ಬಳ್ಳಾರಿಯ ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರ ಜನ್ಮದಿನ

0
185


ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಕರ್ನಾಟಕ ಮತ್ತು ಸಂಯಕ್ತ ಆಂಧ್ರಪ್ರದೇಶದಲ್ಲಿ ಬಹುದೊಡ್ಡ ಹೆಸರು.


ರಾಘವ ಅವರು 1880ರ ಆಗಸ್ಟ್ 2ರಂದು ಬಳ್ಳಾರಿಯಲ್ಲಿ ಜನಿಸಿದರು. ತಂದೆ ನರಸಿಂಹಾಚಾರ್ಯ. ತಾಯಿ ಶೇಷಮ್ಮ. ಬಳ್ಳಾರಿಯಲ್ಲಿ ಎಫ್‌.ಎ ವಿದ್ಯಾಭ್ಯಾಸವನ್ನು ಪೂರೈಸಿದ ರಾಘವರು ಮುಂದೆ ಮದರಾಸಿನಲ್ಲಿ ಬಿ.ಎ, ಬಿ.ಎಲ್‌ ಪದವಿ ಗಳಿಸಿದರು. ಧರ್ಮಾವರಂ ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ ಪಡೆದು 1906ರಲ್ಲಿ ಸ್ವತಂತ್ರ ವಕೀಲರಾಗಿ ಪ್ರಸಿದ್ಧಿ ಗಳಿಸಿದರು.


ಮದರಾಸಿನಲ್ಲಿದ್ದಾಗಲೇ ಪಾರಸಿ ಥಿಯೆಟ್ರಿಕಲ್ ಕಂಪನಿಯ ನಾಟಕಗಳನ್ನು ನೋಡುವ ಹವ್ಯಾಸ ರಾಘವ ಅವರಲ್ಲಿ ಮೂಡಿತ್ತು. ನಟ ದಾದಾಬಾಯಿ ಮಿಸ್ತ್ರಿಯವರ ಅಭಿನಯ ಅವರ ಮೇಲೆ ಅಪಾರ ಪ್ರಭಾವ ಬೀರಿತ್ತು. ರಾಘವರು ಸ್ವಯಂ ಮೊದಲು ಅಭಿನಯಿಸಿದ ನಾಟಕ ‘ಡಾಕ್ಟರ್ ಅಂಡ್‌ ಅಪಾಥಿಕರಿ’.
ಮುಂದೆ ರಾಘವರು ಬಳ್ಳಾರಿಯಲ್ಲಿ ಶಾಮರಾವ್‌ ವಟ್ಟಂ ಸೋದರರ ನೆರವಿನಿಂದ ಶೇಕ್ಸ್ ಪಿಯರ್ ಕ್ಲಬ್‌ ಪ್ರಾರಂಭಿಸಿ ಹಲವಾರು ಇಂಗ್ಲಿಷ್‌ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಅವರು ಧರ್ಮಾವರಂ ರಾಮಕೃಷ್ಣಾಚಾರ್ಯ, ಕೋಲಾಚಲಂ ಶ್ರೀನಿವಾಸರಾಯರು ಬರೆದು ನಿರ್ದೇಶಿಸುತ್ತಿದ್ದ ಸರಸ ವಿನೋದಿನಿ, ಸುಮನೋರಮ ಸಭಾ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿದ್ದರು.

ವಿಜಯನಗರದ ಪತನ ನಾಟಕದಲ್ಲಿ ರಾಘವರು ನಿರ್ವಹಿಸಿದ ಪಠಾನ್‌ ರುಸ್ತುಮ್ ಪಾತ್ರ ಅವರಿಗೆ ಅಪಾರ ಜನ ಮೆಚ್ಚುಗೆ ತಂದುಕೊಟ್ಟಿತು. ಇದಲ್ಲದೆ ರಾಘವರು ಬೆಂಗಳೂರಿನ ಅಮೆಚೂರ್ ಡ್ರಮ್ಯಾಟಿಕ್‌ ಅಸೋಸಿಯೇಷನ್‌ ಸಂಸ್ಥೆಯ ನೇತಾರರಾಗಿ ಮುಂಬಯಿ, ಕೋಲ್ಕತ್ತಾ, ಸಿಮ್ಲಾಗಳಲ್ಲಿ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸಿದ್ದರು. ಹರಿಶ್ಚಂದ್ರ, ದಶರಥ, ರಾವಣ ಮುಂತಾದ ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ ಅಭಿನಯ ನೀಡುತ್ತಿದ್ದರು. ಕನ್ನಡದ ಕೈಲಾಸಂ, ಮಾಸ್ತಿ, ಅ.ನ.ಕೃ. ಮೊದಲಾದವರ ನಾಟಕಗಳನ್ನೂ ಪ್ರಯೋಗಿಸಿ ಹೆಸರು ಮಾಡಿದರು. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಈ ನಾಲ್ಕೂ ಭಾಷೆಗಳಲ್ಲಿ ಅವರ ನಾಟಕಗಳ ಕೀರ್ತಿ ವ್ಯಾಪಿಸಿತ್ತು.


1928ರಲ್ಲಿ ರಾಘವರು ಇಂಗ್ಲೆಂಡಿಗೆ ಹೋಗಿ ರಂಗಭೂಮಿ ಚಟುವಟಿಕೆಗಳ ಅಧ್ಯಯನ ನಡೆಸಿದರು. ಲಾರೆನ್ಸ್ ಆಲಿವಿಯರ್ ಮತ್ತು ಚಾರ್ಲ್ಸ್ ಲಾಟನ್ ಮುಂತಾದ ಶ್ರೇಷ್ಠರೊಂದಿಗೆ ಕೆಲಸ ಮಾಡಿದರು. ಅವರು ಬರ್ನಾಡ್‌ ಷಾ ಅವರ ಮುಂದೆಯೇ ಶೇಕ್ಸ್ ಪಿಯರ್ ನಾಟಕಗಳನ್ನು ಅಭಿನಯಿಸಿ ಪ್ರಶಂಸೆ ಪಡೆದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸ್ತ್ರೀಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದ ಕಾಲದಲ್ಲಿ ಸ್ತ್ರೀಯರೇ ಅಭಿನಯಿಸುವಂತೆ ಮಾಡಿದ ಕೀರ್ತಿ ರಾಘವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮುಂದೆ ದೀನ ಬಂಧು ಕಬೀರ್ ನಾಟಕವನ್ನು ಪ್ರದರ್ಶಿಸಿ ಅವರ ಮೆಚ್ಚುಗೆ ಪಡೆದಿದ್ದರು.


ದ್ರೌಪದಿ ಮಾನ ಸಂರಕ್ಷಣ, ರೈತ ಬಿಡ್ಡು, ಚಂಡಿಕಾ ಮುಂತಾದ ಚಲನಚಿತ್ರಗಳಲ್ಲೂ ರಾಘವ ಅವರು ಅಭಿನಯಿಸಿದ್ದರು. ಅವರು ಆಂಧ್ರನಾಟಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಸೇವೆ ಸಲ್ಲಿಸಿದ್ದರು. ಭಾರತ ಸರ್ಕಾರದಿಂದ ಅವರಿಗೆ ರಾವ್‌ ಬಹದ್ದೂರ್ ಪ್ರಶಸ್ತಿ ಸಂದಿತ್ತು.


ಮಹಾನ್ ಕಲಾತಪಸ್ವಿ ಬಳ್ಳಾರಿ ರಾಘವರು 1946ರ ಏಪ್ರಿಲ್ 16ರಂದು ಈ ಲೋಕವನ್ನಗಲಿದರು. ನಾಟಕ ಹಾಗೂ ಕಲೆಗಳು ಸಾಮಾಜಿಕ ಉದ್ದೇಶಗಳಿಗೆ ಸ್ಪಂದಿಸಬೇಕೆಂದು ಅವರು ಅಭಿಮತ ಹೊಂದಿದ್ದರು ಅಪ್ರತಿಮ ಕಲಾವಿದರಾಗಿದ್ದ ಬಳ್ಳಾರಿ ರಾಘವ ಅವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1981ರ ಅಕ್ಟೋ-ಬರ್ 31 ರಂದು ಅಂಚೆ ಚೀಟಿಯನ್ನು ಹೊರತಂದಿತ್ತು. ಆಂಧ್ರಪ್ರದೇಶ ತೆಲಂಗಾಣ ಪ್ರದೇಶಗಳನ್ನು ಸುತ್ತಿದವರಿಗಂತೂ ಅಲ್ಲಿನ ಪ್ರದೇಶಗಳಲ್ಲಿ ಬಳ್ಳಾರಿ ರಾಘವರ ಪುತ್ಥಳಿಗಳು ಬಹಳ ಕಡೆ ಕಂಡಿರುತ್ತದೆ.

ಕೃಪೆ:- ಕನ್ನಡ ಸಂಪದ

LEAVE A REPLY

Please enter your comment!
Please enter your name here