ಹಂಪಿಯಲ್ಲಿ ಸಂಭ್ರಮದ ಕೋಟಿ ಕಂಠ ಗಾಯನ

0
67

ಹೊಸಪೇಟೆ(ವಿಜಯನಗರ),ಅ.28 : ವಿಶ್ವಪಾರಂಪರಿಕ ತಾಣ ಹಂಪಿಯ ಎದುರು ಬಸವಣ್ಣ ಮಂಟಪದ ಎದುರುಗಡೆ ಶುಕ್ರವಾರ ನಡೆದ ಕೋಟಿ ಕಂಠ ಗಾಯನವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ವಿಜಯನಗರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 67ನೇ ಕನ್ನಡರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕಲಾವಿದರಿಂದ ಮತ್ತು ಶಾಲಾ ಮಕ್ಕಳಿಂದ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ”, ಹುಯಿಲಗೋಳ ನಾರಾಯಣ್‍ರಾವ್ ಅವರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು”, ಚೆನ್ನವೀರಕಣವಿ ಅವರ “ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ”, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಡಿ ಎಸ್ ಕರ್ಕಿ ಅವರ “ಹಚ್ಚೇವು ಕನ್ನಡ ದೀಪ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಆರು ಗೀತೆಗಳನ್ನು ಹಾಡಲಾಯಿತು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ವಯೋಮಾನದವರು ಅತ್ಯಂತ ಉತ್ಸಾಹದಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು ಸಂಕಲ್ಪ ವಿಧಿಯನ್ನು ಬೋಧಿಸಿದರು.
ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಎಸ್ಪಿ ಡಾ.ಕೆ.ಅರುಣ್, ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್, ಡಿ.ವೈ.ಎಸ್ಪಿ ವಿಶ್ವನಾಥ ಕುಲಕರ್ಣಿ, ಹಂಪಿ ಗ್ರಾ.ಪಂ. ಅಧ್ಯಕ್ಷೆ ಹಂಪಮ್ಮ, ಹೊಸಪೇಟೆ ತಹಶಿಲ್ದಾರ್ ವಿಶ್ವಜಿತ್ ಮೆಹತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ಹೊಸಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಇದ್ದರು.

ಸುಜಲಂ-ಜಲತತ್ವ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣ ಅ.29ರಂದು

ಹೊಸಪೇಟೆ(ವಿಜಯನಗರ),ಅ.28: ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ನವ ದೆಹಲಿಯ ದೀನ್‍ದಯಾಳ್ ಸಂಶೋಧನಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸುಜಲಂ-ಜಲತತ್ವ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅ.29ರಂದು ಬೆಳಗ್ಗೆ 10ಗಂಟೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಂಪಿಯ ಕನ್ನಡ ವಿವಿಯ ಪ್ರೊ.ಸ.ಚಿ.ರಮೇಶ ಅವರು ತಿಳಿಸಿದರು.
ಶುಕ್ರವಾರದಂದು ರಾಷ್ಟ್ರೀಯ ವಿಚಾರ ಸಂಕಿರಣ ಕುರಿತು ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಮಹಾರಾಷ್ಟ್ರದ ಕೊಲ್ಲಾಪುರ ಶ್ರೀ ಕ್ಷೇತ್ರ ಸಿದ್ಧಗಿರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ವಹಿಸಲಿದ್ದು, ಉತ್ತರ ಕನ್ನಡ ಅಂಕೋಲದ ಪರಿಸರವಾದಿ ಪದ್ಮಶ್ರೀ ತುಳಸಿಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿದೇಶಾಂಗ ಮತ್ತು ಸಂಸ್ಕøತಿ ಸಚಿವೆ ಮೀನಾಕ್ಷಿ ಲೇಖಿ, ಗೌರವ ಅತಿಥಿಗಳಾಗಿ ಉನ್ನತ ಶಿಕ್ಷಣ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ, ಪ್ರವಾಸೋದ್ಯಮ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಆನಂದ್‍ಸಿಂಗ್, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕ ಪುನಶ್ಚೇತನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಹಾಗೂ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಆಗಮಿಸಲಿದ್ದಾರೆ. ನವದೆಹಲಿ ದೀನ್‍ದಯಾಳ್ ಸಂಶೋಧನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತುಲ್‍ಜೈನ್ ಮತ್ತು ಹಂಪಿಯ ಕನ್ನಡ ವಿವಿಯ ಕುಲಪತಿ ಪ್ರೊ.ಸ.ಚಿ.ರಮೇಶ ಅವರು ಉಪಸ್ಥಿತಿ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ ಅಲಗೂರ್ ಅವರು ವಹಿಸಲಿದ್ದಾರೆ.
ಅ.29ರಂದು ಮಧ್ಯಾಹ್ನ 3.30ಕ್ಕೆ ಪಂಡಿತ್ ದೀನ್‍ದಯಾಳ್ ಉಪಾಧ್ಯ ಅಧ್ಯಯನ ಕೇಂದ್ರದ ಉದ್ಘಾಟನೆಯನ್ನು ವಿದೇಶಾಂಗ ಮತ್ತು ಸಂಸ್ಕøತಿ ಸಚಿವೆ ಮೀನಾಕ್ಷಿ ಲೇಖಿ ಅವರು ನೇರವೆರಿಸಲಿದ್ದಾರೆ. ಸಂಜೆ 6ಗಂಟೆಗೆ ಹಳ್ಳಿ ಕೆರೆಗೆ ತುಂಗಭದ್ರ ಅರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಂತರ ಹಂಪಿ ಕನ್ನಡ ವಿವಿಯ ಹಾಗೂ ಬಳ್ಳಾರಿಯ ಕೃಷ್ಣದೇವರಾಯ ವಿವಿಯ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಜಲಕ್ಕೆ ಸಂಬಂಧಿಸಿದ ವಿಚಾರಣ ಸಂಕಿರಣದಲ್ಲಿ ಜಲಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿದಂತಹ 50ಕ್ಕೂ ಹೆಚ್ಚು ವಿದ್ವಾಂಸರು ಪಾಲ್ಗೊಳಲಿದ್ದಾರೆ.
*ಸಮಾರೋಪ ಸಮಾರಂಭ: ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಸಮಾರೋಪ ಸಮಾರಂಭವು ಹಂಪಿಯ ಕನ್ನಡ ವಿವಿಯ ಕುಲಪತಿ ಪ್ರೊ.ಸ.ಚಿ.ರಮೇಶ ಅವರ ಅಧ್ಯಕ್ಷತೆಯಲ್ಲಿ ಅ.30ರಂದು ಮಧ್ಯಾಹ್ನ 4.15ಕ್ಕೆ ನಡೆಯಲಿದೆ.
ಮುಖ್ಯ ಅತಿಥಿಯಾಗಿ ನೀರಾವರಿ, ನದಿ ಅಭಿವೃದ್ಧಿ ಮತ್ತು ನಿರ್ಮಲ ಗಂಗಾ ಯೋಜನೆ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಅವರು ಆಗಮಿಸಲಿದ್ದು, ಉನ್ನತ ಶಿಕ್ಷಣ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ವಿಜಯನಗರ ಜಿಲ್ಲಾಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಸಾಹೇಬ ಜೊಲ್ಲೆ, ಪ್ರವಾಸೋದ್ಯಮ, ಜೀವಿಶಾಸ್ತ್ರ, ಪರಿಸರ ಸಚಿವ ಆನಂದ್‍ಸಿಂಗ್ ಅವರುಗೌರವ ಅತಿಥಿಗಳಾಗಿ, ನವದೆಹಲಿಯ ದೀನ್‍ದಯಾಳ್ ಸಂಶೋಧನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತುಲ್‍ಜೈನ್, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ್ ಅವರು ಗೌರವ ಉಪಸ್ಥಿತಿವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪೌಷ್ಟಿಕ ಆಹಾರ ಕಿಟ್ ವಿತರಣೆ

ಬಳ್ಳಾರಿ,ಅ.28: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಸಂಯುಕ್ತಾಶ್ರಯದಲ್ಲಿ ಬಂಡಿಹಟ್ಟಿ ನಗರ ಆರೋಗ್ಯ ಕೇಂದ್ರದಲ್ಲಿ ದಾನಿ ಅಲಿಮುದ್ದಿನ ಹೊತುರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮುಂದಿನ 06 ತಿಂಗಳವರೆಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ, ಸಾಮಾನ್ಯವಾಗಿ ಕ್ಷಯರೋಗದಿಂದ ಬಳಲುವ ರೋಗಿಗಳಿಗೆ ರೋಗದ ತೀವ್ರತೆಯು ಕೆಲವೊಮ್ಮೆ ಅರ್ಥಿಕ ದುಸ್ಥಿತಿಗೆ ತಳ್ಳುತ್ತದೆ. ಇಂತವರಿಗೆ ಸಹಾಯ ಮಾಡಲು ದಾನಿಗಳು ಮುಂದೆ ಬಂದಲ್ಲಿ ಪೋಷಣೆ ಮತ್ತು ಕಾಳಜಿಯ ಬೆಂಬಲ ಅವರನ್ನು ಗುಣಮುಖರಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ 06 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಬೆಂಬಲದ ಅವಶ್ಯಕತೆ ಇದೆ. ಈಗಾಗಲೇ ಜಿಲ್ಲೆಯಾದ್ಯಾಂತ 152 ಕ್ಷಯರೋಗಿಗಳಿಗೆ ದಾನಿಗಳಿಂದ ಪೌಷ್ಟಿಕ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಕ್ಷಯರೋಗವಾಗಿರಬಹುದು ಈ ಹಿನ್ನಲೆಯಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಕಫ ಪರೀಕ್ಷೆಯನ್ನು ಕೈಗೊಂಡು ಕ್ಷಯಮುಕ್ತರಾಗಿ ಎಂದು ತಿಳಿಸಿದರು.
ಆಸಕ್ತ ದಾನಿಗಳು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿಕೊಡಿ ಅಥವಾ ಮೊ.9164447599 ಸಂಖ್ಯೆಗೆ ಕರೆಮಾಡಿ ತಿಳಿಸಬಹುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ ಅವರು ಮಾತನಾಡಿ, ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ನೀ-ಕ್ಷಯಮಿತ್ರ ಎಂಬ ವಿಶೇಷ ಆಂದೋಲನವನ್ನು ದಾನಿಗಳ ಮೂಲಕ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರ ಮೂಲಕ ದಾನ ಮಾಡುವ ಮನಸ್ಸುಳ್ಳವರಿಗೆ ಮಾಹಿತಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಡಾ.ಹೆಚ್ ನಿಜಾಮುದ್ದಿನ್ ಹಾಗೂ ವೈದ್ಯಾಧಿಕಾರಿಗಳಾದ ಡಾ.ಕಾಶಿಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕ್ಷಯರೋಗ ಕಾರ್ಯಕ್ರಮ ಸಿಬ್ಬಂದಿವರಾದ ಓಬಳರೆಡ್ಡಿ, ಬಸವರಾಜ ರಾಜಗುರು, ವೀರೇಶ, ಚಂದ್ರಶೇಖರ, ಪುಷ್ಪಾ, ಪಾರ್ವತಿ, ಖರ್ಮುನ್ನಿಸಾ ಬೇಗಂ, ಮುಮ್ತಾಜ್, ಶೋಭಾ, ಶಾರದಾ, ದಾನಕುಮಾರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ ಆಚರಣೆ.

ಬಳ್ಳಾರಿ,ಅ.28: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಕರ್ನಾಟಕ ರಾಜ್ಯ ಚಾಲನಾ ಪರಿಷತ್ ಬೆಂಗಳೂರು ಮತ್ತು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ (ರಕ್ತ ಸುರಕ್ಷತೆ) ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿüಕಾರಿಗಳ ಸಭಾಂಗಣದಲ್ಲಿ ಆಚರಿಸಲಾಯಿತು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ್ ಬಿ.ಚವ್ಹಾಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು ಎಂದು ಸಂಘ ಸಂಸ್ಥೆಗಳಿಗೆ ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಇಂದ್ರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು, ಇ-ರಕ್ತಕೋಶದಲ್ಲಿ ಎಲ್ಲಾ ರಕ್ತ ಕೇಂದ್ರದವರು ತುಂಬಬೇಕು ಇದರಿಂದ ಸಾರ್ವಜನಿಕರಿಗೆ ಯಾವ ರಕ್ತ ಕೇಂದ್ರದಲ್ಲಿ ರಕ್ತ ಇದೆ ಎಂದು ತಿಳಿಯಲು ಸಾಧ್ಯವಾಗುತ್ತ್ತದೆ ಎಂದು ತಿಳಿಸಿದರು.
ಜಿಲ್ಲಾ ಮೇಲ್ವಿಚಾರಕರಾದ ಬಿ.ಗಿರೀಶ್ ಅವರು ಮಾತನಾಡಿ, 2022-23ನೇ ಸಾಲಿನಲ್ಲಿ 183 ರಕ್ತದಾನ ಶಿಬಿರ ಆಯೋಜಿಸಿ 8370 ರಕ್ತ ಚೀಲಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 44 ಸಂಘ ಸಂಸ್ಥೆಗಳಿಗೆ 100 ಕ್ಕೂ ಹೆಚ್ಚು ರಕ್ತ ಚೀಲಗಳನ್ನು ಸಂಗ್ರಹಿಸಿದವರಿಗೆ ಸನ್ಮಾನ ಮಾಡಲಾಯಿತು.
ಇದಕ್ಕೂ ಮುಂಚೆ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರಿ) ಡಾ.ಅಬ್ದುಲ್ಲಾ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಪರಿವೀಕ್ಷಣಾಧಿಕಾರಿ ಡಾ.ಮರಿಯಾಂಬಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ವಿರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ ದಾಸಪ್ಪನವರ, ಎ.ಆರ್.ಟಿ ಆಪ್ತಸಮಾಲೋಚಕರಾದ ಗಣೇಶ್ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಸಿಬ್ಬಂದಿಗಳು ಮತ್ತು ಇನ್ನೀತರರು ಉಪಸ್ಥಿತರಿದ್ದರು…..

LEAVE A REPLY

Please enter your comment!
Please enter your name here