ಪಾಲಿಕೆಯಿಂದ ವೃತ್ತಿನಿರತ ಪತ್ರಿಕಾ ಪ್ರತಿನಿಧಿಗಳಿಗೆ ಲ್ಯಾಪ್‍ಟಾಪ್ ವಿತರಣೆ

0
65

ಶಿವಮೊಗ್ಗ, ಜನವರಿ 29: ವೃತ್ತಿನಿರತ ಪತ್ರಿಕಾ ಪ್ರತಿನಿಧಿಗಳಿಗೆ ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಇವರು ಪಾಲಿಕೆ ಸಭಾಂಗಣದಲ್ಲಿ ಇಂದು ಲ್ಯಾಪ್‍ಟಾಪ್ ವಿತರಣೆ ಮಾಡಿದರು.

ಸಚಿವರು ಮಾತನಾಡಿ, ಪಾಲಿಕೆ ವತಿಯಿಂದ ವಿವಿಧ ಕ್ಷೇತ್ರಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಮಾಧ್ಯಮ ಕ್ಷೇತ್ರಕ್ಕೂ ಸಹಕಾರ ಒದಗಿಸುವ ನಿಟ್ಟಿನಲ್ಲಿ ಲ್ಯಾಪ್‍ಟಾಪ್ ವಿತರಿಸಲಾಗುತ್ತಿದೆ. ಹಾಗೂ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಮೆ ಮಾಡಿಸಿ ಇಂದು ವಿಮಾ ಪಾಲಿಸಿ ವಿತರಿಸಲಾಗುತ್ತಿದ್ದು ಅರ್ಹರೆಲ್ಲ ಇದರ ಸದುಪಯೋಗ ಪಡೆಯಬೇಕೆಂದರು.

ಪಾಲಿಕೆ ಆಯುಕ್ತರಾದ ಚಿದಾನಂದ ಎಸ್.ವಟಾರೆ ಮಾತನಾಡಿ, ಪಾಲಿಕೆ ಸಾಮಾನ್ಯ ನಿಧಿಯಲ್ಲಿ ಪ್ರಸಕ್ತ ಸಾಲಿನಲ್ಲಿ ವಿದ್ಯುನ್ಮಾನ ಮಾಧ್ಯಮದ 14 ಪ್ರತಿನಿಧಿಗಳು, ಸ್ಥಳೀಯ ಸುದ್ದಿವಾಹಿನಿಗಳ 03 ಪ್ರತಿನಿಧಿಗಳು ಮತ್ತು 03 ಛಾಯಾಗ್ರಾಹಕರು ಸೇರಿದಂತೆ ಒಟ್ಟು 20 ಲ್ಯಾಪ್‍ಟಾಪ್ ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಒಟ್ಟು 26 ಪ್ರತಿನಿಧಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಗಿತ್ತು. ಹಾಗೂ ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಪ್ರಧಾನ ಮಂತ್ರಿ ಸ್ವಾಸ್ಥ್ಯಸುರಕ್ಷಾ ಯೋಜನೆಯಡಿ ವಿಮಾ ಪಾಲಿಸಿಯನ್ನು ವಿತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಚಿತ್ರಕಲೆಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಮತ್ತು ಬಹುಮಾನ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ ಅಮೃತರನ್ನು ಪಾಲಿಕೆ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಸಿ.ಎನ್.ನಾಗರಾಜ್, ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಉಪ ಮಹಾಪೌರರಾದ ಶಂಕರ್ ಗನ್ನಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here