ಮಹಿಳೆಯರ ಆರೋಗ್ಯ ಕಾಳಜಿಗಾಗಿ ಆಯುಷ್ಮತಿ ಕ್ಲಿನಿಕ್ ಆರಂಭ

0
77

ಬಳ್ಳಾರಿ,ಮಾ.27 : ಜಿಲ್ಲೆಯ ನಗರ ಪ್ರದೇಶದ ಕೊಳಚೆ ಪ್ರದೇಶಗಳ ವ್ಯಾಪ್ತಿಯ ಗರ್ಭಿಣಿ ತಾಯಂದಿರಿಗೆ ನುರಿತ ಪ್ರಸೂತಿ ತಜ್ಞರಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಮಹತ್ವಾಕಾಂಕ್ಷಿ ಯೋಜನೆಯಾಗಿ ಜಾರಿಗೆ ತಂದಿರುವ ಆಯುಷ್ಮತಿ ಕ್ಲಿನಿಕ್‍ಗಳು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಎರಡು ಕಡೆ ಸೋಮವಾರ ಚಾಲನೆಗೊಂಡಿವೆ.
ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯ ಇಬ್ರಾಹಿಂಬಾಬು ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಕಷ್ಟಪಟ್ಟು ದುಡಿದು ಜೀವನ ನಡೆಸುವ ಕೊಳಚೆ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯರ ಕಾಳಜಿಗಾಗಿ ಆರಂಭವಾದ ಈ ಯೋಜನೆಯು ಅತ್ಯಂತ ಸೂಕ್ತವಾಗಿದೆ ಎಂದರು.

ಸಾರ್ವಜನಿಕರು ತಮ್ಮ ಕುಟುಂಬ ಗರ್ಭಿಣಿ ಮಹಿಳೆಯರನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸುವ ಮೂಲಕ ಹೆರಿಗೆ ಅವಧಿಯಲ್ಲಿ ಯಾವುದೇ ತೊಡಕುಗಳಿಲ್ಲದಂತೆ ಚಿಕಿತ್ಸೆ ನೀಡುವ ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆಯಿರಿ ಎಂದು ತಿಳಿಸಿದರು.

ಕೌಲಬಜಾರ್ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಬಿ.ಮುಬೀನ್ ರವರು ಚಾಲನೆ ನೀಡಿ, ನೂರಾರು ರೂಪಾಯಿಗಳನ್ನು ಖರ್ಚು ಮಾಡಿ ಪ್ರಸೂತಿ ವೈದ್ಯರ ಬಳಿ ತಪಾಸಣೆಗೆ ತೆರಳಿ ಹಣ ಖರ್ಚು ಮಾಡಲಾಗುತ್ತಿತ್ತು. ಈ ಹಣ ಉಳಿಸಲು ಆಯುಷ್ಮತಿ ಕ್ಲಿನಿಕ್ ತುಂಬಾ ಸಹಾಯಕವಾಗುತ್ತದೆ ಎಂದರು.
ಬಡವರಿಗೆ ಸರ್ಕಾರದ ಆಯುಷ್ಮತಿ ಯೋಜನೆ ಸದುಪಯೋಗವಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿನ ಗರ್ಭಿಣಿ ಮಹಿಳೆಯರನ್ನು ಆಯುಷ್ಮತಿ ಕ್ಲಿನಿಕ್‍ನಲ್ಲಿ ಪರೀಕ್ಷೆ ಮಾಡಿಸುವ ಮೂಲಕ ತಾಯಿ ಮಗುವಿನ ಆರೋಗ್ಯಕ್ಕೆ ಗಮನ ನೀಡಲು ಮುಂದೆಬನ್ನಿ ಎಂದು ತಿಳಿಸಿದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್‍ಕುಮಾರ ಮಾತನಾಡಿ, ರಾಜ್ಯದಲ್ಲಿ ಒಟ್ಟು 95 ಆಯುಷ್ಮತಿ ಕ್ಲಿನಿಕ್‍ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು ವರ್ಚುವಲ್ ಮೂಲಕ ಬೆಂಗಳೂರಿನಿಂದ ಉದ್ಘಾಟನೆಯನ್ನು ಮಾಡಿರುತ್ತಾರೆ.
ಜಿಲ್ಲೆಯ ಎರಡು ಆಯುಷ್ಮತಿ ಕ್ಲಿನಿಕ್‍ಗಳನ್ನು ಸ್ಥಳೀಯ ಹಂತದಲ್ಲಿ ಸಂಬಂಧಿತ ವಾರ್ಡ್ ಸದಸ್ಯರು ಚಾಲನೆಗೊಳಿಸಿದ್ದಾರೆ. ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಪ್ರಾರಂಭಿಸಲಾಗುತ್ತಿದ್ದು, ಸ್ವಾಸ್ಥ್ಯ ಮಹಿಳೆಯರು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ಸೋಮವಾರ ಫಿಜಿಷಿಯನ್, ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ-ಶಸ್ತ್ರಚಿಕಿತ್ಸಾ ತಜ್ಞರು, ಗುರುವಾರ-ಮಕ್ಕಳ ತಜ್ಞರು, ಶುಕ್ರವಾರ-ಸ್ತ್ರೀರೋಗ ತಜ್ಞರು, ಶನಿವಾರ- ಇತರೆ ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕ ರೋಗ ತಜ್ಞರು ಸೇವೆ ನೀಡುತ್ತಾರೆ. ಮಹಿಳೆಯರಿಗೋಸ್ಕರ ರೂಪಗೊಂಡ ಈ ಕ್ಲಿನಿಕ್‍ನಲ್ಲಿ ಉಚಿತವಾಗಿ ಆಪ್ತಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಾಗಲಿವೆ. ಆಯುಷ್ಮತಿ ಕ್ಲಿನಿಕ್‍ಗೆ ಮಹಿಳೆಯರು ಭೇಟಿನೀಡಿ ತಜ್ಞ ವೈದ್ಯರ ಸೇವೆ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ, ಮುಖಂಡರಾದ ಗೌಸ್, ವೈಧ್ಯಾಧಿಕಾರಿಗಳಾದ ಡಾ.ಹನುಮಂತಪ್ಪ, ಡಾ.ಸುರೇಖ, ಡಾ.ಸೈಯದ್ ಖಾದ್ರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ನಗರ ಕಾರ್ಯಕ್ರಮ ವ್ಯವಸ್ಥಾಪಕ ಸುರೇಶ ಸೇರಿದಂತೆ ಸ್ಥಳೀಯರಾದ ನರೇಶ, ಅನ್ವರ್‍ಬಾಷಾ, ಸಮೀರ್, ಹಾಪೀಜ್, ಅದಮ್‍ಸಾಬ್ರಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here