‘ಸಹಕಾರ ಕ್ಷೇತ್ರದಲ್ಲಿ ಮನಸೋಇಚ್ಚೆ ಬಂದಂತೆ ಆಡಳಿತ ನಡೆಸಲು ಬಿಡುವುದಿಲ್ಲ: ಸೋಮಶೇಖರ್

0
102

ಮಡಿಕೇರಿ ಏ.23 :-ರಾಜ್ಯದ ಸಹಕಾರ ಕ್ಷೇತ್ರಕ್ಕೆ 120 ವರ್ಷಗಳ ಇತಿಹಾಸ ಇದ್ದು, ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸಲು ಸಹಕಾರಿಗಳು ಮುಂದಾಗಬೇಕು. ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಕರ್ತವ್ಯ ನಿರ್ವಹಿಸದೆ, ಸ್ವಜನಪಕ್ಷಪಾತ ಮಾಡಿದ್ದಲ್ಲಿ, ಅಂತಹ ಸಹಕಾರ ಸಂಘಗಳಿಗೆ ಕಡಿವಾಣ ಹಾಕಲು ಮುಂದಾಗಬೇಕಾಗುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಂ.2759) 103 ನೇ ವರ್ಷ ಪ್ರಯುಕ್ತ ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಶತಮಾನೋತ್ಸವ ಸಭಾ ಕಾರ್ಯಕ್ರಮಕ್ಕೆ ಶನಿವಾರ ನಡೆದ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಬೆಳಗಾವಿ ಜಿಲ್ಲೆಯ ಸಹಕಾರ ಸಂಘವೊಂದರಲ್ಲಿ ಸಹಕಾರ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇಂತಹ ಸಹಕಾರ ಸಂಘಗಳಿಗೆ ಮುಗುದಾರ ಹಾಕಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಈ ಬಗ್ಗೆ ಸುಳಿವು ನೀಡಿದ್ದು, ರಾಜ್ಯದಲ್ಲಿಯೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಸಹಕಾರ ಸಂಘಗಳನ್ನು ನಿಯಂತ್ರಿಸುವಲ್ಲಿ ಮುಂದಾಗಲಾಗಿದೆ ಎಂದು ಸಹಕಾರ ಸಚಿವರು ಹೇಳಿದರು.
ಈ ಬಗ್ಗೆ ರಾಜ್ಯ ಮಟ್ಟದಲ್ಲಿಯೂ ಮುಖ್ಯಮಂತ್ರಿ ಅವರು ಹಾಗೂ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಹಾದಿ ತಪ್ಪುತ್ತಿರುವ ಸಹಕಾರ ಕ್ಷೇತ್ರಗಳನ್ನು ಸರಿ ದಾರಿಗೆ ತರಲಾಗುತ್ತದೆ. ಆ ನಿಟ್ಟಿನಲ್ಲಿ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ. ಡಿಪಾಸಿಟ್(ಠೇವಣಿ) ಆಸೆಗೆ ಸಹಕಾರಿಗಳಲ್ಲಿ ಗೊಂದಲ ನಿರ್ಮಾಣ ಮಾಡಿದರೆ, ಅಂತಹ ಸಹಕಾರ ಸಂಘಗಳಿಗೆ ಕಡಿವಾಣ ಹಾಕಲು ಚಿಂತಿಸಲಾಗಿದೆ ಎಂದರು.
ರಾಜ್ಯದಲ್ಲಿ 5700 ಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು, ಎಲ್ಲಾ ಸಹಕಾರ ಸಂಘಗಳು ಒಂದೇ ಸಾಫ್ಟ್‍ವೇರ್ ನಲ್ಲಿ ತರಲು ಚಿಂತಿಸಲಾಗಿದೆ ಎಂದರು.
‘ಸಹಕಾರ ಕ್ಷೇತ್ರದಲ್ಲಿ ಮನಸೋಇಚ್ಚೆ ಬಂದಂತೆ ಆಡಳಿತ ನಡೆಸಲು ಬಿಡುವುದಿಲ್ಲ, ಸಾರ್ವಜನಿಕರಿಗೆ ಸ್ಪಂದಿಸಬೇಕು. ಸಹಕಾರಿಗಳಿಗೆ ಸಾಲ ನೀಡಬೇಕು. ಸಾಲ ಪಡೆದವರು ಮರು ಪಾವತಿ ಮಾಡಬೇಕು. ಸಹಕಾರ ಆಡಳಿತ ಮಂಡಳಿ ಹೇಳಿದ್ದೆ ಆದೇಶವಲ್ಲ, ಸರ್ಕಾರ ಮತ್ತು ಸಹಕಾರ ಇಲಾಖೆ ಇದೆ ಎಂಬ ಅರಿವು ಇರಬೇಕು. ಆದ್ದರಿಂದ ಯಾರಿಗೂ ತಾರತಮ್ಯ ಮಾಡಬಾರದು ಎಂದು ಸಹಕಾರ ಸಚಿವರು ಗುಡುಗಿದರು.’
ಸಹಕಾರ ಬ್ಯಾಂಕುಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ನಿಜ, ಆದರೆ ಕೊಡಗು ಜಿಲ್ಲೆಯ ಸಹಕಾರ ಸಂಘಗಳ ಅಧಿಕಾರಕ್ಕೆ ತೊಂದರೆ ಇಲ್ಲ. ಈ ಬಗ್ಗೆ ವರದಿ ತರಿಸಿಕೊಂಡು ಸಹಕಾರ ಕ್ಷೇತ್ರದ ಎಲ್ಲರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಏಕಾಏಕಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
‘ಪ್ರೂಟ್ಸ್ ತಂತ್ರಾಂಶ ನೋಂದಣಿಗೆ ಇನ್ನೂ ಕಾಲವಕಾಶ ನೀಡುವಂತಾಗಲು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು, ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಗಮನಹರಿಸಲಾಗುವುದು ಎಂದು ಸಹಕಾರ ಸಚಿವರು ನುಡಿದರು.’
ರಾಜ್ಯದಲ್ಲಿನ ಯಶಸ್ವಿನಿ ಯೋಜನೆಯನ್ನು ಮರುಜಾರಿ ಮಾಡುವಲ್ಲಿ ಹೊಸ ಆಯಾಮ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಕೇಂದ್ರ ಸಹಕಾರ ಸಚಿವರು ಲೋಗೋ ಬಿಡುಗಡೆ ಮಾಡಿದ್ದಾರೆ ಎಂದು ಸಚಿವರು ವಿವರಿಸಿದರು.
ಹಿರಿಯರು ಸಹಕಾರ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಸಹಕಾರ ಸಂಘಗಳು ಕೃಷಿಕರಿಗೆ ಸಕಾಲದಲ್ಲಿ ಸಾಲಸೌಲಭ್ಯವನ್ನು ಕಲ್ಪಿಸಬೇಕು. ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.
ಸಹಕಾರ ಇಲಾಖೆಯಲ್ಲಿ ಹೊರಡಿಸುವ ಆದೇಶಗಳಲ್ಲಿ ಕೆಲವು ತಪ್ಪುಗಳಿದ್ದಲ್ಲಿ ಇಲ್ಲಿನ ಇಬ್ಬರು ಶಾಸಕರು ತಕ್ಷಣವೇ ಮಾಹಿತಿ ನೀಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೊಡಗು ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕುಗಳು ಸಾರ್ವಜನಿಕರಿಗೆ ಸ್ಪಂದಿಸಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ ಇಲ್ಲಿನ ಸಹಕಾರ ಕ್ಷೇತ್ರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ, ಸಮಸ್ಯೆ ಇರುವ ಕಡೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಸಚಿವರು ಪುನರುಚ್ಚರಿಸಿದರು.’

ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಇದ್ದು, ಇವುಗಳನ್ನು ಪರಿಹರಿಸುವಲ್ಲಿ ಕೊಡಗು ಜಿಲ್ಲೆಯವರೇ ಸಚಿವರಾಗಬೇಕು. ಅವರೇ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಶ್ರಮಿಸಬೇಕು ಎಂದು ಸಹಕಾರ ಸಚಿವರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಪ್ರಯುಕ್ತ ಪತ್ರಕರ್ತ ಅನಿಲ್ ಎಚ್.ಟಿ ಅವರ ನಿರ್ದೇಶನದ ‘ಶತಧಾರ’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ ಸೋಮವಾರಪೇಟೆ ಸಹಕಾರ ಸಂಘವು 1 ಕೋಟಿಗೂ ಹೆಚ್ಚು ಆದಾಯ ಹೊಂದಿ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿಗಳು ಒಟ್ಟುಗೂಡಿದರೆ ಪ್ರಗತಿಯತ್ತ ಸಹಕಾರ ಕ್ಷೇತ್ರವನ್ನು ಕೊಂಡೊಯ್ಯಬಹುದು ಎಂಬುದಕ್ಕೆ ಸೋಮವಾರಪೇಟೆ ಸಹಕಾರ ಸಂಘವೇ ಸಾಕ್ಷಿ. ಆ ನಿಟ್ಟಿನಲ್ಲಿ ಸಹಕಾರಿಗಳು ಮತ್ತು ಆಡಳಿತ ಮಂಡಳಿ ಜನಮೆಚ್ಚುವ ರೀತಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಸಾರ್ವಜನಿಕರಿಗೆ ಸ್ಪಂದಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆ ನಿಟ್ಟಿನಲ್ಲಿ ಸೋಮವಾರಪೇಟೆಯ ಸಹಕಾರ ಸಂಘ ಇನ್ನೂ ಹೆಮ್ಮರವಾಗಿ ಬೆಳೆಯಬೇಕು ಎಂದು ಅಪ್ಪಚ್ಚು ರಂಜನ್ ಅವರು ಹೇಳಿದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ‘ಸಹಕಾರ ಸಂಭ್ರಮ’ ‘ಸ್ಮರಣ ಸಂಚಿಕೆ’ ಬಿಡುಗಡೆ ಮಾಡಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಸ್ಥಾನ ಹೊಂದಿದೆ ಎಂದರು.
ಜನಸಂಖ್ಯೆಯಲ್ಲಿ ಪುಟ್ಟ ಜಿಲ್ಲೆಯಾದರೂ ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ 2 ನೇ ಸ್ಥಾನ ಹೊಂದಿದೆ. ಜಿಲ್ಲೆಯ 73 ಸಹಕಾರ ಸಂಘಗಳಲ್ಲಿ ಬಹುತೇಕ ಎಲ್ಲಾ ಸಹಕಾರ ಸಂಘಗಳು ಲಾಭದಲ್ಲಿವೆ ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.
ಸಹಕಾರ ಕ್ಷೇತ್ರದಲ್ಲಿ ಹಿರಿಯರು ಹಾಕಿಕೊಟ್ಟ ಹೆಜ್ಜೆಯನ್ನು ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕು. ಹಿರಿಯ ಚೇತನರನ್ನು ಸ್ಮರಿಸಬೇಕು. ಕೃಷಿಕರು, ಸಣ್ಣ ಸಣ್ಣ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸಾಲ ಸೌಲಭ್ಯಗಳು ತಲುಪಬೇಕು. ಪ್ರೂಟ್ಸ್ ತಂತ್ರಾಂಶ ನೋಂದಣಿಗೆ ಕಾಲವಕಾಶ ನೀಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಸಹಕಾರ ಸಂಘಗಳು ಒಂದು ಕುಟುಂಬ ಇದ್ದಂತೆ, ಕುಟುಂಬ ನಿರ್ವಹಣೆ ಚೆನ್ನಾಗಿದ್ದಲ್ಲಿ ಸಮಾಜ ಅಭಿವೃದ್ಧಿ ಸಾಧ್ಯ, ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎಂದು ಪ್ರತಿಪಾದಿಸಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ ಅವರು ಮಾತನಾಡಿ ಸಹಕಾರ ಸಂಘಗಳು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ಆಗಿವೆ ಎಂಬುದನ್ನು ಮರೆಯುವಂತಿಲ್ಲ, ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಗಳನ್ನು ಮತ್ತಷ್ಟು ಬಲಪಡಿಸುವಂತಾಗಬೇಕು ಎಂದರು.
ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ಕೆ.ಮಾದಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಸಂಘವು ಎಲ್ಲರ ಸಹಕಾರದಿಂದ ಒಂದು ಕೋಟಿಗೂ ಹೆಚ್ಚು ಲಾಭಾಂಶದಲ್ಲಿ ನಡೆಯುತ್ತಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ 5 ಎಕರೆ ಒಳಗಿರುವ ಭೂಮಿಯಲ್ಲಿ ಗ್ರಾ.ಪಂ.ಮೂಲಕ ಕೂಡಾಳು/ ಮುಯ್ಯಾಳು ಮೂಲಕ ಉದ್ಯೋಗ ಕಲ್ಪಿಸಬೇಕು ಎಂದು ಅವರು ಸಚಿವರಲ್ಲಿ ಕೋರಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಮಾತನಾಡಿ ಪ್ರೂಟ್ಸ್ ತಂತ್ರಾಂಶದಲ್ಲಿ ಕೆಲವು ನ್ಯೂನ್ಯತೆಗಳು ಇದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕೊಡಗು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ಮನುಮುತ್ತಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿ, ಪ್ರಗತಿಯತ್ತ ಸಾಗುತ್ತಿವೆ ಎಂದರು.

ಗಣ್ಯರು ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ.ಡಿ.ನಾರಾಯಣ ಶೆಟ್ಟಿಯವರ ಹಾಗೂ ಕೊಡಗಿನ ಪ್ರಥಮ ಸಹಕಾರ ಸಂಘದ ಸ್ಥಾಪಕರಾದ ದಿ.ಕುರಾದಗೌಡ್ನಮನೆ ದೊಡ್ಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶತಮಾನೋತ್ಸವ ನೆನಪಿಗಾಗಿ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸಲಾಯಿತು. ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ನಿರ್ದೇಶಕರು, ಹಾಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಎಸ್.ಬಿ.ಭರತ್ ಕುಮಾರ್, ಸೋಮವಾರಪೇಟೆ ಪ.ಪಂ.ಅಧ್ಯಕ್ಷರಾದ ಪಿ.ಕೆ.ಚಂದ್ರು, ಬೇಳೂರು ಗ್ರಾ.ಪಂ.ಅಧ್ಯಕ್ಷರಾದ ಬಿ.ಎಂ.ಪ್ರಶಾಂತ್, ನೇರುಗಳಲೆ ಗ್ರಾ.ಪಂ.ಅಧ್ಯಕ್ಷರಾದ ಕೆ.ಜಿ.ಪುಷ್ಪ, ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಡಾ.ಜಿ.ಉಮೇಶ್, ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಾದ ವಿಜಯಕುಮಾರ್, ಸಹಾಯಕ ನಿಬಂಧಕರಾದ ರವಿಕುಮಾರ್ ಇತರರು ಇದ್ದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಿ.ಡಿ.ಮಂಜುನಾಥ್ ಅವರು ಸ್ವಾಗತಿಸಿದರು, ಸೋಮವಾರಪೇಟೆ ಸಹಕಾರ ಬ್ಯಾಂಕಿನ ನಿರ್ದೇಶಕರಾದ ರೂಪ ಸತೀಶ್ ಪ್ರಾರ್ಥಿಸಿದರು, ಮಂಜುಳಾ ಮತ್ತು ಯೋಗೇಂದ್ರ ನಾಯಕ್ ನಿರೂಪಿಸಿದರು, ಬ್ಯಾಂಕಿನ ನಿರ್ದೇಶಕರಾದ ಸೋಮಯ್ಯ ವಂದಿಸಿದರು.
ಸೋಮವಾರಪೇಟೆಯ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಸಹಕಾರ ಸಚಿವರು ಮತ್ತು ಶಾಸಕರು ಮಾಲಾರ್ಪಣೆ ಮಾಡಿದರು. ನಂತರ ಒಕ್ಕಲಿಗರ ಸಮುದಾಯ ಭವನದವರೆಗೆ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here