ಆಯುರ್ವೇದ ಪದ್ದತಿ ಅಳವಡಿಕೆಯಿಂದ ಆರೋಗ್ಯ-ಆಯುಷ್ಯ ವೃದ್ದಿ: ಸುಜಾತ ಕೆ.ಆರ್

0
42

ಶಿವಮೊಗ್ಗ, ನವೆಂಬರ್ 10: ಇಂದಿನ ಧಾವಂತದ ಜೀವನ ಶೈಲಿ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ಆಯುರ್ವೇದ ಪದ್ದತಿ ಅಳವಡಿಕೆಯಿಂದ ಉತ್ತಮ ಆರೋಗ್ಯ-ಆಯುಷ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತ ಕೆ.ಆರ್. ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳು, ನೀಮಾ ಜಿಲ್ಲಾ ಘಟಕ, ಎಎಫ್‍ಐ ಜಿಲ್ಲಾ ಘಟಕ ಹಾಗೂ ಜಿಲ್ಲೆಯ ಇತರೆ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಇಂದು ಸುವರ್ಣ ಸಾಂಸ್ಕøತಿಕ ಭವನದಲ್ಲಿ ಏರ್ಪಡಿಸಲಾಗಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕವರಿಂದ ಹಿಡಿದು ಎಲ್ಲರೂ ಇಂದು ಧಾವಂತದಲ್ಲಿ ಬದುಕುತ್ತಿದ್ದು, ಸುಸ್ಥಿರವಲ್ಲದ ಜೀವನ ಶೈಲಿಯಿಂದ ರೋಗ ಮತ್ತು ಕೊರಗಿನ ಜೀವನ ನಡೆಸುತ್ತಿದ್ದೇವೆ. ನಮ್ಮ ಪ್ರಕೃತಿಯನ್ವಯ ಬದುಕುವುದನ್ನು ಬಿಟ್ಟು ಅಕ್ಕಪಕ್ಕದವರನ್ನು ನೋಡಿ ಸ್ಪರ್ಧೆಯಲ್ಲಿ ಬದುಕುತ್ತಾ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ತ್ವರಿತ ಪರಿಣಾಮಕ, ಫಲಿತಾಂಶ ನೀಡುವ ಪದ್ದತಿಗೆ ಮಾರು ಹೋಗಿದ್ದೇವೆ.

ಪ್ರಾಣಿಗಳು ಸದಾ ಪ್ರಕೃತಿಯೊಂದಿಗೆ ಇರುವುದರಿಂದ ಅವುಗಳಿಗೆ ವಯಸ್ಸಾದರೂ ಅದು ಗೊತ್ತಾಗುವುದಿಲ್ಲ. ಸದಾ ಚಟುವಟಿಕೆಯಿಂದ, ಆಯುಷ್ಯದಿಂದಿರುತ್ತವೆ. ಅದೇ ನಾವು ನೀಡುವ ಆಹಾರ ತಿನ್ನುವ ಜಾನುವಾರು ರೋಗಕ್ಕೀಡಾಗುತ್ತವೆ. ಮಕ್ಕಳನ್ನು ಸಹ ನಾವು ಧಾವಂತಕ್ಕೆ, ಸ್ಪರ್ಧೆಗೆ ತಳ್ಳುತ್ತಿರುವುದರಿಂದ ಒತ್ತಡಕ್ಕೀಡಾಗುತ್ತಿದ್ದಾರೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಶುರುವಾಗುತ್ತಿವೆ. ಔಷಧಿಗಳ ಜಾಹಿರಾತು ಸಹ ಹೆಚ್ಚುತ್ತಿದ್ದು ದೊಡ್ಡ ವ್ಯಾಪಾರದಂತೆ ಆಗಿದೆ.

ಆದ್ದರಿಂದ ನಾವು ಆಯುರ್ವೇದ ಪದ್ದತಿಯೊಂದಿಗೆ ಉತ್ತಮ ಜೀವನಶೈಲಿ ಅಳವಡಿಸಿಕೊಂಡು ಅನುಸರಿಸಬೇಕು. ಆಯುರ್ವೇದ ವಿದ್ಯಾರ್ಥಿಗಳು, ಯುವಜನತೆ ಎಲ್ಲೆಡೆ ಆಯುರ್ವೇದ ಪದ್ದತಿ ಕುರಿತು ಅರಿವು ಮೂಡಿಸಿ, ಎಲ್ಲರಿಗೂ ತಲುಪಿಸಬೇಕೆಂದು ತಿಳಿಸಿದರು.

ಶಿವಮೊಗ್ಗ ತಾಲ್ಲೂಕು ತಹಶೀಲ್ದಾರರಾದ ನಾಗರಾಜ್ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲೆಲ್ಲ ಆಯುರ್ವೇದ ಪದ್ದತಿಯನ್ನು ಪ್ರಚಾರ ಮಾಡಬೇಕು. ಎಲ್ಲರೂ ಆಯುರ್ವೇದ ವೈದ್ಯ ಪದ್ದತಿಯನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕೆಂದು ಕರೆ ನೀಡಿದರು.

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಎಂ.ಎಸ್.ದೊಡ್ಡಮನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯುರ್ವೇದ ಪದ್ದತಿ ಕುರಿತು ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಆಯುರ್ವೇದ ವೈದ್ಯರ ಮುಖಾಂತರ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡು ಸಾರ್ವಜನಿಕರು ಉಪಯೋಗ ಪಡೆಯಬೇಕೆಂದರು.

ಡಾ.ರವಿಶಂಕರ್ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ಸಾವಿರದಷ್ಟು ಪುರಾತನವಾದ ವೈದ್ಯ ಪದ್ದತಿ ಆಯುರ್ವೇದ. ಆಯುಷ್ಯವಂತರಾಗಿರಲು ಆಯುರ್ವೇದ ಪದ್ದತಿಯನ್ನು ಅನುಸರಿಸಬೇಕು. ಆಯುರ್ವೇದ ಪದ್ದತಿ ಅಳವಡಿಕೆಯಿಂದ ಆರೋಗ್ಯ ಮತ್ತು ಆಯುಷ್ಯ ವೃದ್ದಿಯಾಗುತ್ತದೆ. ರೋಗ ಬರುವುದಕ್ಕೂ ಮುನ್ನ ಆರೋಗ್ಯ ಕಾಪಾಡುವುದು ಹಾಗೂ ರೋಗ ಬಂದ ನಂತರ ಚಿಕಿತ್ಸೆ ನೀಡುವುದು ಆಯುರ್ವೇದ ಪದ್ದತಿಯ ಧ್ಯೇಯವಾಗಿದೆ. ಇತ್ತೀಚಿನ ಚಿಕ್ಕ ವಯಸ್ಸಿನವರಲ್ಲಿಯೂ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು ಇದಕ್ಕೆ ಕೇವಲ ಚಿಕಿತ್ಸೆ ನೀಡಿದರೆ ಸಾಲದು, ಬದಲಾಗಿ ಆಹಾರ, ವಿಹಾರ, ಜೀವನಶೈಲಿ ಬದಲಾವಣೆ ಮಾಡುವುದು ಅಗತ್ಯ. ಆಯುರ್ವೇದದಿಂದ ಇದನ್ನು ಮಾಡಬಹುದು. ಈ ಪದ್ದತಿ ಎಲ್ಲ ಜನತೆಗೆ ತಲುಪಬೇಕೆಂಬ ಉದ್ದೇಶದಿಂದ ಸರ್ಕಾರ 2016 ರಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಧನ್ವಂತರಿ ಜಯಂತಿಯ ಶುಭದಿನದಂದು ಆಚರಿಸಲು ನಿರ್ಧರಿಸಿತು.

ಆಯುರ್ವೇದ ದಿನಾಚರಣೆ ಪ್ರಯುಕ್ತ ಸೆ.28 ರಿಂದ ನ.9 ರವರೆಗೆ ವಿದ್ಯಾರ್ಥಿಗಳಿಗಾಗಿ ಆಯುರ್ವೇದ, ರೈತರಿಗಾಗಿ ಆಯುರ್ವೇದ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಆರೋಗ್ಯವೆಂಬ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೂ ಇಂದು ಉಚಿತ ಆರೋಗ್ಯ ಶಿಬಿರ ಮತ್ತು ಡಾ.ಪತಂಜಲಿ ಮತ್ತು ಡಾ.ರವಿರಾಜ್‍ರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಎ.ಎಸ್. ಪುಷ್ಪ, ಆಯುರ್ವೇದ ಮಹಾವಿದ್ಯಾಲಯದ ಆರ್‍ಎಂಓ ಹರ್ಷಪುತ್ರಾಯ, ನೋಡಲ್ ಅದಿಕಾರಿ ಡಾ.ಶಿವಾನಂದ್, ಡಾ.ಈರಣ್ಣ, ಡಾ.ಸಂತೋಷ್, ಡಾ.ರಾಘವೇಂದ್ರ, ಡಾ.ಹಿರೇಮಠ್, ಇತರೆ ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here