ಬುರ್ಲಿ ಬಿಂದುಮಾಧವ ಆಚಾರ್ಯ

0
68

ಬುರ್ಲಿ ಬಿಂದುಮಾಧವ ಆಚಾರ್ಯರು ಕರ್ನಾಟಕದ ಹಿರಿಯ ದೇಶ ಸೇವಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಹಾಗೂ ಸಾಹಿತ್ಯ ಸೇವಕರಾಗಿ ಪ್ರಸಿದ್ಧರಾಗಿದ್ದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.

ಬುರ್ಲಿ ಬಿಂದುಮಾಧವ ಅವರು 1899ರಲ್ಲಿ ಜನಿಸಿದರು. ತಂದೆ ವೆಂಕಣ್ಣಾಚಾರ್ಯರು. ಬಿಂದಾಚಾರ್ಯರು ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾಗಿ ನೌಕರಿ ಆರಂಭಿಸಿದರು. ಕೆಲಕಾಲದಲ್ಲೇ ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಮುಂದೆ ಅರ್ಧಶತಮಾನಕ್ಕಿಂತ ಹೆಚ್ಚು ಕಾಲ ಧಾರವಾಡವನ್ನು ಕಾರ್ಯರಂಗವಾಗಿ ಮಾಡಿಕೊಂಡು ದೇಶದ ಮತ್ತು ಕನ್ನಡದ ಸೇವೆ ಮಾಡಿದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾಗಿ ನಿಂತು (1921-28) ಒಳ್ಳೆಯ ಶಿಕ್ಷಕರೆಂದು ಹೆಸರು ಪಡೆದದ್ದಲ್ಲದೆ, ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಒಂದು ಆಶ್ರಮ ಸ್ಥಾಪಿಸಿ ಸಮಾಜ ಸೇವಾಕಾರ್ಯವನ್ನು ಆರಂಭಿಸಿದರು.

ಬುರ್ಲಿ ಬಿಂದುಮಾಧವ ಆಚಾರ್ಯ ಅವರು ಗಾಂಧೀಜಿಯ ನೇತೃತ್ವದಲ್ಲಿ ಆರಂಭವಾದ ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿಗಳಲ್ಲಿ (1942) ಸಕ್ರಿಯವಾಗಿ ಭಾಗವಹಿಸಿ ಅನೇಕ ವರ್ಷಗಳ ಕಾರಾಗೃಹವಾಸ ಅನುಭವಿಸಿದರು. ಇವರ ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ಮಿಕ್ರಮ ಕೂಡ ಸತ್ಯಾಗ್ರಹದಲ್ಲಿ ಸೆರೆಮನೆ ಕಂಡರು. 1942ರ ಚಲೇ ಜಾವ್ ಚಳವಳಿಯಲ್ಲಿ ಅನೇಕ ತಿಂಗಳ ಪರ್ಯಂತ ಭೂಗತರಾಗಿದ್ದುಕೊಂಡು ಇವರು ಸಂಘಟಿಸಿದ ವಿಧ್ವಂಸಕ ಚಟುವಟಿಕೆಗಳು ಎಷ್ಟು ಪರಿಣಾಮಕಾರಿಯಾಗಿದ್ದವೆಂದರೆ ಬ್ರಿಟಿಷ್ ಸರ್ಕಾರ ಇವರನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿತ್ತು. 1947ರಲ್ಲಿ ಹೈದರಾಬಾದ್ ವಿಲೀನಕ್ಕಾಗಿ ನಡೆದ ಆಂದೋಲನದಲ್ಲಿ ಬಿಂದು ಮಾಧವರು ಗಡಿ ಪ್ರದೇಶದಲ್ಲಿ ವ್ಯಾಪಕ ಸಂಘಟನೆ ಕೈಗೊಂಡಿದ್ದರು.
ನಾ.ಸು. ಹರ್ಡೀಕರರ ನಾಯಕತ್ವದಲ್ಲಿ ಸಂಘಟಿತವಾದ ಸೇವಾದಳದಲ್ಲಿ ಸ್ವಯಂಸೇವಕರಾಗಿ ಸೇರಿದ ಮೊದಲಿಗರಲ್ಲಿ ಬುರ್ಲಿಯವರೂ ಒಬ್ಬರು. ಶಿಸ್ತು ಮತ್ತು ಸಂಘಟನಾ ಸಾಮಥ್ರ್ಯಕ್ಕಾಗಿ ಮೆಚ್ಚಿಕೆ ಪಡೆದರೂ ಇವರು ಸೇವಾದಳದಲ್ಲಿ ಬಹುಕಾಲ ಉಳಿಯಲಾಗಲಿಲ್ಲ. ಆದರೆ ಬ್ರಿಟಿಷರು ಪ್ರತಿಬಂಧಿಸಿದ್ದ ಸೇವಾದಳವನ್ನು ಪುನರ್ಘಟಿಸಲು 1944ರಲ್ಲಿ ನಿರ್ಣಯವಾದಾಗ ಕರ್ನಾಟಕದ ಸೇವಾದಳಕ್ಕೆ ಇವರನ್ನು ವರಿಷ್ಠರಾಗಿ ನೇಮಿಸಲಾಯಿತು. ಮೂರು ವರ್ಷ ಅದರಲ್ಲಿದ್ದು 10,000 ಸ್ವಯಂಸೇವಕರ ತರಬೇತಿ ಸಾಧಿಸಿ 1947ರಲ್ಲಿ ಹೊಸ ರಾಜಕೀಯ ವಾತಾವರಣಕ್ಕೆ ಒಗ್ಗಿಕೊಳ್ಳಲಾರದೇ ರಾಜೀನಾಮೆ ಕೊಟ್ಟರು.
ಗಾಂಧೀಜಿಯ ವಿಧಾಯಕ ಕಾರ್ಯಕ್ರಮಗಳಲ್ಲಿ ಅಚಲ ವಿಶ್ವಾಸವಿದ್ದ ಇವರು ಧಾರವಾಡ ತಾಲ್ಲೂಕು ಮತ್ತು ಜಿಲ್ಲಾ ಖಾದೀ ಗ್ರಾಮೋದ್ಯೋಗ ಸಂಘ ಸ್ಥಾಪನೆಯಲ್ಲಿ ಸಕ್ರಿಯವಾಗಿ ದುಡಿದರು. ಹರಿಜನ ಸೇವಾ ಕಾರ್ಯಕ್ರಮದಲ್ಲಿ ಸೇರಿ ಹರಿಜನ ಕೇರಿಗಳಲ್ಲಿ ಸ್ವಚ್ಛತೆಯ ಕೆಲಸ ಮಾಡಿದರು. 1947ರಲ್ಲಿ ಧಾರವಾಡದಲ್ಲಿ ಮುನಿಸಿಪಲ್ ಭಂಗಿಗಳ (ತೋಟಿ) ಮುಷ್ಕರವಾದಾಗ ನಗರ ನೈರ್ಮಲ್ಯಕ್ಕಾಗಿ ಸ್ವತಃ ಊರಿನ ಕಕ್ಕಸುಗಳನ್ನು ತೊಳೆಯುವ ಕೆಲಸಕ್ಕೆ ಮುಂದಾದರು.

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯದ ಅಭ್ಯುದಯ ಸಾಧನೆಯಲ್ಲಿಯೂ ಬಿಂದು ಮಾಧವರದು ಸ್ಮರಣೀಯ ಕಾರ್ಯ. ಏಕೀಕರಣಕ್ಕೆ ಸ್ಪೂರ್ತಿ ಒದಗಿಸಲು 1936ರ ಡಿಸೆಂಬರಿನಲ್ಲಿ ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯ ಷಟ್-ಶತಮಾನೋತ್ಸವ ಚಾಲಕ ಶಕ್ತಿಗಳಲ್ಲಿ ಒಬ್ಬರಾಗಿದ್ದರು. 1938ರಲ್ಲಿ ಇವರು ಪ್ರಾರಂಭಿಸಿ, ಹಲವು ಕಷ್ಟನಷ್ಟಗಳನ್ನೆದುರಿಸಿ 30 ವರ್ಷ ಪರ್ಯಂತ ನಡೆಸಿದ ‘ಮಿಂಚಿನಬಳ್ಳಿ ಗ್ರಂಥಮಾಲೆ’ ಕನ್ನಡ ಪ್ರಕಟನ ವ್ಯವಸಾಯದಲ್ಲೇ ಧೈರ್ಯದ ಹೊಸ ಹೆಜ್ಜೆ. ಪ್ರಕಾಶಕರು ಕಥೆ ಕಾದಂಬರಿಗಳನ್ನು ಹೊರತು ಜ್ಞಾನ ಮತ್ತು ವಿಚಾರ ಪ್ರಚೋದಕವಾದ ಗಂಭೀರ ಸಾಹಿತ್ಯ ಪ್ರಕಟಿಸಲು ಒಲ್ಲದಿದ್ದ ಆ ಕಾಲದಲ್ಲಿ ಇತಿಹಾಸ, ವಿಮರ್ಶೆ, ಜೀವನಚರಿತ್ರೆ, ವಿಜ್ಞಾನ, ಅರ್ಥಶಾಸ್ತ್ರ, ರಾಜಕೀಯ ಮೊದಲಾದ ಗಂಭೀರ ವಿಷಯಗಳ ಮೇಲೆ ತಜ್ಞರಿಂದ 110ಕ್ಕೂ ಮಿಕ್ಕಿ ಗ್ರಂಥಗಳನ್ನು ಬರೆಸಿ ಪ್ರಕಟಿಸಿ ಕನ್ನಡದ ಒಂದು ಕೊರತೆಯನ್ನು ನಿವಾರಿಸಿದರು.

1964ರಲ್ಲಿ ನಡೆದ ಪುರಂದರದಾಸರ ಚತುಃ ಶತಮಾನೋತ್ಸವ ಅಂಗವಾಗಿ ದಾಸರ ಕೃತಿಗಳ ಸಂಗ್ರಹಕ್ಕಾಗಿ ಊರೂರು ಸುತ್ತಿದರು. ಬೆಟಗೇರಿ ಕೃಷ್ಣಶರ್ಮರಂಥ ವಿದ್ವಾಂಸರಿಂದ ಸಂಶೋಧನಗೊಳಿಸಿ ಪ್ರಗಲ್ಛ ಮುನ್ನುಡಿ ಮತ್ತು ಟಿಪ್ಪಣಿಗಳೊಡನೆ ದಾಸರ ಕೃತಿಗಳ ಪ್ರಮಾಣಿತ ಮತ್ತು ವರ್ಗೀಕೃತ ಸಂಸ್ಕರಣವೊಂದನ್ನು ಆರು ಸಂಪುಟಗಳಲ್ಲಿ ಹೊರತರುವಲ್ಲಿ ಇವರ ಶ್ರಮ ಸ್ಮರಣೀಯವಾದದ್ದು. ಅದು ದಾಸರ ಕೃತಿಗಳ ಪ್ರಪ್ರಥಮ ಪ್ರಮಾಣಿತ ಆವೃತ್ತಿ.
ಮಧ್ವಮತದ ನಿಷ್ಠಾವಂತ ಅನುಯಾಯಿಗಳಾಗಿದ್ದ ಬುರ್ಲಿಯವರು 1953ರಲ್ಲಿ ಶ್ರೀವಿಶ್ವೇಶತೀರ್ಥಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ಮಾಧ್ವಮಹಾಮಂಡಲದ ಸ್ಥಾಪನೆ ನಿರ್ವಹಣೆಯಲ್ಲೂ ಶ್ರಮಿಸಿದರು. ಮಧ್ವಚಾರ್ಯರ ಸರ್ವ ಮೂಲ ಗ್ರಂಥಗಳ ಅಧ್ಯಯನಕ್ಕಾಗಿ ನಡೆದ ಜ್ಞಾನಸತ್ರದ ಸಂಘಟನೆಯಲ್ಲಿ ಸ್ವತಃ ಅಧ್ಯಾಯಿಯಾಗಿಯೂ ಸಂಘಟಕರಾಗಿಯೂ ಕೆಲಸ ಮಾಡಿದರು.

ಬಿಂದಾಚಾರ್ಯರು ಸಾರ್ವಜನಿಕ ಕಾರ್ಯಕರ್ತರಲ್ಲಿ ಅಪರೂಪದ ವ್ಯಕ್ತಿ. ಕಾರ್ಯನಿಷ್ಠೆಯೊಡನೆ ನಿರಾಡಂಬರ, ಹೊಣೆ ಹೊರುವುದರೊಡನೆ ಅಧಿಕಾರ ಮೋಹದ ಅಭಾವ, ಪ್ರಾಮಾಣಿಕತೆ, ನಿಷ್ಟುರ ಶಿಸ್ತಿನೊಡನೆ ನಗುನಗುವ ಮಾರ್ದವ, ಸೇವಾಭಾವದೊಡನೆ ಸ್ತುತಿವಿಮುಖತೆ ಇವರ ವೈಶಿಷ್ಟ್ಯ. ಹಲವರ್ಷ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಸದಸ್ಯರೂ 1937ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರೂ ಆದ ಇವರು ಸ್ವಾತಂತ್ರ ಬಂದ ಮೇಲೆ ಯಾವ ಅಧಿಕಾರಸ್ಥಾನಕ್ಕೂ ಅಪೇಕ್ಷಿಸದೆ ಬಡತನದಲ್ಲೇ ಬಾಳಿ 1981ರ ಅಕ್ಟೋಬರ್ 27ರಂದು ಬೆಂಗಳೂರಲ್ಲಿ ತಮ್ಮ ಮಗನ ಮನೆಯಲ್ಲಿ ನಿಧನಹೊಂದಿದರು. 1950ರಲ್ಲಿ ಧಾರವಾಡದಲ್ಲಿ ಇವರ ಮಿತ್ರರು ಇವರಿಗೊಂದು ಸನ್ಮಾನ ಏರ್ಪಡಿಸಿ ಇವರ ಸ್ವಂತಕ್ಕೆಂದೇ ಅರ್ಪಿಸಿದ ಹಮ್ಮಿಣಿಯನ್ನು ಮಿಂಚಿನಬಳ್ಳಿಗಾಗಿ ಕೊಟ್ಟುಬಿಟ್ಟರು. 1961ರಲ್ಲಿ ಇವರ ನಿಧನಕ್ಕಿಂತ ಸ್ವಲ್ಪ ಕಾಲ ಮುಂಚೆ ಬೆಂಗಳೂರಲ್ಲಿ ಇವರ ಮನೆಯಲ್ಲಿಯೇ ಕಡಿದಾಳ್ ಮಂಜಪ್ಪನರ ನೇತೃತ್ವದಲ್ಲಿ ಅಭಿನಂದನಾ ಗ್ರಂಥ ಒಂದನ್ನು ಅರ್ಪಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here