ಅಭಿವೃದ್ಧಿ ಕಾಣದ ಗ್ರಾಮ ಪಂಚಾಯಿತಿಗಳು ; ನಿರ್ಲಕ್ಷ್ಯ ವಹಿಸಿರುವ ಜನಪ್ರತಿನಿಧಿಗಳು, ತಾಲ್ಲೂಕು ಘೋಷಣೆಯಾಗಿ ನಾಲ್ಕು ವರ್ಷಗಳು ಅಭಿವೃದ್ಧಿ ಕಾಣದ ಕೊಟ್ಟೂರು..!

0
302

ಕೊಟ್ಟೂರು ತಾಲ್ಲೂಕು ಘೋಷಣೆಯಾಗಿ ನಾಲ್ಕು ವರ್ಷಗಳು ಕಳೆದರೂ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಯಿಂದ ಹಿಂದೆ ಸರಿದಿರುವುದು ವಾಸ್ತವದ ಸಂಗತಿಯಾಗಿದೆ. ಎಲ್ಲಿ ನೋಡಿದರೂ ಬರೀ ಭಾಷಣ ಮಾಡುವ ಶಾಸಕರು, ಬಾಯಿಮಾತಿನ ಅಭಿವೃದ್ಧಿಯನ್ನಷ್ಟೇ ಸಾಧಿಸಿದ್ದಾರೆ ಹೊರತು ಅಭಿವೃದ್ಧಿಯಲ್ಲಿ ಯಾವುದೇ ಸಾಧನೆ ಮಾಡಿಲ್ಲದೇ ಇರುವುದು ಕೊಟ್ಟೂರು ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಪಟ್ಟಣದ ಎಲ್ಲ ರಸ್ತೆಗಳೂ ಗುಂಡಿ ಬಿದ್ದಿದ್ದು, ಪ್ರತಿದಿನ ಎಲ್ಲಾದರೂ ಒಂದು ಕಡೆ ಅಪಘಾತ ಸಂಭವಿಸುವುದು ನಿರಂತರವಾಗಿಬಿಟ್ಟಿದೆ. ಇದರ ಬಗ್ಗೆ ಯಾರೂ ಸಹ ತಲೆ ಕೆಡಿಸಿಕೊಳ್ಳುವಷ್ಟು ತಾಳ್ಮೆ ಇಲ್ಲದಂತಾಗಿದೆ. ಆದರೆ ಸ್ಥಳೀಯ ಶಾಸಕರು ಗುರುವಾರ ಮಾತನಾಡುತ್ತಾ, ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ರಾಮ ಪಂಚಾಯಿತಿ ದೂರದೃಷ್ಟಿಯ ಯೋಜನೆಗಳನ್ನು ಒಮ್ಮತದಿಂದ ಪಾರದರ್ಶಕವಾಗಿ ಅನುಷ್ಠಾನಗೊಳಿಸಿದರೆ ಇಡೀ ರಾಜ್ಯದಲ್ಲಿಯೇ ಹಗರಿಬೊಮ್ಮನಹಳ್ಳಿ ಕ್ಷೇತ್ರ ಮಾದರಿ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಗುರುವಾರ ಶಾಸಕ ಭೀಮಾನಾಯ್ಕ ಅಭಿಪ್ರಾಯ ಪಟ್ಟರು.

ರಸ್ತೆಯ ಗುಂಡಿಗಳ ಬಗ್ಗೆ ಕೇಳಿದರೆ, ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ವಿನಃ ಕಾರ್ಯರೂಪಕ್ಕೆ ಒಂದೂ ಸಹ ಬಂದಿರದೇ ಇರುವುದು ವಿಪರ್ಯಾಸ. ಸರ್ಕಾರದ ಇನ್ನೂ ಅನೇಕ ಇಲಾಖೆಗಳ ತಾಲ್ಲೂಕು ಕಛೇರಿಗಳು ಆರಂಭವಾಗದೇ ಇರುವುದು ಇವರ ಅಭಿವೃದ್ಧಿಗೆ ಸಾಕ್ಷಿಯಾದಂತಿದೆ. ಇತ್ತೀಚೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಕೊಟ್ಟೂರು ತಾಲ್ಲೂಕಿನ ಪಶು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ತಾಲ್ಲೂಕಿಗೆ ನಿಂಬಳಗೆರೆ, ಕೋಗಳಿ, ತೂಲಹಳ್ಳಿ, ಉಜ್ಜಿನಿ, ರಾಂಪುರ ಒಟ್ಟು ಐದು ಕೇಂದ್ರಗಳಿಗೆ ಒಟ್ಟು ೨೯ ವೈದ್ಯರು ಬೇಕಾಗಿದ್ದು, ಬರೀ ಒಬ್ಬ ವೈದ್ಯರು ಮಾತ್ರ ಹೆಚ್ಚುವರಿ ಪ್ರಭಾರಿಯಾಗಿ ನಿಂಬಳಗೆರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಾನುವಾರುಗಳ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದು, ಇರುವ ಒಬ್ಬರೇ ವೈದ್ಯರು ಏನು ಮಾಡಲು ಸಾಧ್ಯ? ಇದರ ಬಗ್ಗೆ ಸರ್ಕಾರಕ್ಕಾಗಲಿ, ಸ್ಥಳೀಯ ಶಾಸಕರಿಗಾಗಲೀ ಯಾವುದೇ ಗಮನ ಹರಿಸದೇ ಇರುವುದು ಯಾವ ನ್ಯಾಯ? ಸರ್ಕಾರ, ಸ್ಥಳೀಯ ಶಾಸಕರು ಅಭಿವೃದ್ಧಿಯ ಭಾಷಣ ಮಾಡುವುದನ್ನು ನಿಲ್ಲಿಸಿ, ಯೋಜನೆಗಳ ಅನುಷ್ಠಾನಕ್ಕೆ ತರಬೇಕೆಂದು ಸಾರ್ವಜನಿಕರಾದ ಎಂ.ಶ್ರೀನಿವಾಸ್ ಕರವೇ ಅಧ್ಯಕ್ಷರು, ಮಂಜುನಾಥ ಭಜಂತ್ರಿ ಕುಳವ ಸಂಘದ ಅಧ್ಯಕ್ಷ, ರೈತ ಮುಖಂಡ ಮಂಜುನಾಥ, ರಮೇಶ, ರೇಣುಕಮ್ಮ ಆಗ್ರಹಿಸಿದ್ದಾರೆ.

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ರೋಗ ಹರಡುವ ಭೀತಿ ಹೆಚ್ಚಾಗಿದ್ದು, ನಮ್ಮಗಳ ಆತಂಕ ಮುಗಿಲೆತ್ತರಕ್ಕೇರಿದೆ. ಆದರೆ ಸರ್ಕಾರ, ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದರಿಂದ ಯಾರನ್ನು ದೂರುವುದೆಂದೇ ತಿಳಿಯುತ್ತಿಲ್ಲ. ಚುನಾವಣೆ ಬಂದಾಗ ಕೈ, ಕಾಲು ಮುಗಿದು ಐದು ವರ್ಷಕ್ಕೊಮ್ಮೆ ಮಾತ್ರ ಮನೆಗೆ ಬಂದು ಹೆಗಲ ಮೇಲೆ ಕೈ ಹಾಕಿ ಕುಶಲೋಪರಿ ವಿಚಾರಿಸುವ ಜನಪ್ರತಿನಿಧಿಗಳು ತಾವು ಗೆದ್ದ ಮೇಲೆ ಹತ್ತಿದ ಏಣಿಯನ್ನು ನಿರ್ಲಕ್ಷಿಸುವ ಧೋರಣೆ ಎಷ್ಟು ಸರಿ?
-ಕೊಟ್ರೇಶಪ್ಪ
ರೈತ, ಹರಾಳು

ವರದಿ:-ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here