ಬಳ್ಳಾರಿ ಉತ್ಸವ ಪೂರ್ವ ಸಿದ್ಧತಾ ಸಭೆ ; ಉತ್ಸವಕ್ಕೆ ಕೆಲವೇ ದಿನಗಳು ಬಾಕಿ, ಉಪ ಸಮಿತಿಗಳಿಂದ ಅಂತಿಮ ಹಂತದ ಎಲ್ಲಾ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಸೂಚನೆ

0
48

ಬಳ್ಳಾರಿ,ಜ.13: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಳ್ಳಾರಿ ಉತ್ಸವ ನಡೆಸಲಾಗುತ್ತಿದ್ದು, ಉತ್ಸವಕ್ಕೆ ಕೆಲವೇ ದಿನಗಳು ಬಾಕಿಯಿದ್ದು ವಿವಿಧ ಉಪ ಸಮಿತಿಗಳಿಗೆ ವಹಿಸಿದ ಕೆಲಸಗಳು ಭರದಿಂದ ಸಾಗುತ್ತಿವೆ. ಆದರೂ ಸಹ ಅಂತಿಮ ಹಂತದ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಉತ್ಸವ ಅಚರಣಾ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಉತ್ಸವದ ಉಪಸಮಿತಿಗಳ ಪೂರ್ವ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊದಲ ಬಾರಿಯ ಜಿಲ್ಲಾ ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮ ಆಯೋಜನೆ ಸಂಬಂಧಿಸಿದಂತೆ ಆಯಾ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ಎಲ್ಲಾ ಹಂತದ ಕೆಲಸಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ಅಂತಿಮ ಹಂತದ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಉತ್ಸವದಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಚಾರ ಕೈಗೊಳ್ಳಬೇಕು ಎಂದರು.

ಉತ್ಸವದಲ್ಲಿ ಮ್ಯಾರಾಥಾನ್ ಓಟ, ವಸಂತ ವೈಭವ, ಬೈಕ್ ಸ್ಟಂಟ್, ಸಿರಿಧಾನ್ಯ ನಡಿಗೆ ಸೇರಿದಂತೆ ಬೃಹತ್ ಮೆರವಣಿಗೆಗಳು ನಡೆಯಲಿವೆ. ಇದರಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮಗಳ ಪಟ್ಟಿ; ಜ.18 ರಂದು ಬೆಳಗ್ಗೆ 7 ಕ್ಕೆ ಸಂಗನಕಲ್ಲು ಗ್ರಾಮದಿಂದ ಮೋಕಾ ಗ್ರಾಮದವರೆಗೆ ಮ್ಯಾರಾಥನ್ ಓಟ ನಡೆಯಲಿದೆ. ಬೆಳಗ್ಗೆ 11 ಕ್ಕೆ ಕೊಳಗಲ್ ವಿಮಾನ ನಿಲ್ದಾಣದಲ್ಲಿ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ.
ಜ.19 ರಂದು ಮಧ್ಯಾಹ್ನ 3 ಕ್ಕೆ ಕೃಷಿ ಮಾರುಕಟ್ಟೆ (ಎಪಿಎಂಸಿ)ಯಿಂದ ಮುನಿಸಿಪಲ್ ಮೈದಾನದವರೆಗೆ ಎತ್ತಿನಗಾಡಿ ಉತ್ಸವದೊಂದಿಗೆ ರೈತ ಹಬ್ಬ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ (ಮೋತಿ ಸರ್ಕಲ್) ದೀಪಾಲಂಕಾರ ಉದ್ಘಾಟನೆ ಕಾರ್ಯಕ್ರಮವಿದೆ. ಹಾಗೂ ಜ.19 ರಿಂದ 23 ರವರೆಗೆ ಬೆಳಗ್ಗೆ 10 ರಿಂದ ಕೊಳಗಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಬೈಸ್ಕೈ ಹೆಲಿಕ್ಯಾಪ್ಟರ್ ಹರಾಟ ಇರಲಿದೆ.
ಜ.20 ರಂದು ಬೆಳಗ್ಗೆ 11 ಕ್ಕೆ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಮೆಹಂದಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ ನಡೆಯಲಿದ್ದು, ಸಂಜೆ 4ಕ್ಕೆ ವಿಮ್ಸ್ ಮೈದಾನದಿಂದ ಎಸ್‍ಪಿ ಸರ್ಕಲ್, ಮೋತಿ ಸರ್ಕಲ್, ರಾಯಲ್ ಸರ್ಕಲ್ ಮೂಲಕ ಮುನಿಸಿಪಲ್ ಮೈದಾನದವರೆಗೆ ವಸಂತ ವೈಭವ ಮೆರವಣಿಗೆ ನಡೆಯಲಿದ್ದು ಈ ವೇಳೆ ನೂರಾರು ಕಲಾತಂಡಗಳು ಭಾಗವಹಿಸಲಿವೆ.

ಜ.21 ರಂದು ಬೆಳಗ್ಗೆ 8 ಕ್ಕೆ ನಗರದ ಕೋಟೆ ಆವರಣದಲ್ಲಿ ಸಾಹಸ ಕ್ರೀಡೆಗಳು, ರಾಕ್ ಕ್ಲೈಂಬಿಂಗ್, ಹಾರ್ಸ್ ಜಂಪಿಂಗ್, ಬೈಕ್ ಸ್ಟಂಟ್ಸ್ ಇರಲಿವೆ. ಬೆಳಗ್ಗೆ 9 ಕ್ಕೆ ಜಿಲ್ಲಾ ಕ್ರೀಡಾಂಗಣ, ಮುನಿಸಿಪಲ್ ಕಾಲೇಜು ಮೈದಾನ ಹಾಗೂ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮರಳು ಶಿಲ್ಪಕಲೆ ಉತ್ಸವ ಆಯೋಜಿಸಲಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಜ.21 ರ ಬೆಳಗ್ಗೆ 10 ಕ್ಕೆ ಗುಂಡು ಎತ್ತುವ ಸ್ಪರ್ಧೆ, ಕಬ್ಬಡ್ಡಿ, ಕುಸ್ತಿ ಕ್ರೀಡೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಮತ್ಸ್ಯ ಮೇಳ, 11ಕ್ಕೆ ಫಲ ಪುಷ್ಪ ಪ್ರದರ್ಶನ ಹಾಗೂ ಬೆಳಗ್ಗೆ 11.30ಕ್ಕೆ ಆಹಾರಮೇಳ ನಡೆಯಲಿದೆ.
ಜ.22 ರಂದು ಬೆಳಗ್ಗೆ 10 ಕ್ಕೆ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಶ್ವಾನ ಪ್ರದರ್ಶನ ಇರಲಿದ್ದು ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಇರಲಿದ್ದು ರೂ.20 ಕೋಟಿ ಮೌಲ್ಯವುಳ್ಳ ವಿಶೇಷವಾದ ಶ್ವಾನಗಳ ಪ್ರದರ್ಶನ ಇರಲಿದೆ. ಎರಡೂ ದಿನಗಳು ಮುನಿಸಿಪಲ್ ಮೈದಾನದಲ್ಲಿ ಖ್ಯಾತ ಸಂಗೀತಗಾರರಿಂದ ವಿವಿಧ ಸಂಗೀತ ಕಾರ್ಯಕ್ರಮಗಳು ಉತ್ಸವದಲ್ಲಿ ಇರಲಿವೆ.

ಸಭೆಯಲ್ಲಿ ಜಿಪಂ ಸಿಇಒ ಜಿ.ಲಿಂಗಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಸಹಾಯಕ ಆಯುಕ್ತರಾದ ಹೇಮಂತ್.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ, ಎಡಿಸಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

LEAVE A REPLY

Please enter your comment!
Please enter your name here