ನಾಯಕನ ಬೆನ್ನಲ್ಲಿದೆ ದಾರುಣ ಕತೆ ಹೀಗಾಗಿ ಇದು ಕತೆಯಲ್ಲ,ಜೀವನ !

0
98

ಅದು ಹೈದ್ರಾಬಾದ್ ನಿಜಾಮನ ಹಿಡಿತದಿಂದ ಬಿಡುಗಡೆಯಾಗಲು ಹೈದ್ರಾಬಾದ್-ಕರ್ನಾಟಕ ಭಾಗದ ಜನ ಸಿಡಿದೆದ್ದ ಕಾಲ.
ಅಂದ ಹಾಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗುಲ್ಬರ್ಗ,ರಾಯಚೂರು(ಈಗಿನ ಕೊಪ್ಪಳವೂ ಸೇರಿ)ಬಳ್ಳಾರಿ ಸೇರಿದಂತೆ ಕನ್ನಡ ಭಾಷಿಕರೇ ಹೆಚ್ಚಾಗಿದ್ದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದಲ್ಲಿದ್ದವು.ಜತೆಗೇ ಬೀದರ್ ನ ಕೆಲ ಭಾಗಗಳಲ್ಲೂ ನಿಜಾಮನ ಹಿಡಿತವಿತ್ತು.
ಒಟ್ಟಿನಲ್ಲಿ ತೆಲಂಗಾಣದ ಎಂಟು ಜಿಲ್ಲೆಗಳು,ಮರಾಠವಾಡದ ಐದು ಹಾಗೂ ಕರ್ನಾಟಕದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದ ತೆಕ್ಕೆಯಲ್ಲಿದ್ದವು.ದೇಶಕ್ಕೆ ಸ್ವಾತಂತ್ರ್ಯ ಬಂದರೂ,ಭಾರತದ ಒಕ್ಕೂಟದೊಳಗೆ ಸೇರಲು ನಿಜಾಮ ತಯಾರಿರಲಿಲ್ಲ.ಆತನ ಹೆಸರು!
ಮಿರ್ ಉಸ್ಮಾನ್ ಅಲೀಖಾನ್ ಬಹಾದ್ದೂರ್.
ಅಂದ ಹಾಗೆ ದೇಶದ ಐನೂರಾ ಅರವತ್ತೈದರಷ್ಟು ಸಂಸ್ಥಾನಗಳ ಪೈಕಿ ಹೈದ್ರಾಬಾದ್ ಸಂಸ್ಥಾನವೇ ಶ್ರೀಮಂತ ಸಂಸ್ಥಾನ.ಐವತ್ತು ಲಕ್ಷ ಎಕರೆಯಷ್ಟು ಜಮೀನು ನಿಜಾಮನ ಸ್ವಂತ ಆಸ್ತಿಯಾಗಿತ್ತು ಅಂದರೆ ಊಹಿಸಿ.ಅದೇ ರೀತಿ ಆತನ ವಾರ್ಷಿಕ ಆದಾಯ ಎರಡೂವರೆ ಕೋಟಿ ರೂಪಾಯಿಗಳಷ್ಟು ದೊಡ್ಡದಿತ್ತು.
1941 ರ ಜನಗಣತಿಯ ಪ್ರಕಾರ ಈ ಸಂಸ್ಥಾನದ ಜನ ಸಂಖ್ಯೆ ಒಂದು ಕೋಟಿ ಅರವತ್ಮೂರು ಲಕ್ಷಕ್ಕೂ ಹೆಚ್ಚು.ಈ ಪೈಕಿ ಎಪ್ಪತ್ತು ಲಕ್ಷ ಮಂದಿ ತೆಲುಗರು,ನಲವತ್ತು ಲಕ್ಷ ಮರಾಠಿಗರು ಹಾಗೂ ಇಪ್ಪತ್ತು ಲಕ್ಷ ಕನ್ನಡ ಭಾಷಿಕರು ಇದ್ದರು.
ಅಂದ ಹಾಗೆ ಹೈದ್ರಾಬಾದ್ ಸಂಸ್ಥಾನವನ್ನು ಪ್ರಾರಂಭಿಸಿದವನು ಮಿರ್ ಕಮರುದ್ದೀನ್ ಚಿನ್ ಖಿಲಜಿ ಖಾನ್! ಮುಂದೆ ಪೇಶ್ವೆಗಳ ಕಾಲದಲ್ಲಿ ಮರಾಠರ ಹೊಡೆತ ತಾಳಲಾಗದೆ 1798 ರಲ್ಲಿ ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಯಡಿ ಅಂದಿನ ಹೈದ್ರಾಬಾದ್ ನಿಜಾಮ ಒಪ್ಪಂದ ಮಾಡಿಕೊಂಡ.ಈ ಒಪ್ಪಂದಕ್ಕೆ ಪ್ರತಿಯಾಗಿ ಬ್ರಿಟಿಷರ ಆರು ಬೆಟಾಲಿಯನ್ ಸೈನ್ಯ ಹೈದ್ರಾಬಾದ್ ಸಂಸ್ಥಾನದ ರಕ್ಷಣೆಗೆ ನಿಂತುಕೊಂಡಿತು.ಹೀಗಾಗಿ ಮುಂದೆ ಪೇಶ್ವೆಗಳ ವಿಷಯದಲ್ಲಿ ಸಂಸ್ಥಾನಕ್ಕೆ ತೊಂದರೆಯಾಗದಂತೆ ಬ್ರಿಟಿಷರು ನೋಡಿಕೊಂಡರು.
ಆದರೆ ಇದಕ್ಕಾಗಿ ಹೈದ್ರಾಬಾದ್ ನಿಜಾಮ ಆಗಿನ ಕಾಲದಲ್ಲೇ ಭರಿಸುತ್ತಿದ್ದ ಒಂದು ವರ್ಷದ ವೆಚ್ಚ ಇಪ್ಪತ್ನಾಲ್ಕು ಲಕ್ಷ,ಹದಿನೇಳು ಸಾವಿರ ರೂಪಾಯಿ.ಹೀಗೆ ಬ್ರಿಟಿಷರ ಆಸರೆ ಪಡೆದ ಕಾರಣಕ್ಕಾಗಿಯೇ ಹೈದ್ರಾಬಾದ್ ನಿಜಾಮರು,ಬ್ರಿಟಿಷರ ವಿರುದ್ಧ ಸಿಡಿದು ನಿಂತ ಟಿಪ್ಪು ಸುಲ್ತಾನನಿಗೆ ಬೆಂಬಲ ನೀಡಲಿಲ್ಲ.ಅರ್ಥಾತ್,ಅವರು ಬ್ರಿಟಿಷರ ಜತೆ ಗಟ್ಟಿಯಾಗಿ ನಿಂತುಬಿಟ್ಟಿದ್ದರು.
ಅಲ್ಲಿಂದ ಮುಂದೆ ಹಲ ನಿಜಾಮರು ಸಂಸ್ಥಾನದ ಸಿಂಹಾಸನವೇರಿದರು.ಆದರೆ ಮೀರ್ ಉಸ್ಮಾನ್ ಅಲಿ ಖಾನ್ ಅಧಿಕಾರಕ್ಕೆ ಬಂದ ಕಾಲಕ್ಕೆ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕೂಗು ಜೋರಾಗಿತ್ತು.
ಈ ಸಂದರ್ಭದಲ್ಲಿ ಬ್ರಿಟಿಷರಿಗೆ ನಿಷ್ಟನಾಗಿದ್ದ ನಿಜಾಮ,ತನ್ನದೇ ಒಂದು ಸೈನ್ಯ ಕಟ್ಟಿಕೊಂಡ.ಅದರ ಹೆಸರು ಇತ್ತೆಹಾದ್ ಮುಸ್ಲಿಮಿನ್.ಕಾಲ ಕ್ರಮೇಣ ಈ ಪಡೆಗೆ ರಜಾಕಾರರ ಪಡೆ ಎಂಬ ಹೆಸರು ಬಂತು.ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಕ್ಕಾಗಲೇ ಈ ಪಡೆಯಲ್ಲಿ ಒಂದು ಲಕ್ಷ ಜನರಿದ್ದರು.
ದೇಶಕ್ಕೇನೋ ಸ್ವಾತಂತ್ರ್ಯ ಬಂತು.ಆದರೆ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಮಾತ್ರ ಸ್ವಾತಂತ್ರ್ಯ ಬರಲಿಲ್ಲ.ಹೀಗಾಗಿ ರಮಾನಂದ ತೀರ್ಥರು ಸೇರಿದಂತೆ ಹಲ ನಾಯಕರು ನಿಜಾಮನಿಗೆ ಸೆಡ್ಡು ಹೊಡೆದು ಹೋರಾಟಕ್ಕಿಳಿದರು.ಭಾರತದ ಒಕ್ಕೂಟದೊಳಕ್ಕೆ ಸೇರಬಯಸದ ನಿಜಾಮ,ಪಾಕಿಸ್ತಾನದ ಜನಕ ಮಹಮದಾಲಿ ಜಿನ್ನಾ ಅವರ ಜತೆ ಮಾತುಕತೆ ನಡೆಸಿ,ಪಾಕಿಸ್ತಾನಕ್ಕೆ ಸೇರುವ ಬಯಕೆ ತೋಡಿಕೊಂಡ.
ಜನಸಂಖ್ಯೆಯ ಆಧಾರದ ಮೇಲೆ ಶೇಕಡಾ ಎಂಭತ್ತಕ್ಕೂ ಹೆಚ್ಚು ಮಂದಿ ಹಿಂದೂಗಳು ಸಂಸ್ಥಾನದಲ್ಲಿದ್ದರು.ಆದರೆ ಮುಸ್ಲಿಂ ಆಳರಸ ನಿಜಾಮನಾಗಿದ್ದಲ್ಲ?ಈ ಸಂದರ್ಭದಲ್ಲಿ ಜಿನ್ನಾ,ಆಳರಸರು ಯಾರೇ ಆಗಲಿ,ಜನಸಂಖ್ಯೆಯ ಆಧಾರದ ಮೇಲೆ ಹೈದ್ರಾಬಾದ್ ಸಂಸ್ಥಾನ ಭಾರತದ ಒಕ್ಕೂಟಕ್ಕೇ ಸೇರಬೇಕು ಎಂದಿದ್ದರೆ ಸಮಸ್ಯೆ ಇರಲಿಲ್ಲ.
ಆದರೆ ಜಿನ್ನಾ ಒಳಗಿಂದೊಳಗೇ ನಾಟಕವಾಡಿದರು.ಹೈದ್ರಾಬಾದ್ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಲು ನೋಡಿದರು.ಇದು ಒಂದು ಕಡೆಗಾದರೆ ಮತ್ತೊಂದು ಕಡೆ ನಿಜಾಮ ಯಾವ ಪರಿ ಧರ್ಮಾಂಧನಾಗಿದ್ದನೆಂದರೆ,ಆತನ ಹಿಡಿತದಲ್ಲಿದ್ದ ರಜಾಕಾರರ ಪಡೆ,ಸಂಸ್ಥಾನದಿಂದ ಬಿಡುಗಡೆ ಹೊಂದಲು ಯತ್ನಿಸಿದ ಜನರನ್ನು ಸಿಕ್ಕ ಸಿಕ್ಕಂತೆ ಬಡಿಯಿತು.ಅವರ ಮೇಲೆ ದೌರ್ಜನ್ಯ,ಅತ್ಯಾಚಾರ,ಸುಲಿಗೆ ನಡೆಸಿತು.ಅಸಂಖ್ಯಾತ ಜನರನ್ನು ಕೊಂದು ಹಾಕಿತು.
ಒಂದು ಹಂತದಲ್ಲಿ ರಜಾಕಾರರ ಪಡೆ ಯಾವ ಮಟ್ಟಕ್ಕೆ ಬೆಳೆದಿತ್ತು ಎಂದರೆ ಸ್ವತ: ನಿಜಾಮನೂ ಅದರ ಮೇಲಿನ ಹಿಡಿತ ಕಳೆದುಕೊಳ್ಳುತ್ತಾ ಬಂದಿದ್ದ.ಸಾರಿಗೆ,ಹಣಕಾಸು ಸೇರಿದಂತೆ ಬಹುತೇಕ ವಿಷಯಗಳಲ್ಲಿ ಹಿಡಿತ ಸಾಧಿಸಿದ್ದ ರಜಾಕಾರರು,ಹೈದ್ರಾಬಾದ್ ಸಂಸ್ಥಾನದಿಂದ ಹೊರಬರಲು ಯತ್ನಿಸಿದವರ ವಿರುದ್ಧ ಸಿಕ್ಕ ಸಿಕ್ಕಂತೆ ದೌರ್ಜನ್ಯವೆಸಗಿದರು.
ಇಂತಹ ಕಾಲದಲ್ಲೇ ಬೀದರ್ ಜಿಲ್ಲೆ,ಹುಮ್ನಾಬಾದ್ ತಾಲ್ಲೂಕಿನ ವರವಟ್ಟಿ ಗ್ರಾಮದ ಮೇಲೆ ಒಂದು ದಿನ ರಜಾಕಾರರ ಅಮಾನುಷ ಧಾಳಿ ನಡೆಯಿತು.ಆ ಧಾಳಿ ಎಷ್ಟು ಅಮಾನುಷವಾಗಿತ್ತೆಂದರೆ ಆ ಗ್ರಾಮದ ಹಲವಾರು ಮಂದಿ,ರಜಾಕಾರರ ಅಟ್ಟಹಾಸಕ್ಕೆ ಸಜೀವ ದಹನವಾದರು.
ಈ ಪೈಕಿ ಒಂದು ಕುಟುಂಬದ ಮನೆಯೊಡತಿ ಮತ್ತು ಮೂರು ಮಕ್ಕಳು ಸೇರಿದಂತೆ ನಾಲ್ಕು ಮಂದಿಯಿದ್ದ ಒಂದು ಗುಡಿಸಲೂ ಧಗಧಗನೆ ಹತ್ತಿ ಉರಿಯಿತು.ರಜಾಕಾರರ ಅಟ್ಟಹಾಸಕ್ಕೆ ಬಲಿಯಾದ ಆ ಕುಟುಂಬದ ಯಜಮಾನರ ಹೆಸರು ಮಾಪಣ್ಣ!
ಕೆಲಸಕ್ಕೆಂದು ಹೊರಗೆ ಹೋಗಿದ್ದ ಪರಿಣಾಮವಾಗಿ ಮಾಪಣ್ಣ ಅವರು ರಜಾಕಾರರ ಅಟ್ಟಹಾಸಕ್ಕೆ ಸಿಲುಕದೆ ಬಚಾವಾದರು.ಆದರೆ ಬಂದು ನೋಡುತ್ತಾರೆ.ಎಲ್ಲಿದೆ ಗುಡಿಸಲು?ಪತ್ನಿ ಹಾಗೂ ಮಕ್ಕಳ ಸಮೇತ ಬೂದಿಯಾಗಿದೆ.ಕಂಗಾಲಾದ ಮಾಪಣ್ಣ ಅತ್ತಿತ್ತ ತಿರುಗಿ ನೋಡುತ್ತಾರೆ.
ಒಂದು ಮರಕ್ಕೆ ಸೀರೆಯನ್ನು ಜೋಕಾಲಿಯ ತರ ಕಟ್ಟಲಾಗಿದೆ.ಆ ಜೋಕಾಲಿಯಲ್ಲಿ ಒಂದು ಮಗು ಮಲಗಿದೆ.ಹಾಗೆ ಜೋಕಾಲಿಯಲ್ಲಿ ಮಲಗಿದ್ದ ಕಾರಣಕ್ಕಾಗಿ ಮಗು ಬಚಾವಾಗಿದೆ.ಅದೊಂದೇ ರಜಾಕಾರರ ಧಾಳಿಯ ನಡುವೆಯೂ ಬದುಕುಳಿದ ಮಾಪಣ್ಣ ಅವರ ಮಗು.
ತಕ್ಷಣ ಮಗುವನ್ನು ಎತ್ತಿಕೊಂಡ ಮಾಪಣ್ಣ ನೆರೆಯ ಗುಲ್ಬರ್ಗಕ್ಕೆ ಹೋದರು.ಇದಾದ ಸ್ವಲ್ಪ ಕಾಲದಲ್ಲೇ ಸರ್ದಾರ್ ವಲ್ಲಭಭಾಯ್ ಪಟೇಲರು 1948 ರ ಸೆಪ್ಟೆಂಬರ್ 13 ರಂದು ಭಾರತೀಯ ಸೈನ್ಯವನ್ನು ಹೈದ್ರಾಬಾದ್ ಸಂಸ್ಥಾನಕ್ಕೆ ನುಗ್ಗಿಸಿದರು.ಪರಿಣಾಮ?ಬೇರೆ ದಾರಿ ಕಾಣದ ನಿಜಾಮ,ಹೈದ್ರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟದೊಳಕ್ಕೆ ಸೇರುವುದನ್ನು ಅಸಹಾಯಕವಾಗಿ ನೋಡಬೇಕಾಯಿತು.
ಈ ಮಧ್ಯೆ ವರವಟ್ಟಿಯಿಂದ ಗುಲ್ಬರ್ಗಕ್ಕೆ ಬಂದ ಮಾಪಣ್ಣ ಅಲ್ಲಿನ ಎಂ.ಎಸ್.ಕೆ.ಮಿಲ್ ನಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು.ಕಷ್ಟ ಪಟ್ಟು ದುಡಿದು ತಮ್ಮ ಮಗುವನ್ನು ಬೆಳೆಸಿದರು.ಮುಂದೆ ಅದೇ ಮಗು ದೊಡ್ಡದಾಯಿತು.ಕಷ್ಟ ಪಟ್ಟು ಓದಿದ್ದರ ಫಲವಾಗಿ ಕಾರ್ಖಾನೆಯ ಕಾನೂನು ಸಲಹೆಗಾರರ ಪಟ್ಟ ಸಿಕ್ಕಿತು.ಸಂಯುಕ್ತ ಮಜದೂರ್ ಸಂಘಟನೆಯ ಮುಖಂಡತ್ವವೂ ದಕ್ಕಿತು.
ಅಷ್ಟೇ ಅಲ್ಲ,ದೊಡ್ಡದಾದ ಈ ಮಗು ಕಾರ್ಖಾನೆಯ ನೂರಾರು ಮಂದಿ ಬಡ ಕಾರ್ಮಿಕರಿಗೆ ಸ್ವಂತ ಸೂರು ಕಟ್ಟಿಕೊಟ್ಟಿತು.ಒಂದು ಕಾಲದಲ್ಲಿ ರಜಾಕಾರರ ಕ್ರೌರ್ಯಕ್ಕೆ ಸಿಲುಕಿ ಕುಟುಂಬವನ್ನೇ ಕಳೆದುಕೊಂಡ ಆ ಮಗು ಈ ರೀತಿ ನೂರಾರು ಜನರಿಗೆ ಸೂರು ನಿರ್ಮಿಸಿಕೊಟ್ಟಿದ್ದಷ್ಟೇ ಅಲ್ಲ.1969 ರಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಕರ್ನಾಟಕದ ಧೀಮಂತ ನಾಯಕನಾಗಿ ಬೆಳೆದು ನಿಂತಿದ್ದು ಪವಾಡವೇ ಸೈ.
ಹೀಗೆ ರಜಾಕಾರರ ಧಾಳಿಗೆ ಬಲಿಯಾಗಿ ತಂದೆಯನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಕಳೆದುಕೊಂಡರೂ ತಲೆ ಎತ್ತಿ ನಿಂತ,ಮಂತ್ರಿಯಾಗಿ,ಪ್ರತಿಪಕ್ಷದ ನಾಯಕರಾಗಿ,ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿ,ರೈಲ್ವೇ ಸಚಿವರಾಗಿ,ರಾಷ್ಟ್ರೀಯ ಕಾಂಗ್ರೆಸ್ ನ ಸಂಸದೀಯ ನಾಯಕರಾಗಿ, ರಾಜ್ಯಸಭೆಗೆ ಭೂಷಣವಾಗಿ,ಎಐಸಿಸಿ ಅಧ್ಯಕ್ಷರ ಪಟ್ಟಕ್ಕೇರಿರುವ ಆ ಮಗುವಿನ ಹೆಸರೇನು ಗೊತ್ತಾ?

ಎಂ.ಮಲ್ಲಿಕಾರ್ಜುನ ಖರ್ಗೆ!

ಇವತ್ತು ಕಣ್ಣ ಮುಂದೆ ಕಾಣುವ ದೊಡ್ಡ ದೊಡ್ಡವರ ಬೆನ್ನಲ್ಲಿ ಇಂತಹ ದಾರುಣ ಕತೆಗಳೂ ಇರುತ್ತವೆ.ಹೀಗಾಗಿ ಇದು ಕತೆಯಲ್ಲ,ಜೀವನ ಎಂಬ ಕಾರಣಕ್ಕಾಗಿ ನಿಮ್ಮ ಬಳಿ ಹಂಚಿಕೊಂಡೆ.

ಆರ್.ಟಿ.ವಿಠ್ಢಲಮೂರ್ತಿ

(ಇವತ್ತು ಮಲ್ಲಿಕಾರ್ಜುನ ಖರ್ಗೆಯವರ ಜನ್ಮ ದಿನ)

LEAVE A REPLY

Please enter your comment!
Please enter your name here