ಘನತ್ಯಾಜ್ಯ ನಿರ್ವಹಣೆ: ಜಿಲ್ಲಾ ಮಟ್ಟದ ಸಭೆ

0
75

ಘನತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿ: ಸುಭಾಷ್ ಅಡಿ

ಬೆಳಗಾವಿ, ಸೆ.1: ದಿನನಿತ್ಯ ಹಸಿ ಕಸ, ಒಣ ಕಸ, ಇ-ಕಸ, ಹಾನಿಕಾರಕ ಕಸ ಸೇರಿದಂತೆ ಹಲವಾರು ರೀತಿಯ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದೇವೆ. ಪ್ರಸ್ತುತ ಕಸ ವಿಲೇವಾರಿ ಒಂದು ಸವಾಲಿನ ಕೆಲಸವಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸವ ನಿಟ್ಟಿನಲ್ಲಿ ಎಲ್ಲ ಬಗೆಯ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಾದ ಸುಭಾಷ್ ಆಡಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಸೆ.1) ನಡೆದ ಘನತ್ಯಾಜ್ಯ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ನಗರದ ನಂತರ ಬೆಳಗಾವಿ ಕೂಡ ಒಂದು ದೊಡ್ಡ ಜಿಲ್ಲೆಯಾಗಿದೆ. ಘನತ್ಯಾಜ್ಯ ವಿಲೇವಾರಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತದ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದಲ್ಲಿ ಈಗಾಗಲೇ ಎಲ್ಲ ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳು ಮುಕ್ತಾಯಗೊಂಡಿವೆ. ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಶೌಚಾಲಯ ಸೇರಿದಂತೆ ನಗರದ ಎಲ್ಲ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಸಂಭಂದಿಸಿದ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಗೋಡೆಗಳ ಮೇಲೆ ಪೋಸ್ಟರ್ ಅಳವಡಿಕೆ ನಿಷೇಧ:

ಸಾರ್ವಜನಿಕ ವಲಯಗಳಲ್ಲಿ ಜಾಗೃತಿ ಮೂಡಿಸಬೇಕು. ಮನೆ, ಅಂಗಡಿ, ಹೋಟೆಲ್, ಸೂಪರ್ ಮಾಲ್ ಸೇರಿದಂತೆ ಯಾರೂ ಕಸ ಎಸೆಯದಂತೆ ದಿನನಿತ್ಯ ಮೈಕ್ ಮೂಲಕ ತಿಳಿಸಬೇಕು. ಮಹಾನಗರ ಪಾಲಿಕೆ ಸೂಚನಾ ಫಲಕಗಳನ್ನು ಹೊರತುಪಡಿಸಿ, ನಗರದ ಯಾವುದೇ ಸ್ಥಳಗಳಲ್ಲಿ ಗೋಡೆಗಳ ಮೇಲೆ ಎಲ್.ಇ.ಡಿ ಹಾಗೂ ಇನ್ನಿತರ ಪೋಸ್ಟರ್ ಅಳವಡಿಸಲು ಅವಕಾಶ ಕೊಡಬಾರದು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಬೀದಿ ಬದಿಯಲ್ಲಿ ಅನಧಿಕೃತವಾಗಿ ವಾಹನಗಳ ನಿಲುಗಡೆ ನಿಷೇಧಿಸಬೇಕು. ಅದೇ ರೀತಿಯಲ್ಲಿ ಯಾವುದೇ ಮಾದರಿಯ ಪೋಸ್ಟರ್ ಗಳನ್ನು ಗೋಡೆಗಳ ಮೇಲೆ ಅಳವಡಿಸಿದ್ದು ಕಂಡು ಬಂದಲ್ಲಿ, ತಕ್ಷಣ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತ್ಯಾಜ್ಯ ವಿಂಗಡಣೆ, ವಿಲೇವಾರಿ ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸುಭಾಷ್ ಆಡಿ ಹೇಳಿದರು.

ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಎಸೆಯುವ ಸ್ಥಳಗಳನ್ನು ಈಗಾಗಲೇ ತೆರವು ಗೊಳಿಲಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ತ್ಯಾಜ್ಯ ವಿಲೇವಾರಿ ನಮ್ಮೆಲ್ಲರ ಜವಾಬ್ದಾರಿ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನಾಗರೀಕರೆಲ್ಲರೂ ಕೈಜೋಡಿಸಿ ಈ ಕೆಲಸವನ್ನು ಸಮರ್ಪಕವಾಗಿ ಮಾಡಿದಲ್ಲಿ ತಮ್ಮ ಪರಿಸರವನ್ನು ಸ್ವಚ್ಚ ಮತ್ತು ಸುಂದರವಾಗಿ ಇಟ್ಟುಕೊಳ್ಳಬಹುದು ಎಂದು ಸುಭಾಷ್ ಆಡಿ ಅವರು ತಿಳಿಸಿದರು.

ಪ್ರತಿ ಶಾಲಾ, ಕಾಲೇಜುಗಳಲ್ಲಿ ಭೇಟಿ ನೀಡಿ, ಸಾಮಾಜಿಕ ಕಾರ್ಯಕರ್ತರ ಸಹಯೋಗದೊಂದಿಗೆ ಜಾಗೃತಿ ಮೂಡಿಸಬೇಕು. ಜಿಲ್ಲಾಧಿಕಾರಿಗಳು ಸೇರಿದಂತೆ ಪ್ರತಿ ಇಲಾಖೆಯ ಅಧಿಕಾರಿಗಳು ಅವರ ಸ್ಥಳೀಯ ಪ್ರದೇಶದ ಸ್ವಚ್ಛತೆ ಬಗ್ಗೆ ಖುದ್ದಾಗಿ ನಿರಂತರ ಪರಿಶೀಲನೆ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಆಡಿ ಅವರು ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ ಜಾರಿ:

ಜಿಲ್ಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ . ನಿಯಮಾವಳಿ ಪ್ರಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಗ್ರಾಮ ಪಂಚಾಯತಿಯಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೂಡ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪರಿಸರ ಅಧಿಕಾರಿ ಜಗದೀಶ್, ಪುರಸಭೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಕಂಪನಿಯ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here