ಐದನೇ ಮಹಾ ವಲಸೆಗೆ ಲಿಂಗಾಯತರು ಸಜ್ಜು?

0
221

ಇಪ್ಪತ್ತೈದು ವರ್ಷಗಳ ನಂತರ ಪ್ರಬಲ ಲಿಂಗಾಯತ ಸಮುದಾಯದ ಮಹಾ ವಲಸೆ ಆರಂಭವಾಗುತ್ತದೆಯೇ?
ಹಾಗೆಂಬುದೊಂದು ಪ್ರಶ್ನೆಯನ್ನು ಕಣ್ಣ ಮುಂದಿಟ್ಟುಕೊಂಡು ಕೈ ಪಾಳೆಯದ ಒಂದು ಬಣ ಕುತೂಹಲದಿಂದ ನೋಡುತ್ತಿದೆ.
ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಪದೇ ಪದೇ ಕೇಳಿ ಬರುತ್ತಿರುವುದರಿಂದ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ವರಿಷ್ಟರ ವಿರುದ್ದ ಸಿಡಿದು ಬೀಳುವ ಲಕ್ಷಣ ತೋರಿಸಿರುವುದರಿಂದ ಇಂತಹ ಕುತೂಹಲ ಗರಿಗೆದರಿರುವುದು ಸಹಜವೇ.
ಸಧ್ಯದ ಸ್ಥಿತಿಯಲ್ಲಿ ಬಿಜೆಪಿ ಪಾಳೆಯದಲ್ಲಿ ಯಡಿಯೂರಪ್ಪ ಅವರ ಪರವಾಗಿ ಏನೇ ವಾದಗಳು ಕೇಳಲಿ.ಆದರೆ ಫಲಿತಾಂಶ ಮಾತ್ರ ತನಗೆ ಅನುಕೂಲಕರಾಗಿರುತ್ತದೆ ಎಂಬುದು ಕಾಂಗ್ರೆಸ್‌ ನ ಈ ಬಣದ ನಂಬಿಕೆ.
ಅಂದ ಹಾಗೆ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಮತ ಬ್ಯಾಂಕ್‌ ಪದೇ ಪದೇ ವಲಸೆ ಹೋಗಿಲ್ಲ.1969 ರಲ್ಲಿ ನಡೆದ ಮಹಾವಲಸೆಯ ನಂತರ ಎರಡು ದಶಕಗಳ ಕಾಲ ಕಾಂಗ್ರೆಸ್‌ ವಿರೋಧಿ ನೆಲೆಯಲ್ಲಿ ಉಳಿದುಕೊಂಡಿದ್ದ ಈ ಮತಬ್ಯಾಂಕ್‌ 1989 ರಲ್ಲಿ ಕಾಂಗ್ರೆಸ್‌ ಬೆನ್ನ ಹಿಂದೆ ನಿಂತಿತ್ತು.1994 ರಲ್ಲಿ ಜನತಾದಳದ ಪಡಸಾಲೆಗೆ ತಲುಪಿಕೊಂಡಿದ್ದ ಅದರ ಮಹಾ ವಲಸೆ ನಾಲ್ಕನೇ ಬಾರಿ ಶುರುವಾಗಿದ್ದು 1996 ರ ನಂತರ.
ಅದಾದ ನಂತರ ಅದು ಇದುವರೆಗೆ ಮಹಾವಲಸೆಯ ಕಡೆ ಗಮನ ಹರಿಸಿರಲಿಲ್ಲ.
ಅಂದ ಹಾಗೆ 1969 ರವರೆಗೆ ಲಿಂಗಾಯತ ಮತ ಬ್ಯಾಂಕಿಗೆ ಪರ್ಯಾಯ ಶಕ್ತಿಯ ಕಡೆ ಹೋಗುವ ಅನಿವಾರ್ಯತೆ ಕಂಡು ಬಂದಿರಲಿಲ್ಲ.ಆದರೆ ಯಾವಾಗ ಕಾಂಗ್ರೆಸ್‌ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆ ಆಯಿತೋ?ಆಗ ರಾಜ್ಯದಲ್ಲೂ ಆ ಪಕ್ಷ ಎರಡು ಹೋಳಾಯಿತು.
ನಿಜಲಿಂಗಪ್ಪ ಅವರ ಜತೆ ಗುರುತಿಸಿಕೊಂಡಿದ್ದ ಗುಂಪು ಕಾಂಗ್ರೆಸ್(ಓ) ಹೆಸರಿನಲ್ಲೇ ಗುರುತಿಸಿಕೊಂಡರೆ,ಇಂದಿರಾಗಾಂಧಿ ಬಣದ ದೇವರಾಜ ಅರಸು ನೇತೃತ್ವದಲ್ಲಿ ಕಾಂಗ್ರೆಸ್‌ (ಆರ್)‌ ತಲೆ ಎತ್ತಿ ನಿಂತುಕೊಂಡಿತು.
ಲಿಂಗಾಯತ ಸಮುದಾಯದ ಮೊದಲ ವಲಸೆ ಆರಂಭವಾಗಿದ್ದು ಹೀಗೆ.ಅವತ್ತು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್(ರೂಲಿಂಗ್)‌ ನಿಂದ ದೂರ ನಿಂತ ಲಿಂಗಾಯತರು ಕಾಂಗ್ರೆಸ್‌ (ಆರ್ಗನೈಸೇಷನ್)‌ ಜತೆ ನಿಂತುಕೊಂಡರು.
ಮುಂದೆ ಇದೇ ಸಂಸ್ಥಾ ಕಾಂಗ್ರೆಸ್‌ ಜನತಾ ಪಕ್ಷದ ರೂಪದಲ್ಲಿ ಮೇಲೆದ್ದು ನಿಂತಿತು.1978 ರಲ್ಲಿ ಲಿಂಗಾಯತ ಶಕ್ತಿಯ ಬಯಕೆಗೆ ತಕ್ಕ ವಾತಾವರಣ ನಿರ್ಮಾಣವಾಗಲಿಲ್ಲವಾದರೂ,1983 ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಮೂಲ ಶಕ್ತಿಯಾಯಿತು.
ಇಂತಹ ಲಿಂಗಾಯತ ಶಕ್ತಿ ಮರಳಿ ಕಾಂಗ್ರೆಸ್‌ ಕಡೆ ವಲಸೆ ಹೋಗಲು ಒಂದು ಘಟನೆ ಕಾರಣವಾಯಿತು.ಅದೆಂದರೆ ಜನತಾಪರಿವಾರದ ಸರ್ಕಾರದಲ್ಲಿ ಹೆಗಡೆ ನಂತರ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾದರಲ್ಲ?
ಈ ಬೆಳವಣಿಗೆಯನ್ನು ದೇವೇಗೌಡರು ಸಹಿಸಲಿಲ್ಲ.ಯಾಕೆಂದರೆ 1983 ರಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಿಂದಾಗಿ ತಾವು ತ್ಯಾಗ ಮಾಡಿದ ಮುಖ್ಯಮಂತ್ರಿ ಹುದ್ದೆ ಹೆಗಡೆ ಅವರ ಪತನದ ನಂತರವಾದರೂ ತಮಗೆ ದಕ್ಕಬೇಕಿತ್ತು ಎಂಬುದು ದೇವೇಗೌಡರ ನಿರೀಕ್ಷೆಯಾಗಿತ್ತು.
ಆದರೆ ಹೆಗಡೆ ಬೆಂಬಲಿಗರಿಂದಾಗಿ ದೇವೇಗೌಡರ ಈ ಆಸೆ ನೆರವೇರಲಿಲ್ಲ.ಇದರಿಂದ ಕ್ರುದ್ದಗೊಂಡ ದೇವೇಗೌಡರು ತಮ್ಮ ಬೆಂಬಲಿಗ ಶಾಸಕರನ್ನು ರಾಜಭವನಕ್ಕೆ ಕಳಿಸಿದರು.ಮತ್ತು ಈ ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲ ವೆಂಕಟಸುಬ್ಬಯ್ಯ ಅವರಿಗೆ ಮನವಿ ಸಲ್ಲಿಕೆಯಾಗುವಂತೆ ನೋಡಿಕೊಂಡರು,
ಕೇಂದ್ರದಲ್ಲಿದ್ದ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಗೂ ಜನತಾದಳ ಸರ್ಕಾರದ ಬಗ್ಗೆ ಅಸಹನೆ ಇತ್ತಲ್ಲ?ಇದನ್ನರಿತಿದ್ದ ವೆಂಕಟಸುಬ್ಬಯ್ಯ ತ್ವರಿತವಾಗಿ ಹೆಜ್ಜೆ ಇಟ್ಟವರೇ ಬೊಮ್ಮಾಯಿ ಅವರ ಸರ್ಕಾರವನ್ನು ವಜಾ ಮಾಡಿಬಿಟ್ಟರು.
ಬೊಮ್ಮಾಯಿ ಅವರು ತಮಗಿದ್ದ ಬಹುಮತವನ್ನು ಸಾಬೀತು ಮಾಡಲು ಅವರು ಅವಕಾಶ ನೀಡದ ಬೆಳವಣಿಗೆಯನ್ನು ಮುಂದೆ ಸುಪ್ರೀಂ ಕೋರ್ಟ್‌ ಒಪ್ಪಲಿಲ್ಲ ಎಂಬುದೇನೋ ನಿಜ.ಮತ್ತು ಮುಖ್ಯಮಂತ್ರಿಯೊಬ್ಬರಿಗೆ ಬಹುಮತ ಇದೆಯೋ?ಇಲ್ಲವೋ?ಎಂಬುದು ವಿಧಾನಸಭೆಯಲ್ಲಿ ತೀರ್ಮಾನವಾಗಬೇಕಾದ ವಿಷಯವೇ ಹೊರತು ರಾಜಭವನದ ಅಂಗಳದಲ್ಲಲ್ಲ ಎಂದು ತೀರ್ಪು ನೀಡಿದ್ದೂ ನಿಜ.
ಆದರೆ ಸುಪ್ರೀಂಕೋರ್ಟ್‌ ತೀರ್ಪು ಬರುವಷ್ಟರಲ್ಲಿ ಕಾಲ ಮಿಂಚಿತ್ತು.ಮತ್ತು ತಮ್ಮ ಸಮುದಾಯದ ಬೊಮ್ಮಾಯಿ ಅವರು ಪತನವಾಗಲು ಒಕ್ಕಲಿಗ ಸಮುದಾಯದ ದೇವೇಗೌಡರು ಕಾರಣ ಎಂಬ ಸಿಟ್ಟು ಲಿಂಗಾಯತರಲ್ಲಿ ಕಾಣಿಸಿಕೊಂಡಿತು.
ಹೀಗಾಗಿ ಸರ್ಕಾರವನ್ನು ವಜಾ ಮಾಡಿದ್ದು ಕಾಂಗ್ರೆಸ್‌ ಆಳ್ವಿಕೆಯ ಭಾಗವಾಗಿದ್ದ ವೆಂಕಟಸುಬ್ಬಯ್ಯ ಅವರಾದರೂ,ಅವರ ಸಿಟ್ಟು ಒಕ್ಕಲಿಗ ನಾಯಕ ದೇವೇಗೌಡರ ವಿರುದ್ದ ತಿರುಗಿತು.
ಇದರ ಪರಿಣಾಮವಾಗಿ ಹೆಗಡೆ ಮತ್ತು ದೇವೇಗೌಡರಿಬ್ಬರೂ ಬೇರೆ ಬೇರೆಯಾದರು.ಹೀಗೆ ಈ ನಾಯಕರಿಬ್ಬರು ಬೇರೆಯಾದ ಬೆಳವಣಿಗೆಯ ಪರಿಣಾಮವಾಗಿ ಜನತಾಪರಿವಾರದ ಬಗ್ಗೆ ಪ್ರಬಲ ಸಮುದಾಯಗಳು ವಿಶ್ವಾಸ ಕಳೆದುಕೊಂಡವು.
ಇದನ್ನು ಅರ್ಥ ಮಾಡಿಕೊಂಡ ಕಾಂಗ್ರೆಸ್‌ ತಕ್ಷಣವೇ ಲಿಂಗಾಯತ ಸಮುದಾಯದ ವೀರೇಂದ್ರಪಾಟೀಲರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕೂರಿಸಿ 1989 ರ ವಿಧಾನಸಭಾ ಚುನಾವಣೆಗೆ ಹೋಯಿತು.
ಅಷ್ಟೊತ್ತಿಗಾಗಲೇ ಹೆಗಡೆ ಅವರು ಲಿಂಗಾಯತ ಸಮುದಾಯದ ಪಾಲಿಗೆ ಅತ್ಯಂತ ದೊಡ್ಡ ನಾಯಕರಾಗಿ ಹೊರಹೊಮ್ಮಿದ್ದರೂ,ಅಧಿಕಾರ ಹಿಡಿಯಲು ಜನತಾ ಪರಿವಾರ ಶಕ್ತವಲ್ಲ ಎಂಬ ಭಾವನೆಯಿಂದ ಲಿಂಗಾಯತರು ವೀರೇಂದ್ರ ಪಾಟೀಲರ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್‌ ಜತೆ ನಿಂತರು.
ಹೀಗೆ ರಾಜ್ಯ ರಾಜಕಾರಣದಲ್ಲಿ ಎರಡನೇ ಬಾರಿ ಲಿಂಗಾಯತರ ಮಹಾವಲಸೆ ನಡೆಯಿತು.ವೀರೇಂದ್ರ ಪಾಟೀಲರ ಸರ್ಕಾರ ಇತಿಹಾಸದಲ್ಲೇ ಅತ್ಯಪರೂಪದ ಗೆಲುವು ಪಡೆಯಲು ಇದು ಕೂಡಾ ಕಾರಣ.
ಆದರ ಈ ಗೆಲುವಿನ ಮೂಲಕ ಮುಖ್ಯಮಂತ್ರಿಯಾದ ವೀರೇಂದ್ರಪಾಟೀಲರು ಬಹು ಕಾಲ ಉಳಿಯಲಿಲ್ಲ.ಮರು ವರ್ಷವೇ ಎಐಸಿಸಿ ಅಧ್ಯಕ್ಷ ರಾಜೀವ್‌ ಗಾಂಧಿ ಬಲವಂತವಾಗಿ ಅವರನ್ನು ಕೆಳಗಿಳಿಸಿದರು.
ವೀರೇಂದ್ರಪಾಟೀಲರ ಅನಾರೋಗ್ಯವನ್ನು ಅವರು ಕಾರಣವಾಗಿಟ್ಟುಕೊಂಡರೂ ನಿಜವಾದ ಕಾರಣ ಬೇರೆಯೇ ಇತ್ತು.ತಮ್ಮಿಚ್ಚೆಯಂತೆ ನಡೆದುಕೊಳ್ಳದ ವೀರೇಂದ್ರಪಾಟೀಲರು ಅವರಿಗೆ ಬೇಕಾಗಿರಲಿಲ್ಲ.ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸದಂತೆ ಖುದ್ದು ವೀರೇಂದ್ರ ಪಾಟೀಲರು ಸಂದೇಶ ಕಳಿಸಿದರೂ ಪ್ರಯೋಜನವಾಗಲಿಲ್ಲ.
ಈ ಬೆಳವಣಿಗೆಯಿಂದ ಸಹಜವಾಗಿಯೇ ಲಿಂಗಾಯತ ಸಮುದಾಯ ಕೆರಳಿತು.ಆದರೆ ತಕ್ಷಣ ಏನೂ ಮಾಡುವ ಸ್ಥಿತಿಯಲ್ಲಿ ಅದಿರಲಿಲ್ಲ.ಆದರೆ ಅದರ ಮನ:ಸ್ಥಿತಿ,ಇಬ್ಬಾಗವಾಗಿದ್ದ ಜನತಾ ಪರಿವಾರದ ಒಂದುಗೂಡುವಿಕೆಗೆ ಕಾರಣವಾಯಿತು.
1989 ರಲ್ಲಿ ಕಿತ್ತಾಡಿ ದೂರವಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ ಪರಸ್ಪರ ಕೈ ಜೋಡಿಸಿದ್ದು ಹೀಗೆ.ಯಾವಾಗ ಜನತಾದಳ ಒಂದಾಯಿತೋ?ಆಗ ಪುನ: ಲಿಂಗಾಯತ ಶಕ್ತಿ ಜನತಾದಳದ ಬೆನ್ನಿಗೆ ನಿಂತುಕೊಂಡಿತು.
ಮುಂದೆ 1996 ರಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾದ ನಂತರ ರಾಮಕೃಷ್ಣ‌ ಹೆಗಡೆ ಅವರನ್ನು ಉಚ್ಚಾಟಿಸಲಾಯಿತಲ್ಲ?ಈ ಬೆಳವಣಿಗೆಯಿಂದ ಕ್ರುದ್ಧಗೊಂಡ ಲಿಂಗಾಯತರು ನಾಲ್ಕನೇ ಬಾರಿ ಮಹಾ ವಲಸೆಗೆ ಸಜ್ಜಾದರು.
ಹೆಗಡೆ ಕಟ್ಟಿದ ಲೋಕಶಕ್ತಿ ಮತ್ತು ಸಂಯುಕ್ತ ಜನತಾದಳದ ಮೂಲಕ ಜರ್ಕ್‌ ಹೊಡೆದು ಬಿಜೆಪಿಯ ಜತೆ ನಿಂತುಕೊಂಡರು.ಇದಕ್ಕಾಗಿ ಆ ಸಮುದಾಯ ಲೋಕಶಕ್ತಿ ಮತ್ತು ಸಂಯುಕ್ತ ಜನತಾದಳವನ್ನು ಚಿಮ್ಮು ಹಲಗೆಯಾಗಿ ಮಾಡಿಕೊಂಡಿದ್ದು ನಿಜ.
1999 ರ ವಿಧಾನಸಭಾ ಚುನಾವಣೆಯ ವೇಳೆಗೆ ಜನತಾದಳ ಇಬ್ಬಾಗವಾಗಿ ಸಂಯುಕ್ತ ಜನತಾದಳ ಮತ್ತು ಜಾತ್ಯಾತೀತ ಜನತಾದಳದ ರೂಪದಲ್ಲಿ ನಿಂತಾಗ ಲಿಂಗಾಯತರು ಸಂಯುಕ್ತ ಜನತಾದಳದ ಬೆನ್ನಿಗೆ ನಿಂತರು.
ಅವತ್ತು ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಮುಂದೆ ಹೆಗಡೆ,ಪಟೇಲ್‌,ಯಡಿಯೂರಪ್ಪ,ರಾಜಶೇಖರ ಮೂರ್ತಿ ಸೇರಿದಂತೆ ಹಲ ಪ್ರಮುಖ ನಾಯಕರು ನಿಂತುಕೊಂಡಿದ್ದನ್ನು ಗಮನಿಸಿದರೆ ಲಿಂಗಾಯತ ಶಕ್ತಿಯ ನಾಲ್ಕನೇ ಸುತ್ತಿನ ವಲಸೆ ಶಕ್ತಿಯುತವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಇದಾದ ನಂತರ ಸಂಯುಕ್ತ ಜನತಾದಳದ ಹೆಸರಿನಲ್ಲಿ ಬಿಜೆಪಿಯ ಬೆನ್ನಿಗೆ ನಿಂತಿದ್ದ ಲಿಂಗಾಯತ ಸಮುದಾಯದ ಶಕ್ತಿ ಕಮಲ ಪಾಳೆಯದಲ್ಲಿ ಬೆರೆತು ಹೋಯಿತು.ಮತ್ತು ಇದನ್ನರ್ಥ ಮಾಡಿಕೊಂಡ ಯಡಿಯೂರಪ್ಪ ಅವರು ಟೈಮು ನೋಡಿ ತಲೆ ಬಾಗಿಸಿ,ಲಿಂಗಾಯತ ನಾಯಕತ್ವದ ಕಿರೀಟ ತಮ್ಮ ನೆತ್ತಿಯ ಮೇಲೆ ಕೂರುವಂತೆ ನೋಡಿಕೊಂಡರು.ಅದುವರೆಗೆ ರೈತ ನಾಯಕರಾಗಿದ್ದ ಅವರು ಲಿಂಗಾಯತ ನಾಯಕರಾಗಿದ್ದು ಹೀಗೆ.
ಇದಾದ ನಂತರ ಲಿಂಗಾಯತ ಶಕ್ತಿಯ ಮಹಾ ವಲಸೆ ಕಾರ್ಯ ನಡೆದಿಲ್ಲ.ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಲ್ಲಿರುವವರಿಗೆ ಲಿಂಗಾಯತ ಮತಗಳು ದಕ್ಕುತ್ತವಾದರೂ ಒಟ್ಟಾರೆಯಾಗಿ ಗಮನಿಸಿದರೆ ಇವತ್ತಿಗೂ ಲಿಂಗಾಯತ ಶಕ್ತಿ ಬಿಜೆಪಿಯ ಜತೆಗಿದೆ.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹಿರಿಯ ನಾಯಕ ಎಂ.ಬಿ.ಪಾಟೀಲ್‌ ಅವರು ಲಿಂಗಾಯತ ಸಮುದಾಯ ಐದನೇ ಮಹಾವಲಸೆಗೆ ಸಜ್ಜಾಗಲಿ ಎಂದು ಬ್ಲೂ ಪ್ರಿಂಟ್‌ ರೆಡಿ ಮಾಡಿಟ್ಟುಕೊಂಡರಾದರೂ,ಈ ಬ್ಲೂ ಪ್ರಿಂಟಿನ ಪ್ರಕಾರ ಮಹಾವಲಸೆ ನಡೆಯಲಿಲ್ಲ.
2018 ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಈ ಮಹಾವಲಸೆ ಸಾಧ್ಯವಾಗುತ್ತದೆ.ಮತ್ತು ಆ ಮೂಲಕ ಕಾಂಗ್ರೆಸ್‌ ಮರಳಿ ಅಧಿಕಾರ ಹಿಡಿಯುವುದು ಮತ್ತು ತಾವು ಪುನ: ಮುಖ್ಯಮಂತ್ರಿಯಾಗುವುದು ಶತ:ಸ್ಸಿದ್ದ ಅಂತ ಸಿದ್ದರಾಮಯ್ಯ ಭಾವಿಸಿದ್ದೇನೋ ನಿಜ.
ಆದರೆ ಅವರ ಭಾವನೆ ನಿಜವಾಗಲಿಲ್ಲ.ಒಂದು ವೇಳೆ 2013 ರ ವೇಳೆಗೆ ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದ ಯಡಿಯೂರಪ್ಪ ಅವರೇನಾದರೂ ಅಲ್ಲೇ ಉಳಿದುಕೊಂಡಿದ್ದರೆ 2018 ರಲ್ಲಿ ಲಿಂಗಾಯತ ಸಮುದಾಯದ ಮಹಾವಲಸೆ ನಡೆದುಬಿಡುತ್ತಿತ್ತೇನೋ?
ಯಾಕೆಂದರೆ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ ಪರಿಣಾಮವಾಗಿ 2013 ರಲ್ಲಿ ಲಿಂಗಾಯತ ಮತಗಳು ಛಿದ್ರವಾದವು.ಮತ್ತು ಇದರ ಲಾಭ ಪಡೆದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಿದರು.
ಇಂತಹ ಸ್ಥಿತಿಯಲ್ಲೇ 2018 ರ ಚುನಾವಣೆ ನಡೆದಿದ್ದರೆ ಅನುಮಾನವೇ ಇಲ್ಲದಂತೆ ಕಾಂಗ್ರೆಸ್‌ ಕಡೆ ಲಿಂಗಾಯತರ ಮಹಾವಲಸೆ ನಡೆಯುತ್ತಿತ್ತು.ಆದರೆ ಹಾಗಾಗದೆ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದ್ದರಿಂದ, 2018 ರಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯ ಜತೆ ಭದ್ರವಾಗಿ ನಿಂತುಕೊಂಡಿತು.
ಇವತ್ತಿಗೂ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿಯ ಜತೆಗೇ ಇದೆ.ಪಂಚಮಸಾಲಿ ಲಿಂಗಾಯತರ ಭಿನ್ನಧ್ವನಿಯೇ ಇರಬಹುದು,ಇನ್ಯಾವುದೇ ಕಾರಣಗಳಿರಬಹುದು.ಆದರೆ ಈ ಎಲ್ಲ ಕಾರಣಗಳ ನಡುವೆಯೂ ಲಿಂಗಾಯತ ಮತ ಬ್ಯಾಂಕ್‌ ಈಗಲೂ ಬಿಜೆಪಿ ಜತೆ ಭದ್ರವಾಗಿದೆ.
ಇದೇ ಪರಿಸ್ಥಿತಿ ಇದ್ದರೆ ಕಾಂಗ್ರೆಸ್‌ ಪಕ್ಷ ದೊಡ್ಡ ಮಟ್ಟದ ಲಾಭ ಪಡೆಯುವ ಕನಸು ಹುಸಿಯಾಗುತ್ತದೆ.ಯಾಕೆಂದರೆ ಸಧ್ಯದ ಸ್ಥಿತಿಯಲ್ಲಿ ಚುನಾವಣೆಗೆ ಹೋದರೆ ಎಂಭತ್ತರಷ್ಟು ಸೀಟುಗಳನ್ನು ಪಡೆಯಬಹುದು ಎಂಬುದು ಅದೇ ಪಕ್ಷದ ಆಂತರಿಕ ರಿಪೋರ್ಟು.
ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಅದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಬದಲು ಮೈತ್ರಿಕೂಟ ಸರ್ಕಾರ ರಚಿಸುವ ಕನಸು ಕಾಣಬಹುದಷ್ಟೇ.ಆದರೆ ಜೆಡಿಎಸ್‌ ಜತೆಗೂಡಿ ಸರ್ಕಾರ ರಚಿಸುವ ಮಾತು ಬಂದರೆ ಸಿದ್ದರಾಮಯ್ಯ ಕಿಡಿಕಿಡಿಯಾಗುತ್ತಾರೆ.
ಹೀಗಾಗಿ ಸ್ವಯಂಬಲದ ಮೇಲೆ ಪಕ್ಷ ಅಧಿಕಾರ ಹಿಡಿ ಯುವುದು ಅವರಿಗೆ ಬೇಕು.ಆದರೆ ಅಂತಹ ಕನಸು ಕಾಣಬೇಕೆಂದರೆ ಪ್ರಬಲ ಲಿಂಗಾಯತ ಸಮುದಾಯ ಐದನೇ ಮಹಾವಲಸೆಗೆ ಸಜ್ಜಾಗಬೇಕು.
ಹೀಗೆ ಅದು ಮಹಾವಲಸೆಗೆ ಸಜ್ಜಾಗಲಿ ಎಂಬುದು ಕಾಂಗ್ರೆಸ್‌ ನ ದೊಡ್ಡ ಬಣದ ನಿರೀಕ್ಷೆ.ಆದರೆ ಅದು ಸಾಧ್ಯವಾಗಬೇಕೆಂದರೆ ಬಿಜೆಪಿಯಲ್ಲಿನ ಬೆಳವಣಿಗೆಗಳು ತಾರ್ಕಿಕ ಅಂತ್ಯ ಕಂಡು, ನಾಯಕತ್ವದಿಂದ ಯಡಿಯೂರಪ್ಪ ಕೆಳಗಿಳಿಯಬೇಕು.
ಸಧ್ಯದ ಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎಂದು ಯಾರೇ ಹೇಳಬಹುದು.ಆದರೆ ಇವತ್ತಲ್ಲ,ನಾಳೆ ಇದು ಆಗಿಯೇ ಆಗುತ್ತದೆ.ಹಾಗಾದಾಗ ಲಿಂಗಾಯತರ ಮಹಾವಲಸೆಯ ಮುಹೂರ್ತ ನಿಗದಿಯಾಗುತ್ತದೆ ಎಂಬುದು ಈ ಬಣದ ನಂಬಿಕೆ.
ಈ ನಂಬಿಕೆ ನಿಜವಾಗುತ್ತದಾ?ಎಂಬುದೇ ಸಧ್ಯದ ಕುತೂಹಲ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here