ಜೋಕುಮಾರ ಬಂದನವ್ವ ಬಾಗಲಾಗ, ನನ್ನ ಕಂದಾಗ ಬೆಣ್ಣೆ ಕೊಡಿರವ್ವ

0
446

ವಿಶೇಷವರದಿ
ಶಿವರಾಜ್ ಕನ್ನಡಿಗ
ಕೊಟ್ಟೂರು:ಸೆ:07:- ಗಂಗಾಮತಸ್ಥ ಬಾರಿಕರ ಮಹಿಳೆಯರ ಈ ಹಾಡು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪ್ರತಿಧ್ವನಿಸುತ್ತಿದೆ. ಜನಪದ ಹಾಡುತ್ತ ಪುಟ್ಟಿಯಲ್ಲಿ ಪ್ರತಿಸ್ಠಾಪಿತನಾದ ಜೋಕುಮಾರ ಮೂರ್ತಿಯನ್ನು ಒತ್ತ ಮಹಿಳೆಯರು ಹಳ್ಳಿ ಹಳ್ಳಿ ತುರುಗುತ್ತಿರುವ ದೃಶ್ಯ ಈಗ ಸಾಮನ್ಯವಾಗಿದೆ. ಮನೆಗಳ ಮುಂಬಾಗಿಲಲ್ಲಿ ನಿಂತು ಪದಗಳ ಹಾಡಿ ಕಾಳುಕಡಿ ಪಡೆಯುವ ಈ ಮಹಿಳೆಯರು ಜೋಕುಮಾರನನ್ನು ಹೊಗಳುವ ಪರಿ ವಿಶಿಷ್ಠ ಆ ಮೂಲಕ ಮನೆಯವರಿಗೆ ಶುಭ ಹಾರೈಸುವ ಪರಿಯೂ ಕೂಡ ಸೂಜಿಗ ಮೂಡಿಸುತ್ತಿದೆ.


ರೈತರು ನೀಡುವ ದವಸ, ಧಾನ್ಯಗಳನ್ನು ಪಡೆದು ಶುಭವಾಗಲೆಂದು ಜೋಕುಮಾರನ ಪ್ರಸಾದವಾದ ಬೇವಿನ ಎಲೆ ಕಾಡಿಗೆ (ಕಪ್ಪು) ನೀಡುತ್ತಾರೆ . ಅನಂತರ ಹುಣ್ಣಿಮೆಯೆಂದು ಈ ಕಾಡಿಗೆ ಮತ್ತು ಬೇವಿನ ಎಲೆಗಳನ್ನು ರೈತರು ತಾವು ಮಾಡಿದ ಜೊಳದ ನುಚ್ಚಿನ ಬಾನವನ್ನು ತಮ್ಮ ಹೊಲ ಗದ್ದೆಗಳಲ್ಲಿನ ಪೈರುಗಳಿಗೆ ಚರಗ ಚೆಲ್ಲುತ್ತಾರೆ. ಹೀಗೆ ಮಾಡಿದರೆ ಬೆಳೆಗಳು ಹುಲುಸಾಗಿ ಬೆಳೆದು ಕಾಳು ಕಡಿ ಮೈದುಂಬಿಕೊಳ್ಳುತ್ತವೆ ಎಂಬ ಪಾರಂಪರಿಕ ನಂಬಿಕೆ ರೈತವರ್ಗದ್ದು, “ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ನಮ್ಮ ಒಡ್ಡುಗಳೆಲ್ಲ ಹೈನಾಗಿ , ನನ್ನ ಕೊಮರ ನಿನ್ನ ಶೆಡ್ಡಿ ಮ್ಯಾಲೆ ಸಿರಿ ಬಂದು” ಎನ್ನುವ ಜೋಕುಮಾರ ಹಾಡು ರೈತರಿಗೆ ಜೋಕುಮಾರ ವರವಾಗುವ ಪರಿಯನ್ನು ತುಳಿಸುತ್ತದೆ.

ಜಿಲ್ಲೆಸೇರಿ ಉತ್ತರ ಕರ್ನಾಡಕದಲ್ಲಿ ಈ ಹಬ್ಬವನ್ನು ವಿಶಿಷ್ಠವಾಗಿಆಚರಣೆ ಮಾಡುತ್ತಾರೆ. ಗಂಗಾ ಮತಕ್ಕೆ ಸೇರಿದ ಮಹಿಳೆಯು ಜೋಕುಮಾರನ ಜನ್ಮ ವೃತ್ತಾಂತವನ್ನು ವರ್ಣಿಸುವ ಹಾಡುಗಳು ಹೇಳುವ ಮೂಲಕ ಜೋಕಪ್ಪನ ಹಾಡುಗಳ ಕಣಜವಾಗಿದ್ದಾರೆ.ಜೋಕಪ್ಪನ ವಂಶಜರಾದ ಕಬ್ಬೇರು , ಬಾರಿಕರು, ಅಂಬಿಗರು, ಸುಣ್ಣಗಾರರು, ಬೆಸ್ತರು, ಅಂಬಿಗ ವಂಶಸ್ಥರು ಪ್ರತಿವರ್ಷ ಜೋಕಪ್ಪನ ಆಚರಣೆ ಮಾಡುತ್ತಾ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಜೋಕಪ್ಪನನ್ನು ಇವರು ಹೊತ್ತು ಮೆರೆಸುತ್ತಾರೆ. ಬೆಸ್ತರ ಕುಲದಲ್ಲಿಯೇ ಜೋಕುಮಾರ ಜನಿಸಿದ ಎಂದು ಜಾನಪದ ಕಥನ ಕಾವ್ಯಗಳು ಸಾರುತ್ತಿದೆ.

ಅಷ್ಟಮಿ ದಿನ ಹುಟ್ಟಿದನಾ ನನ್ನ ಕೊಮರಾಮ, ಜೇಷ್ಠದೇವಿ ನಿನ್ನ ಮಗ ಜೋಕುಮಾರ ಎನ್ನುವ ಪದಗಳ ಸಾಲು ಜೋಕುಮಾರ ಅಷ್ಟಮಿ ದಿನದಂದು ಜೇಷ್ಠದೇವಿಗೆ ಜನಿಸಿದನೆಂದು ತಿಳಿಸುತ್ತದೆ. ಶ್ರೀಕೃಷ್ಣನಂತೆ ಜೋಕುಮಾರನು ಅಷ್ಟಮಿಯಂದೆ ಜನ್ಮ ತಾಳಲು ಇಚ್ಚಿಸಿ ಅಷ್ಟಮಿಯೆಂದೆ ಜನಿಸಿದನಂತೆ, ಕೃಷ್ಣನಂತೆ ಬೆಣ್ಣೆ ತಿನ್ನಲು ಇಚ್ಚಿಸಿ ಬೆಣ್ಣೆ ಮುಕ್ಕಿದನಂತೆ, ಕೃಷ್ಣನಂತೆಯೆ ಪುಂಡಾಟಿಕೆ ಭಂಡತನ ಪ್ರದರ್ಶಿಸುತ್ತಿದ್ದ ಅದು ಅತಿರೇಖವಾಗಿ ಸಾಮಾಜಿಕ ನಿಂದನೆಗೆ ಗುರಿಯಾಗುವ ಜೋಕುಮಾರಸ್ವಾಮಿ ಹುಟ್ಟಿದ 7ನೇ ದಿನವೇ ಮಡಿವಾಳರ ಮಹಿಳೆಯೊಬ್ಬರ ಕೈಯಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡು ಬೆನ್ನಮೂಳೆ ಮುರಿಸಿಕೊಂಡ. ಅಲ್ಲದೆ ಅನಂತನ ಹುಣ್ಣಿಮೆಯಂದು ಹರಿಜನ ವ್ಯಕ್ತಿಯೊಬ್ಬ ಬಂದು ಚಾಕುವಿನಿಂದ ಜೋಕುಮಾರನನ್ನು ಇರಿಯುತ್ತಾನೆ. ಅಲ್ಲಿಗೆ ಜೋಕಪ್ಪ ಸಾಯುತ್ತಾನೆ ಬಟ್ಟೆ ಒಗೆಯುವ ಬಂಡೆಯ ಕಲ್ಲಿನಡಿಯಲ್ಲಿಯೆ ಸಮಾದಿಯಾದ ಎಂದು ಜಾನಪದ ಕಥನ ಕಾವ್ಯ ಸಾರುತ್ತವೆ. ಅಂತೆಯೇ ಪುಂಡಾಟಿಕೆಗೆ ಹೆಸರಾದ ಜೋಕುಮಾರ ರೈತರ ಆರಾಧ್ಯ ದೈವವಾಗುವ ಮೂಲಕ ನಾಡಿನ ರೈತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದ್ದಾನೆ.
ಜೋಕುಮಾರನ ಹುಟ್ಟಿದ ಮತ್ತು ಸತ್ತ 7 ದಿನಗಳನ್ನು ಜೋಕುಮಾರನ ಅಳಲು ಎಂದು ಇಲ್ಲಿ ಕರೆಯುತ್ತಾರೆ. ಈ ದಿನಗಳು ಅಶುಭ ಎಂದು ಜನಪದ ನಂಬಿಕೆ ಈ ವೇಳೆ ಶುಭ ಕಾರ್ಯಗಳನ್ನು ವರ್ಜಿಸುತ್ತಾರೆ . ಹೊಸತಾಗಿ ಮದುವೆಯಾದ ಯುವತಿಯರು ಅತ್ತೆಯ ಮನೆಯಲ್ಲಿ ಜೋಕುಮಾರನ ಅಳಲಿನ ಸಂದರ್ಭದಲ್ಲಿ ಇರಬಾರದು ಎಂಬ ಪ್ರತೀತಿಯೂ ಇಲ್ಲಿದೆ.
ಕಳೆ ಮೂರು ದಿನಗಳಿಂದ ಜೋಕುಮಾರ ಸ್ವಾಮಿ ಆಚರಣೆ ಶುರುವಾಗಿದೆ ಅನಂತನ ಹುಣ್ಣಿಮೆಯಂದು ಅಂತ್ಯಗೊಳ್ಳುವ ಈ ಜೋಕಪ್ಪನ ಹಬ್ಬವನ್ನು ರೈತರು ಆಚರಿಸುತ್ತಾರೆ . ನಂತರ ಪೂಜೆಗೈದು ಜೋಕುಮಾರನ ಮೂರ್ತಿಯನ್ನು ಹಳ್ಳದಲ್ಲಿ ಅಗಸರು ಬಟ್ಟೆ ಒಗೆಯುವ ಬಂಡೆಯಡಿಯಲ್ಲಿ ಹೂಳುತ್ತಾರೆ.

ಅಜ್ಜ ಮುತ್ತಜ್ಜರ ಕಾಲದಿಂದಲೂ ಜೋಕುಮಾರಸ್ವಾಮಿ ಪದ ಹಾಡ್ತಾ ಬಂದೀವಿ ನಮ್ಮ ಹಿರಿಯುರು ಈ ಹಾಡುಗಳನ್ನು ಕಲಿಸ್ಯಾರ. ನಾವೂ ಮುಂದಿನ ಪೀಳಿಗೆಗೆ ಕಲಿಸ್ತೀವಿ. ಮೂರು ದಿನದಿಂದ ಹಬ್ಬ ಶುರುವಾಗೈತಿ ಸೋಮವಾರ ಜೋಕಮಾರನ ಹಬ್ಬ ಮುಗಿಯುತ್ತೆ ಎನ್ನುತ್ತಾರೆ ಗಂಗಾಮತ ಮಹಿಳೆಯರು.

LEAVE A REPLY

Please enter your comment!
Please enter your name here