ಸೊಳ್ಳೆಗಳ ತಾಣವಾಗದಂತೆ ನಿಗಾವಹಿಸಿ: ಡಿಹೆಚ್‍ಒ ಡಾ.ವೈ ರಮೇಶ ಬಾಬು

0
39

ಬಳ್ಳಾರಿ,ನ.11:ಡೆಂಗ್ಯು, ಚಿಕನ್‍ಗುನ್ಯಾ ರೋಗ ನಿಯಂತ್ರಣಕ್ಕಾಗಿ, ಬಳಕೆಗೆ ನೀರು ತುಂಬುವ ಪರಿಕರಗಳಿಗೆ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸಾರ್ವಜನಿಕರು ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶಬಾಬು ಅವರು ಹೇಳಿದರು.
ಮನೆಗೆ ಬಳಸಲು ನೀರು ಅತ್ಯಗತ್ಯವಾಗಿದ್ದು, ನೀರು ತುಂಬುವ ಪರಿಕರಗಳಾದ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆಗಳಿಗೆ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆಗಳು ಮೊಟ್ಟಯಿಡಲು ನೀರು ಸಿಗದಂತೆ ಜಾಗ್ರತೆ ವಹಿಸಬೇಕು ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗದಡಿ ಪ್ರಾಥಮಿಕ ಆರೋಗ್ಯ ಕೇಂದ್ರ ತಾಳೂರು ಸಹಯೋಗದಲ್ಲಿ ತಾಳೂರು ಗ್ರಾಮದಲ್ಲಿ ಸೊಳ್ಳೆಗಳ ಮರಿ (ಲಾರ್ವಾ) ಪತ್ತೆ ಹಚ್ಚುವ ಕಾರ್ಯಕ್ರಮನ್ನು ಪರಿಶೀಲಿಸಿ, ಜಾಗೃತಿ ಮೂಡಿಸಿದರು.
ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು, ಚಿಕನ್‍ಗುನ್ಯಾ ಸೇರಿದಂತೆ ಮಲೇರಿಯಾ, ಆನೆಕಾಲು ಮುಂತಾದ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮುಂಜಾಗ್ರತಾ ಕ್ರಮವಾಗಿ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು, ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚಬೇಕು, ನೀರು ನಿಲ್ಲುವ ಟೈರ್, ಟಿನ್, ಪ್ಲಾಸ್ಟಿಕ್ ಕಫ್‍ಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಮಲಗುವಾಗ ಸೊಳ್ಳೆ ಪರದೆಗಳ ಬಳಕೆ ಮಾಡಬೇಕು, ಯಾರಿಗಾದರೂ ಚಳಿಜ್ವರ, ಅತಿಯಾದ ತಲೆನೋವು, ಕಣ್ಣಿನ ಹಿಂಭಾಗ ಜಗ್ಗಿದಂತಾಗುವುದು ಮುಂತಾದವುಗಳು ಕಂಡು ಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿ ರೋಗ ಖಚಿತ ಪಟ್ಟಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಇತ್ತೀಚಿಗೆ ಎಲ್ಲಡೆ ಡೆಂಗ್ಯು ಪ್ರಕರಣಗಳು ಕಂಡು ಬರುತ್ತಿದ್ದು, ಜನತೆಯೂ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡುವ ಜೊತೆಗೆ ಶಾಶ್ವತವಾಗಿ ನೀರು ನಿಲ್ಲುವ ತಾಣಗಳಲ್ಲಿ ಸೊಳ್ಳೆ ಮರಿಗಳನ್ನು ಆಹಾರವಾಗಿ ಉಪಯೋಗಿಸುವ ಲಾರ್ವಹಾರಿ ಮೀನುಗಳಾದ ಗಾಂಬೋಷಿಯ ಮತ್ತು ಗಪ್ಪಿ ಮೀನುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ಪಡೆದುಕೊಂಡು ಸೊಳ್ಳೆಗಳ ನಿಯಂತ್ರಣ ಮತ್ತು ರೋಗ ತಡೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಸುನೀಲ್ ಕುಮಾರ, ಜಿಲ್ಲಾ ನಸಿರ್ಂಗ್ ಅಧಿಕಾರಿ ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವೆಂಕಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಮುಕ್ಕಣ್ಣ, ಶೂಶ್ರುಷಣಾಧಿಕಾರಿ ಬಳ್ಳಾರೆಪ್ಪ, ಸಿಬ್ಬಂದಿವರಾದ ರಾಜು, ಸುನಿತಾ, ನಾಗೇಶ್, ಅನಂತಲಕ್ಷ್ಮೀ, ಮುಖಂಡರಾದ ಹೊನ್ನುರಪ್ಪ, ಸಂತೋಷ, ಮಹೇಶ, ಸದಾಶಿವ, ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here