ಪ್ರಧಾನಮಂತ್ರಿ ಫಸಲ್ ಭೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ; ಸಮರ್ಪಕ ಅನುಷ್ಠಾನಕ್ಕೆ ವೆಂಕಟ್ ರಾಜಾ ಸೂಚನೆ

0
139

ಮಡಿಕೇರಿ ಜು.21:-ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಇರುವ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಶ್ರಮಿಸುವಂತೆ ಸೂಚಿಸಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ತೊಡಗಿಸಿಕೊಂಡು ವಿಮಾ ಯೋಜನೆಯನ್ನು ತಲುಪಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸಂಬಂಧಿಸಿದಂತೆ ಕೃಷಿಕರಿಗೆ ಹೆಚ್ಚಿನ ಮಾಹಿತಿ ನೀಡುವಂತಾಗಬೇಕು. ಅರ್ಹ ಕೃಷಿಕರೆಲ್ಲರಿಗೂ ಸರ್ಕಾರದ ಸೌಲಭ್ಯ ತಲುಪುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು ಮಾಹಿತಿ ನೀಡಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2023-24 ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮತ್ತಿತರ ಪ್ರಾಕೃತಿಕ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಯೋಜನೆಯಡಿಯಲ್ಲಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ.2 ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿರುತ್ತದೆ. ಬಿತ್ತನೆ ಅಥವಾ ನಾಟಿ ಕಾಲಕ್ಕೆ, ಬೆಳವಣಿಗೆ ಹಂತದಲ್ಲಿ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ, ಕೃಷಿ ವಿಮಾ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಲಭ್ಯವಿದ್ದು, ಈ ಯೋಜನೆಯಡಿ ಅರ್ಜಿಯನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿಗೆ ಸಂಬಂಧಿಸಿದಂತೆ ಭತ್ತ (ನೀರಾವರಿ) ಸಾಮಾನ್ಯ (ಪ್ರತಿ ಹೆಕ್ಟೇರ್‍ಗೆ) ವಿಮಾ ಮೊತ್ತ ರೂ.93,250, ರೈತರ ವಿಮಾ ಕಂತು ಶೇ.2, ರೈತರ ವಿಮಾ ಕಂತು ಮೊತ್ತ ರೂ.1865 ಆಗಿದ್ದು, ಕೃಷಿಕರು ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್, 16 ಕೊನೆಯ ದಿನವಾಗಿದೆ ಎಂದು ವಿವರಿಸಿದರು.
ಹಾಗೆಯೇ ಭತ್ತ(ಮಳೆಯಾಶ್ರಿತ) ವಿಮಾ ಮೊತ್ತ ರೂ.63,750 ಆಗಿದ್ದು, ರೈತರ ವಿಮಾ ಕಂತು ಶೇ.2 ಆಗಿದೆ. ಆ ನಿಟ್ಟಿನಲ್ಲಿ ರೈತರ ವಿಮಾ ಕಂತು ಮೊತ್ತ ರೂ.1275 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್, 16 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಮುಸುಕಿನಜೋಳ(ಮಳೆಯಾಶ್ರಿತ) ಸಾಮಾನ್ಯ ವಿಮಾ(ಪ್ರತಿ ಹೆಕ್ಟೇರ್‍ಗೆ) ವಿಮಾ ಮೊತ್ತ ರೂ.56,500, ರೈತರ ವಿಮಾ ಕಂತು ಶೇ.22 ಆಗಿದ್ದು, ರೈತರ ವಿಮಾ ಕಂತು ಮೊತ್ತ ರೂ.12,430 ಆಗಿದೆ. ರೈತರು ಹೆಸರು ನೋಂದಾಯಿಸಿಕೊಳ್ಳಲು ಜುಲೈ, 31 ಕೊನೆಯ ದಿನವಾಗಿದೆ ಎಂದರು.

ಹೆಚ್ಚಿನ ಮಾಹಿತಿಗೆ ಕೃಷಿ ವಿಮಾ ಕಂಪನಿಯ ದೂ.ಸಂ. 18004250505, ವಿಮಾ ಕಂಪನಿಯ ಪ್ರತಿನಿಧಿಗಳಾದ ಸ್ಮಿತಾ ಸಿ.ಡಿ, ದೂ.ಸಂ. 7019969942 ಹಾಗೂ ಸತೀಶ್ ಎಚ್.ಆರ್ ದೂರವಾಣಿ ಸಂ: 8618234069 ಸಂಪರ್ಕಿಸಬಹುದು. ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಶಬನಾ ಎಂ.ಶೇಕ್ ಅವರು ವಿವರಿಸಿದರು.
ಯೋಜನೆಯ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ http://www.samrakshane.karnataka.gov.in/ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಹಾಗೂ ಈ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಶೇಖ್ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಬೆಳೆ ವಿಮೆಗೆ ಬೆಳೆ ಸಮೀಕ್ಷೆ ಕಡ್ಡಾಯವಾಗಿದ್ದು, ರೈತ ಬಾಂಧವರು ತಾವೇ ರೈತರ ಬೆಳೆ ಸಮೀಕ್ಷೆ ಆಪ್ ಮುಖಾಂತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಅಥವಾ ಹತ್ತಿರದ ಕೃಷಿ ಇಲಾಖೆ/ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್ ಅವರು ಮಾಹಿತಿ ನೀಡಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಕಾಳುಮೆಣಸು ಬೆಳೆಗೆ ಒಟ್ಟು ರೂ.47 ಸಾವಿರ ಹಾಗೂ ಅಡಿಕೆ ಬೆಳೆಗೆ ರೂ.1,28,000 ಆಗಿದೆ. ವಿಮಾ ಕಂಪನಿಗೆ ಒಟ್ಟು ವಿಮಾ ಮೊತ್ತಕ್ಕೆ ರೈತರು ಕಾಳುಮೆಣಸು ಬೆಳೆಗೆ ಶೇ.5 ರ ವಿಮಾ ಮೊತ್ತ ರೂ. 2350 ಹಾಗೂ ಅಡಿಕೆ ಬೆಳೆಗೆ ರೂ. 6400 ಪ್ರತಿ ಹೆಕ್ಟೇರ್ ಪಾವತಿಸಬೇಕಿದೆ. ವಿಮಾ ನೋಂದಣಿಗೆ ಜುಲೈ, 31 ಕೊನೆ ದಿನವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿಮೆ ಮಾಡಿಸಲು ಇಚ್ಚಿಸುವ ರೈತರು ನಿಗಧಿತ ಅರ್ಜಿಯೊಂದಿಗೆ ಪಹಣಿ ಪತ್ರ, ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಹತ್ತಿರದ ಬ್ಯಾಂಕ್‍ನಲ್ಲಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಎಚ್.ಆರ್.ನಾಯಕ್ ಅವರು ವಿವರಿಸಿದರು.

ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ವತಿಯಿಂದ ಹೊರತಂದಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸಂಬಂಧ ಕರಪತ್ರವನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬಿಡುಗಡೆ ಮಾಡಿದರು.

ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಅಂಕೇಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್, ನಬಾರ್ಡ್ ವ್ಯವಸ್ಥಾಪಕರಾದ ರಮೇಶ್ ಬಾಬು, ಕೃಷಿ ಇಲಾಖೆ ಉಪ ನಿರ್ದೇಶಕರಾದ ಬಾಲರಾಜ್ ರಂಗರಾವ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಎಂ.ಕೆ.ಡೀನಾ, ಮಂಜುನಾಥ್ ಶೆಟ್ಟಿ, ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಸಹಕಾರ ಇಲಾಖೆ ಉಪ ನಿಬಂಧಕರಾದ ಕೃಷ್ಣಪ್ರಸಾದ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾಗರಾಜು, ಕೃಷಿ ಅಧಿಕಾರಿ ವರದರಾಜು, ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು, ಇತರರು ಇದ್ದರು.

LEAVE A REPLY

Please enter your comment!
Please enter your name here