ಅಪ್ರತಿಮ ಸಂಘಟನಾ ಚತುರೆ, ಬರಹಗಾರ್ತಿ, ಡಾ.ವಸುಂಧರಾ ಭೂಪತಿ

0
115

ವೃತ್ತಿಯಲ್ಲಿ ವೈದ್ಯರಾದ ಡಾ. ವಸುಂಧರಾ ಭೂಪತಿ ಅಪ್ರತಿಮ ಸಂಘಟನಾ ಚತುರೆ ಮತ್ತು ಬರಹಗಾರ್ತಿ.
ವಸುಂಧರಾ 1962ರ ಜೂನ್ 5ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ಎಂ. ರಾಘವೇಂದ್ರ ರಾವ್. ತಾಯಿ ಶಾಂತಾಬಾಯಿ. ರಾಯಚೂರಿನ ಮಂಗಳವಾರಪೇಟೆ ಸರ್ಕಾರಿ ಶಾಲೆ ಮತ್ತು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದಿ ಲಕ್ಷ್ಮೀ ವೆಂಕಟೇಶ‍ ದೇಸಾಯಿ ಕಾಲೇಜಿನಲ್ಲಿ ಪಿಯು ಓದಿದರು. ಬಳ್ಳಾರಿಯ ತಾರಾನಾಥ ಆಯುರ್ವೇದ ಕಾಲೇಜಿನಲ್ಲಿ ಬಿ.ಎ.ಎಂ.ಎಸ್. ಓದಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ.ಎಂ.ಎಸ್ (ಇಂಟಿಗ್ರೇಟೆಡ್) ಪೂರೈಸಿದರು. ಮಣಿಪಾಲ ಡೀಮ್ಡ್ ವಿಶ್ವವಿದ್ಯಾಲಯದಿಂದ (ಎಫ್.ಎ.ಜಿ.ಇ) ಫೆಲೋಷಿಪ್ ಮತ್ತು ಅಂತರರಾಷ್ಟ್ರೀಯ ಕೌನ್ಸಿಲ್ ಆಫ್ ಆಯುರ್ವೇದ (ಯುಎಸ್ಎ) ಇಂದ (ಎಫ್.ಐ.ಸಿ.ಎ) ಫೆಲೋಷಿಪ್ ಇವರ ಉನ್ನತ ಸಾಧನೆಗಳು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನಲ್ಲಿ ಎರಡು ವರ್ಷ ವೈದ್ಯ ವೃತ್ತಿ ನಡೆಸಿದ ನಂತರ ವಸುಂಧರಾ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬೆಂಗಳೂರಿನಲ್ಲಿ ತಮ್ಮ ವೃತ್ತಿ ಮತ್ತು ಕೌಟುಂಬಿಕ ಜೀವನ ಸಾಗಿಸಿದ್ದಾರೆ. ಪತಿ ದಿವಂಗತ ಯು. ಭೂಪತಿ ಅವರು ಕಾನೂನು ತಜ್ಞರಾಗಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿನ ಸೇವೆಗಾಗಿ ಹೆಸರಾದವರು.

ವಸುಂಧರಾ ಭೂಪತಿ ಅವರು ಸದಾ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಅವರ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ 1000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆರೋಗ್ಯ, ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳ ರೂಪಗಳಲ್ಲಿ ಬೆಳಕು ಕಾಣುತ್ತಿವೆ.

ವಸುಂಧರಾ ಭೂಪತಿ ಅವರ ಅರವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿದ್ದು, ಹೀಗೆ ವೈವಿಧ್ಯಪೂರ್ಣವಾಗಿ, ಅನೇಕ ಮರುಮದ್ರಣಗಳನ್ನು ಕಂಡು ಜನಪ್ರಿಯವಾಗಿವೆ.

ವೈದ್ಯಕೀಯ ಸಾಹಿತ್ಯ: ಹಣ್ಣುಗಳಲ್ಲಿ ಔಷಧಿಯ ಗುಣಗಳು, ಏಡ್ಸ್‌! ಪ್ರಳಯ ಎದುರಿಸಲು ಸಿದ್ಧರಾಗಿ, ಆರೋಗ್ಯ – ಆಯುರ್ವೇದ, ಔಷಧೀಯ ಗುಣವುಳ್ಳ ಸೊಪ್ಪು ತರಕಾರಿಗಳು, ಪುಷ್ಪೌಷಧಿ, ಸ್ತ್ರೀ ಆರೋಗ್ಯ ರಕ್ಷಣೆಯ ಸೂತ್ರಗಳು, ಆರೋಗ್ಯ – ಆನಂದ, ವೈದ್ಯಲೋಚನ, ಸೌಂದರ್ಯವರ್ಧಕಗಳು ಏಕೆ ಬೇಕು?, ಸ್ತ್ರೀ ಆರೋಗ್ಯ-ಆರೈಕೆ ಮನೆಯಂಗಳದಲ್ಲಿ ಔಷಧಿವನ, ಆಹಾರ ಮತ್ತು ಆರೋಗ್ಯ, ಆರೋಗ್ಯ- ಆರೈಕೆ ನಿಮ್ಮ ಕೈಯಲ್ಲಿ, ಆರೋಗ್ಯ ದೀಪಿಕಾ, ಹೂವು ಮತ್ತು ಆರೋಗ್ಯ, ಸಾಮಾನ್ಯ ಕಾಯಿಲೆಗಳಿಗೆ ಮನೆ ಮದ್ದು, ಗಣೇಶನ ಪೂಜೆಗೆ 21 ಪತ್ರೆಗಳು ಹಾಗೂ ಆಯುರ್ವೇದ, ಆರೋಗ್ಯವಂತರಾಗಿ
ಹರೆಯದ ಸಮಸ್ಯೆಗಳು ಮತ್ತು ಆಪ್ತಸಲಹೆ,
ಹಿರಿಯ ನಾಗರಿಕರ ಆರೋಗ್ಯಕ್ಕೆ ಆಯುರ್ವೇದ, ಮಹಿಳೆ ಜೀವನ ವಿಜ್ಞಾನ ಲೈಂಗಿಕತೆ ಮತ್ತು ಆಯುರ್ವೇದ, ಆರೋಗ್ಯ ಸಂಗಾತಿ (ಎರಡು ಭಾಗಗಳಲ್ಲಿ), ಆರೋಗ್ಯ ವೈವಿಧ್ಯ, ಸಂಬಾರ ಪದಾರ್ಥಗಳು ಹಾಗೂ ಆರೋಗ್ಯ, ಮೊಗ್ಗು ಅರಳುವಾಗ, ಆರೋಗ್ಯ ಸಂಗಾತಿ, ಬದುಕು ಬದಲಿಸಿದ ವಿಜ್ಞಾನ, ಆಹಾರ ಸಿರಿ, ಅನುದಿನದ ಆರೋಗ್ಯ ಮುಂತಾದವು.

ವಿಚಾರ ಸಾಹಿತ್ಯ: ಮಹಿಳೆ ಮತ್ತು ವೈಜ್ಞಾನಿಕ ಅರಿವು, ಮಹಿಳೆ ಮತ್ತು ಮೌಢ್ಯ

ಕಥಾ ಸಂಕಲನ:ಪ್ರೀತಿ, ರೆಕ್ಕೆ ಮೂಡಿದರೆ? (ವಿಜ್ಞಾನ ಕಥಾ ಸಂಕಲನ)
ಕವನ ಸಂಕಲನ: ಸಂಕ್ರಾಂತಿ, ಜೀವಸರಪಳಿಯ ಗೂಡು (ಪರಿಸರ ಗೀತೆಗಳ ಸಂಕಲನ)

ಅಂಕಣ: ಭೂಮಿಗಾಥೆ, ಜೀವಸಿರಿ

ನಾಟಕ: ವಿಜ್ಞಾನಮಯಿ (ವಿಜ್ಞಾನ ನಾಟಕಗಳು), ನವವಿಧ ನಾಟಕಗಳು, ಬದುಕು ಬದಲಿಸಿದ ವಿಜ್ಞಾನ

ಜೀವನ ಚರಿತ್ರೆ: ಸಿ.ವಿ. ರಾಮನ್, ‌ಶ್ರೀನಿವಾಸ ರಾಮಾನುಜಮ್‌, ಕೊಡಗಿನ ಗೌರಮ್ಮ, ಪಂಡಿತ್‌ ತಾರನಾಥ್‌, ಯಲ್ಲಪಗಡ ಸುಬ್ಬರಾವ್‌, ಚರಕ, ಸುಶ್ರುತ.

ಇಂಗ್ಲಿಷ್‌: Medicinal Plants in Your Yard

ಹಿಂದಿ: ಅಪ್ನಾ ಸ್ವಾಸ್ಥ್ಯ ಅಪ್ನೆ ಹಾತ್‌

ಸಂಪಾದಿತ ಕೃತಿಗಳು: ಆರೋಗ್ಯ ಚಿಂತನೆ ಮಾಲಿಕೆಗಳು, ವಿವಿಧ ಲೇಖಕಿಯರ ಕೃತಿಗಳು

ವಸುಂಧರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು. ಅವರು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಆಕಾಶವಾಣಿಯಲ್ಲಿ ಮತ್ತು ದೂರದರ್ಶನದಲ್ಲಿ ಆರೋಗ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ನೂರು ಫೋನ್-ಇನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ಆಕಾಶವಾಣಿ ವೈದ್ಯಲೇಖಕರ ಜೀವನ ಸಾಧನೆ ಕುರಿತು ರೇಡಿಯೋ ಸಂದರ್ಶನ ನಡೆಸಿದ್ದಾರೆ. ಎಫ್ ಎಮ್ ರೇಡಿಯೋದಲ್ಲಿ ಸಂಜೀವಿನಿ, ಹೆಲ್ತ್ ಟಿಪ್, ಲಂಚ್ ಬಾಕ್ಸ್ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ದೂರದರ್ಶನ ಹಾಗೂ ಈ ಟಿವಿ, ಉದಯ, ಚಂದನ, ಕಸ್ತೂರಿ ಟಿವಿಗಳಲ್ಲಿ ಓ ಸಖಿ, ಹಲೋ ಡಾಕ್ಟರ್, ಫೋನ್- ಇನ್ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮಂದಾಕಿನಿ ಮತ್ತು ಕಾಡ ಹಾದಿಯ ಹೂವುಗಳು ಚಲನಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಕರ್ನಾಟಕದಾದ್ಯಂತ ಹಲವಾರು ಸಂಘ- ಸಂಸ್ಥೆಗಳ ಮೂಲಕ ಸಾರ್ವಜನಿಕ ಉಪನ್ಯಾಸಗಳು ಹಾಗೂ ಚರ್ಚೆಗಳ ಮುಖಾಂತರ ಜನರಿಗೆ ಆರೋಗ್ಯ ಮಾಹಿತಿ ಸಂಹವನವನ್ನು ನಡೆಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಗುಲ್ಬರ್ಗಾ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ರೋಗಿಗಳಿಗೆ ಆರೋಗ್ಯ ತಿಳುವಳಿಕೆ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಎಂಬ ಕಾರ್ಯಕ್ರಮ ನಡೆಸಿದ್ದಾರೆ. ಬದುಕಿನ ಎಲ್ಲ ರೀತಿಯ ಜನರಿಗೆ ವಿವಿಧ ರೀತಿಯ ವಿಜ್ಞಾನ ತಿಳುವಳಿಕೆಯ ನೂರಾರು ಕಾರ್ಯಕ್ರಮ ಮಾಡಿದ್ದಾರೆ.

ವಸುಂಧರಾ ಭೂಪತಿ ಅವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದವರು. ಅವರು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದವರು. ಇದಲ್ಲದೆ ಕರ್ನಾಟಕ ಜ್ಞಾನ ಆಯೋಗದ ಅಧ್ಯಯನ ತಂಡದ ಸದಸ್ಯೆಯಾಗಿ, ರಚನಾ-ಪರಿಸರವಾದಿ ಸಂಸ್ಥೆಯ ಆರೋಗ್ಯ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ, ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ,
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಅಕಾಡೆಮಿ ಕೌನ್ಸಿಲ್‌ ಸದಸ್ಯರಾಗಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥ ಪ್ರಕಟಣಾ ಸಮಿತಿ ಸದಸ್ಯೆಯಾಗಿ, ನವದೆಹಲಿ ಐಡಿಪಿಡಿ ರಾಷ್ಟ್ರ ಸಮಿತಿ ಸದಸ್ಯೆಯಾಗಿ, ಕರ್ನಾಟಕ ರಾಜ್ಯ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಸದಸ್ಯೆಯಾಗಿ, ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಟ್ರಸ್ಟ್‌ ಉಪಾಧ್ಯಕ್ಷೆಯಾಗಿ, ಕನ್ನಡ ಸಂಘರ್ಷ ಸಮಿತಿ, ಮಹಿಳಾ ವಿಭಾಗದ ಸಂಚಾಲಕಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದಿದ್ದಾರೆ.

ವಸುಂಧರಾ ಭೂಪತಿ ಅವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ನಡೆಸಿದ ಕಾರ್ಯಕ್ರಮಗಳೂ ಅಪಾರ. ಲೇಖಕಿಯರು ರಚಿಸಿದ ಪರಿಸರಗೀತೆಗಳ ಆಡಿಯೋ ಸಿಡಿ ಜೀವಸರಪಳಿಯ ಗೂಡು ಪ್ರಕಟಣೆ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ವ್ಯವಸ್ಥೆ, ಅನುಪಮಾ ಪ್ರಶಸ್ತಿ ಪುರಸ್ಕೃತ ಲೇಖಕಿಯರ ಸಾಕ್ಷ್ಯಚಿತ್ರಗಳ ನಿರ್ಮಾಣ, “ಅವಳು ಅವಳೇ” ದ್ವನಿಸಾಂದ್ರಿಕೆ ನಿರ್ಮಾಣ, ಕಸಾಪ ಸಹಯೋಗದೊಂದಿಗೆ ಸಾಧಕರೊಡನೆ ಸಂವಾದ, ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯಮಟ್ಟದ ಪ್ರಥಮ ಮಹಿಳಾ ಪ್ರಕಾಶನ ಕಾರ್ಯಗಾರ ಆಯೋಜನೆ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.

ವಸುಂಧರಾ ಭೂಪತಿ ಅವರಿಗೆ ಎಚ್ಐವಿ/ಏಡ್ಸ್ ಕುರಿತಾದ ಲೇಖನಕ್ಕೆ ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಲೇಖಕಿ ಪುರಸ್ಕಾರ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಶ್ರೇಷ್ಠ ವಿಜ್ಞಾನ ಸಂಹವನಕಾರ ಪ್ರಶಸ್ತಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಪ್ರಶಸ್ತಿ, ಡಾ|| ಪಿ.ಎಸ್ ಶಂಕರ್ ವೈದ್ಯ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಕೃಪೆ: ಕನ್ನಡ ಸಂಪದ

LEAVE A REPLY

Please enter your comment!
Please enter your name here