ಕಲಬುರ್ಗಿ ಕ.ಕ.ರ.ಸಾ.ನಿಗಮದ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ

0
89

ಕಲಬುರಗಿ.ಆ.17 -75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ರವಿವಾರ ನಿಗಮದ ಅಧ್ಯಕ್ಷ ಹಾಗೂ ಸೇಡಂ ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ಜನಪರ ಹಾಗೂ ಜನಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಸಂಕಲ್ಪ ಹೊಂದಲಾಗಿದೆ. 2025ಕ್ಕೆ ಸಂಸ್ಥೆಯ ಬೆಳ್ಳಿಹಬ್ಬದ ಆಚರಣೆಯ ಹೊತ್ತಿಗೆ ದೇಶದಲ್ಲಿಯೇ ಈ ಸಂಸ್ಥೆಯನ್ನು ಅತ್ಯುತ್ತಮ ಮಾದರಿ ಸಾರಿಗೆ ಸಂಸ್ಥೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್.ಎಂ. ಅವರು ಮಾತನಾಡಿ, ಭಾರತ ದೇಶದ ಸ್ವಾತಂತ್ರ್ಯ ಪಡೆಯಲು ತ್ಯಾಗ ಬಲಿದಾನ ನೀಡಿದ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿದ ಅವರು ಇತ್ತೀಚೆಗೆ ಟೋಕಿಯೋ ಓಲಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕಗಳನ್ನು ತಂದು ದೇಶದ ಹೆಮ್ಮೆಗೆ ಕಾರಣರಾದ ಕ್ರೀಡಾಪಟುಗಳನ್ನು ಸಹ ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಜಯಂತಿಯ ಹಿನ್ನಲೆಯಲ್ಲಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಚುರ ಮಾಡಲು ಸಿದ್ಧಪಡಿಸಲಾಗಿರುವ ಡಿಜಿಟಲ್ ಡಿಸ್‍ಪ್ಲೆ ಬೋರ್ಡ್‍ನ್ನು ಸಹ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಅವರು ಉದ್ಘಾಟಿಸಿದಲ್ಲದೇ ಕೋವಿಡ್-19 ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕೇಂದ್ರ ಕಚೇರಿ ಆಡಳಿತ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಅತ್ಯುತ್ತಮ ಸೇವಾ ಪ್ರಮಾಣಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ ಜಿ. ತಡಕಲ್ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here