ಟೋಮೆಟೊ ಬೆಳೆಯ ಕ್ಷೇತ್ರೋತ್ಸವ ಮತ್ತು ಪ್ರಾತ್ಯಕ್ಷತೆ

0
47

ಧಾರವಾಡ: ಡಿ.22: ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಅಡಿಯಲ್ಲಿ ನಿನ್ನೆ ದಿನ (ಡಿ.21) ರಂದು ಕುಂಬಾಪುರದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಟೋಮೆಟೊ ಬೆಳೆಯಲ್ಲಿ ಕ್ಷೇತ್ರೋತ್ಸವ ಮತ್ತು ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು.

ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯಲ್ಲಿ ಶಿಫಾರಸ್ಸು ಮಾಡಿದ ಪದ್ದತಿ ಮತ್ತು ರೈತರ ಪದ್ದತಿಯಿಂದ ಬೆಳೆದ ಟೊಮೆಟೊ ಬೆಳೆಯನ್ನು ವೈಜ್ಞಾನಿಕವಾಗಿ ಮೌಲೀಕರಣ ಮಾಡಲಾಗುತ್ತಿದ್ದು, ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಟೋಮೆಟೊ ಬೆಳೆಯ ಕ್ಷೇತ್ರವನ್ನು ವೀಕ್ಷಿಸಿದ ರೈತರು ಹರ್ಷ ವ್ಯಕ್ತಪಡಿಸಿದರು.

ಪ್ರಾತ್ಯಕ್ಷತೆಯನ್ನು ನೈಸರ್ಗಿಕ ಕ್ಷೇತ್ರದ ಟೊಮೆಟೊ ಬೆಳೆಯ ಪೂಜೆ ನೆರವೇರಿಸುವ ಮೂಲಕ ಪ್ರಾರಂಭಿಸಲಾಯಿತು. ಪ್ರಾತ್ಯಕ್ಷತೆಯನ್ನು ಹಿರೇಗುಂಜಾಳದ ಪ್ರಗತಿಪರ ನೈಸರ್ಗಿಕ ಕೃಷಿಕ ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ ಅವರು ಉದ್ಘಾಟಿಸಿದರು.

ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಮುಖ್ಯಸ್ಥ ಡಾ. ಆನಂದ ಬ. ಮಾಸ್ತಿಹೊಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೈಸರ್ಗಿಕ ಕೃಷಿ ಯೋಜನೆ ಅಳವಡಿಕೆ ಮತ್ತು ರೈತರು ಅವಶ್ಯಕವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿದರು ಹಾಗೂ ಮಣ್ಣಿನ ಫಲವತ್ತತೆ ಮತ್ತು ಸೂಕ್ಷ್ಮಜೀವಿಗಳ ಮಹತ್ವವನ್ನು ರೈತರಿಗೆ ತಿಳಿಸಿದರು ಹಾಗೂ ನೈಸರ್ಗಿಕ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಾತ್ಯಕ್ಷತೆಯನ್ನು ಉದ್ಘಾಟಿಸಿದ ಪ್ರಗತಿಪರ ನೈಸರ್ಗಿಕ ಕೃಷಿಕ ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ ಮಾತನಾಡಿ, ನೈಸರ್ಗಿಕ ಕೃಷಿಯ ಒಂದು ಭಾಗವಾದ ಘನಜೀವಾಮೃತ ಬಗ್ಗೆ ಸವಿಸ್ತಾರವಾಗಿ ಮತ್ತು ರೈತರಿಗೆ ಪ್ರಾತ್ಯಕ್ಷತೆಯನ್ನು ಮಾಡಿ ತೋರಿಸಿದರು ಹಾಗೂ ರೈತರು ಯಾವದೇ ಕೃಷಿ ಪರಿಕರಗಳನ್ನು ಕೊಂಡ ತರದೇ ತಮ್ಮ ಕ್ಷೇತ್ರದಲ್ಲಿ ಎಲ್ಲಾ ಪರಿಕರಗಳನ್ನು ತಯಾರಿಸಿಕೊಂಡು ಬಳಸಬೇಕೆಂದು ಹಾಗೂ ಎಲ್ಲದಕ್ಕೂ ಪರಾವಲಂಬಿಯಾಗದೆ ಸ್ವಾವಲಂಬಿಯಾಗಬೇಕೆಂದು ಹೇಳಿದರು.

ಪ್ರಗತಿಪರ ಸಾವಯವ ಮತ್ತು ಅರಣ್ಯ ಕೃಷಿಕ ಆರ್.ಜಿ. ತಿಮ್ಮಪೂರ ಮಾತನಾಡಿ, ಸಾವಯವ ಹಾಗೂ ಅರಣ್ಯದ ಮಹತ್ವ ಮತ್ತು ನೈಸರ್ಗಿಕ ಕೃಷಿಯ ಮೂಲಕ ವಿಷಮುಕ್ತ ಆಹಾರ ಉತ್ಪಾದನೆಯಲ್ಲಿ ತಮ್ಮ ಅನಭವಗಳನ್ನು ಇತರ ರೈತರೊಂದಿಗೆ ಹಂಚಿಕೊಂಡರು ಮತ್ತು ಅರಣ್ಯದಲ್ಲಿರುವ ಹಕ್ಕಿ-ಪಕ್ಷಿಗಳು ಮತ್ತು ಪ್ರಾಣಿಗಳ ಬಗ್ಗೆ ಚರ್ಚಿಸಿದರು.

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಪ್ರಾಧ್ಯಾಪಕ ಡಾ. ಜೆ.ಬಿ. ಗೋಪಾಲಿ ಅವರು ನೈಸರ್ಗಿಕ ಕೃಷಿಯಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳು ಬಗ್ಗೆ ರೈತರೊಂದಿಗೆ ಸಮಾಲೋಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹ ಸಂಶೋಧಕ ಡಾ. ಶಾಂತಪ್ಪ ತಿರಕಣ್ಣನವರ ಅವರು ಮಾತನಾಡಿ, ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಮತ್ತು ಅದರಿಂದಾಗುವ ಮಾನವನ ಆರೋಗ್ಯದ ಮಹತ್ವವನ್ನು ಹೇಳಿದರು.

ನೈಸರ್ಗಿಕ ಕೃಷಿಯಲ್ಲಿ ಬಳಸಲಾಗುವ ಪರಿಕರಗಳಾದ ಬೀಜಾಮೃತ, ಜೀವಾಮೃತ, ಘನಜೀವಾಮೃತ, ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ, ದಶಪರಣಿ ಮುಂತಾದವುಗಳ ತಯಾರಿಕೆ ಬಗ್ಗೆ ರೈತರಿಗೆ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ರೈತರೊಂದಿಗೆ ನೈಸರ್ಗಿಕ ಮತ್ತು ಸಾವಯವ ಕೃಷಿ ಬಗ್ಗೆ ವಿಜ್ಞಾನಿಗಳು ಸಮಾಲೋಚಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 100 ಜನ ರೈತರು ಪಾಲ್ಗೊಂಡಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಈ ಕಾರ್ಯಕ್ರಮವನ್ನು ಸಹಾಯಕ ಸಂಶೋಧಕಿ ಡಾ. ಶೃತಿ ಗೊಂಡಿ, ನಿರೂಪಿಸಿದರು. ಪ್ರಾದ್ಯಾಪಕ ಡಾ. ಲಕ್ಷ್ಮಣ ಕುಕನೂರ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಡಾ. ಅರುಣ ಭಾವಿದೊಡ್ಡಿ ವಂದಿಸಿದರು.

LEAVE A REPLY

Please enter your comment!
Please enter your name here