ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಸಿ, ಕೊರೊನಾ ನಿಯಂತ್ರಿಸಲು ಶ್ರಮಿಸಿ:ಕೋಟ ಶ್ರೀನಿವಾಸ ಪೂಜಾರಿ

0
75

ಮಡಿಕೇರಿ. ಆ.07:-ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಜಿಲ್ಲೆಯ ಚೆಕ್ ಪೋಸ್ಟ್‍ಗಳಲ್ಲಿ ಸಿಸಿಟಿವಿ ಅಳವಡಿಸಿ ಕೊರೊನಾ ನಿಯಂತ್ರಿಸಲು ಬಿಗಿಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆ ಮತ್ತು ಮಳೆ ಹಾನಿ ಪರಿಹಾರ ಕಾರ್ಯಗಳ ಕುರಿತು ಶುಕ್ರವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಾಕ್‍ಡೌನ್ ತೆರವುಗೊಳಿಸಿದ ನಂತರ ಕೋವಿಡ್-19 ಪ್ರಕರಣಗಳು ಹೆಚ್ಚಳ ಕಂಡು ಬರುತ್ತಿದೆ. ಹಾಗೆಯೇ ಕೇರಳ ರಾಜ್ಯದಲ್ಲಿ 3ನೇ ಅಲೆ ಕಂಡು ಬಂದಿರುವುದರಿಂದ ಕೇರಳ ರಾಜ್ಯದಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೇರಳದಿಂದ ಆಗಮಿಸುವವರನ್ನು ಕೊಡಗು ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಬಾರದು. ತುರ್ತು ಕೆಲಸ ಇದ್ದವರಿಗೆ 72 ಗಂಟೆಗಳ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿರುವ ನೆಗೆಟಿವ್ ವರದಿ ಇರುವವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಕೋವಿಡ್-19 ಪ್ರಕರಣ ಹೆಚ್ಚಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ, ಸಂಪಾಜೆ, ತಿತಿಮತಿ ಸೇರಿದಂತೆ ವಿವಿಧ ಚೆಕ್ ಪೋಸ್ಟ್‍ಗಳಲ್ಲಿ ಸರಿಯಾದ ತಪಾಸಣೆ ಮಾಡುತ್ತಿಲ್ಲ ಎಂದು ದೂರಿದರು.
ಚೆಕ್‍ಪೋಸ್ಟ್‍ಗಳಲ್ಲಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕು. ಚಳಿ ಮಳೆ, ಗಾಳಿಯಲ್ಲಿ ನಡುಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೆಡ್ ನಿರ್ಮಿಸುವುದರ ಜೊತೆಗೆ ಊಟ, ತಿಂಡಿ ಪೂರೈಸಬೇಕು. ಜೊತೆಗೆ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.

ಈ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಹಣ ನೀಡುತ್ತದೆ. ಆದರೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಕಂದಾಯ, ಪೊಲೀಸ್, ಪಂಚಾಯತ್ ರಾಜ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಕೋವಿಡ್-19 ನಿಯಂತ್ರಿಸಬಹುದು. ಆ ನಿಟ್ಟಿನಲ್ಲಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವಂತೆ ಸಚಿವರು ಸೂಚಿಸಿದರು.
ಇತ್ತೀಚೆಗೆ ಕೋವಿಡ್ ಪರೀಕ್ಷೆ ಮಾಡುವುದು ಕಡಿಮೆಯಾಗುತ್ತಿದೆ. ಕೇರಳದಿಂದ ಸುಖಾ ಸುಮ್ಮನೆ ಬರುವುದನ್ನು ತಡೆಯಬೇಕು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕು. ನಿಗಧಿಪಡಿಸಿರುವ ಗುರಿಗಿಂತ ಹೆಚ್ಚು ಪರೀಕ್ಷೆ ಮಾಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿ ಅವರ ಆದೇಶ ಉಲ್ಲಂಘಿಸುವುದು ಕಂಡು ಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಚೆಕ್‍ಪೋಸ್ಟ್‍ಗಳಿಗೆ ಆಗಾಗ ಭೇಟಿ ನೀಡಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ ಗಮನಹರಿಸಬೇಕು. ಇಷ್ಟೊಂದು ಗಂಭೀರ ಪರಿಸ್ಥಿತಿ ಇದ್ದಾಗ ಎಲ್ಲರೂ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಹೇಳಿದರು.
‘ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ಗ್ರಾ.ಪಂ.ಮಟ್ಟದಲ್ಲಿ ಕಾರ್ಯಪಡೆ ರಚಿಸಿದ್ದು, ಕಾರ್ಯಪಡೆ ಸಮಿತಿ ಸಭೆಯು ಮೂರು ದಿನಗಳಿಗೊಮ್ಮೆ ನಡೆಯಬೇಕು. ಗ್ರಾ.ಪಂ. ಮಟ್ಟದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಮುಂದಾಗಬೇಕು. ಸಮಿತಿಯಲ್ಲಿರುವ ಎಲ್ಲರೂ ಸಮನ್ವಯತೆಯಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.’
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಮಾಡಿದ್ದಲ್ಲಿ ಕೋವಿಡ್ ನಿಯಂತ್ರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಅವರು ಸೂಚಿಸಿದರು.
ಕೋವಿಡ್ ನಿರ್ವಹಣೆಗಾಗಿ ನೇಮಕವಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮುಂದುವರಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಚಿವರು ಸಲಹೆ ಮಾಡಿದರು.
ಕೋವಿಡ್ ನಿರ್ವಹಣೆ ಕೆಲಸಕ್ಕೆ ಬಡವರು ಬರುತ್ತಾರೆ. ಹಣ ಇರುವವರು ಬರಲು ಸಾಧ್ಯವೇ, ಅಂತವರನ್ನು ಏಕೆ ಕೆಲಸದಿಂದ ಬಿಡುಗಡೆ ಮಾಡಿದ್ದೀರ ಎಂದು ಪ್ರಶ್ನಿಸಿದ ಸಚಿವರು, ಹೊರಗುತ್ತಿಗೆಯಿಂದ ನೇಮಕವಾದ ಸಿಬ್ಬಂದಿಗಳನ್ನು ಮುಂದುವರೆಸಬೇಕು. ಸರ್ಕಾರದಿಂದ ಒಪ್ಪಿಗೆ ಕೊಡಿಸಲಾಗುವುದು ಎಂದು ಸಚಿವರು ಹೇಳಿದರು.
ಸರಕು ಸಾಗಾಣಿಕೆ ವಾಹನದಲ್ಲಿ ಜಿಲ್ಲೆಗೆ ಪ್ರವೇಶಿಸುವವರನ್ನು 7 ದಿನದ ಕೋವಿಡ್ ಪರೀಕ್ಷೆ ನೆಗೆಟಿವ್ ವರದಿ ಇದ್ದವರಿಗೆ, ಜೊತೆಗೆ ರ್ಯಾಪಿಡ್ ಪರೀಕ್ಷೆ ಮಾಡಿ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಮೊದಲ ಲಸಿಕೆ ನೀಡಿದವರಿಗೆ ಎರಡನೇ ಹಂತದ ಲಸಿಕೆಯನ್ನು ಕಾಲ ಮಿತಿಯಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ವ್ಯತ್ಯಯ ಉಂಟಾಗಬಾರದು ಎಂದು ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳು ಮುಂದುವರೆದಿದ್ದು, ಕೋವಿಡ್ ಪರೀಕ್ಷೆ ನಿರಂತರವಾಗಿ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ 14 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇದೆ. 4 ಎಂಬಿಬಿಎಸ್ ವೈದ್ಯರು ಬೇಕಿದೆ. ಹಾಗೆಯೇ ಶ್ರುಶ್ರೂಷಕರು ಹಾಗೂ ಎಎನ್‍ಎಂ ಹುದ್ದೆಗಳು ಖಾಲಿ ಇವೆ ಎಂದು ಅವರು ಮಾಹಿತಿ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ ಅವರು ಹಲವು ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಪೂರ್ಣ, ಭಾಗಶಃ ಮನೆ ಹಾನಿ ಹಾಗೂ ಮನೆಗೆ ನೀರು ನುಗ್ಗಿ ಉಪಕರಣಗಳು ಹಾಳಾಗಿರುವ ಬಗ್ಗೆ ಸ್ಥಳ ಪರಿಶೀಲಿಸಿ ಸರ್ಕಾರದ ನಿಯಮಾನುಸಾರ ತ್ವರಿತವಾಗಿ ಸಂಕಷ್ಟಕ್ಕೆ ತುತ್ತಾದವರಿಗೆ ಪರಿಹಾರ ವಿತರಿಸಬೇಕು. ಈ ನಿಟ್ಟಿನಲ್ಲಿ ಪ್ರಥಮ ಆದ್ಯತೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಮನೆ ಹಾನಿ ಮತ್ತು ಬೆಳೆ ಹಾನಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು. ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಗೆ ಪರಿಹಾರ ನೀಡಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಬೆಳೆ ಹಾನಿ ಸಮೀಕ್ಷೆ ಮಾಡಿ ತುರ್ತಾಗಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ, ತಮ್ಮ ವ್ಯಾಪ್ತಿಯ ಬೆಳೆಗಳಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಸಚಿವರು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರು ಮಳೆ ಹಾನಿಯಿಂದ 35 ಕಡೆ ಸಣ್ಣ ಪುಟ್ಟ ಹಾನಿಯಾಗಿದ್ದು, ಸರಿಪಡಿಸಲಾಗಿದೆ ಎಂದು ಅವರು ಹೇಳಿದರು. ಗಾಳಿ ಮಳೆಯಿಂದ 234 ಕಡೆ ಮರಗಳು ಉರುಳಿದ್ದು, ಇವುಗಳನ್ನು ತೆರವುಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಅವರು ತಿಳಿಸಿದರು.
‘ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಈ ಬಾರಿ ಮಳೆಯಿಂದಾಗಿ ಒಂದು ಮಾನವ ಪ್ರಾಣ ಹಾನಿ, 13 ಜಾನುವಾರು ಹಾನಿ, 95 ಮನೆ ಹಾನಿ, 14.50 ಹೆಕ್ಟೇರ್ ಬೆಳೆ ಹಾನಿ ಮತ್ತು 90.61 ಕೋಟಿ ರೂ.ಗಳಷ್ಟು ಸಾರ್ವಜನಿಕರ ಆಸ್ತಿ-ಪಾಸ್ತಿ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಳೆ ಹಾನಿಗೆ ಸಂಬಂಧಿಸಿದಂತೆ 9.20 ಹೆಕ್ಟೇರ್ ಪ್ರದೇಶಲ್ಲಿ ಕೃಷಿ ಬೆಳೆ ಹಾನಿ,5.30 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಾಗೆಯೇ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ, ಪಂಚಾಯತ್ ರಾಜ್, ವಿದ್ಯುತ್, ರಾಷ್ಟ್ರೀಯ ಹೆದ್ದಾರಿ, ಸಣ್ಣ ನೀರಾವರಿ, ಪಿಎಂಜಿಎಸ್‍ವೈ, ನಗರಾಭಿವೃದ್ಧಿ ಸೇರಿದಂತೆ ಒಟ್ಟು 9,060 ಲಕ್ಷ ರೂ.ನಷ್ಟು ಮಳೆಯಿಂದ ಹಾನಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕೋವಿಡ್ ನಿಯಂತ್ರಣ ಸಂಬಂಧ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಡಿ ಪ್ರದೇಶದ ಚೆಕ್‍ಪೋಸ್ಟ್‍ಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಶಶಿಧರ, ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ವಿಭಾಗದ ಎಂಜಿನಿಯರ್ ಪ್ರಭು, ಜಿ.ಪಂ. ಎಂಜಿನಿಯರ್ ಶ್ರೀಕಂಠಯ್ಯ ಅವರು ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು.
ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ತಹಶೀಲ್ದಾರರಾದ ಮಹೇಶ್, ಪ್ರಕಾಶ್ ಅವರು ಕೋವಿಡ್ ನಿಯಂತ್ರಣ ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ವಿತರಣೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here