ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು: ಎಂ.ಶಿವಣ್ಣ ಕೋಟೆ.

0
93

ಶಿವಮೊಗ್ಗ ಮಾರ್ಚ್ 17 : ಎಲ್ಲ ಸ್ಥಳೀಯ ಮತ್ತು ಇತರೆ ಸಂಸ್ಥೆಗಳು ಪೌರಕಾರ್ಮಿಕರಿಗೆ ಸರ್ಕಾರ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ತಲುಪಿಸಬೇಕು. ಹಾಗೂ ಕಾರ್ಮಿಕರನ್ನು ಕಾಳಜಿಯಿಂದ ನೋಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಲಾಗಿದ್ದ ಪೌರ ಕಾರ್ಮಿಕರ ಸಮಸ್ಯೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿವಿಧ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವೇತನ, ಪಿಎಫ್, ಇಎಸ್‍ಐ ಸರಿಯಾಗಿ ನೀಡಲಾಗುತ್ತಿದೆಯೇ ಎಂದು ಪರೀಕ್ಷಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು, ವಿವಿಧ ಏಜೆನ್ಸಿಯವರು ಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿಪಡಿಸಲಾದ ವೇತನ ಮತ್ತು ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿದ್ದಾರೆಯೇ ಎಂದು ಪರೀಕ್ಷಿಸಿ ನನಗೆ ವರದಿ ನೀಡಬೇಕೆಂದರು.

ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಸ್ಯಾಲರಿ ಸ್ಲಿಪ್ ನೀಡಬೇಕು. ಉತ್ತಮ ಆಸ್ಪತ್ರೆಗಳೊಂದಿಗೆ ಟೈ-ಅಪ್ ಆಗಿ ಅವರಿಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಮಾಸ್ಟರ್ ಆರೋಗ್ಯ ತಪಾಸಣೆ ನಡೆಸಬೇಕು. ಹಾಗೂ ಅಗತ್ಯ ಸುರಕ್ಷಿತ ಪರಿಕರಣಗಳನ್ನು ನೀಡಬೇಕು.
ಎಲ್ಲ ಸ್ಥಳೀಯ ಸಂಸ್ಥೆಗಳು ತಮ್ಮ ಖಾಯಂ, ನೇರ ಅಥವಾ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು. ಗುಣಮಟ್ಟದ ಉಪಹಾರ ಸೇರಿದಂತೆ ಸರ್ಕಾರದಿಂದ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಎಚ್ಚರಿಕೆ ವಹಿಸಿ ಅವರಿಗೆ ನೀಡಬೇಕೆಂದು ಸೂಚನೆ ನೀಡಿದರು.

ಮ್ಯಾನುಯಲ್ ಸ್ಕ್ಯಾವೆಂಜರ್ ಕಾಯ್ದೆ 2013 ರ ಪ್ರಕಾರ ನಗರದ ಇನ್‍ಸ್ಯಾನಿಟರಿ ಶೌಚಾಲಯಗಳನ್ನು ಸ್ಯಾನಿಟರಿ ಶೌಚಾಲಯಗಳನ್ನಾಗಿ ಮಾರ್ಪಡಿಸಬೇಕೆಂದು ಕಳೆದ ಸಭೆಯಲ್ಲೇ ತಿಳಿಸಲಾಗಿತ್ತು. ಆದರೆ ನಗರದ ಕೆಲವೆಡೆ ಇನ್ನೂ ಮಲಗುಂಡಿಗಳು ತೆರೆದಿವೆ. ಇವುಗಳನ್ನು ಇನ್‍ಸ್ಯಾನಿಟರಿ ಶೌಚಾಲಯಗಳಾಗಿ ಪರಿವರ್ತಿಸಲು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ ಅವರು ಪಾಲಿಕೆ ವತಿಯಿಂದ ಇನ್‍ಸ್ಯಾನಿಟರಿ ಶೌಚಾಲಯಗಳ ಕುರಿತು ನಿರಂತರವಾಗಿ ಸರ್ವೇ ನಡೆಸುತ್ತಿರುಬೇಕು ಹಾಗೂ ಸೂಕ್ತ ಕ್ರಮ ಜರುಗಿಸಬೇಕು. ಮತ್ತು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.

ಪಾಲಿಕೆ ಆಯುಕ್ತ ಮಾಯಣ್ಣಗೌಡ ಪ್ರತಿಕ್ರಿಯಿಸಿ, ನಗರದಲ್ಲಿ ಸುಮಾರು 50 ಸಾವಿರ ಇನ್‍ಸ್ಯಾನಿಟರಿ ಶೌಚಾಲಯಗಳಿದ್ದು ಈ ಪೈಕಿ 32 ಸಾವಿರ ಶೌಚಾಲಯಗಳನ್ನು ಸ್ಯಾನಿಟರಿ ಶೌಚಾಲಯವಾಗಿ ಪರಿವರ್ತಿಸಲಾಗಿದೆ. ಇನ್ನುಳಿದ ಶೌಚಾಲಯಗಳ ಬಗ್ಗೆ ಕೂಡ ಕ್ರಮ ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 2ನೇ ಹಂತದ ಸರ್ವೇಯಲ್ಲಿ ಕೇವಲ 05 ಜನ ಮ್ಯಾನುಯಲ್ ಸ್ಕ್ಯಾವೆಂಜರ್‍ಗಳನ್ನು ಗುರುತಿಸಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜರ್‍ಗಳನ್ನು ಗುರುತಿಸುವುದರಿಂದ ಅವರಿಗೆ ಕೆಲವು ಸೌಲಭ್ಯಗಳು ದೊರೆತು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆಯಾದ್ದರಿಂದ ಮತ್ತೊಮ್ಮೆ ಸರ್ವೇ ನಡೆಸಿ ಅರ್ಹರನ್ನು ಗುರುತಿಸಬೇಕು. ಹಾಗೂ ಎಂ.ಎಸ್ ಕಾಯ್ದೆ ಪ್ರಕಾರ ಜಿಲ್ಲಾ ಮಟ್ಟ ಮತ್ತು ಉಪವಿಭಾಗ ಮಟ್ಟದಲ್ಲಿ ನಿಯಮಿತವಾಗಿ ಸಫಾಯಿ ಕರ್ಮಚಾರಿಗಳ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮವಹಿಸಬೇಕು ಎಂದರು.

ಪೌರಕಾರ್ಮಿಕರ ಆಯಸ್ಸು 40 ರಿಂದ 60 ಎಂದು ನ್ಯಾಷನಲ್ ಸ್ಕೂಲ್ ಆಫ್ ಲಾ ವರದಿ ತಿಳಿಸಿದ್ದು, ಇವರ ಆರೋಗ್ಯಕ್ಕೆ ಆಯೋಗ ಹೆಚ್ಚಿನ ಆದ್ಯತೆ ನೀಡಿ, ಸರ್ಕಾರಕ್ಕೆ ಈ ಬಗ್ಗೆ ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪೌರಕಾರ್ಮಿಕರಿಗೆ ರೂ.5 ಲಕ್ಷದವರೆಗೆ ಆರೋಗ್ಯ ವಿಮೆ ಹಾಗೂ ಇನ್ನಿತರೆ ಆರೋಗ್ಯ ಸವಲತ್ತುಗಳ ಕುರಿತು ನಿನ್ನೆ ಆದೇಶ ಹೊರಡಿಸಿದೆ ಎಂದರು.
ಏಕರೂಪ ಪರಿಕರ: ರಾಜ್ಯಾದ್ಯಂತ ಪೌರಕಾರ್ಮಿಕರಿಗೆ ಏಕರೂಪದ ಸುರಕ್ಷತಾ ಪರಿಕರಗಳನ್ನು ನೀಡಬೇಕೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದ ಅವರು, ಸಮವಸ್ತ್ರಗಳನ್ನು ಅವರ ಕಲ್ಯಾಣ ನಿಧಿಯಲ್ಲಿ ನೀಡದೇ, ಸ್ಥಳೀಯ ಸಂಸ್ಥೆಯ ನಿಧಿಯಲ್ಲಿ ನೀಡಬೇಕು ಎಂದರು.
ಅರಿವು ಕಾರ್ಯಕ್ರಮ : ಪೌರಕಾರ್ಮಿಕರಿಗೆ ಇರುವ ಸೌಲಭ್ಯಗಳಾದ ಪಿಎಫ್, ಇಎಸ್‍ಐ, ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಅವರಿಗೆ ತಿಳಿಸಲು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚನೆ ನೀಡಿದರು.
ಕಲ್ಯಾಣ ನಿಧಿ ಬಳಕೆ : ಪೌರಕಾರ್ಮಿಕರ 24.10 ಯೋಜನೆಯ ಕಲ್ಯಾಣನಿಧಿಯಲ್ಲಿ ಶೇ.20 ನ್ನು ಅವರ ಕಲ್ಯಾಣಕ್ಕಾಗಿ ಅಂದರೆ ಕಾರ್ಮಿಕರ ಆರೋಗ್ಯ, ವಸತಿ, ಶಿಕ್ಷಣಕ್ಕೆ ಮೀಸಲಿಡಬೇಕು. ಬದಲಾಗಿ ಉಪಹಾರ, ಸಮವಸ್ತ್ರ ಮತ್ತಿತರೆ ಬೇರೆ ಖರ್ಚುಗಳಿಗೆ ಈ ನಿಧಿಯಿಂದ ಬಳಸಬಾರದು ಎಂದು ತಿಳಿಸಿದರು.
ವಿಶ್ರಾಂತಿ ಗೃಹ ; ಪೌರಕಾರ್ಮಿಕರು ಕೆಲಸ ಮಾಡಿ ಕೈ-ಮುಖ ತೊಳೆಯಲು ಮತ್ತು ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಯ ಅವಶ್ಯಕತೆ ಇದೆ. ಎಲ್ಲ ನಗರ ಸ್ಥಳೀಯ ಸಂಸ್ಥಗಳಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್ ಮಾತನಾಡಿ, ಜಿಲ್ಲೆಯಲ್ಲಿ 259 ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮತ್ತು 350 ಪೌರಕಾರ್ಮಿಕರಿಗೆ ಅಂಬೇಡ್ಕರ್ ಮತ್ತು ವಾಜಪೇಯಿ ವಸತಿ ಯೋಜನೆಯಡಿ ವಸತಿ ಕಲ್ಪಿಸಲಾಗಿದೆ. ಹಾಗೂ ಖಾಲಿ ಇರುವ ಹುದ್ದೆಗಳನ್ನು ತುಂಬಲು ಸರ್ಕಾರಕ್ಕೆ ಬರೆಯಲಾಗಿದೆ ಎಂದರು
ಎಲ್ಲ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದ ಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ತುಂಬುವುದು ಅವಶ್ಯಕವಾಗಿದ್ದು ಸರ್ಕಾರದ ಹಂತದಲ್ಲಿ ಚರ್ಚಿಸುತ್ತಿದ್ದೇನೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಚಿನ್ನಯ್ಯ ಮಾತನಾಡಿ, ನಿಗಮದಿಂದ ಸಾಲ ಮತ್ತು ಇತರೆ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳು ಸಫಾಯಿ ಕರ್ಮಚಾರಿ ದೃಢೀಕರಣ ಪತ್ರವನ್ನು ಹಾಗೂ ಇತರೆ ಸೌಲಭ್ಯಗಳನ್ನು ಸಕಾಲದಲ್ಲಿ ನೀಡುವಂತೆ ಒತ್ತಾಯಿಸಿದರು.
ಅಧ್ಯಕ್ಷರು ಪ್ರತಿಕ್ರಿಯಿಸಿ, ಎಲ್ಲ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ಅಗತ್ಯವಾದ ಗುರುತಿನ ಚೀಟಿ, ಸಾಲ ಸೌಲಭ್ಯಕ್ಕೆ ಅಗತ್ಯವಾದ ದೃಢೀಕರಣ ಪತ್ರ ನೀಡಬೇಕು. ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣದ ಕುರಿತು ಅಧಿಕಾರಿಗಳು ಸರ್ವೇ ಮಾಡಿ ಅವರಿಗೆ ಉನ್ನತ ಶಿಕ್ಷಣಕ್ಕೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲು ಸಹಕರಿಸಬೇಕೆಂದರು.

ಸರ್ಕಾರಕ್ಕೆ ಪೌರಕಾರ್ಮಿಕರ ನೌಕರಿ ಖಾಯಂ, ಆರೋಗ್ಯ, ಶಿಕ್ಷಣ ಸೇರಿದಂತೆ 20 ಅಂಶಗಳ ಮನವಿಯನ್ನು ಸಲ್ಲಿಸಿಸದ್ದು, ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಮಂತ್ರಿಗಳೊಂದಿಗೆ ಶೀಘ್ರದಲ್ಲೇ ಚರ್ಚಿಸುತ್ತೇನೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯ್ತಿಗಳ ಆಯುಕ್ತರು, ಮುಖ್ಯಾಧಿಕಾರಿಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here