ಬೃಂದಾವನಕ್ಕೆ ಮರಳಿ ಬರಬಾರದೇ

0
106

ಗೋಪೀ ಲೋಲಾ ಬೃಂದಾವನಕ್ಕೆ ಒಮ್ಮೆ ಮರಳಿ ಬರಬಾರದೇ?
ನಿನ್ನ ನೆನಪಲ್ಲಿ ಬೃಂದಾವನವಿದೋ ಸೋತು ಸೊರಗಿದೆ ನೋಡಬಾರದೇ?

ಯಮುನೆಯ ಒಡಲಿನ ಕುಣಿಯುವ ಅಲೆಗಳು ಚಲಿಸದಂತೆ ನಿಂತಿವೆ
ಪರಿಮಳ ಸೂಸುವ ಪಾರಿಜಾತ ಸುಮಗಳು ಅರಳುವುದನ್ನೆ ಮರೆತಿವೆ
ಅರಳೀಮರದ ಕೊಂಬೆಗಳೆಲ್ಲಾ ಹೊಸ ಚಿಗುರು ಕಾಣದೇ ಒಣಗಿವೆ
ನವಿಲಿನ ನರ್ತನ ಗೋವುಗಳ ಜಿಗಿದಾಟ ದುಂಬಿಗಳ ಝೇಂಕಾರ ಇಲ್ಲವಾಗಿದೆ
ಗೋಪೀಲೋಲಾ ಬೃಂದವನಕ್ಕೆ ಒಮ್ಮೆ ಮರಳಿ ಬರಬಾರದೇ?

ಲಾಲಿಸಿದ ಯಶೋಧೆಯ ಕಣ್ಣ ದೀಪ ನಂದಿಹೋಗಿದೆ ಎಂಬುದನರಿಯಲಾರೆಯಾ ?
ತಾಯಮಮತೆಯ ಕರೆಗೆ ಓಗೊಡದೇ ಕಿವುಡನಾಗಿ ಇರುವಿಯೇಕೆ?
ಗೋಪ ಗೋಪಿಕೆಯರ ಒಡನಾಟದ ಕ್ಷಣಗಳ ಮರೆತು ಬಿಡುವುದೇ?
ನಿನ್ನ ಬರುವ ದಾರಿಯ ಕಾಯುವ ರಾಧೆಯ ಮನವ ತಿಳಿಯದೇ ನಿನಗೆ?
ಗೋಪೀಲೋಲಾ ಬೃಂದಾವನಕ್ಕೆ ಒಮ್ಮೆ ಮರಳಿ ಬರಬಾರದೇ?

ಸಕಲ ಜೀವಾತ್ಮಗಳಲ್ಲೂ ನೆಲೆಸಿರುವ ಪರಮಾತ್ಮನೇ ಕೇಳು
ಸೂತ್ರಧಾರಿ ನೀನಾಗಿರಲು ನೀನಾಡಿಸಿದಂತೆ ನಡೆವುದೀ ಜಗವು
ಕಂಗಳ ಬೆಳಕಿಂದ ಕತ್ತಲೆಯ ನೀಗಿಸಿ ಲೋಕಕೆ ಬೆಳಕು ನೀಡು
ನಿನ್ನಲ್ಲಿ ಬೇಡುತಿಹ ಜೀವರಾಶಿಗಳಿಗೆ ದರುಶನ ಭಾಗ್ಯವ ನೀಡು
ಗೋಪೀಲೋಲಾ ಬೃಂದಾವನಕ್ಕೆ ಒಮ್ಮೆ ಮರಳಿ ಬರಬಾರದೇ?

ವಿನೋದಾ ಕರಣಂ. ಬಳ್ಳಾರಿ.

LEAVE A REPLY

Please enter your comment!
Please enter your name here