ಅಂತರಿಕ್ಷ ಯಾತ್ರೆ ಮಾಡಿದ ಪ್ರಥಮ ಮಾನವ ಯೂರಿ ಗಗಾರಿನ್

0
49

ಯೂರಿ ಅಲೆಕ್ಸಿಯೆವಿಚ್ ಗಗಾರಿನ್
ಅಂತರಿಕ್ಷ ಯಾತ್ರೆ ಮಾಡಿದ ಪ್ರಥಮ ಮಾನವರೆಂದು ಸ್ಮರಣೀಯರಾಗಿದ್ದಾರೆ. ಇಂದು ಅವರ ಸಂಸ್ಮರಣೆ ದಿನ.

ಸೋವಿಯತ್ ದೇಶದವರಾದ ಯೂರಿ ಗಗಾರಿನ್ ಸ್ಮೂಲೆನ್‍ಸ್ಕ್ ಪ್ರಾಂತ್ಯದ ರೈತ ಕುಟುಂಬವೊಂದರಲ್ಲಿ 1934ರ ಮಾರ್ಚ್ 9ರಂದು ಜನಿಸಿದರು. 1941ರಲ್ಲಿ ಶಾಲೆಗೆ ಸೇರಿದರೂ ನಾಟ್ಸಿಗಳ ಆಕ್ರಮಣದಿಂದಾಗಿ ಇವರ ವಿದ್ಯಾಭ್ಯಾಸ ಮೊಟಕಾಯಿತು. ಎರಡನೆಯ ಮಹಾಯುದ್ಧದ ಅನಂತರ ವೃತ್ತಿ ಶಿಕ್ಷಣ ಮುಗಿಸಿ ಎರಕಗಾರನ ಅರ್ಹತೆ ಪಡೆದರು. ಅನಂತರ ಸರಾತೋವ್‍ನ ತಾಂತ್ರಿಕ ಶಾಲೆಯಲ್ಲಿ ಅಭ್ಯಸಿಸಿ 1955ರಲ್ಲಿ ಪದವೀಧರರಾದರು.

ಯೂರಿ ಗಗಾರಿನ್ ಅವರಿಗೆ ವಿಮಾನದಲ್ಲಿ ಹಾರಾಡುವ ಉತ್ಕಟ ಆಸೆ ಶಾಲೆಯಲ್ಲಿದ್ದಾಗಲೇ ಇತ್ತಾಗಿ, ಸರಾತೋವ್ ಏರೊಕ್ಲಬ್ಬಿಗೆ ಸೇರಿದರು. ಅನಂತರ 1955ರಲ್ಲಿ ಓರೆನಬರ್ಗಿನ ವಾಯುದಳದ ಶಾಲೆ ಸೇರಿ ಪದವೀಧರರಾದರು (1957). ಇದೇ ಹೊತ್ತಿಗೆ ಅಂತರಿಕ್ಷ ವಿಜ್ಞಾನದಲ್ಲಿ ಆಗಾಧ ಪ್ರಗತಿ ಆಗುತ್ತಿತ್ತು. 1957ರಲ್ಲಿ ರಷ್ಯ ಸ್ಫುಟ್ನಿಕ್-1ನ್ನು ಹಾರಿಸಿತ್ತು. ಸ್ಫುಟ್ನಿಕ್-2ರಲ್ಲಿ ಲೈಕ ಎಂಬ ನಾಯಿಯನ್ನು ಕಳಿಸಿ ಜೀವವೈಜ್ಞಾನಿಕ ಪ್ರಯೋಗಗಳನ್ನು ನಡೆಸಿತ್ತು. ಮಾನವ ಅಂತರಿಕ್ಷಕ್ಕೆ ಪ್ರಥಮ ಹೆಜ್ಜೆ ಇಡುವ ಕಾಲ ಸಮೀಪಿಸುತ್ತಿತ್ತು. ಹೊಸ ಸಾಹಸಗಳ ಅವಕಾಶಕ್ಕಾಗಿ ಕಾಯುತ್ತಿದ್ದ ಗಗಾರಿನ್ ಅಂತರಿಕ್ಷ ಯಾತ್ರಿಗಳ ಗುಂಪಿಗೆ ಸೇರಲು ಪ್ರವೇಶಪತ್ರ ಕಳಿಸಿ ಯಶಸ್ವಿಯಾದರು.

ವಿಜ್ಞಾನಿಗಳು ಮತ್ತು ಎಂಜಿನಿಯರುಗಳು ವೊಸ್ಟೋಕ್-1 ಗಗನ ನೌಕೆಯ ನಿರ್ಮಾಣದಲ್ಲಿದ್ದಾಗ ಗಗಾರಿನ್ ಮತ್ತು ಅವರ ಸಂಗಡಿಗರು ಅಂತರಿಕ್ಷ ಯಾತ್ರೆಯ ಕಠಿಣ ತರಬೇತಿಯನ್ನು ಪಡೆದರು. ಈ ವೋಸ್ಟೋಕ್-1ರಲ್ಲಿ ಅಂತರಿಕ್ಷಕ್ಕೆ ಹಾರಲು ಗಗಾರಿನ್ ಆಯ್ಕೆಯಾದರು.

1961ರ ಏಪ್ರಿಲ್ 12ರಂದು ಬೆಳಿಗ್ಗೆ 9 ಗಂ. 7 ನಿಮಿಷಕ್ಕೆ ವೋಸ್ಟೊಕ್-1 ಬಾಹ್ಯಕಾಶ ನೌಕೆಯನ್ನು ರಾಕೆಟ್ಟಿನಿಂದ ಹಾರಿಸಲಾಯಿತು. ನೌಕೆಯ ಪೀಠದಲ್ಲಿ ಗಗಾರಿನ್ ಭದ್ರವಾಗಿದ್ದರು. 302 ಕಿ. ಮೀ. ಉಚ್ಚಸ್ಥಾನದ 175 ಕಿ.ಮೀ. ನೀಚಸ್ಥಾನ ಪಥದಲ್ಲಿ 4,725 ಕಿ. ಗ್ರಾಂ. ತೂಕದ ಈ ನೌಕೆ 28,000 ಕಿ.ಮೀ./ಗಂ. ವೇಗದಲ್ಲಿ 108 ಮಿನಿಟುಗಳ ಪ್ರಯಾಣಮಾಡಿ 10 ಗಂ.55 ಮಿ.ಗೆ ಪೂರ್ವನಿಯೋಜಿತ ಪ್ರದೇಶದಲ್ಲಿಳಿಯಿತು. ವೋಸ್ಟೋಕ್-1ರ ಯಶಸ್ವಿ ಉಡ್ಡಯನ ಅಂತರಿಕ್ಷ ಸಂಶೋಧನೆಯ ಪ್ರಮುಖ ಮೈಲಿಗಲ್ಲಾಯಿತು. ಭಾರರಹಿತ ಸ್ಥಿತಿಯಲ್ಲಿ ಮಾನವ ತನ್ನ ಕಾರ್ಯಗಳನ್ನು ಸಹಜವಾಗಿ ಮಾಡಬಲ್ಲ ಎನ್ನುವುದು ದೃಢಪಟ್ಟಿತು.

ಗಗಾರಿನ್ನರ ಈ ಸಾಹಸಕ್ಕಾಗಿ ರಷ್ಯ ಅವರಿಗೆ ಹಿರೋ ಆಫ್ ದಿ ಸೋವಿಯತ್ ಯೂನಿಯನ್ ಮತ್ತು ಲೆನಿನ್ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿತು.

ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪಯಣಿಸಿ ಬಂದರೇನಂತೆ ಮರಣ ತಪ್ಪಿದಲ್ಲ. ಯೂರಿ ಗಗಾರಿನ್ 1968ರ ಮಾರ್ಚ್ 27ರಂದು ಪರೀಕ್ಷಾರ್ಥ ವಿಮಾನ ಹಾರಾಟದಲ್ಲಿದ್ದಾಗ ಅಪಘಾತಕ್ಕೀಡಾಗಿ ಅಸುನೀಗಿದರು. ಮರಣ ದೇಹಕ್ಕಷ್ಟೇ. ಸಾಹಸಿಯ ಬದುಕು ಸದಾ ಅಮರ.

ಮಾಹಿತಿ ಕೃಪೆ: ಮೈಸೂರು ವಿಶ್ವಕೋಶ

LEAVE A REPLY

Please enter your comment!
Please enter your name here