ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ: ತಹಶೀಲ್ದಾರ್ ಕೆಎಂ ಗುರುಬಸವರಾಜ್

0
245

ಸಂಡೂರು:ಡಿ:18:- ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ತಹಶೀಲ್ದಾರ್ ಕೆಎಂ ಗುರುಬಸವರಾಜ್ ಅವರು ತಿಳಿಸಿದರು.

ಅವರು‌ ತಾಲ್ಲೂಕಿನ ಕಮತೂರು ಗ್ರಾಮದಲ್ಲಿ‌ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ‌ಮಾತನಾಡಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಬಗ್ಗೆ 15 ದಿನಗಳ ಮುಂಚಿತವಾಗಿ ಕಮತೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಮಾಹಿತಿ ನೀಡಿ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಸ್ವೀಕಿಸಲಾಗಿತ್ತು ಎಂದರು.

ಕಂದಾಯ ಇಲಾಖೆಗೆ ಸಂಬಂಧಿಸದಂತೆ 34, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 01, ಸಮಾಜ ಕಲ್ಯಾಣ ಇಲಾಖೆ 01,ಅರಣ್ಯ ಇಲಾಖೆ 01,ಕಾರ್ಮಿಕ ಇಲಾಖೆ 47,ಲೋಕೋಪಯೋಗಿ ಇಲಾಖೆ 01,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 09, ಒಟ್ಟು 219 ಅರ್ಜಿಗಳನ್ನು ಸಾರ್ವಜನಿಕರು ನೀಡಿದ್ದಾರೆ ಎಂದರು

ಗ್ರಾಮಸ್ಥರೂ ಇಂದು ಸಹ ಮುಕ್ತವಾಗಿ ಶಾಲಾ ಕಟ್ಟಡ, ಬಸ್, ರಸ್ತೆ, ಆಸ್ಪತ್ರೆಗೆ ಯಾವುದೇ ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

ಕೇಂದ್ರ ಸರ್ಕಾರ ಎ.ಪಿ.ಎಲ್, ಬಿ.ಪಿ‌ ಎಲ್ ಕಾಡ್೯ದಾರರಿಗೆ ಆರೋಗ್ಯ ಸೇವೆ ಒದಗಿಸಲು ಆಯುಷ್ಮಾನ ಆರೋಗ್ಯ ಕಾಡ್೯ ನೀಡುತ್ತಿದೆ. ಇದು ಉತ್ತಮ ಯೋಜನೆಯಾಗಿದ್ದು ಕಾಡ್೯ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲರೂ ಆಯುಷ್ಮಾನ ಕಾಡ್೯ಗೆ ನಿಗದಿತ ದಾಖಲಾತಿ ನೀಡಿ ಪಡೆದುಕೊಳ್ಳಲು ಸಲಹೆ ನೀಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರರ ಪಟ್ಟಿ ಪ್ರಕಟಿಸಿ, ಹೆಸರು ಸೇರ್ಪಡೆ, ಕೈಬಿಡಲು, ಸ್ಥಳಂತರ ಕುರಿತಂತೆ ಅರ್ಜಿ ಸ್ವೀಕರಿಸಲಾಗಿದೆ. ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮತದಾನ ಮಾಡಬಹುದು. ಚುನವಣಾ ಗುರುತಿನ ಚೀಟಿ ಇದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತ್ರಿ ಮಾಡಿಕೊಳ್ಳಿ ಎಂದರು.

ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದೆ, ಜನರು ನಿತ್ಯ ಭಯದಲ್ಲಿ ಬದುಕಿದ್ದಾರೆ. ಸಣ್ಣ ಪುಟ್ಟ ಡಬ್ಬಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. 100 ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಯೋಜನೆಯಡಿ ಮನೆಗಳು ಸಿಕ್ಕಿಲ್ಲ. ಗ್ರಾಮದ ಶುದ್ಧ ಕುಡಿವ ನೀರಿನ ಘಟಕ ಕೆಟ್ಟಿದೆ. ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ, ಸ್ಮಯೋರ್ ಗಣಿ ಸಂಸ್ಥೆಯವರು ಸಿಎಸ್‌ಆರ್ ಅಡಿ ನಿರೀಕ್ಷಿತ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಗ್ರಾಮದಿಂದ ತೊಣಸಿಗೆರೆ ಮಾರ್ಗದಲ್ಲಿ ರಸ್ತೆ ನಿರ್ಮಿಸಬೇಕು. ಬೀದಿ ದೀಪ, ಚರಂಡಿ
ಅವ್ಯವಸ್ಥೆಯಿದೆ. ಇದೆಲ್ಲವನ್ನೂ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಚಿರತೆಗಳ ಸೆರೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಅಕ್ರಮ ಮದ್ಯ ಮಾರಾಟ ತಡೆ ಕುರಿತು ಅಬಕಾರಿ ಅಧಿಕಾರಿಗಳಿಗೆ ತಹಸೀಲ್ದಾರ್ ಆದೇಶ ನೀಡಿದರು.

ನೋಟಿಸ್ ಜಾರಿ

ಶಾಸಕರು ಸೇರಿದಂತೆ ಮಾಧ್ಯಮದವರಿಗೆ ಗ್ರಾಮ ವಾಸ್ತವ್ಯ ಸಭೆಯ ಕುರಿತು ಮಾಹಿತಿ ನೀಡದ ಸಿರಸ್ತೆದಾರ್‌ ರುದ್ರಪ್ಪ, ಗುಮಾಸ್ತ ಅಂಬರೀಶ ಎಂಬುವವರಿಗೆ ಮಾಹಿತಿ ರವಾನಿಸುವಲ್ಲಿ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ವಹಿಸಲಾಗಿದ್ದು, ಈ ಕುರಿತು ಸ್ಪಷ್ಟಿಕರಣ ನೀಡಿ ಎಂದು ನೋಟಿಸ್ ಜಾರಿ ಮಾಡಲಾಗಿದೆ ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ತಿಳಿಸಿದರು.

ಈ ಸಂದರ್ಭದಲ್ಲಿ ಚುನಾಯಿತ ಜನ ಪ್ರತಿನಿಧಿಗಳು, ತಾಲೂಕು ಮಟ್ಟದ ಹಲವು ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಇದ್ದರು. ಹಾಗೇ ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭೀಣಿ ಸ್ತ್ರೀಯರಿಗೆ ಶೀಮಂತ, ಹೆಣ್ಣು ಮಕ್ಕಳಿಗೆ ಎಸ್.ಎಸ್.ವೈ ಕಾಡ್೯, ಕಾರ್ಮಿಕ ಇಲಾಖೆ ವತಿಯಿಂದ ಈ ಶ್ರಮ್ ಕಾಡ್೯, ಸ್ವಸಕಾಯ ಮಹಿಳಾ ಸಂಘಗಳಿಗೆ ಚೆಕ್ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here