ಕನಸುಗಾರ ಸೊಗಸಾದ ಮಾತುಗಾರ ಮೈಲೇಶ್ ಬೇವೂರ್

0
1428

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೊಂದು ಹೆಸರು ಬರದೇ,ಗುಣಾತ್ಮಕ ಶಿಕ್ಷಣವನ್ನು ನೀಡದೇ ಗಣಿ ದೂಳಿನಲ್ಲಿ ಮುಚ್ಚಿಕೊಂಡು ಇಲಾಖೆ ನೆಪಮಾತ್ರಕ್ಕೆ ಇದ್ದು ಏನೊಂದು ಸಾಧನೆ ಹಾಗೂ ಹೆಸರು ಮಾಡದೆ ಮಂಕಾಗಿ ಹೋಗಿತ್ತು..
ಸಮಾಜದ ಮತ್ತು ದೇಶದ ಸತ್ಪ್ರಜೆಗಳನ್ನು ರೂಪಿಸಬೇಕಾದ ಈ ಶಿಕ್ಷಣ ಇಲಾಖೆಗೆ ಹತ್ತು ವರ್ಷಗಳಿಂದ ಒಬ್ಬ ನಿಸ್ವಾರ್ಥ. ಪ್ರಾಮಾಣಿಕ. ಶಿಸ್ತುಬದ್ಧವುಳ್ಳ ಒಬ್ಬ ಅಧಿಕಾರಿಗಾಗಿ ಕಾಯುತ್ತಲಿತ್ತು.

ಸಂಡೂರು ಜನತೆಯ ಅದೃಷ್ಟವೆಂಬಂತೆ ಇಲಾಖೆಗೆ 2021ನೇ ವರ್ಷದಲ್ಲಿ ಮೈಲೇಶ್ ಬೇವೂರ್ ಎಂಬುವವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಂದರು.
ಇತ್ತೀಚಿಗೆ ಸ್ಥಳೀಯ ಜಾತಿ ರಾಜಕೀಯ ದುರುದ್ದೇಶದಿಂದ ಅವರನ್ನು ದಿನಾಂಕ: 03.07.2023 ರಂದು ವರ್ಗಾವಣೆ ಮಾಡಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಸಂಡೂರು ತಾಲೂಕಿನಲ್ಲಿ ನೆಲೆ-ಬೆಲೆ ಇಲ್ಲವೆಂದು ತೋರಿಸಿದ್ದು ಎಲ್ಲರಿಗೂ ಗೊತ್ತಿರುವಂತ ವಿಷಯವೇ ,

ಸಂಡೂರು ತಾಲೂಕಿಗೆ ಒಬ್ಬ ಸಭ್ಯ, ದಕ್ಷ ಪ್ರಾಮಾಣಿಕ, ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದ ಮೈಲೇಶ್ ಬೇವೂರ್ ಅವರನ್ನ ನಾನು ಬಹಳ ಹತ್ತಿರದಿಂದ ಅವರ ಕಾರ್ಯವೈಖರಿಯನ್ನು 2010 ರಿಂದ ಗಮನಿಸುತ್ತಾ ಬಂದಿದ್ದೇನೆ. ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿಕೊಳ್ಳಲು ಶಬ್ದಗಳು ಸಾಲದು, ಅ ತರಹದ ಒಬ್ಬ ಸ್ನೇಹಜೀವಿ,ಅವರೊಂದಿಗಿನ ಪ್ರೀತಿ, ವಿಶ್ವಾಸ ಅಂದು ಹೇಗಿತ್ತೋ ಇಂದಿಗೂ ಇದೇ ಮುಂದೆಯೂ ಹಾಗೇ ಇರುತ್ತದೆ.
ಅವರು ಸಂಡೂರು ತಾಲೂಕಿನಿಂದ ವರ್ಗವಾಗಿ ಹೋಗುವ ಮುನ್ನ ಅವರ ಬಗ್ಗೆ ನನ್ನ ಚಿಕ್ಕದಾದ ಒಂದು ಪರಿಚಯ ವರದಿ ನಿಮ್ಮಗಳ ಮುಂದಿಡುತ್ತಿದ್ದೇನೆ

ಓಂ” ಎಂಬ ಶಬ್ದವನ್ನು ವಿಭಜಿಸಿದಾಗ ಅ,ಉ,ಮ ಅಕ್ಷರಗಳು ಸಿಗುತ್ತವೆ ಅ ಮತ್ತು ಉ ಸ್ವರಾಕ್ಷರಗಳಾದರೆ “ಮ” ವ್ಯಂಜನಾಕ್ಷರವಾಗಿದೆ. 34 ಸ್ವರಾಕ್ಷರಗಳಲ್ಲಿ “ಮ” ಒಂದೇ “ಓಂ” ಕಾರದಲ್ಲಿ ವಿಜೃಂಭಿಸಿ ಉಳಿದ 33 ಸ್ವರಾಕ್ಷರಗಳನ್ನು ನೇಪಥ್ಯಕ್ಕೆ ತಳ್ಳಿ “ಮ” ಮೆರೆದಿರುವುದನ್ನು ಗಮನಿಸಿದರೆ “ಮ” ದ ಮಹತ್ವ, ಗಟ್ಟಿತನ ಹಾಗೂ ಶ್ರೇಷ್ಠತೆ ನಮ್ಮನ್ನು ನಿಬ್ಬೆರಗಾಗಿಸುತ್ತದೆ.

ಜಾನಪದದಲ್ಲಿ ಕಂಡುಬರುವ ಮೈಲಮ್ಮ ದೇವತೆಯಲ್ಲಿಯೂ “ಮ” ಅಕ್ಷರವೇ ಆರಂಭದಲ್ಲಿದೆ. ಹಿಂದಿನ ದಿನಮಾನಗಳಲ್ಲಿ ಸಿಡುಬಿನಂತಹ ಮಾರಣಾಂತಿಕ ಖಾಯಿಲೆಗಳಿಂದ ದಿಕ್ಕೆಟ್ಟ ಜನತೆಗೆ ದಾರಿದೀಪವಾದವಳು “ಮೈಲಮ್ಮ”. ಈ ಸ್ತ್ರೀ ನಾಮವನ್ನು ಗಂಡು ಮಕ್ಕಳಿಗೂ ನಾಮಕರಣ ಮಾಡುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಅದರ ಉದ್ದೇಶ ಎಷ್ಟೇ ತಾಯ್ತನದ ಗುಣಗಳು ಗಂಡಿಗೂ ಹರಿದು ಬರಲಿ ಎನ್ನುವ ಸದಾಶಯದಿಂದ.

ಇಂತಹ ಈ ಎಲ್ಲಾ ಪರಂಪರೆ, ಮೌಲ್ಯಗಳ ಸಂಕಲನಗಳೊಂದಿಗೆ ಮುಂದುವರೆದ ಕಥನ ಕ್ರಮವೇ ಕನ್ನಡ ನೆಲದಲ್ಲಿಯೇ ವಿಶಿಷ್ಟ ಆಧ್ಯಾತ್ಮಿಕ, ಸಾಂಸ್ಕೃತಿಕ ಮೌಲ್ಯಗಳಿಗಾಗಿ ಹೆಜ್ಜೆ ಮೂಡಿಸಿರುವ ಸಂಡೂರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬಂದಂತಹ ಭರವಸೆಯ ಸೃಷ್ಟಿಶೀಲತೆಯ “ಮ” ಕಾರ ಪ್ರಿಯ ಮೈಲೇಶ್ ಬೇವೂರು, ಶಿಕ್ಷಣ ಇಲಾಖೆಯ ಬಹುದೊಡ್ಡ ಜವಾಬ್ದಾರಿ ಹೊತ್ತ ಸಂಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ

ಈ ಹಿಂದೆ ಕಿರಿಯ ವಯೋಮಾನಕ್ಕೆ ಹಿರಿದಾದ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ತೀವ್ರ ಸಂಕೀರ್ಣವಾದ, ಬಹು ಸಂಸ್ಕೃತಿಯ ಮತ್ತು ಭಿನ್ನ ಅಭಿರುಚಿಯ ಸಂಗಮವಾದ ಕೂಡ್ಲಿಗಿ ತಾಲೂಕಿನಲ್ಲಿ ಅಕ್ಷರ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪುನರ್ ಸ್ಥಾಪಿಸಿ ಅದನ್ನು ಚಿರಸ್ಥಾಯಿಯಾಗಿಸುವ ಮೂಲಕ ವ್ಯಕ್ತಿ ನೆಲೆಯಿಂದ ವಿಶ್ವಾಸತ್ಮಕನೋಟದವರೆಗೆ ಕೊಂಡೊಯ್ದು ಸಮಾಜದ ಮುಖ್ಯವಾಹಿನಿಗೆ ತರುವ ಅಕ್ಷರ ಕಾಯಕದಲ್ಲಿ ತನ್ಮಯರಾಗಿ ಭಾಗಶಃ ಸಕಾರಗೊಂಡಿದ್ದಾರೆ

ಮೈಲೇಶ್ ಬೇವೂರ್ ಹಿನ್ನೆಲೆ:-

ನಮ್ಮ ನಿಮ್ಮ ನಡುವಿನ ಹಲವು ಪ್ರತಿಭೆಗಳಲ್ಲಿ ಒಬ್ಬರಾಗಿರುವ ಮೈಲೇಶರು ಶ್ರಮಸಂಸ್ಕೃತಿಯ ಪರಂಪರೆಯಿಂದ ಬಂದು ಬಿ.ಇಡಿ. ಹಾಗೂ ಕೆ.ಇ.ಎಸ್. ಪೂರೈಸಿ “ಶಿಕ್ಷಣ” ವೊಂದನ್ನೇ ತಾರ್ಕಿಕವಾಗಿ, ಧನಾತ್ಮಕ ನೆಲೆಗಳೊಂದಿಗೆ ಅನುಸಂಧಾನಗೊಳಿಸಿ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು.

ಪ್ರಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಹರಪನಹಳ್ಳಿ ತಾಲೂಕಿನ ಕಡಬಗೆರೆಯ ನೂತನ ಪ್ರೌಢ ಶಾಲೆಗೆ ನೇಮಕಗೊಂಡವರು. ಶಾಲೆಗೆ ನೇಮಕಗೊಂಡವರು. ವಿಶೇಷವೆಂದರೆ ಕಡಬಗೆರೆಯ ನೂತನ ಪ್ರೌಢಶಾಲೆಯು ಶೈಶವಾಸ್ಥೆಯಲ್ಲಿದ್ದಾಗಲೇ ಇವರು ನೇಮಕಗೊಂಡಿದ್ದರು. ಕಡಬಗೆರೆಯ 4-5 ಕಿ.ಮೀ.ಇಕ್ಕೆಲಗಳಲ್ಲಿ ಎರಡು ಪ್ರೌಢಶಾಲೆಗಳು ಆಲದ ಮರದಂತೆ ಬೇರುಬಿಟ್ಟಿವೆ. ಈ ಶೈಶವಸ್ಥೆಯ ಪ್ರೌಢಶಾಲೆಯನ್ನು ಪೋಷಿಸಿ, ಬೆಳೆಸಿ ಬಲಾಢ್ಯ ಶಾಲೆಗಳ ಜೊತೆ ಸಮರ್ಥವಾಗಿ ನಿಲ್ಲುವಂತೆ ಮಾಡುವುದು ಕಠಿಣ ಸವಾಲಾಗಿತ್ತು. ಅ ಸವಾಲನ್ನು ನಗುತ್ತಲೇ ಸ್ವೀಕರಿಸಿದ ಮೈಲೇಶರು ದಾಖಲಾತಿ, ಹಾಜರಾತಿಯನ್ನು ಸಮನ್ವಯಗೊಳಿಸಿ ಗುಣಾತ್ಮಕ ಶಿಕ್ಷಣವನ್ನು ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಹೊರಬೀಳುವಂತೆ ಮಾಡುವಲ್ಲಿ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಿ ಇಡೀ ಗ್ರಾಮದ ಜನತೆಗೆ, ವಿದ್ಯಾರ್ಥಿಗಳ ಶ್ಲಾಘನೆಗೆ ಬಾಜನರಾದದ್ದು, ಹಾಗೂ ಅಂದಿನಿಂದ ಇಂದಿಗೂ ಕಡಬಗೆರೆ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ವಿದ್ಯಾರ್ಥಿಗಳ ನೆನಪಿನ ತಿಜೋರಿಯಲ್ಲಿ ಭದ್ರವಾಗಿ ಜತನದಿಂದಿರಿಸಿ ಕೊಂಡಿದ್ದಾರೆ. ಹೀಗಾಗಿಯೇ ಇಂದಿಗೂ ಮುಂದೆಯೂ ಕಡಬಗೆರೆ ಪ್ರೌಢಶಾಲೆಯು ದೊಡ್ಡ ಆಲದ ಮರವೇ ಆಗಿದೆ.

ಇವರ ಕಾರ್ಯತತ್ಪರತೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಶಾಲಾ ಇಲಾಖೆಯು ಬಡ್ತಿ ನೀಡಿ ಕೃಷಿ ಕಾಯಕ ಹಾಗೂ ಸಾಹಿತ್ಯರಂಗದಲ್ಲಿ ಛಾಪು ಮೂಡಿಸಿರುವ ಬಳ್ಳಾರಿ ಜಿಲ್ಲೆಯ ಮುದ್ದೆಬಸಾಪುರ (ಎಂ.ಬಿ.) ಅಯ್ಯನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಮುಖ್ಯಶಿಕ್ಷಕರಾಗಿ ನಿಯೋಜಿತರಾದರು. ಇಲ್ಲಿಯೂ ಸಹ ತಮ್ಮ ಎಂದಿನ ಉತ್ಸುಕತೆ, ಲವಲವಿಕೆಯನ್ನು ದ್ವಿಗುಣವಾಗಿಸಿಕೊಂಡು ಮುಖ್ಯೋಪಾಧ್ಯಾಯತ್ವಕ್ಕೆ ಹೊಸ ವ್ಯಾಖ್ಯಾನವನ್ನು ಬರೆದು ಹೊಸ ಹೊಳಹು ಮೂಡಿಸಿದರು. ಎಂ.ಬಿ.ಅಯ್ಯನಹಳ್ಳಿಯ ಹಿರಿಯರನ್ನು,ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಿ ಪ್ರೌಢಶಾಲೆಗೊಂದು ಹಿರಿಮೆ-ಗರಿಮೆ ಕಟ್ಟಿಕೊಟ್ಟರು. ಹೀಗಿರುತ್ತಲೇ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಯಾಧಿಕಾರಿಯಾಗಿ ಬಡ್ತಿ ಪಡೆದು ಕೂಡ್ಲಿಗಿಗೆ ನಿಯುಕ್ತಿಗೊಂಡು ಇಲಾಖೆಯ ಮಹತ್ವದ ಅಶಯಗಳಾದ ಡಿ.ಪಿ.ಇ.ಪಿ.ಕಾರ್ಯಕ್ರಮ ಹಾಗೂ ನಲಿ-ಕಲಿ ಯೋಜನೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಿದ್ದರು. ಬಹುಮುಖ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಂಯೋಜಕರು, ಸಂಪನ್ಮೂಲವ್ಯಕ್ತಿಗಳು ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸಂಯೋಜಿಸಿಕೊಂಡು ತಾಲ್ಲೂಕಿನ ಶಿಕ್ಷಕರೆಲ್ಲರ ಮೇಲೆ ವಿಶ್ವಾಸವಿರಿಸಿ “ಮಗು-ಶಿಕ್ಷಕ-ಪೋಷಕ” ಎನ್ನುವ ತತ್ವದಡಿ ಎಲ್ಲರನ್ನು ಮೇಳೈಸಿ ಇಲಾಖೆಯಲ್ಲಿ ತಂಪೆರೆಯುವ ಪರಿವರ್ತನೆಯ ಹೊಸಗಾಳಿ ಬೀಸಿದ್ದರು

ಮೈಲೇಶ್ ಬಾಹ್ಯವ್ಯಕ್ತಿತ್ವದ ಪರಿಚಯ:-

ಇಲ್ಲಿಯವರೆಗೂ ಅವರ ಬಾಹ್ಯವ್ಯಕ್ತಿತ್ವದ ಅನಾವರಣವಾದರೆ ಅಂತರಂಗದೊಳಗಿನ ಮೃದುತ್ವವನ್ನು ಇಣುಕುವ ಮತ್ತು ತಡಕಾಡುವ ಕೆಲಸ ಮಾಡಬೇಕಾಗಿದೆ. ಇವರು ಮೂಲತಃ ವಿಶ್ವಕವಿ ರವೀಂದ್ರನಾಥ ಠಾಕೂರರ ಪರಮ ಅಭಿಮಾನಿ ಹಾಗೂ ಅನುಯಾಯಿ. ರವೀಂದ್ರರ ಗೀತಾಂಜಲಿ, ಪತಾಂಜಲಿ, ಕೃತಿಗಳನ್ನು ತಪಸ್ಸಿನಂತೆ ಓಡಿಕೊಂಡಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯದ ಸಾಕ್ರೆಟಿಸ್, ಬರ್ನಾಡ್ ಷಾ, ಹಾಗೂ ಮ್ಯಾಕ್ಸ್ ಮುಲ್ಲರ್, ಮುಂತಾದ ದಾರ್ಶನಿಕರ ಕೃತಿಗಳನ್ನು ವೈಚಾರಿಕವಾಗಿ ಓದಿಕೊಂಡಿದ್ದಾರೆ.

ಪ್ರಾಯಶಃ ನಿರಂತರ ಓದು, ಧ್ಯಾನ ಹಾಗೂ ಸಾರ್ವಜನಿಕ ಒಡನಾಟ ಇವರನ್ನು ಸಮಚಿತ್ತ ಹಾಗೂ ನಿರ್ವಿಘ್ನ ಮನಸ್ಥಿತಿಗೆ ತಂದು ನಿಲ್ಲಿಸಿರಬೇಕು.ಉನ್ನತಾಧಿಕಾರದಲ್ಲಿದ್ದರೂ ಅಹಮಿಕೆಯನ್ನು ತೃಣವಸ್ಟಾದರೂ ಇಟ್ಟುಕೊಳ್ಳದೇ ಸಮಾಧಾನಿಯಾಗಿ ಅಲಿಸುವ, ಓದಿದುದನ್ನು ಹಾಗೂ ಹೇಳಬೇಕಾದುದನ್ನು ಸಮರ್ಥವಾಗಿ ಮಂಡಿಸುವ ಇವರು ಕನಸುಗಾರನೆಂಬುದು ಎಷ್ಟು ನಿಜವೋ ಅಷ್ಟೇ ಸೊಗಸಾದ ಮಾತುಗಾರ. ಅನ್ಯರ ಪ್ರತಿಭೆ, ಕೌಶಲ್ಯ, ಶ್ರಮ ಹಾಗೂ ನೈಪುಣ್ಯವನ್ನು ಗುರುತಿಸಿ ಗೌರವಿಸುವ ಉದಾತ್ತಗುಣ ಇವರೊಳಗಡಗಿದೆ

ಇಲಾಖೆಯ ಅನೇಕ ಉನ್ನತಾಧಿಕಾರಿಗಳ ಒಡನಾಟದಲ್ಲಿ ಹಾಗೂ ಸಾಂಗತ್ಯದಲ್ಲಿ ಹದವಾಗಿ ಪರಿಪಕ್ವಗೊಂಡು ಮಾಗಿರುವ ಮೈಲೇಶರು 2013 ರಲ್ಲಿ ಕಲ್ಬುರ್ಗಿಯಲ್ಲಿ ಜರುಗಿದ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅತ್ಯುತ್ತಮ ಸಮಸ್ವಯಾಧಿಕಾರಿ (Best Co-Ordinator) ಆಗಿ ಆಯ್ಕೆಯಾಗುವ ಮುಖೇನ ಅವಾರ್ಡ್ ಪಡೆದು ಇವರ ಶುದ್ದಂತಾಕರಣಕ್ಕೆ , ನಿಸ್ಪೃಹತೆಗೆ,ನಿರ್ಮಲ ಮನಸ್ಸಿಗೆ ಹಾಗೂ ನಿಷ್ಕಳಂಕ ಗುಣಕ್ಕೆ ಜೊತೆ ಜೊತೆಗೆ Profession is paradise ಎಂಬ ಮಾತನ್ನು ಬಲವಾಗಿ ನಂಬಿರುವ ಹೃದಯಕ್ಕೆ ಹಾಗೂ ಮನಃಸಾಕ್ಷಿಗೆ ಸಂದಂತಹ ಬಹುದೊಡ್ಡ ಸಮ್ಮಾನವೇ ಆಗಿತ್ತು.

“ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬ ತವನಿಧಿ ದಾಸಿಮಯ್ಯನ ವಚನಕ್ಕೆ ಸಾಕ್ಷಿಭೂತವಾಗಿ ಮೈಲೇಶ್ ಹಾಗೂ ಪವಿತ್ರ ಇವರಿಬ್ಬರ ದಾಂಪತ್ಯದ ಬದುಕು ಚೇತೋಹಾರಿಯಾಗಿದೆ ನಾವಿಬ್ಬರು ನಮಗಿಬ್ಬರು ಎನ್ನುವ ಹಾಗೆ ಪ್ರಕೃತಿ, ಪ್ರಾರ್ಥನಾ ಎಂಬ ಎರಡು ಮುದ್ದಾದ ಮುತ್ತಿನಂಥಹ ಮಕ್ಕಳಿವೆ ಇವರ ಖಾಸಗಿ ಬದುಕು ಇನ್ನಷ್ಟು ಸುಂದರವಾಗಲಿ, ಖಾಸಗಿ ಬದುಕು ಸುಂದರವಾದಷ್ಟೂ ಇಲಾಖೆಯ ಶಿಕ್ಷಣ ಪ್ರೇಮಿಗಳ ನಿರೀಕ್ಷೆಗಳನ್ನು, ಅಕಾಡೆಮಿಕ್ ಕಾರ್ಯಗಳನ್ನು ಮೊಗೆದಷ್ಟು ಸಮೃದ್ಧಗೊಳಿಸುವ ಚೈತನ್ಯ ಶೀಲತೆ ಬರಲಿದೆ.

ಕಿರಿಯರಿಂದ ಹಿಡಿದು ಹಿರಿಯರವರೆಗೂ ತಾವುಗಳು ಉತ್ತಮ ಮಾರ್ಗದರ್ಶಕರಾಗಿ ಸದಾ ಸ್ಪೂರ್ತಿಯ ಸೆಲೆಯಾಗಿದ್ದೀರಿ. ವಿಷಯದ ಆಳವಾದ ಜ್ಞಾನವನ್ನು ಈಗಲೂ ನಿಮ್ಮಿಂದ ಕಲಿಯಬಹುದಾಗಿದೆ. ಜ್ಞಾನದ ಬಲದಿಂದ ಎಲ್ಲವನ್ನು ಗೆಲ್ಲಬಹುದು ಎಂಬುದನ್ನ ತೋರಿಸಿಕೊಟ್ಟ ಮಾರ್ಗದರ್ಶಕರು ನೀವಾಗಿದ್ದೀರಿ ಎಂಬುದನ್ನು ನಾನು ನಂಬಿದ್ದೇನೆ.

ಅತ್ಯಂತ ಹಿಂದುಳಿದ ಸಂಡೂರು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಲ್ಪ ಸಮಯದಲ್ಲಿ ಬದಲಾವಣೆಯನ್ನು ತಂದಿದ್ದೀರಿ ಮುಖ್ಯವಾಗಿ ತಾವುಗಳು ಶಾಲೆಗೆ ಭೇಟಿ ನೀಡಿದಾಗ ಆಫೀಸ್ ರೂಮಿಗೆ ಹೋಗದೆ ನೇರವಾಗಿ ತರಗತಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಕೇಳಿ ಉತ್ತರಗಳನ್ನು ಪಡೆದು ನಂತರ ಶಿಕ್ಷಕರಿಗೆ ಮಾರ್ಗದರ್ಶನ ನೀಡಿತಿದ್ದುದ್ದು,
ತಾವು ನಮ್ಮ ಉತ್ತಮ ಅಂಶಗಳನ್ನು ವೇದಿಕೆ ಕಾರ್ಯಕ್ರಮಗಳಲ್ಲಿ ಎಲ್ಲ ಶಿಕ್ಷಕರ ಸಮ್ಮುಖದಲ್ಲಿ ನೆನಪಿಸುವುದು ಎಲ್ಲರಿಗೂ ಮಾದರಿಯಾಗಿ ಸಂತೋಷವೆನಿಸುತ್ತದೆ.

ತಾವು ಸಂಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅತ್ಯಲ್ಪ ಸಮಯವಕಾಶದಲ್ಲೇ ತಮ್ಮ ತನವನ್ನು ಕಳೆದುಕೊಳ್ಳದೆ ಪ್ರಾಮಾಣಿಕವಾಗಿ
ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಸಂಡೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ನೌಕರರ ಕರ್ತವ್ಯ ನಿರ್ವಹಣೆಗೆ ಸಾಣೆ ಹಿಡಿದು ದಕ್ಷವಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಲು ಶ್ರಮಿಸಿ ಈಗ ವರ್ಗಾವಣೆ ಗೊಂಡಿರುವುದು ನಮ್ಮಲ್ಲೆರ ದುರಾದೃಷ್ಟ
“ವಜ್ರ ಎಲ್ಲಿದ್ದರೂ ವಜ್ರವೇ ” ಎಂಬ ಮಾತಿನಂತೆ ತಾವುಗಳು ಎಲ್ಲೇ ಇರಲಿ ಹೇಗೇ ಇರಲಿ ತಮ್ಮತನವನ್ನು ಬಿಟ್ಟುಕೊಡದೇ ಮುನ್ನುಗಿ ಯಶಸ್ಸು ನಿಮ್ಮದಾಗುತ್ತೆ ತಮ್ಮ ಮುಂದಿನ ವೃತ್ತಿ ಜೀವನದ ದಿನಗಳು ಇನ್ನೂ ಅತ್ಯಂತ ಉತ್ತುಂಗಕ್ಕೆ ಏರಲಿ ಎಂದು ಹಾರೈಸುವುದಷ್ಟೇ ನನ್ನಿಂದ ಸಾಧ್ಯ,ಮತ್ತೇನನ್ನು ಹೇಳಲಿ…

ಇಂತಿ ನಿಮ್ಮ ಪ್ರೀತಿಯ…
ಗೋಪಾಲ್

LEAVE A REPLY

Please enter your comment!
Please enter your name here