ಮಕ್ಕಳ ಹಿತಾಸಕ್ತಿಗೆ ಕಾನೂನಿನಲ್ಲಿ ಪೋಕ್ಸೋ ಕಾಯಿದೆಯು ಸಹಕಾರಿಯಾಗಿದೆ. ನ್ಯಾ.ಸರಸ್ವತಿ ಕೆ.ಎನ್.

0
113

ಶಿವಮೊಗ್ಗ, ಫೆಬ್ರವರಿ 18:ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯ, ಹಿಂಸೆ, ಮಾನಸಿಕ ಹಿಂಸೆ ಇಂತಹ ಪ್ರಕರಣಗಳಿಗೆ ಹಾಗೂ ಮಕ್ಕಳ ಹಿತಾಸಕ್ತಿಗೆ ಕಾನೂನಿನಲ್ಲಿ ಪೋಕ್ಸೋ ಕಾಯಿದೆಯು ಸಹಕಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ಕೆ.ಎನ್ ಇವರು ಹೇಳಿದರು.
ಇಂದು ನಗರದ ಮೇರಿ ಇಮ್ಯಾಕ್ಯೂಲೇಟ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಮೇರಿ ಇಮ್ಯಾಕ್ಯೂಲೇಟ್ ಪ್ರೌಢಶಾಲೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಹಯೋಗದೊಂದಿಗೆ “ಪೋಕ್ಸೋ ಕಾಯಿದೆ ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು” ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು.
ಕಾನೂನು ಎಂಬುದು ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಇಷ್ಟ ಪಟ್ಟರು, ಇಷ್ಟ ಪಡದಿದ್ದರು ಇದರ ಚೌಕಟ್ಟಿನಲ್ಲಿ ನಾವು ಇರಬೇಕು. ಪ್ರೌಢಾವಸ್ಥೆಯು ಅತ್ಯಂತ ಅಪಾಯಕಾರಿ ವಯಸ್ಸು, ಈ ಸಮಯದಲ್ಲಿ ನಮ್ಮ ಮೇಲೆ ನಮಗೆ ಹಿಡಿತವಿರಬೇಕು. ಉತ್ತಮ ವ್ಯಕ್ತಿ ಆಗಬೇಕಾದರೆ, ಬದುಕಿನಲ್ಲಿ ಏನಾದರು ಸಾಧನೆ ಮಾಡಬೇಕಾದರೆ ನಮ್ಮ ಸುತ್ತಮುತ್ತಲಿನ ವಾತಾವರಣದ ಮಾರ್ಗದರ್ಶನ ಪ್ರಮುಖವಾಗಿರುತ್ತದೆ ಹಾಗೂ ನಾವು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ಕಾನೂನಿನ ಪ್ರಕಾರ ಮಕ್ಕಳೆಂದರೆ 18 ವರ್ಷದೊಳಗಿನ ವಯಸ್ಸಿನವರು. ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಅಪರಾದಗಳು ದಾಖಲಾಗಬೇಕಾದರೆ ಕೇವಲ ಲೈಂಗಿಕ ದೌರ್ಜನ್ಯ ಒಂದೇ ಅಲ್ಲದೆ, ಮಕ್ಕಳ ಮೇಲಿನ ಮಾನಸಿಕ ಹಿಂಸೆ, ಬಾಲ ದುಡಿಮೆ, ಬಾಲ್ಯ ವಿವಾಹ, ಭಿಕ್ಷಾಟನೆ, ಚುಡಾಯಿಸುವುದು ಹೀಗೆ ಹಲವಾರು ಪ್ರಕರಣಗಳು ದಾಖಲಾಗುತ್ತವೆ ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳ ಸಂಖ್ಯೆ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಿವೆ. ಮಕ್ಕಳ ಮೇಲೆ ಇಂತಹ ಪ್ರಕರಣಗಳು ಹೆಚ್ಚಾಗಿ ಹತ್ತಿರದ ಸಂಬಂದಿಕರಿಂದಲೇ ಆಗುತ್ತಿವೆ. ತಮಗೆ ಆದ ದೌರ್ಜನ್ಯದ ಬಗ್ಗೆ ತಂದೆ ತಾಯಿಗಳು ಮತ್ತು ಶಿಕ್ಷಕರೊಂದಿಗೆ ಹೇಳಿ ಪೊಲೀಸ್ ಠಾಣೆಗೆ ಪ್ರಕರಣವನ್ನು ದಾಖಲಿಸಲು ಮುಂದಾಗಬೇಕು ಹಾಗೂ ಮಕ್ಕಳ ಹಕ್ಕಿನ ಉಲ್ಲಂಘನೆಯಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿ ಅಥವಾ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬೇಕು. ಪೋಕ್ಸೋ ಕಾಯಿದೆಯ ನಿಯಮಗಳನ್ನು ಸುತ್ತಮುತ್ತಲಿನ ಜನರಲ್ಲಿ ಮತ್ತು ಮನೆಯವರಲ್ಲಿ ಅರಿವು ಮೂಡಿಸುವಂತೆ ಅವರು ತಿಳಿಸಿದರು.
ದೌರ್ಜನ್ಯಕ್ಕೆ ಒಳಪಟ್ಟ ಮಗುವಿಗೆ ನ್ಯಾಯಾಲಯದಲ್ಲಿ ಕಲ್ಪಿಸಲಾಗಿರುವ ಮುಕ್ತ ವಾತವರಣದ ಬಗ್ಗೆಯೂ ತಿಳಿಸಿದರು. ಹಾಗೂ ಆ ಮಗುವಿನ ಆರ್ಥಿಕ ನೆರವಿಗಾಗಿ ಕರ್ನಾಟಕ ಸರ್ಕಾರದಿಂದ 25 ಸಾವಿರ ರೂಪಾಯಿಗಳನ್ನು ಮತ್ತು ವಸತಿ ಕಲ್ಪಿಸಲು ಮೂರು ಲಕ್ಷ ರೂ.ಗಳವರೆಗೆ ಪರಿಹಾರವಾಗಿ ಒದಗಿಸುತ್ತದೆ ಎಂದು ಅವರು ಹೇಳಿದರು .
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಎನ್. ದೇವೇಂದ್ರಪ್ಪ. ಇವರು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕುರಿತು ಉಪನ್ಯಾಸ ನೀಡಿದರು.
ಇಮ್ಯಾಕ್ಯೂಲೇಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಲೂಸಿಯಾನಾ ಫನಾರ್ಂಡೀಸ್. ವಿದ್ಯಾರ್ಥಿಗಳು ಮತ್ತಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here