ವಿಎಸ್‍ಕೆ ವಿವಿಯಲ್ಲಿ ನೂತನ ಕೋರ್ಸ್‍ಗಳ ಉದ್ಘಾಟನಾ ಸಮಾರಂಭ

0
104

ಬಳ್ಳಾರಿ,ಮಾ.9: ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಹುಶಿಸ್ತೀನ ಅಧ್ಯಯನ ಮತ್ತು ಸಂಶೋಧನಾ ಮಾರ್ಗಗಳಿಂದ ಪ್ರಯತ್ನಪಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದೇ ಮಾದರಿ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಜೋಶಿ ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭವಾಗಿರುವ ಎಂ.ಸಿ.ಎ ಮತ್ತು ಪಿಜಿ ಡಿಪ್ಲೋಮಾ ಇನ್ ಯೋಗ ವಿಭಾಗಗಳ ಉದ್ಘಾಟನೆಯನ್ನು ಗುರುವಾರ ಜೀವ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಬದಲಾಗಿರುವ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳು ತಾಂತ್ರಿಕ ಮತ್ತು ಡಿಜಿಟಲ್ ಪರಿವರ್ತನೆಗಳನ್ನು ಹೊಂದುತ್ತಿವೆ. ಸದ್ಯ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜನ್ಸ್) ವಿಶ್ವದಾದ್ಯಂತ ಕ್ರಾಂತಿ ಎಬ್ಬಿಸಿದ್ದು, ಹಲವಾರು ಕ್ಷೇತ್ರಗಳಲ್ಲಿ ಮಾನವನ ಉದ್ಯೋಗಕ್ಕೆ ಕುತ್ತಾಗಿ ಪರಿಣಮಿಸಿವೆ. ಇದಕ್ಕೆ ಪರ್ಯಾಯವಾಗಿ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯ ಕುರಿತು ಪ್ರೇರಣಾತ್ಮಕವಾಗಿ ಮತ್ತು ಸ್ವ-ನಿಯಂತ್ರಣ ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಯುತ ಕಲಿಕೆಗೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಗತಿ ಸಾಧಿಸಿ ದೇಶಕ್ಕೆ ಹೆಮ್ಮೆಯಾಗಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿಯ ಸಾಧನಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರಾದ ಸಿ.ರೂಪಾ ಮುರಳಿಧರ್ ಮಾತನಾಡಿ, ಯೋಗವು ಒಂದು ವಿಜ್ಞಾನವಾಗಿದ್ದು, ಭೌತಿಕ, ಮಾನಸಿಕ, ಸಾಮಾಜಿಕ ತೊಳಲಾಟಗಳಿಂದ ಹೊರಬರಲು ಇದು ಸಹಕಾರಿಯಾಗಿದೆ. ಯೋಗವನ್ನು ಸಾಧನೆಗೆ ಸಾಧನವಾಗಿ ಶರೀರ ಬಳಸಿಕೊಂಡು, ಸುಖ ಹಾಗೂ ನೆಮ್ಮದಿಯುತ ಜೀವನ ನಿಮ್ಮದಾಗಿಸಿಕೊಳ್ಳಬಹುದು ಎಂದರು.
ವಿವಿಧ ಖಾಯಿಲೆಗಳಿಗೆ ಪರಿಹಾರ ಸೂತ್ರವಾಗಿ ಯೋಗದ ನಿರಂತರ ಅಭ್ಯಾಸದಿಂದ ಸಾಧ್ಯವಾಗುತ್ತದೆ. ಪ್ರಪಂಚಕ್ಕೆ ಯೋಗದ ಕೊಡುಗೆ ನೀಡಿರುವುದು ನಮ್ಮ ದೇಶದ ಸಂಸ್ಕøತಿಯಾಗಿದೆ. ಯೋಗ, ಧ್ಯಾನ, ನಿರಂತರ ಪರಿಶ್ರಮದಿಂದ ಬುದ್ಧಿ ವಿಕಾಸಗೊಂಡು ಗುರಿ ಸಾಧನೆಗೆ ಮಾರ್ಗದರ್ಶನ ದೊರೆಯುತ್ತದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಯನ ಪ್ರಾರಂಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಸ್ಟೆಷಲಿಸ್ಟ್ ಲರ್ನಿಂಗ್ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಬೆಂಗಳೂರಿನ ಸುದರ್ಶನ ಪಾಂಡುರಂಗ ಅವರು ಮಾತನಾಡಿ, ಎಂಸಿಎ ಕೋರ್ಸ್ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೋರ್ಸ್ ಹಾಗೂ ಯೋಗವು ಭೌತಿಕ ಅಭಿವೃದ್ಧಿಗೆ ಪೂರಕವಾದ ಕೋರ್ಸ್. ಎರಡು ಕೋರ್ಸ್‍ಗಳನ್ನು ಒಟ್ಟಿಗೆ ಆರಂಭಿಸಿರುವುದು ಶ್ಲಾಘನಾರ್ಹ ಎಂದು ಹೇಳಿದರು.
ನಂತರ ವಿಶೇಷವಾದ ತಾಂತ್ರಿಕ ಗೋಷ್ಠಿಯನ್ನು ವಿದ್ಯಾರ್ಥಿಗಳಿಗಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಪಿ ಆಲಗೂರ ಮಾತನಾಡಿ, ಕಲ್ಯಾಣ-ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳಲ್ಲಿ ಎಂಸಿಎ ಕೋರ್ಸ್ ಪ್ರಥಮವಾಗಿ ಆರಂಭಿಸಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿಯೇ ಎಂದು ತಿಳಿಸಿದರು.
ಪ್ರಥಮ ಪ್ರಯತ್ನದಲ್ಲೆ 50 ವಿದ್ಯಾರ್ಥಿಗಳು ಆಗಮಿಸಿರುವುದು ಈ ಭಾಗದಲ್ಲಿ ಕೋರ್ಸ್‍ಗೆ ಇರುವ ಬೇಡಿಕೆಗೆ ಕೈಗನ್ನಡಿಯಾಗಿದೆ. ವಿಶ್ವವಿದ್ಯಾಲಯ ಹಾಗೂ ಸಾಧನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಹಭಾಗಿತ್ವದಲ್ಲಿ ಬಳ್ಳಾರಿ ನಗರದಲ್ಲಿ ಯೋಗ ಕ್ಯಾಂಪಸ್ ತೆರೆಯಲು ಸಿದ್ಧವಿರುವುದಾಗಿ ಕುಲಪತಿಗಳು ತಿಳಿಸಿದರು.
ನೂತನವಾಗಿ ಆರಂಭವಾಗಿರುವ ಎಂಸಿಎ ಕೋರ್ಸ್ ಮತ್ತು ಇನ್ಫೋಸಿಸ್ ಫೌಂಡೇಷನ್ ಜೊತೆಗೆ ಒಡಂಬಡಿಕೆಯನ್ನು ಶೀಘ್ರದಲ್ಲೇ ಮಾಡಿಕೊಳ್ಳುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಜಯಪ್ರಕಾಶ್ ಗೌಡ, ಕುಲಸಚಿವರಾದ ಪ್ರೊ. ಎಸ್‍ಸಿ ಪಾಟೀಲ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಹನುಮೇಶ್ ವೈದ್ಯ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಸಾಹೇಬ್ ಅಲಿ, ಪೂರ್ಣಿಮಾ, ಡಾ.ಶಶಿಧರ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here