ಕಾನೂನು ವಿವಿ 5 ನೇ ಘಟಿಕೋತ್ಸವ
ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಿ ಕಡಿಮೆ ವೆಚ್ಚ ಹಾಗೂ ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು -ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್

0
134

ಧಾರವಾಡ : ಮಾ.26: ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯು ವಿಶ್ವದ ಅತ್ಯಂತ ಹಳೆಯ ಮತ್ತು ಬಲಿಷ್ಠ ವ್ಯವಸ್ಥೆಯಾಗಿದೆ. ಅದನ್ನು ಇನ್ನಷ್ಟು ಶಕ್ತಿಯುತಗೊಳಿಸುವ ತುರ್ತು ಅಗತ್ಯವಿದೆ. ಕಾನೂನು ಪದವೀಧರರು ಈ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಬೇಕು.ಕಡಿಮೆ ವೆಚ್ಚ ,ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು ಎಂದು ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಹ ಥಾವರ್‌ಚಂದ್ ಗೆಹ್ಲೋತ್ ಹೇಳಿದರು.

ಇಲ್ಲಿನ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಕಾನೂನು ವಿವಿಯ ಐದನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿಅಧ್ಯಕ್ಷತೆವಹಿಸಿ ಮಾತನಾಡಿದರು,

ಘಟಿಕೋತ್ಸವವು ಒಂದು ಭಾವನಾತ್ಮಕ ಕ್ಷಣವಾಗಿದೆ. ಈ ದಿನವು ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರಿಗೆ, ಪೋಷಕರಿಗೆ ಹೆಮ್ಮೆಯ ಕ್ಷಣವಾಗಿದೆ.ಇಂದು ಎಲ್ಲಾ ಕಾನೂನು ಪದವೀಧರರು ಜೀವನದ ಹೊಸ ಸವಾಲುಗಳನ್ನು ಎದುರಿಸಲು, ಹೊಸ ವಾತಾವರಣವನ್ನು ಪ್ರವೇಶಿಸುತ್ತಿದ್ದಾರೆ.
ಯುವ ಪದವೀಧರರು ದೇಶದ ಭವಿಷ್ಯ ಹಾಗೂ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದೀರಿ.
ನ್ಯಾಯಾಂಗವನ್ನು ಹೆಚ್ಚು ಶಕ್ತಿಯುತವಾಗಿ, ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವನ್ನಾಗಿ ಮಾಡಲು ನೀವು ಕೊಡುಗೆ ನೀಡಬೇಕು ಎಂದರು.

“ತಡವಾಗಿ ನೀಡಿದ ನ್ಯಾಯವೂ ಅನ್ಯಾಯವೇ” ಎಂದು ಹೇಳಲಾಗುತ್ತದೆ. ಸಾಮಾನ್ಯ ಬಡವರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಲು ಇಂದು ಸಂಕಲ್ಪ ಮಾಡಬೇಕು‌.ಸಾಮಾಜಿಕ-ಆರ್ಥಿಕ ಅಸಮಾನತೆಗಳು ನಿರ್ಮೂಲನೆಯಾಗಬೇಕು, ಸಮಾಜವನ್ನು ಒಳಗೊಳ್ಳುವ ಮತ್ತು ಸಂಪನ್ಮೂಲಗಳ ವಿತರಣೆಯು ಸಾರ್ವತ್ರಿಕ ಅಂಗೀಕಾರದ ಆಧಾರದ ಮೇಲೆ ಇರಬೇಕು, ಅಂತಹ ವ್ಯವಸ್ಥೆಯ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ.
ವಿಶ್ವವಿದ್ಯಾಲಯವು ಕಾನೂನು ನಿಯತಕಾಲಿಕಗಳು, ಪುಸ್ತಕಗಳು, ಪತ್ರಿಕೆಗಳು ಇತ್ಯಾದಿಗಳನ್ನು ಪ್ರಕಟಿಸುತ್ತಿದೆ .ಸಂಶೋಧನೆ, ಜ್ಞಾನ ಉತ್ಪಾದನೆಯನ್ನು ಉತ್ತೇಜಿಸಲು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದೆ ಕಾನೂನು ತಜ್ಞರು, ನ್ಯಾಯವಾದಿಗಳು,ನ್ಯಾಯಾಂಗದ ಅಧಿಕಾರಿಗಳು ಇವುಗಳ ಪ್ರಯೋಜನ ಪಡೆಯಬೇಕು ಎಂದು ರಾಜ್ಯಪಾಲರು ಹೇಳಿದರು .

ಘಟಿಕೋತ್ಸವ ಭಾಷಣ ಮಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ್ ವೈ.ಚಂದ್ರಚೂಡ್ ವರ್ಚುವಲ್ ಮೂಲಕ ಮಾತನಾಡಿ,ಯುವ ವಕೀಲರು ವೃತ್ತಿ ಘನತೆ,ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಪ್ರಾಚೀನ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಪ್ರಾರಂಭವಾದ ನ್ಯಾಯದಾನ ಪ್ರಕ್ರಿಯೆಗೆ ಕ್ರಿ.ಶ.4 ನೇ ಶತಮಾನದಲ್ಲಿ ರೋಮನ್ನರು ಹೊಸ ರೂಪ ನೀಡಿದರು. ಆದರೆ ಅದಕ್ಕೆ ಕಾನೂನು ಚೌಕಟ್ಟುಗಳಿರಲಿಲ್ಲ.ಇ‌ಂಗ್ಲೆ‌ಂಡ್ ಮತ್ತು ಅಮೇರಿಕನ್ನರು ಕಾನೂನು ಸ್ಪರ್ಶ ನೀಡಿ,ವ್ಯಾಖ್ಯಾನ ಒದಗಿಸಿದರು.ಆಧುನಿಕ ಭಾರತೀಯ ಕಾನೂನು ಪ್ರಕ್ರಿಯೆ ಬ್ರಿಟಿಷರಿಂದಲೇ ಪ್ರಭಾವಿತವಾಗಿದೆ.1961 ರಲ್ಲಿ ಭಾರತದಲ್ಲಿ ವಕೀಲರ ಕಾಯ್ದೆ ಜಾರಿಗೆ ಬಂದಿತು‌.ಇಂದು ಕಾನೂನು ಶಿಕ್ಷಣ ದುಬಾರಿಯಾಗಿದೆ.ವಕೀಲರಿಗೆ ಸಿಗುತ್ತಿರುವ ವೇತನ ಕಡಿಮೆ ಇದೆ ಅದಕ್ಕಾಗಿ ಬಹಳ ಜನ ವಕೀಲಿ ವೃತ್ತಿಯನ್ನು ತೊರೆದು ಕಾರ್ಪೋರೆಟ್ ಸಂಸ್ಥೆಗಳ ಕಾನೂನು ಸಲಹೆಗಾರ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಯಾವುದಾದರೂ ವೃತ್ತಿಯನ್ನು ಆಯ್ದುಕೊಂಡರೂ ಕೂಡ ಮಾನವೀಯ ಮೌಲ್ಯಗಳನ್ನು ಆಧರಿಸಿಯೇ ವಕೀಲಿ ವೃತ್ತಿ ನಡೆಸಬೇಕು ಎಂದು ಹೊಸ ಪದವೀಧರರಿಗೆ ಕಿವಿಮಾತು ಹೇಳಿದರು.

ಕಾನೂನು ,ಸಂಸದೀಯ ವ್ಯವಹಾರ ,ಶಾಸನ ಹಾಗೂ ಸಣ್ಣ ನೀರಾವರಿ ಸಚಿವರೂ,ವಿವಿಯ ಸಮಕುಲಾಧಿಪತಿಗಳೂ ಆದ ಜೆ‌.ಸಿ‌.ಮಾಧುಸ್ವಾಮಿ ಮಾತನಾಡಿ, ಕಳೆದ ಬಾರಿ ನಡೆದ ಘಟಿಕೋತ್ಸವ ಸಂದರ್ಭದಲ್ಲಿ ಉಪಸ್ಥಿತರಿದ್ದ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರಿಗೆ ಇಂದು ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಬೇಕಾದ ಸಂದರ್ಭ ಬರಬಹುದು ಎಂಬುದನ್ನು ನಿರೀಕ್ಷಿಸಿರಲಿಲ್ಲ‌.ಇಂದು ಪದವಿ ಪಡೆದು ವೃತ್ತಿಗೆ ಪ್ರವೇಶಿಸುತ್ತಿರುವ ಕಾನೂನು ಪದವೀಧರರು ತಮ್ಮನ್ನು ಈ ಹಂತಕ್ಕೆ ತಲುಪಿಸಿದ ,ಪಾಲಕರು,ಪೋಷಕರ ತ್ಯಾಗ ಅರಿತು ಅವರಿಗೆ ಆಸರೆಯಾಗಬೇಕು.ಕಾನೂನು ಪದವೀಧರರು ನಿರಂತರವಾಗಿ ವಿದ್ಯಾರ್ಥಿಗಳಾಗಿ ಅಧ್ಯಯನಶೀಲರಾಗಿರಬೇಕು.ನ್ಯಾಯ ಮತ್ತು ಸಮಾನತೆ ಎತ್ತಿ ಹಿಡಿಯಲು ಮಾನವೀಯ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಹಣಗಳಿಕೆಯೇ ಮುಖ್ಯವಲ್ಲ, ಪ್ರತಿಭೆ,ಅಧ್ಯಯನದಿಂದ ಸಮಾಜದಲ್ಲಿ ಗುರುತಿಸಿಕೊಂಡು,ಗೌರವ ಪಡೆಯಬೇಕು ಎಂಬ ಮಹಾದಾಸೆಯೊಂದಿಗೆ ಈ ವೃತ್ತಿ ಆಯ್ದುಕೊಂಡಿರುತ್ತೇವೆ. ವಕೀಲರಿಗೆ ಪ್ರಕರಣ ನೀಡಿ, ಶುಲ್ಕ ಕಟ್ಟಿ ಬದುಕು ನಿರ್ವಹಣೆಗೆ ಕಾರಣವಾಗುವ ಕಕ್ಷಿದಾರರನ್ನು ಗೌರವದಿಂದ ಕಾಣಬೇಕು ಎಂದರು.

ಗೌರವ ಡಾಕ್ಟರೇಟ್ ಪ್ರದಾನ
ಗದ್ಗದಿತರಾದ ಸುನಿತಾ ಮೋಹನ್ ಶಾಂತನಗೌಡರ್

ಹೆಸರಾಂತ ಕಾನೂನು ತಜ್ಞ,ದಿವಂಗತ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಅವರ ಅತ್ಯುತ್ತಮ ಕೆಲಸ ಮತ್ತು ಸೇವೆಗಳಿಗಾಗಿ ಮರಣೋತ್ತರವಾಗಿ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ಅವರ ಧರ್ಮಪತ್ನಿ ಸುನಿತಾ ಮೋಹನ್ ಶಾಂತನಗೌಡರ್ ಸ್ವೀಕರಿಸುವಾಗ ಭಾವಪರವಶರಾಗಿ ಗದ್ಗದಿತರಾದರು.

ವಿವಿಯ ಐದನೇ ಘಟಿಕೋತ್ಸವದಲ್ಲಿ 2355 ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಹಾಗೂ ಗೈರು ಹಾಜರಿಯಲ್ಲಿ 2745 ವಿದ್ಯಾರ್ಥಿಗಳು ಸೇರಿ ಒಟ್ಟು 5188 ವಿದ್ಯಾರ್ಥಿಗಳಿಗೆ ವಿವಿಧ ಪದವಿ,ಸ್ನಾತಕೋತ್ತರ ಪದವಿಗಳು ,ಸ್ವರ್ಣಪದಕಗಳು ,ಓರ್ವರಿಗೆ ಪಿಹೆಚ್‌ಡಿ ಪದವಿಯನ್ನು ರಾಜ್ಯಪಾಲರು ಘಟಿಕೋತ್ಸವದಲ್ಲಿ ಪ್ರದಾನ ಮಾಡಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಜೆ.ಬಿ.ಪಾಟೀಲ,ಕುಲಸಚಿವ ಮಹ್ಮದ್ ಜುಬೇರ್ ,ಡೀನ್ ರತ್ನಾ ಆರ್ ಭರಮಗೌಡರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ.ಈಶ್ವರಭಟ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here