಿಯಾಗಿದೆ. 210 ಮನೆಗಳು ಭಾಗಷಃ ಹಾನಿ ಮತ್ತು ಒಂದು ಮನೆ ಸಂಪೂರ್ಣ ಹಾನಿಯಾಗಿದೆ. ಒಂದು ಜಾನುವಾರು ಸೇರಿದಂತೆ ಒಟ್ಟು 106 ಪ್ರಾಣಿಗಳು ಅಕಾಲಿಕ ಮಳೆಗೆ ಸಾವನ್ನಪ್ಪಿವೆ.
ಕಾಳಜಿ ಕೇಂದ್ರಗಳಲ್ಲಿ 571 ಜನರು: ಅಕಾಲಿಕವಾಗಿ ಸುರಿದ ಮಳೆಯಿಂದ ಬಳ್ಳಾರಿ ಜಿಲ್ಲಾಡಳಿತ ಅವಶ್ಯವಿರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆದಿದೆ. ಬಳ್ಳಾರಿ ತಾಲೂಕಿನ ಮೋಕಾ ಸರಕಾರಿ ಪ್ರೌಢಶಾಲೆ, ಶ್ರೀಧರಗಡ್ಡೆ-ಗುಡಾರನಗರದ ಸರಕಾರಿ ಪ್ರಾಥಮಿಕ ಶಾಲೆ, ಬಸರಕೋಡ ಸಮುದಾಯ ಭವನ ಹಾಗೂ ಕಂಪ್ಲಿ ಪಟ್ಟಣದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದ್ದು, 215 ಮಕ್ಕಳು ಸೇರಿದಂತೆ 571 ಜನರು ಅಂದರೇ 125 ಕುಟುಂಬಗಳು ಕಾಳಜಿ ಕೇಂದ್ರಗಳಲ್ಲಿದ್ದಾರೆ;ಅವರಿಗೆ ಊಟೋಪಚಾರ ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ. ಇನ್ನೂ ಅಗತ್ಯವಿರುವ ಕಡೆ ಕಾಳಜಿಕೇಂದ್ರಗಳು ತೆರೆದು ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಮಾಲಪಾಟಿ ಅವರು ಸೂಚನೆ ನೀಡಿದ್ದಾರೆ.
ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ;ರೈತರ ಅಹವಾಲು ಆಲಿಕೆ: ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಬಳ್ಳಾರಿ ತಾಲೂಕಿನ ಕಪಗಲ್ಲು,ಬಿ.ಡಿ.ಹಳ್ಳಿ,ಯರ್ರಗುಡಿ, ಸಿರಿಗೇರಿ ಕ್ರಾಸ್ ಸೇರಿದಂತೆ ಸಿರಗುಪ್ಪ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಅಕಾಲಿಕವಾಗಿ ಸುರಿದ ಮಳೆಯಿಂದ ಉಂಟಾದ ಅಪಾರ ಪ್ರಮಾಣದ ಬೆಳೆಹಾನಿಯನ್ನು ಪರಿಶೀಲಿಸಿದರು.
ಭತ್ತ,ಮೆಣಸಿನಕಾಯಿ,ಕಡಲೆ,ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಅಕಾಲಿಕ ಮಳೆಗೆ ಹಾನಿಯಾಗಿರುವುದನ್ನು ಕಣ್ಣಾರೆ ಕಂಡರು. ಈ ಸಂದರ್ಭದಲ್ಲಿ ರೈತರು ಮಳೆಯಿಂದ ಉಂಟಾದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ರೈತರು ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದಲೂ ಅಗತ್ಯ ಮಾಹಿತಿ ಪಡೆದರು.
ಬೆಳೆಹಾನಿಗೆ ಸಂಬಂಧಿಸಿದಂತೆ ಜಂಟಿಸಮೀಕ್ಷೆ ಆರಂಭಿಸಲಾಗಿದ್ದು, ಹಾನಿಗೊಳಗಾದ ಬೆಳೆಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು ಎಂದು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ,ತಹಸೀಲ್ದಾರ್ ರೆಹಮಾನ್‍ಪಾಶಾ, ತೋಟಗಾರಿಕೆ, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಇದ್ದರು.

LEAVE A REPLY

Please enter your comment!
Please enter your name here