ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಪಶು ಆಸ್ಪತ್ರೆಗಳು

0
180

ಕೊಟ್ಟೂರು: ತಾಲ್ಲೂಕಿನಾದ್ಯಂತ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆಯಿಂದ ಪಶುಗಳ ಚಿಕಿತ್ಸೆಗೆ ರೈತರು ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಸಮರ್ಪಕ ಸೇವೆ ದೊರೆಯದೆ ಪರಿತಪಿಸುವಂತಾಗಿದೆ.

ತಾಲ್ಲೂಕಿನಾದ್ಯಂತ ಹಸು,ಎಮ್ಮೆ ಹಾಗೂ ಎತ್ತುಗಳು ಸೇರಿದಂತೆ 26,172 ಇವೆ ಕುರಿ ಮೇಕೆಗಳು 66,951 ಇವೆ. ತಾಲ್ಲೂಕಿನಲ್ಲಿ 7 ಪಶು ಆಸ್ಪತ್ರೆಗಳಿದ್ದು ಎಲ್ಲಾ ಕಡೆ ಸುಸಜ್ಜಿತ ಕಟ್ಟಡಗಳನ್ನು ಹೊಂದಿವೆ ಮತ್ತು ಔಷಧಗಳು ಸಹ ಅಗತ್ಯಕ್ಕೆ ತಕ್ಕಂತೆ ಲಭ್ಯವಿವೆ. ಆದರೆ ಪಶುಗಳನ್ನು ಪರೀಕ್ಷಿಸುವವರು ಹಾಗೂ ಔಷಧಿಗಳನ್ನು ನೀಡುವವರು ಇಲ್ಲದೆ ಆಸ್ಪತ್ರೆಗಳು ಬಿಕೋ ಎನ್ನುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟಾರೆ 28 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ ಕೇವಲ 1 ವೈದ್ಯ, 1 ಹಿರಿಯ ಪರೀಕ್ಷಕರು,1 ಕಿರಿಯ ಪರೀಕ್ಷಕರು, 1 ಗ್ರೂಪ್ ಡಿ ಒಟ್ಟಾರೆ 4 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 24 ಹುದ್ದೆಗಳು ಖಾಲಿ ಇವೆ ಎಂದು ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಕೊಟ್ರೇಶ್ ತಿಳಿಸಿದರು.

ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ 3 ವೈದ್ಯರು ಸೇರಿದಂತೆ 10 ಸಿಬ್ಬಂದಿ ಅಗತ್ಯವಿದೆ. ಆದರೆ 2 ಪರೀಕ್ಷಕರು ಮಾತ್ರ ಇದ್ದಾರೆ. ನಿಂಬಳಗೆರೆ ಗ್ರಾಮದ ವೈದ್ಯರೇ ತಾಲ್ಲೂಕು ಆಸ್ಪತ್ರೆ ಸಹಾಯಕ ನಿರ್ದೇಶಕರಾಗಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೇ ತಾಲ್ಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಾ ಕಚೇರಿ ಕೆಲಸವನ್ನೂ ಸಹ ಮಾಡುವಂತಹ ಪರಿಸ್ಥಿತಿ ಇದೆ.

ಕೊಟ್ಟೂರು ನೂತನ ತಾಲ್ಲೂಕು ಕೇಂದ್ರವೆಂದು ಘೋಷಣೆಯಾಗಿ ನಾಲ್ಕೈದು ವರ್ಷಗಳಾದರೂ ಹುದ್ದೆಗಳು ಭರ್ತಿಯಾಗಿರುವುದಿಲ್ಲ . ಗ್ರೂಪ್ ಡಿ ನೌಕರರ ಹುದ್ದೆ ಭರ್ತಿ ಆಗದಿದ್ದರೆ ಪ್ರಭಾರಿ ವೈದ್ಯರೇ ಆಸ್ಪತ್ರೆಯ ಬಾಗಿಲು ತೆರೆಯುವಂತ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.

ಒಂದು ವೇಳೆ ವೈದ್ಯರು ನೇಮಕಗೊಂಡರು ನಾಲ್ಕೈದು ಕಡೆ ಪ್ರಭಾರಿಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಭರಮಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಹೈದ್ರಾಬಾದ್-ಕರ್ನಾಟಕ ಅಡಿಯಲ್ಲಿ ನಿಯೋಜನೆಗೊಂಡ ಸಿಬ್ಬಂದಿಗಳು ಇಲ್ಲಿಯ ಸಿಬ್ಬಂದಿ ಕೊರತೆಯನ್ನು ಗಮನಿಸಿ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಸಿಬ್ಬಂದಿ ಕೊರತೆಗೆ ಕಾರಣವಾಗಿರಬಹುದು ಎಂದು ಮಂಜುನಾಥ ಹೇಳಿದರು.

ಹವಾಮಾನ ಬದಲಾದಂತೆ ಹೊಸ ಹೊಸ ರೋಗಗಳಿಗೆ ಬೆಲೆ ಬಾಳುವ ಜಾನುವಾರುಗಳು ತುತ್ತಾಗುತ್ತಿರುವುದರಿಂದ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದೆ ರೈತರು ಆತಂಕದಿಂದ ಕಾಲ ಕಳೆಯುವಂತಾಗಿದೆ ಎಂದು ಕೋಡಿಹಳ್ಳಿ ಗ್ರಾಮದ ರೈತ ಗುಡಿಯಾರ ಮರಿಯಣ್ಣ ನೋವಿನಿಂದ ಹೇಳುತ್ತಾರೆ.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಹಂತಹಂತವಾಗಿ ಜಂತುನಾಶಕ ಔಷಧಿ ಪೂರೈಕೆಯಾಗುವುದರಿಂದ ಎಲ್ಲಾ ಕುರಿಗಾರರಿಗೆ ಏಕಕಾಲಕ್ಕೆ ಔಷಧಿಗಳು ಲಭ್ಯವಾಗುತ್ತಿಲ್ಲ ಎಂದು ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮೂಕಪ್ರಾಣಿಗಳ ರೋದನವನ್ನು ಸರ್ಕಾರ ಗಮನಿಸಿ ಶೀಘ್ರವೇ ಸಿಬ್ಬಂದಿ ನೇಮಕ ಮಾಡಲು ಮುಂದಾಗಬೇಕೆಂಬುದು ತಾಲ್ಲೂಕಿನ ರೈತರ ಆಗ್ರಹವಾಗಿದೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here