ಗೋಬರ್ ಧನ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುಮೋದನೆ.

0
51

ಜಿಲ್ಲೆಯಲ್ಲಿ ನೀರು ಮತ್ತು ನೈರ್ಮಲ್ಯದ ವಿಷಯದಲ್ಲಿ ಮಹತ್ವದ ಹೆಜ್ಜೆಗಳನ್ನಿಡಲು ಯೋಜಿಸಲಾಗಿದ್ದು, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮಲ ತ್ಯಾಜ್ಯ ನಿರ್ವಹಣಾ ಘಟಕ, ಗೋಬರ್ ಧನ್ ಮತ್ತು ಎಂ.ಆರ್.ಎಫ್. ಘಟಕಗಳ ಯೋಜನೆಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ‌ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರು ಮತ್ತು ನೈರ್ಮಲ್ಯ ಸಮಿತಿಯಲ್ಲಿ ಅನುಮೋದನೆ ನೀಡಲಾಯಿತು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ವ್ಯಾಪ್ತಿಯಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ, ನಾಗಮಂಗಲ ಚುಂಚನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದಿ ಚುಂಚನಗಿರಿಯಲ್ಲಿ ಗೋಬರ್ ಧನ್ ಘಟಕ ಮತ್ತು ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಂ.ಆರ್.ಎಫ್, (ತ್ಯಾಜ್ಯ ನಿರ್ವಹಣಾ ಘಟಕ) ಘಟಕವನ್ನು ನಿರ್ಮಾಣ ಮಾಡಲು ಸಮಿತಿ ಅನುಮೋದನೆ ನೀಡಿತು.

ಜಲ ಜೀವನ ಮಿಷನ್ ಯೋಜನೆಯಡಿ ಜಿಲ್ಲೆ ಎಲ್ಲಾ ಗ್ರಾಮ ಮತ್ತು ಜನವಸತಿಗಳಲ್ಲಿನ ನಲ್ಲಿ ಸಂಪರ್ಕ ಹೊಂದಿಲ್ಲದ ಎಲ್ಲಾ ಕುಟುಂಬಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲು ಸಿದ್ದಪಡಿಸಲಾಗಿರುವ ಯೋಜನೆಯು ಸುಸ್ಥಿರವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಸುಸ್ಥಿರ ಯೋಜನೆ ಅನ್ನು ಸಿದ್ದಪಡಿಸಿ ಸಲ್ಲಿಸಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ 1984 ಗ್ರಾಮ/ಜನವಸತಿಗಳಲ್ಲಿಯೂ ಕೂಡ ಜಲ ಜೀವನ ಮಿಷನ್ ಯೋಜನೆಯನ್ನು ವಿವಿಧ ಹಂತಗಳಲ್ಲಿ ತೆಗೆದುಕೊಂಡು ಅನುಷ್ಟಾನಗೊಳಿಸಲಾಗುತ್ತಿರುವ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ: ಧನಂಜಯ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here