ಕಮಲ‌ ಪಾಳೆಯದ ಮೇಲೆ ಯಡಿಯೂರಪ್ಪ ಸ್ಮೆಲ್ ಬಾಂಬ್

0
194

ಕಳೆದ ಶುಕ್ರವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ ಒಂದು ಘೋಷಣೆ ಬಿಜೆಪಿ ಪಾಳೆಯವನ್ನು ಅಲುಗಾಡಿಸಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ದಿಸುತ್ತಾರೆ ಎಂಬುದು ಯಡಿಯೂರಪ್ಪ ಅವರ ಘೋಷಣೆ.
ಅಂದ ಹಾಗೆ ಯಡಿಯೂರಪ್ಪ ಅವರ ಈ ಘೋಷಣೆ ಏಕಕಾಲಕ್ಕೆ ಹಲವು ಸಂದೇಶಗಳನ್ನು ರವಾನಿಸಿದೆ.
ಮೊದಲನೆಯದಾಗಿ ಇಂತಹ ಘೋಷಣೆಯ ಮೂಲಕ ಅವರು ಬಿಜೆಪಿ ಹೈಕಮಾಂಡ್ ತಮ್ಮ ಸುತ್ತ ಹೆಣೆಯಲು ಹೊರಟಿದ್ದ ಬಲೆಯನ್ನು ಹರಿದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ತಮ್ಮನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತು.
ತಮ್ಮ ಆಪ್ತರ ವಿರುದ್ಧ ನಡೆದ ಐಟಿ ಧಾಳಿಯಿಂದ ಹಿಡಿದು,ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ನಿರಾಕರಿಸುವವರೆಗಿನ ಎಲ್ಲ ಬೆಳವಣಿಗೆಗಳು ಉದ್ದೇಶಪೂರ್ವಕವಾಗಿ ನಡೆದಿವೆ.ಆ ಮೂಲಕ ತಮ್ಮನ್ನು ನಿಯಂತ್ರಿಸುವ ಲೆಕ್ಕಾಚಾರ ಹೊಂದಿವೆ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತು.
ಹೀಗೆ ವರಿಷ್ಟರು ತಮ್ಮನ್ನು ಎರಡು ಕಾರಣಗಳಿಗಾಗಿ ನಿಯಂತ್ರಿಸಲು ಹೊರಟಿದ್ದಾರೆ.ಈ ಪೈಕಿ ಮೊದಲನೆಯದು,ತಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದು.ಎರಡನೆಯದಾಗಿ ತಾವು ಪಕ್ಷ ಬಿಟ್ಟು ಹೊರಹೋಗಬಾರದು ಎಂಬುದು ಅಂತ ಯಡಿಯೂರಪ್ಪ ಅವರಿಗೆ ಅರ್ಥವಾಗಿದೆ.
ಯಾಕೆಂದರೆ ಮೋದಿ ಅಲೆಯ ಬಗ್ಗೆ ಅದೆಷ್ಟೇ ಪ್ರಚಾರ ನಡೆಯಲಿ,ಆದರೆ ಜಾತಿ ಕೇಂದ್ರಿತ ರಾಜಕಾರಣದ ತೆಕ್ಕೆಯೊಳಗಿರುವ ಕರ್ನಾಟಕವನ್ನು ವಶಪಡಿಸಿಕೊಳ್ಳುವುದು ಸುಲಭವಲ್ಲ.
ಹಾಗಂತ ಕರ್ನಾಟಕವನ್ನು ಮರುವಶ ಮಾಡಿಕೊಳ್ಳಲು ನಿಮ್ಮ ಬೆಂಬಲ ಬೇಕು ಅಂತ ಯಡಿಯೂರಪ್ಪ ಅವರೆದುರು ಗೋಗರೆಯಲು ಮೋದಿಯವರ ಪ್ರತಿಷ್ಟೆ ಬಿಡುವುದಿಲ್ಲ.
ಹಾಗಂತ ಯಡಿಯೂರಪ್ಪ ಅವರನ್ನು ಕಳೆದುಕೊಂಡು ಅಧಿಕಾರ ಹಿಡಿಯುವುದು ಅಸಾಧ್ಯ ಅಂತ ಮೋದಿ-ಅಮಿತ್ ಶಾ ಜೋಡಿಗೆ ಗೊತ್ತಿದೆ.ಹೀಗಾಗಿ ಹಾವು ಸಾಯಬಾರದು,ಕೋಲು ಮುರಿಯಬಾರದು ಎಂಬ ಸೂತ್ರದಂತೆ ಯಡಿಯೂರಪ್ಪ ಅವರ ಜತೆ ವ್ಯವಹರಿಸುತ್ತಿದ್ದಾರೆ.
ಇದೇ ರೀತಿ ಮುಂದಿನ ಚುನಾವಣೆಯವರೆಗೆ ವ್ಯವಹರಿಸಿದರೆ ಬಿಜೆಪಿ ಸ್ವಯಂಬಲದ ಮೇಲೆ,ಇಲ್ಲವಾದರೆ ಮೈತ್ರಿಯ ಮೂಲಕ ಅಧಿಕಾರ ಹಿಡಿಯಬಹುದು.
ಇಷ್ಟಾದರೆ ಸಾಕು,ಯಾಕೆಂದರೆ ಪಕ್ಷ ಅಧಿಕಾರ ಹಿಡಿದಂತೆಯೂ ಆಗುತ್ತದೆ.ಯಡಿಯೂರಪ್ಪ ಅವರ ಕುಟುಂಬದ ರಾಜಕೀಯ ಭವಿಷ್ಯ ಫಿನಿಷ್ ಆದಂತಾಗುತ್ತದೆ ಎಂಬುದು ವರಿಷ್ಟರ ಲೆಕ್ಕಾಚಾರ.
ಗಮನಿಸಬೇಕಾದ ಸಂಗತಿ ಎಂದರೆ ಕರ್ನಾಟಕದ ನೂರಾ ಅರವತ್ತು ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಬೇಕು ಅಂತ ಬಿಜೆಪಿ ವರಿಷ್ಟರು ಈಗಾಗಲೇ‌ ನಿರ್ಧರಿಸಿದ್ದಾರೆ.ಅಷ್ಟೇ ಅಲ್ಲ.ಈಗಿನಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿ ಅಂತ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಆದರೆ ವರುಣಾ ಇರಲಿ,ಇನ್ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ನೀವು ಒಪ್ಪಿಗೆ ಕೊಟ್ಟರೆ ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಧುಮುಕುತ್ತೇನೆ ಅಂತ ವಿಜಯೇಂದ್ರ ಅವರು ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ಹಲ ಕಾಲದ ಹಿಂದೆಯೇ ಹೇಳಿದ್ದಾರೆ.
ಆದರೆ ಈ ವಿಷಯದಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಈ ಎಲ್ಲ ವಿಷಯಗಳನ್ನು ಯಡಿಯೂರಪ್ಪ ಗಮನಿಸುತ್ತಿದ್ದಾರಲ್ಲ?ಹೀಗಾಗಿ ಚುನಾವಣೆ ಒಂಭತ್ತು ತಿಂಗಳು ಬಾಕಿ ಇರುವಾಗಲೇ ತಮ್ಮ ಬತ್ತಳಿಕೆಯಿಂದ ಸ್ಮೆಲ್ ಬಾಂಬ್ ತೆಗೆದು ಬಿಜೆಪಿ ಪಾಳೆಯದ ಮೇಲೆ ಬಿಸಾಡಿದ್ದಾರೆ.

ಹೀಗೆ ಯಡಿಯೂರಪ್ಪ ಪ್ರಯೋಗಿಸಿದ ಸ್ಮೆಲ್ ಬಾಂಬಿಗೆ ಎರಡು ಗುರಿಗಳಿವೆ.
ಮೊದಲನೆಯದು,ಈ ಬಾಂಬಿನ ಘಾಟಿಗೆ ಕಂಗಾಲಾಗಿ ಬಿಜೆಪಿ ಪಾಳೆಯ ತಮ್ಮನ್ನು ಓಲೈಸಬೇಕು.ಆ ಮೂಲಕ ಮುಂದಿನ ಚುನಾವಣೆಯ ನೇತೃತ್ವ ನಿಮ್ಮದೇ ಎನ್ನಬೇಕು.
ಈ ಹಿಂದೆ ಜನತಾದಳ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇದೇ ರೀತಿಯ ಬಾಂಬು ಬಿಸಾಡಿದ್ದರು.
ಬಾಟ್ಲಿಂಗ್ ಹಗರಣದ ಆರೋಪ ತಮ್ಮ ನೆತ್ತಿಗೆ ಸುತ್ತಿಕೊಂಡಾಗ ರಾಜೀನಾಮೆ ನೀಡಿದ್ದರು.
ಆದರೆ ಯಾವಾಗ ಅವರು ರಾಜೀನಾಮೆ ನೀಡಿದರೋ?ಆಗ ಪಕ್ಷದಲ್ಲಿದ್ದ ಅವರ ಬೆಂಬಲಿಗರು ಅತ್ತು ಕರೆದು ನಿಮ್ಮ ನಿರ್ಧಾರ ಬದಲಿಸಿ ಅಂತ ಹೆಗಡೆಯವರ ಮೇಲೆ ಒತ್ತಡ ಹೇರಿದರು.
ಈ ಒತ್ತಡ ಹೇಗಿತ್ತೆಂದರೆ ಜನತಾದಳಕ್ಕೆ ಹೆಗಡೆಯೊಬ್ಬರೇ ದಿಕ್ಕು ಎಂದು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿತ್ತು.
ಆ ಮೂಲಕ ರಾಮಕೃಷ್ಣ ಹೆಗಡೆ ಇನ್ನಷ್ಟು ಶಕ್ತಿಯೊಂದಿಗೆ ಅಧಿಕಾರದಲ್ಲಿ ಮುಂದುವರಿದಿದ್ದರು
ಈಗ ಯಡಿಯೂರಪ್ಪ ಅವರು ಪ್ರಯೋಗಿಸಿದ ಸ್ಮೆಲ್ ಬಾಂಬಿಗೂ ಇದೇ ಘಾಟು ಇದೆ.ಅರ್ಥಾತ್,ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆದರೆ ಕರ್ನಾಟಕದಲ್ಲಿ ಬಿಜೆಪಿಯ ಕತೆ ಮುಗಿಯಿತು ಅಂತ ಪ್ರತಿಬಿಂಬಿಸುವುದು ಈ ಸ್ಮೆಲ್ ಬಾಂಬಿನ ಉದ್ದೇಶ.
ಅಂದ ಹಾಗೆ ಹೆಗಡೆ ತಮ್ಮ ರಾಜಕೀಯ ಬದುಕಿನ ಉತ್ತುಂಗದಲ್ಲಿದ್ದುದರಿಂದ ಅವತ್ತು ಅತ್ತು,ಕರೆದು,ಗೋಳಾಡಿದವರ ಸಂಖ್ಯೆ ಹೆಚ್ಚಿತ್ತು.
ಈಗ ಯಡಿಯೂರಪ್ಪ ಪ್ರಯೋಗಿಸಿದ ಅಸ್ತ್ರಕ್ಕೆ ಅಷ್ಟು ಪವರ್ ಇಲ್ಲದಿದ್ದರೂ,ಅವರು ಬೇಕ್ಕೇ ಬೇಕ್ ಎನ್ನುವವರು ಕಾಣುತ್ತಿದ್ದಾರೆ.
ಇದು ವರಿಷ್ಟರ ಮಟ್ಟದಲ್ಲಿ ಪ್ರಭಾವ ಬೀರಿ ತಮಗೆ ಮಣೆ ಹಾಕುವ ಸ್ಥಿತಿ ನಿರ್ಮಾಣವಾಗಲಿ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ.
ಒಂದು ವೇಳೆ ಈ ಸ್ಮೆಲ್ ಬಾಂಬು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಬೀರದಿದ್ದರೆ ಎರಡನೆಯ ಮಾರ್ಗ ತೆರೆದುಕೊಳ್ಳಲಿ ಎಂಬುದು ಯಡಿಯೂರಪ್ಪ ಯೋಚನೆ.
ಅಂದರೆ?ಮುಂದಿನ ವಿಧಾನಸಭಾ ಚುನಾವಣೆಯ‌ ಹೊತ್ತಿಗೆ ನಾನು ಸಕ್ರಿಯನಾಗಿರುವುದಿಲ್ಲ.ಹೀಗಾಗಿ ಪ್ರಬಲ ಲಿಂಗಾಯತ ಸಮುದಾಯ ತನ್ನ ದಾರಿ ನೋಡಿಕೊಳ್ಳಲಿ ಎಂಬ ಸಂದೇಶ ರವಾನೆಯಾಗುವಂತೆ ಮಾಡುವುದು ಅವರ ಲೆಕ್ಕಾಚಾರ.
ಲಿಂಗಾಯತ ಸಮುದಾಯಕ್ಕೆ ಒಂದು ಸಲ ಈ ಸಂದೇಶ ರವಾನೆಯಾದರೆ ಅದು ಬಿಜೆಪಿಗೆ ಸರಿಯಾದ ಪಾಠ ಕಲಿಸುವ ಮಾರ್ಗ ಹಿಡಿಯುತ್ತದೆ.
1990 ರಲ್ಲಿ ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ರೀತಿಯಿಂದ ಕ್ರುದ್ಧಗೊಂಡಿದ್ದ ಲಿಂಗಾಯತ ಸಮುದಾಯ 1994 ರ ಚುನಾವಣೆಯಲ್ಲಿ‌ ಕೈ ಪಾಳೆಯ ಮುಟ್ಟಿ ನೋಡಿಕೊಳ್ಳುವಂತೆ ಬಾರಿಸಿತ್ತು.
ಈ ಸಲ ತಮಗೆ ಬಿಜೆಪಿ ವರಿಷ್ಟರಿಂದ ಆಗಿರುವ ಅವಮಾನವನ್ನು ಲಿಂಗಾಯತ ಸಮುದಾಯ ಅದೇ ಲೆವೆಲ್ಲಿನಲ್ಲಿ ಪರಿಗಣಿಸಿದೆ.ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಕಾಬರಲೆ ಬಾರಿಸಲಿದೆ ಅನ್ನುವುದು ಯಡಿಯೂರಪ್ಪ ಯೋಚನೆ.

ಇನ್ನು ಪಕ್ಷ ಘೋಷಿಸುವ ಮುನ್ನ ಇಂತಹ ಕ್ಷೇತ್ರದಲ್ಲಿ ಇಂಥವರೇ ಕ್ಯಾಂಡಿಡೇಟು ಅಂತ ಬೇರೊಬ್ಬರು ಘೋಷಿಸುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ.
ಆದರೆ ಯಡಿಯೂರಪ್ಪ ಇದಕ್ಕೆ ಕ್ಯಾರೇ ಎನ್ನದೆ ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ವಿಜಯೇಂದ್ರ ಅವರೇ ಸ್ಪರ್ಧಿಸಲಿದ್ದಾರೆ ಅಂತ ಘೋಷಿಸಿದ್ದಾರೆ.
ಅವರ ಈ ಘೋಷಣೆಯನ್ನು ಬಿಜೆಪಿ ಹೈಕಮಾಂಡ್ ಹೇಗೆ ಅರಗಿಸಿಕೊಳ್ಳುತ್ತದೋ ಗೊತ್ತಿಲ್ಲ.
ಆದರೆ ಯಡಿಯೂರಪ್ಪ ಮಾತ್ರ ಈ ಘೋಷಣೆಯ‌ ಮೂಲಕ ಬಿಜೆಪಿ ಹೈಕಮಾಂಡ್ ಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಹೈಕಮಾಂಡ್ ಇದಕ್ಕೆ ಪೂರಕವಾಗಿಯೇ ಪ್ರತಿಕ್ರಿಯಿಸಲಿ,ವ್ಯತಿರಿಕ್ತವಾಗಿಯೇ ಪ್ರತಿಕ್ರಿಯಿಸಲಿ,ಆದರೆ ಬಿಜೆಪಿ ಪಾಳೆಯದಿಂದ ಲಿಂಗಾಯತರ ವಲಸೆ ಮಾತ್ರ ಶತ:ಸ್ಸಿದ್ದ.

ಡಾರ್ಕ್ ಹಾರ್ಸ್ ಹೆಬ್ಬಾಳ್ಕರ್

ಕಳೆದೊಂದು ವರ್ಷದ ಬೆಳವಣಿಗೆಗಳಿಂದ ರೊಚ್ವಿಗೆದ್ದ ಯಡಿಯೂರಪ್ಪ ಅವರು ಲಿಂಗಾಯತ ಮತಗಳ ಮೇಲೆ ತಮಗಿದ್ದ ಹಿಡಿತವನ್ನು ಬಿಟ್ಟುಕೊಡಲಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಯಾವತ್ತೋ ಗೊತ್ತಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಒಳಪಂಗಡಗಳು ತಮ್ಮದೇ ಮಾರ್ಗ‌ ಹಿಡಿಯುತ್ತವೆ ಎಂಬುದನ್ನು ಅರ್ಥ‌ಮಾಡಿಕೊಂಡ ಅದು ಒಳಪಂಗಡಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ.
ಈ ಪೈಕಿ ಪಂಚಮಸಾಲಿ ಮತ ಬ್ಯಾಂಕಿನ ಮಧ್ಯೆ ಲಕ್ಷ್ಮಿ ಹೆಬ್ಬಾಳ್ಕರ್ ಎಂಬ ಡಾರ್ಕ್ ಹಾರ್ಸ್ ಕಾಣಿಸುತ್ತಿದೆ.
ಬಿಜೆಪಿಯಿಂದ ತಮಗೆ ಅವಮಾನವಾಗಿದೆ ಎಂದು ಭಾವಿಸಿರುವ ಪಂಚಮಸಾಲಿ ಲಿಂಗಾಯತರು ಒಂದು ಸರ್ವೆ ಮಾಡಿಸಿದ್ದಾರಂತೆ.
ಅದರ ಪ್ರಕಾರ ರಾಜ್ಯದ ಮೂವತ್ತೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚಮಸಾಲಿ ಮತದಾರರು ನಿರ್ಣಾಯಕರಂತೆ.
ಉಳಿದಂತೆ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಮ್ಮದು ಗಣನೀಯ ವೋಟ್ ಬ್ಯಾಂಕು.ಹೀಗಿರುವಾಗ ಯಾವ ಪಕ್ಷದಿಂದಲೇ ಆಗಲಿ ತಮ್ಮವರು ಸ್ಪರ್ಧಿಸಿದರೆ ಅವರಿಗೇ ವೋಟು ಕೊಡಬೇಕು ಎಂದವರು ತೀರ್ಮಾನಿಸಿದ್ದಾರೆ.
ಒಂದು ವೇಳೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ತಮ್ಮವರು ಸ್ಪರ್ಧಿಸದಿದ್ದರೆ ತಮಗೆ ಭರವಸೆ ತುಂಬಬಲ್ಲ ನಾಯಕರ ಜತೆ ನಿಲ್ಲಲು,ಅವರು ಸೂಚಿಸಿದವರಿಗೆ ಮತ ಹಾಕಲು ತೀರ್ಮಾನಿಸಿದ್ದಾರೆ.
ಅವರ ಈ ಲೆಕ್ಕಾಚಾರಕ್ಕೆ ಪೂರಕವಾಗಿ ಕಂಡವರೆಂದರೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ‌ ಲಕ್ಷ್ಮಿ ಹೆಬ್ಬಾಳ್ಕರ್.
ಅವರು
ಈಗಾಗಲೇ‌ ಮೂವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಮಗೆ ಬೆಂಬಲವಾಗಿ ನಿಲ್ಲುವವರನ್ನು ಗುರುತಿಸಿ ಪ್ರಚಾರ ಕಾರ್ಯ ನಡೆಸಲು ಪುಷ್ ಕೊಟ್ಟಿದ್ದಾರಂತೆ.
ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿ ಮತದಾರರು ಕೈ ಹಿಡಿದು ಇವರು ಗೆಲ್ಲುವಂತಾದರೆ ಸಹಜವಾಗಿ ತಮ್ಮ ಬೆನ್ನಿಗೆ ನಿಲ್ಲುತ್ತಾರೆ.
ಆಗ ಬರೀ ಮಂತ್ರಿಯಲ್ಲ,ಉಪಮುಖ್ಯಮಂತ್ರಿ ಆಗುವ ಲಕ್ಕೇ ಕುದುರಬಹುದು ಎಂಬುದು ಲಕ್ಷ್ಮಿ ಹೆಬ್ಬಾಳ್ಕರ್ ಯೋಚನೆ.
ಇತ್ತೀಚೆಗೆ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಹಲವು ರೀತಿಯ ಊಹಾಪೋಹಗಳು ನಡೆದಿದ್ದವು.
ಆದರೆ ಅವರ ಈ ಭೇಟಿಗಿದ್ದುದು ಭವಿಷ್ಯದ ನಾಯಕಿಯಾಗುವ ತಮ್ಮ ಆಕಾಂಕ್ಷೆಗೆ ಯಡಿಯೂರಪ್ಪ ಅವರ ಆಶೀರ್ವಾದ ಪಡೆಯುವುದೇ ಮುಖ್ಯ ಉದ್ದೇಶ ಎಂಬುದು ನಿಜ.

ಹೀಗೆ ಯಡಿಯೂರಪ್ಪ ಅವರ ಯುಗ ಮುಗಿಯುವ ಲಕ್ಷಣಗಳು ಕಾಣುತ್ತಿದ್ದಂತೆಯೇ ಕೈ ಪಾಳೆಯದಲ್ಲಿ ಇಂತಹ ಚಟುವಟಿಕೆಗಳು ಬಿರುಸು ಪಡೆದಿವೆ.
ಇಂತಹ ಸನ್ನಿವೇಶವನ್ನು ಗ್ರಹಿಸಿರುವ ಯಡಿಯೂರಪ್ಪ ಬಿಜೆಪಿ ಶಿಬಿರದ ಮೇಲೆ ಸ್ಮೆಲ್ ಬಾಂಬು ಎಸೆದಿದ್ದಾರೆ.
ಇದು ಮರಳಿ ಪಕ್ಷದಲ್ಲಿ ತಮ್ಮ ಶಕ್ತಿ ಹೆಚ್ಚುವಂತೆ ಮಾಡಿಯೇ ಬಿಡುತ್ತದೆ ಎಂಬ ಭ್ರಮೆ ಅವರಿಗಿಲ್ಲ.
ಆದರೆ ದಕ್ಷಿಣ ಭಾರತದಲ್ಲಿ ಬೋರ್ಡಿಗೇ ಇಲ್ಲದಿದ್ದ ಪಕ್ಷವನ್ನು ನಾನು ಮೇಲೆತ್ತಿದೆ.ಅಧಿಕಾರಕ್ಕೆ ತಂದೆ.
ಆದರೆ ತಮ್ಮನ್ನೇ ಇವತ್ತು ಮೂಲೆಗುಂಪು ಮಾಡಿ,ತಮ್ಮ ಪುತ್ರನ ಭವಿಷ್ಯಕ್ಕೂ ಕಲ್ಲು ಹಾಕುವ ಯತ್ನ ನಡೆಯುತ್ತಿದೆ ಎಂಬುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಹೀಗಾಗಿ ಅವರು ನಿರ್ಣಾಯಕ ಆಟಕ್ಕಿಳಿದಿದ್ದಾರೆ.ಈ ಆಟವನ್ನು ಅವರು ಮೋದಿ-ಅಮಿತ್ ಶಾ ಅವರ ವರ್ತುಲದಲ್ಲಿದ್ದೇ ಆಡುತ್ತಿದ್ದಾರೆ ಎಂಬುದು ವಿಶೇಷ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here