ಜಿಲ್ಲೆಯ ಒಂದು ಉತ್ಪನ್ನ ರಪ್ತಿಗೆ ಕ್ರಮ : ಡಾ|| ಸೆಲ್ವಮಣಿ

0
89

ಶಿವಮೊಗ್ಗ, ಮಾರ್ಚ್ 14 : ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳನ್ನು ಕ್ರಮಬದ್ಧಗೊಳಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಯೋಜನೆಯಡಿ ಜಿಲ್ಲೆಯ ಅನಾನಸ್ ಬೆಳೆಯನ್ನು ಕೇಂದ್ರ ಸರ್ಕಾರವು ಆಯ್ಕೆ ಮಾಡಿ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಅನಾನಸ್ ಬೆಳೆಯೊಂದಿಗೆ ಇತರೆ ಆಹಾರ ಬೆಳೆ ಅಥವಾ ಉತ್ಪನ್ನಗಳನ್ನು ರಪ್ತು ಮಾಡಲು ಶಿಫಾರಸ್ಸು ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಇಲಾಖಾ ಅಧಿಕಾರಿಗಳು ಹಾಗೂ ತಜ್ಞರು ಸೇರಿ, ಸಭೆ ನಡೆಸಿ, ಚರ್ಚಿಸಿ ಸೂಕ್ತವಾದ ಸಲಹೆಯನ್ನು ಕೂಡಲೇ ನೀಡುವಂತೆ ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ ಅವರು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಅವರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕವವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ ಅಥವಾ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಗಳಿಗೆ ಉತ್ತೇಜನ ನೀಡುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ ಎಂದವರು ನುಡಿದರು.
ಕೈಗಾರಿಕಾ ವಲಯಕ್ಕೆ ಹೊಂದಿಕೊಂಡಿರುವ ಸಾಗರ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿ ಘೋಷಣೆ ಹೊರಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮ ವಹಿಸಲಾಗುವುದು ಎಂದ ಅವರು, ಆಟೋಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶ ಹಾಗೂ ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶಗಳನ್ನು ವiಹಾನಗರಪಾಲಿಕೆಯು ನಿಯಮಾನುಸಾರ ಸುಪರ್ದಿಗೆ ಪಡೆದು, ಏಪ್ರಿಲ್ ಮಾಹೆಯಿಂದಲೇ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.
ನಿಧಿಗೆ-ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‍ಪೋರ್ಟ್‍ನಿಂದ ದಟ್ಟವಾದ ಧೂಳಿನಿಂದಾಗಿ ಅಲ್ಲಿನ ಕೈಗಾರಿಕೆಗಳ ಕೆಲಸಗಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ಅಲ್ಲಿನ ಮಾಲಿನ ಕಲುಷಿತವಾಗುತ್ತಿರುವ ಬಗ್ಗೆ ಅಧ್ಯಯನ ವರದಿ ಹಾಗೂ ಕೈಗಾರಿಕೋದ್ಯಮಿಗಳ ಸಮಿತಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕೈಗಾರಿಕೆಗಳ ಹಾನಿಕಾರಕವಲ್ಲದ ತ್ಯಾಜ್ಯವನ್ನು ನಿಬಂಧನೆಗಳಿಗೊಳಪಟ್ಟು ಅಬ್ಬಲಗೆರೆ ಕಲ್ಲುಗಣಿ ಪ್ರದೇಶವನ್ನು ಬಳಸಿಕೊಳ್ಳಲು ಇನ್ನೂ ಒಂದು ವಾರದಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶಿಕಾರಿಪುರ ತಾಲೂಕು ಸಂಡ ಕೈಗಾರಿಕಾ ವಲಯದಲ್ಲಿ ಫುಡ್‍ಪ್ರಾಡಕ್ಟ್ ತಯಾರಿಕಾ ಘಟಕ ಮತ್ತು ವೈಂಡಿಂಗ್ ವಯರ್ ತಯಾರಿಕಾ ಘಟಕ ಆರಂಭಕ್ಕೆ ಅನುಮೋದನೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶಕ್ಕೆ 50,000ಲೀ. ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಡ್ಲಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಕಾರ್ಮಿಕರ ಅನುಕೂಲಕ್ಕೆ ಬೇಡಿಕೆಯನುಸಾರ ಕುಡಿಯುವ ನೀರನ್ನು ಒದಗಿಸಲು ಸೂಚಿಸಲಾಗಿದೆ ಎಂದರು.
ಸಾಗರ ರಸ್ತೆಯ ಕೈಗಾರಿಕಾ ವಸಾಹತು ಮುಂಭಾಗದ ಮುಖ್ಯರಸ್ತೆಯಲ್ಲಿ ಟ್ರಕ್ ಹಾಗೂ ಭಾರೀ ವಾಹನಗಳ ನಿಲುಗಡೆಯಿಂದಾಗಿ ನಿರಂತರವಾಗಿ ಅಪಘಾತಗಳು ಆಗುತ್ತಿರುವ ಬಗ್ಗೆ ದೂರುಗಳಿವೆ. ಅದರ ನಿಯಂತ್ರಣ ಕ್ರಮವಾಗಿ ನಗರದ 10ಕಿ.ಮೀ. ವ್ಯಾಪ್ತಿಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಲು ಸುಮಾರು 20ಎಕರೆ ಭೂಮಿ ದೊರೆಯದಿರುವ ಕಾರಣ ನಿವೇಶನ ಗುರುತಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗೆ ಸಕಾಲಿಕವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಭಿಯಂತರರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಕೈಗಾರಿಕೆ-ವಾಣಿಜ್ಯ ಸಂಘದ ಅಧ್ಯಕ್ಷ ಗೋಪಿನಾಥ್, ಹೆಗ್ಡೆ, ಘೇವರ್‍ಚಂದ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here