ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ತರಬೇತಿ ಕಾರ್ಯಕ್ರಮ ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ಡಿಎಚ್‍ಒ ಡಾ.ಜನಾರ್ಧನ

0
99

ಬಳ್ಳಾರಿ,ಅ.21: ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಮಲೇರಿಯ ಎಂದು ಖಚಿತಪಟ್ಟಲ್ಲಿ ಇಲಾಖೆಯಿಂದ ನೀಡುವ ಉಚಿತ ಔಷಧಿ ಸೇವಿಸುವ ಮೂಲಕ ಗುಣಮುಖರಾಗಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರದಲ್ಲಿ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಬಗ್ಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲೇರಿಯ ಜ್ವರವು ಪರಾವಲಂಬಿ ಜೀವಿ (ಪ್ಯಾರಸೈಟ್)ಯಿಂದ ಬರುವ ರೋಗವಾಗಿದ್ದು, ಈ ರೋಗವು ಸೊಂಕಿತ ಅನಾಫಿಲೀಸ್ ಹೆಣ್ಣುಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಚಳಿ ಜೊತೆ ನಡುಕ, ತಲೆನೋವು, ವಿಪರೀತ ಜ್ವರ ಹಾಗೂ ಮೈಬೆವರುವಿಕೆ ಈ ರೋಗದ ಲಕ್ಷಣಗಳಾಗಿದ್ದು ಈ ರೀತಿಯ ತೊಂದರೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸೊಳ್ಳೆಯಿಂದ ಹರಡುವ ಕಾಯಿಲೆಗಳಲ್ಲಿ ಅಪಾಯಕಾರಿಯಾದ ಮಲೇರಿಯ ರೋಗವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಆರೋಗ್ಯ ಇಲಾಖೆಯೊಂದಿಗೆ ಕೈಜೊಡಿಸಬೇಕು ಎಂದು ಹೇಳಿದರು.
ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿ ಡಾ.ಆರ್. ಅಬ್ದುಲ್ಲಾ ಅವರು ಮಾತನಾಡಿ, ಶಿಶುಗಳು ಮತ್ತು ಗರ್ಭಿಣಿಯರಿಗೆ ಮಲೇರಿಯ ರೋಗವು ಆತಂಕಕಾರಿಯಾಗಿದ್ದು, ಅಂತಹವರು ಯಾವುದೇ ಜ್ವರವಿರಲಿ-ತಡಮಾಡದೇ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದರು.
ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳು ಎಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದಾಕಾಲ ದೊರೆಯುತ್ತದೆ. ನಿಯಂತ್ರಣಕ್ಕೆ ಪ್ರತಿಯೊಬ್ಬರು ಮನೆಯಲ್ಲಿ ವಾರಕ್ಕೊಮ್ಮೆ ನೀರನ್ನು ಸಂಪೂರ್ಣವಾಗಿ ಖಾಲಿಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ರೋಗವಾಹಕ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯು ಕೈಗೊಳ್ಳುವ ಕೀಟನಾಶಕ ಸಿಂಪಡಣಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೀಟ ಶಾಸ್ತ್ರಜ್ಞರಾದ ನಂದಾ ಕಡಿ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ನಳಿನಿ, ಪ್ರತಿಭಾ ಸೇರಿದಂತೆ ಶ್ರೀಧರಮೂರ್ತಿ, ವಿರುಪಾಕ್ಷಿ, ನಾಗರಾಜ್ ಹಾಗೂ ಜಿಲ್ಲೆಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here