ಹೊರ ರಾಜ್ಯದಿಂದ ಆಗಮಿಸುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ತಹಸೀಲ್ದಾರ್ ಹೆಚ್.ವಿಶ್ವನಾಥ್

0
99

ಬಳ್ಳಾರಿ/ಹೊಸಪೇಟೆ,ಫೆ.23 : ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಅನ್ಯ ರಾಜ್ಯಗಳಿಂದ ಹೊಸಪೇಟೆ ನಗರಕ್ಕೆ ಆಗಮಿಸುವವರ ಮೇಲೆ ನಿಗಾವಹಿಸಲಾಗಿದ್ದು, ಹೊರ ರಾಜ್ಯದಿಂದ ಬರುವವರು ತಪ್ಪದೇ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಹೊಸಪೇಟೆ ತಹಸೀಲ್ದಾರರಾದ ಹೆಚ್.ವಿಶ್ವನಾಥ್ ಅವರು ಹೇಳಿದರು.
ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಹಸೀಲ್ದಾರರ ಕಚೇರಿಯಲ್ಲಿ ಮಂಗಳವಾರ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಹತ್ತಿರವಿರುವ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಜೊತೆಗೆ 2ನೇ ಅಲೆಯ ಭೀತಿ ಕಾಡುತ್ತಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ಚಟುವಟಿಕೆಗಳು ಪುನರಾಂಭವಾಗಿರುವುದರಿಂದ ಬೇರೆ ರಾಜ್ಯಗಳಿಂದ ನಗರಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿವಿಧ ಆಚರಣೆಗಳಾದ ಮದುವೆ ಹಾಗೂ ರಾಜಕೀಯ ಸಮಾವೇಶಗಳು ನಡೆಯುತ್ತಿವೆ. ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ರೆಸಾರ್ಟ್‍ಗಳು, ಡಾಬಾಗಳಲ್ಲಿ ಆಹಾರ ಪದಾರ್ಥಗಳ ತಯಾರಕರು ಹಾಗೂ ಆಹಾರ ಪದಾರ್ಥಗಳ ನಿರ್ವಹಣೆ ಮಾಡುವವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಹೇಳಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್-19 ಹರಡದಂತೆ ತಡೆಗಟ್ಟಲು ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ಸಾರ್ವಜನಿಕರು 6 ಅಡಿಗಳ ದೈಹಿಕ ಅಂತರವನ್ನು ಪಾಲನೆ ಮಾಡುವುದು, ಮಾಸ್ಕ್‍ಗಳು ಅಥವಾ ಫೇಸ್ ಕವರ್‍ಗಳನ್ನು ಕಡ್ಡಾಯವಾಗಿ ಧರಿಸಬೇಕು. ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು, ಕೆಮ್ಮುವಾಗ/ಸೀನುವಾಗ ಬಾಯಿ ಹಾಗೂ ಮೂಗನ್ನು ಕಡ್ಡಾಯವಾಗಿ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‍ಗಳಿಂದ ಮುಚ್ಚಬೇಕು ಹಾಗೂ ಬಳಸಿದ ಟಿಶ್ಯೂ ಪೇಪರ್ ಅನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು, ಪದೇ ಪದೇ ಉಗುಳುವುದನ್ನು ಮಾಡಬಾರದು, ಆಹಾರ ಪದಾರ್ಥಗಳನ್ನು ಸಿದ್ಧ ಪಡಿಸುವವರು ಹಾಗೂ ನಿರ್ವಹಿಸುವವರು ಒಂದು ಬಾರಿ ಬಳಸಿ ಬಿಸಾಡಬಹುದಾದ ಗ್ಲೋವ್ಸ್‍ಗಳನ್ನು ಕಡ್ಡಾಯವಾಗಿ ಬಳಸಬೇಕು, ಸಾರ್ವಜನಿಕರು ತಪ್ಪದೇ ಈ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರರಾದ(ಗ್ರಾ.ಉ) ಉಮೇಶ.ಎಮ್, ಆರೋಗ್ಯ ಇಲಾಖೆಯ ಟಿ.ಹೆಚ್.ಒ. ಡಾ.ನಾಗೇಂದ್ರ, ಹೊಸಪೇಟೆ ಆರೋಗ್ಯ ಇಲಾಖೆಯ ಎಂ.ಪಿ.ದೊಡ್ಡಮನಿ, ನಗರಸಭೆಯ ಪರಿಸರ ಇಂಜಿನಿಯರ್‍ಗಳಾದ ಅಶೋಕ ಕುಮಾರ್ ಸಜ್ಜನ್, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿಯ ಆರೋಗ್ಯ ನೀರಿಕ್ಷಕರಾದ(ಪ್ರಭಾರ) ಟಿ.ಎನ್.ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕರರಾದ ಡಿ.ನಾಗವೇಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here