ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ವೈದ್ಯರೊಂದಿಗೆ ಸಮನ್ವಯ ಸಭೆ; ಕ್ಷಯಮುಕ್ತ ಭಾರತಕ್ಕಾಗಿ ಖಾಸಗಿ ವಲಯದ ಆಸ್ಪತ್ರೆಗಳ ಸಹಕಾರ ಅಗತ್ಯ: ಡಾ.ಇಂದ್ರಾಣಿ

0
49

ಬಳ್ಳಾರಿ,ಜು.07:ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯ, ಪ್ರಮುಖವಾಗಿ ಖಾಸಗಿ ಆಸ್ಪತ್ರೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ತೋರಣಗಲ್ಲಿನ ಜಿಂದಾಲ್-ಸಂಜೀವಿನಿ ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ಹಮ್ಮಿಕೊಂಡ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿಗಳ ‘ಟಿ.ಬಿ.ಯನ್ನು ಸೋಲಿಸಿ ದೇಶವನ್ನು ಗೆಲ್ಲಿಸೋಣ’ ಎಂಬ ಆಶಯದಂತೆ 2025 ಕ್ಕೆ ಭಾರತ ದೇಶವನ್ನು ಕ್ಷಯ ಮುಕ್ತ ಮಾಡಲು ಪಣತೊಟ್ಟಿರುವುದರಿಂದ ಸೋಂಕಿನ ಲಕ್ಷಣವುಳ್ಳ ಪ್ರತಿಯೊಬ್ಬ ಕಾರ್ಮಿಕರನ್ನು ತಾವು ಕಫ ಪರೀಕ್ಷೆಗೆ ಒಳಪಡಿಸಬೇಕು. ಅಗತ್ಯವೆನಿಸಿದಲ್ಲಿ ಚೆಸ್ಟ್‌ ಎಕ್ಸ್‌-ರೆ ಹಾಗೂ ಇತರ ಪರೀಕ್ಷೆಗಳನ್ನು ಸಕಾಲದಲ್ಲಿ ಕೈಗೊಂಡು ಕ್ಷಯಮುಕ್ತ ಜಿಲ್ಲೆಯನ್ನಾಗಿಸುವ ಅಭಿಯಾನಕ್ಕೆ ತಾವು ಕೈಜೋಡಿಸಬೇಕು ಎಂದರು.

ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ದಾನಿಗಳಿಂದ 584 ಜನರಿಗೆ ಪೌಷ್ಟಿಕ ಅಹಾರ ಕಿಟ್‌ ಈಗಾಗಲೇ ಒದಗಿಸಲಾಗಿದ್ದು, ಯಾವುದಾದರು ಸಂಘ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದು ಕೋರಿದರು.

ಬಳ್ಳಾರಿ ವಲಯ ವಿಶ್ವ ಆರೋಗ್ಯ ಸಂಸ್ಥೆಯ ಕ್ಷಯರೋಗ ಸಲಹೆಗಾರರಾದ ಡಾ.ಹಂಸವೇಣಿ ಅವರು ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕಾರ್ಮಿಕರಿಗೆ ಕ್ಷಯರೋಗ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಜನಸಂಖ್ಯೆ ಹೆಚ್ಚಾಗಿದ್ದು, ಕ್ಷಯರೋಗಕ್ಕೆ ತುತ್ತಾಗುವ ದುರ್ಬಲ ವರ್ಗದ ಜನರೆಂದು ಕೇಂದ್ರ ಕ್ಷಯ ವಿಭಾಗದಿಂದ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಅಡಿಯಲ್ಲಿ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಹಕಾರದಿಂದ ಸಾವಿರಾರು ಜನ ಕೆಲಸ ನಿರ್ವಹಿಸುವ ಜಿಂದಾಲ್‌ ಕಾರ್ಮಿಕರ ಆರೋಗ್ಯ ತಪಾಸಣೆಗೆ ನಿಗದಿತ ಸಮಯ ಗುರುತಿಸಿ ಸಹಕರಿಸಬೇಕು ಎಂದು ಹೇಳಿದರು.

ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದ್ದು, ಸಂಜೆ ವೇಳೆ ಜ್ವರ ಬರುವುದು, ರಾತ್ರಿ ವೇಳೆ ಬೆವರುವುದು. ಎದೆ ನೋವು ಕೆಲವೊಮ್ಮೆ ಕಫದ ಜೊತೆ ರಕ್ತ ಬೀಳುವುದು. ಹಸಿವಾಗದಿರುವುದು ತೂಕ ಕಡಿಮೆಯಾಗುವುದು. ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೇ ಇರುವುದು, ಚಿಕಿತ್ಸೆಗೆ ಬಗ್ಗದ ಅತಿಸಾರ ಬೇಧಿ, ಕುತ್ತಿಗೆ ಬಗುಲುಗಳಲ್ಲಿ ಗಡ್ಡೆ ಸೇರಿದಂತೆ ಈ ಲಕ್ಷಣಗಳಿದ್ದರೆ ತಕ್ಷಣವೇ ಪರೀಕ್ಷೆ ಮತ್ತು ಚಿಕಿತ್ಸೆ ಕೈಗೊಳ್ಳಲು ತಿಳಿಸಿದರು.

ಈ ಸಂದರ್ಭದಲ್ಲಿ ಸಂಜವೀನಿ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್‌.ಪಿ ಸಿಂಗ್‌, ವ್ಯವಸ್ಥಾಪಕ ನಿರ್ದೇಶಕ ಸುನೀಲ್ ‌ ಭಂಡಾರಿಗಲ್‌ , ಮಲ್ಟಿ ಸ್ಟ್ರೆಕ್ಚರಲ್ ಎಕ್ಸ‌ಫರ್ಟ್‌ ಡಾ.ಸಂಗೀತಾ
ಹಾಗೂ ಕ್ಷಯರೋಗ ವಿಭಾಗದ ಉದಯಕುಮಾರ, ಚಂದ್ರು ಇದ್ದರು.

LEAVE A REPLY

Please enter your comment!
Please enter your name here