ಬಿಕೆಜಿ ಪೌಂಡೇಷನ್ ನಿಂದ 2ನೇ ಹಂತದ ಕಣ್ಣಿನ ಶಸ್ತ್ರ ಚಿಕಿತ್ಸಾ ಉಚಿತ ಶಿಬಿರ

0
19

ಇಡೀ ಜೀವ ಸಂಕುಲಕ್ಕೆ ಕಣ್ಣು ಅತಿ ಪ್ರಮುಖ ಅಂಗವಾಗಿದ್ದು, ಕಾಣದ ಕಣ್ಣುಗಳನ್ನು ಮತ್ತೊಮ್ಮೆ ಜಗತ್ತು ನೋಡುವಂತೆ ಮಾಡಿದ ವೈದ್ಯರಾದ ಕೊಂಡ್ಲಳ್ಳಿಯ ಡಾ. ವಿಜಯ ನಾಗರಾಜ ಬಳ್ಳಾರಿ ತಂಡ ಅಭಿನಂದನಾರ್ಹ ಎಂದು ಬಿಕೆಜಿ ಫೌಂಡೇಷನ್ ಮುಖ್ಯಸ್ಥ ಬಿ.ನಾಗನಗೌಡ್ರು ಹೇಳಿದರು.

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಬಿಕೆಜಿ ಫೌಂಡೇಷನ್‌ನಿಂದ ದಿವಂಗತ ಬಿ. ಕುಮಾರಗೌಡರವರ 14ನೇ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ 2ನೇ ಹಂತದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಔಷಧ, ಕನ್ನಡಕ ವಿತರಿಸಿ ಶುಕ್ರವಾರ ಮಾತನಾಡಿದರು.

ದಿವಂಗತ ಬಿ.ಕುಮಾರಗೌಡರ ಪುಣ್ಯಸ್ಮರಣೆ ನಿಮಿತ್ತ ಪ್ರತಿ ವರ್ಷ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆ ಹಮ್ಮಿಕೊಳ್ಳಲಾಗುತ್ತಿದೆ. ಚಿಕಿತ್ಸೆಗೊಳಗಾದವರು ಕಡ್ಡಾಯವಾಗಿ ಕನ್ನಡಕ ಬಳಸುವ ಮೂಲಕ
ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಬಿಕೆಜಿ ಸಂಸ್ಥೆ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ನಮ್ಮ ಹೆಮ್ಮೆ ಎಂದರು.

ಉಪಕರಣಗಳ ಕೊಡುಗೆ: ಡಾ.ರಾಮಶೆಟ್ಟಿ ಮಾತನಾಡಿ, ಬಿಕೆಜಿ ಸಂಸ್ಥೆಯವರು ನಿರಂತರವಾಗಿ ಜನರ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ. ಕ್ಷಯರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರದ ಕಿಟ್, ಪ್ರತಿವರ್ಷ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಮೂಲಕ ಸಾವಿರಾರು ಜನರಿಗೆ ಮರು ದೃಷ್ಟಿ ಕೊಡುವ ಕೆಲಸ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಗೆ ಅನೇಕ ಉಪಕರಣಗಳ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ನೇತ್ರ ತಜ್ಞ ಡಾ.ವಿಜಯನಾಗರಾಜ ಮಾತನಾಡಿ, ಶಸ್ತ್ರ ಚಿಕಿತ್ಸೆಗೆ ಒಳಗಾದವರು ಹೊಗೆ, ಬೆಂಕಿ, ಧೂಳಿನಿಂದ ಕಣ್ಣನ್ನು ರಕ್ಷಿಸಿಕೊಳ್ಳಬೇಕು ಎಂದರು.

ಬಿಕೆಜಿ ಕೊಡುಗೆ ಸ್ಮರಣೆ: ಬಿಕೆಜಿ ಸಂಸ್ಥೆಯ ಅಧಿಕಾರಿ ರಾಜಶೇಖರ ಬೆಲ್ಲದ ಮಾತನಾಡಿ, ಈವರೆಗೆ ನಮ್ಮ ಸಂಸ್ಥೆಯಿಂದ 1,453 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ವರ್ಷ ಮೊದಲ ಹಂತದಲ್ಲಿ 134, 2ನೇ ಹಂತದಲ್ಲಿ81 ಸೇರಿ 215 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಿಕ್ಷಣಕ್ಕೆ, ಕ್ರೀಡೆಗೆ, ಪರಿಸರ ರಕ್ಷಣೆಗೆ ತಮ್ಮದೇ ಆದ ನಿರಂತರ ಕಾರ್ಯಗಳನ್ನು ಬಿಕೆಜಿ ಸಂಸ್ಥೆ ಮಾಡುತ್ತಿದೆ ಎಂದರು. ಪರಶುರಾಮ ಮೋರೆ, ಗೋಪಾಲ್, ಪ್ರಮೋದ್ ರಿತ್ತಿ, ಗಿರೀಶ್, ಡಾ.ಗೀತಾ, ವಿ.ಸುಬ್ರಮಣ್ಯ, ವೆಂಕಟಸುಬ್ಬಯ್ಯ ಇತರರು ಇದ್ದರು. ಬಿಕೆಜಿ ಸಂಸ್ಥೆಯ ಅಜಯ, ಬಿ.ಎಂ.ಶಿವಕುಮಾರ, ಗೋಪಾಲ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here