ಬಾರತದ ಓಟದ ರಾಣಿ ಪಿ.ಟಿ.ಉಷಾ

0
185

ಭಾರತದ ಓಟದ ರಾಣಿ ಪಿ ಟಿ ಉಷಾ ನಮ್ಮ ಕಾಲದ ಮಹತ್ವದ ಕ್ರೀಡಾ ಪಟು. ಭಾರತದ ಅಥ್ಲೆಟಿಕ್ಸ್ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿರುವಂತೆ ಕಾಪಾಡಿಕೊಳ್ಳುವುದರಲ್ಲಿ ಪಿ ಟಿ ಉಷಾ ಅವರು ನೀಡಿರುವ ಕೊಡುಗೆ ಮಹತ್ವಪೂರ್ಣವಾದದ್ದು.

ಪಿ ಟಿ ಉಷಾ ಜನಿಸಿದ್ದು 1964ರ ಜೂನ್ 27ರಂದು ಜನಿಸಿದರು. 1976ರಲ್ಲಿ ಕೆರಳ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಕ್ರೀಡಾ ಶಾಲೆಯೊಂದನ್ನು ತೆರೆಯಿತು. ಪಿ ಟಿ ಉಷಾ ಆ ಶಾಲೆಯಿಂದ ಹೊರಹೊಮ್ಮಿದ ಪ್ರತಿಭೆ. 1979ರಲ್ಲಿ ನಡೆದ ‘ನ್ಯಾಶನಲ್ ಸ್ಕೂಲ್ ಗೇಮ್ಸ್‘ನಲ್ಲಿ ಭಾಗವಹಿಸಿದ ಈಕೆಯ ಅಸಾಧಾರಣ ಪ್ರತಿಭೆಯನ್ನು ಅಥ್ಲೆಟಿಕ್ಸ್ ತಜ್ಞ ನಂಬಿಯಾರ್ ಗುರುತಿಸಿದರು. ನಂತರ ಉಷಾ ಅವರ ಕ್ರೀಡಾಜೀವನದುದ್ದಕ್ಕೂ ನಂಬಿಯಾರ್ ಅವರೇ ತರಬೇತುದಾರರಾಗಿದ್ದರು.

1980ರ ಮಾಸ್ಕೊ ಒಲಿಂಪಿಕ್ಸ್ ಪಿ ಟಿ ಉಷಾ ಅವರು ಭಾಗವಹಿಸಿದ ಪ್ರಥಮ ಅಂತರರಾಷ್ಟ್ರೀಯ ಸ್ಪರ್ಧೆ. 1982ರಲ್ಲಿ ನವದೆಹಲಿ ಏಷ್ಯಾಡ್‍’ನ 100ಮೀ ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪಿ ಟಿ ಉಷಾ ರಜತ ಪದಕ ಗೆದ್ದರು. ಒಂದು ವರ್ಷದ ಬಳಿಕ ಕುವೈತ್ ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್‍ನಲ್ಲಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನೂತನ ಏಷಿಯನ್ ದಾಖಲೆ ನಿರ್ಮಿಸಿದರು. 1983-89ರ ಅವಧಿಯಲ್ಲಿ ಏಷ್ಯಾ ಉಪಖಂಡದ ಟ್ರಾಕ್ ಅಂಡ್ ಫೀಲ್ಡ್ ನಲ್ಲಿ ಉಷಾ 13 ಚಿನ್ನದ ಪದಕಗಳನ್ನು ಗಳಿಸಿದರು. ಲಾಸ್ ಎಂಜೆಲಿಸ್ಸಿನಲ್ಲಿ 1984ರಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ 400 ಮೀಟರ್ಸ್ ಹರ್ಡಲ್ಸಿನ ಸೆಮಿಫೈನಲ್ಸ್‘ನಲ್ಲಿ ಅವರು ಮೊದಲಿಗರಾಗಿದ್ದಾಗಿಯೂ ಅಂತಿಮ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡರು. ಮಿಲ್ಖಾ ಸಿಂಗ್ ಅವರ 1960ರ ಸಾಧನೆ ಪ್ರಕರಣದಲ್ಲಾದಂತೆ ಉಷಾ ಅವರಿಗೆ ಸಹಾ ಕೂದಲೆಳೆಯ ಅಂತರದಲ್ಲಿ ಪದಕ ಗಳಿಕೆಯ ಅವಕಾಶ ತಪ್ಪಿಹೋಯಿತು. ಪದಕ ಬರಲಿಲ್ಲವಾದರೂ ಉಷಾ ಅವರು ಒಲಿಂಪಿಕ್ಸ್ ಕ್ರೀಡೆಗಳಲ್ಲಿ 400ಮೀಟರ್ ಹರ್ಡಲ್ಸಿನ ಫೈನಲ್ ತಲುಪಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ. ಅವರ ಈ ಸಾಧನೆಯನ್ನು ಇಡೀ ವಿಶ್ವವೇ ಬೆಕ್ಕಸ ಬೆರಗಿನಿಂದ ಕೊಂಡಾಡಿತು.

ಪಿ.ಟಿ ಉಷಾ ಅವರು 1986ರಲ್ಲಿ ಸಿಯೊಲ್ನಲ್ಲಿ ನಡೆದ 10ನೆಯ ಏಷಿಯನ್ ಗೇಮ್ಸ್ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ 4 ಚಿನ್ನ ಮತ್ತು 1 ರಜತ ಪದಕಗಳನ್ನು ಪಡೆದರು. ಜಕಾರ್ತಾದಲ್ಲಿ 1985ರಲ್ಲಿ ನಡೆದ 6ನೆಯ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್‍ನಲ್ಲಿ 5 ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ ಆರು ಪದಕ ಗೆದ್ದ ಏಕೈಕ ಕ್ರೀಡಾಳು ಎನಿಸಿದ್ದಾರೆ.

ಪಿ ಟಿ ಉಷಾ ಅಂತಾರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚಿನ ಪದಕಗಳಿಗೆ ಭಾಜನರಾಗಿದ್ದಾರೆ. ರೈಲ್ವೆಯಲ್ಲಿ ಅಧಿಕಾರಿಯಾಗಿರುವ ಉಷಾ ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಭಾರತದಲ್ಲಿ ಅಥ್ಲೆಟಿಕ್ಸ್ ವಿಚಾರ ಬಂದಾಗಲೆಲ್ಲಾ ನೆನಪಾಗುವ ಮಹತ್ವದ ಹೆಸರಾಗಿ ಭಾರತೀಯ ಮನೆ ಮನಗಳಲ್ಲಿ ಹಸುರಾಗಿ ಉಳಿದಿದ್ದಾರೆ. ಮುಂದೆ ಬಂದ ಹಲವಾರು ಕ್ರೀಡಾಳುಗಳಿಗೆ ನಿತ್ಯ ಪ್ರೇರಣೆಯಾಗಿದ್ದಾರೆ.

LEAVE A REPLY

Please enter your comment!
Please enter your name here