ರಾಬಕೋ ಹಾಲು ಒಕ್ಕೂಟದಿಂದ ಕೆನೆಭರಿತ ನಂದಿನಿ ಸಮೃದ್ಧಿ ಹಾಲು ಮಾರುಕಟ್ಟೆಗೆ ಬಿಡುಗಡೆ

0
230

ಬಳ್ಳಾರಿ,ಜ.11: ರಾಯಚೂರು,ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಕೆನೆಭರಿತ ನಂದಿನಿ ಸಮೃದ್ಧಿ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಗ್ರಾಹಕರು,ಹೋಟಲ್ ಮಾಲೀಕರ ಕೋರಿಕೆಯ ಮೇರೆಗೆ ರಾಬಕೋ ಹಾಲು ಒಕ್ಕೂಟ ಕೆನೆಭರಿತ ನಂದಿನಿ ಸಮೃದ್ಧಿ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು,ಇದೇ ಗಣರಾಜ್ಯೋತ್ಸವ ದಿನವಾದ ಜ.26ರಿಂದ ಕೆನೆಭರಿತ ನಂದಿನಿ ಸಮೃದ್ಧಿ ಹಾಲು ಗ್ರಾಹಕರ ಕೈಸೇರಲಿದೆ.
ರಾಯೂಚೂರು,ಬಳ್ಳಾರಿ,ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಹೋಟಲ್ ಮಾಲೀಕರು, ಟೀ ಶಾಪ್ ಮಾಲೀಕರು ಹಾಗೂ ಹಲವು ಗ್ರಾಹಕರು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶೇ.6ರಷ್ಟು ಜಿಡ್ಡಿನಾಂಶ ಹಾಗೂ ಶೇ.9ರಷ್ಟು ಎಸ್‍ಎನ್‍ಎಫ್ ಕೆನೆಭರಿತ ಹಾಲಿಗೆ ತುಂಬಾ ಬೇಡಿಕೆ ಇರುವುದನ್ನು ಮನಗಂಡು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನದ ಅನ್ವಯ ನಂದಿನಿ ಸಮೃದ್ಧಿ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಎಲ್.ಬಿ.ಪಿ.ಭೀಮಾನಾಯ್ಕ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1 ಲೀಟರ್ ನಂದಿನಿ ಸಮೃದ್ಧಿ ಹಾಲಿಗೆ 48 ರೂ. ಅರ್ಧ ಲೀಟರ್‍ಗೆ 24 ರೂ.ದರವಿದೆ ಎಂದು ತಿಳಿಸಿದ ಭೀಮಾನಾಯ್ಕ ಅವರು ಪ್ರಾರಂಭದಲ್ಲಿ 10 ಸಾವಿರ ಲೀಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಪ್ರಸ್ತುತ ಒಕ್ಕೂಟದಿಂದ 04 ವಿವಿಧ ಹಾಲಿನ ಮಾದರಿಗಳಾದ ನಂದಿನಿ ಟೋನ್ಡ್ ಹಾಲು, ನಂದಿನಿ ಶುಭಂ ಹಾಲು, ನಂದಿನಿ ಶುಭಂ ಗೋಲ್ಡ್ ಹಾಲು, ನಂದಿನಿ ಸ್ಪೇಷಲ್ ಹಾಲು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ ಎಂದು ವಿವರಿಸಿದ ಅವರು ರಾಬಕೋ ಪ್ರತಿನಿತ್ಯ ಸರಾಸರಿ 2ಲಕ್ಷ ಲೀಟರ್ ಗುಣಮಟ್ಟದ ಹಾಲನ್ನು ಶೇಖರಿಸಿ,ವೈಜ್ಞಾನಿಕವಾಗಿ ಸಂಸ್ಕರಿಸಿ,ಪರಿಶುದ್ಧ,ತಾಜಾ, ಪೋಷಕಾಂಶಗಳಿಂದ ಕೂಡಿದ,ಕಲಬರಕೆ ರಹಿತ ಸಂಪೂರ್ಣ ಸುರಕ್ಷಿತ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.
108 ಕೋಟಿ ವೆಚ್ಚದಲ್ಲಿ ಮೇಘಾ ಡೈರಿ: ಈಗಿರುವ ರಾಬಕೋ ಹಾಲು ಒಕ್ಕೂಟದ ಸ್ಥಳದಲ್ಲಿಯೇ 108 ಕೋಟಿ ರೂ.ವೆಚ್ಚದಲ್ಲಿ ಮೇಘಾಡೈರಿ ಸ್ಥಾಪಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ ಅವರು ಸ್ಪಷ್ಟಪಡಿಸಿದರು.
ಇದಕ್ಕೆ ಜಿಲ್ಲಾ ಖನಿಜ ನಿಧಿಯಡಿ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ತಿಳಿಸಿದ ಅವರು ಇದುವರೆಗೆ ನಾನಾ ಕಡೆ ಮೇಘಾ ಡೈರಿ ಸ್ಥಾಪಿಸಲು ಜಿಲ್ಲಾಡಳಿತ ತೋರಿಸಿದ ಜಾಗ ಸೂಕ್ತವಾಗಿರದ ಕಾರಣ ಸ್ಥಾಪಿಸಲಾಗಿರಲಿಲ್ಲ ಎಂದರು.
4.40ಕೋಟಿ ರೂ. ನಷ್ಟದಲ್ಲಿ ರಾಬಕೋ ಒಕ್ಕೂಟ: ರಾಬಕೋ ಒಕ್ಕೂಟವು ಪ್ರಸ್ತುತ ವರ್ಷದಲ್ಲಿ 4.40ಕೋಟಿ ರೂ.ನಷ್ಟದಲ್ಲಿದ್ದು, ಮಾರ್ಚ್‍ವೊಳಗೆ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಡೀಸೆಲ್ ದರಲ್ಲಿ ಏರಿಳಿದ, ಸಾಗಾಣಿಕೆ ವೆಚ್ಚ, 26 ಸಾವಿರ ಹಾಲು ಸಂಗ್ರಹಣ, ಕೋವಿಡ್ ಕಾರಣದಿಂದ ಮಾರುಕಟ್ಟೆ ಕುಸಿದಿರುವಿಕೆ, ಕ್ಷೀರಭಾಗ್ಯಕ್ಕೆ ಹೆಚ್ಚು ಹಾಲು ಒದಗಿಸುವಿಕೆ ಸೇರಿದಂತೆ ನಾನಾ ಕಾರಣದಿಂದ ರಾಬಕೋ ಒಕ್ಕೂಟ ನಷ್ಟದಲ್ಲಿದೆ ಎಂದು ಅವರು ತಿಳಿಸಿದರು.
ಹಾಲು ಉತ್ಪಾದಕರಿಗೆ ಕಳೆದ ಮೂರು ವರ್ಷದಿಂದ ಪ್ರೋತ್ಸಾಹಧನ ನೀಡಲಾಗಿದ್ದು, ಈ ವರ್ಷ ನೀಡುವುದಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ರಾಯಚೂರು,ಕೊಪ್ಪಳ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಒಕ್ಕೂಟ ರಚಿಸುವುದಕ್ಕೆ ಸದರಿ ಜಿಲ್ಲೆಗಳಿಂದ ಪ್ರಸ್ತಾವನೆ ಬಂದಿದ್ದು, ಇದರ ಜೊತೆಗೆ , ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಪ್ರತ್ಯೇಕ ಒಕ್ಕೂಟ ರಚಿಸುವ ಪ್ರಸ್ತಾವನೆಯನ್ನು ಕೆಎಂಎಫ್‍ಗೆ ಸಲ್ಲಿಸಲಾಗುವುದು;ಕೆಎಂಎಫ್ ತೀರ್ಮಾನ ಕೈಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶಿವಾನಂದ ವಾದಿ, ನಿರ್ದೇಶಕರಾದ ರವೀಂದ್ರ,ಸೀತಾರಾಮಲಕ್ಷ್ಮೀ, ಕವಿತಾ,ಜಿ.ಸತ್ಯನಾರಾಯಣ, ವೀರಶೇಖರರೆಡ್ಡಿ, ಎಂ.ಸತ್ಯನಾರಾಯಣ, ಭೀಮನಗೌಡ,ಶ್ರೀಕಾಂತಪ್ಪ, ವ್ಯವಸ್ಥಾಪಕ ನಿರ್ದೇಶಕ ತಿರುಪತಪ್ಪ ಸೇರಿದಂತೆ ಒಕ್ಕೂಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here