ರೈತರ ವಿವಿಧ ಸಮಸ್ಯೆಗಳ ಕುರಿತ ಸಭೆ: ನಿಯಮ ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

0
175

ಬೆಳಗಾವಿ, ಅ.7 : ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಮೋಸ ಆಗದಂತೆ ನಿರ್ದೇಶನ ನೀಡಲಾಗುವುದು. ಆಡಿಟ್ ವರದಿಯಲ್ಲಿ ಯಾವುದೇ ಅವ್ಯವಹಾರಗಳು ಪತ್ತೆಯಾದಲ್ಲಿ, ಅಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಕ್ಕರೆ ಕಾರ್ಖಾನೆಗಳು ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಅ.7) ನಡೆದ ಬೆಳಗಾವಿ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳ ಕುರಿತು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಬಿಲ್ ಗಳನ್ನು ತಕ್ಷಣ ಪಾವತಿಸಲು ಸಂಬಂಧಿಸಿದ ಕಾರ್ಖಾನೆಗಳಿಗೆ ಸೂಚನೆ ನೀಡಲಾಗುವುದು. ಅದೇ ರೀತಿಯಲ್ಲಿ ಸದರಿ ಸಭೆಯಲ್ಲಿ ಭಾಗವಹಿಸದ ಸಕ್ಕರೆ ಕಾರ್ಖಾನೆಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಿ, ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ರೈತರ ಕಬ್ಬಿಗೆ ಎಫ್.ಆರ್.ಪಿ ಅನುಗುಣವಾಗಿ ಬೆಲೆ ನೀಡಲು ಸಭೆ ಕರೆಯಲಾಗಿದೆ. ಎಫ್.ಆರ್.ಪಿ ಬೆಲೆಯನ್ನು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಲಾಗಿದೆ. ಬೆಲೆ ವಿವರಗಳನ್ನು ಪ್ರಕಟಣೆ ಮೂಲಕ ಪತ್ರಿಕೆಗಳಲ್ಲಿ ನೀಡಲಾಗಿದೆ.

ಜಿಲ್ಲಾಡಳಿತದಿಂದ ಕಾರ್ಖಾನೆಗಳಿಗೆ ಸೂಚನೆ:

ರೈತರಿಗೆ ಮೋಸ, ಅನ್ಯಾಯ ಆಗದಂತೆ ಸರ್ಕಾರ ನಿಗದಿ ಮಾಡಿದ ಬೆಲೆ ಸಿಗುವಂತೆ ಜಿಲ್ಲಾಡಳಿತ ಈಗಾಗಲೇ ನಿರಂತರವಾಗಿ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು ಕಾರ್ಖಾನೆಗಳು ಎಫ್.ಆರ್.ಪಿ ಪ್ರಕಾರ ಯಾವುದೇ ಬೆಲೆ ನೀಡಿಲ್ಲ. ಜಿಲ್ಲೆಯಲ್ಲಿರುವ ಯಾವುದೇ ಕಾರ್ಖಾನೆಗಳು ಈವರೆಗೆ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ ಎಂದು ದೂರಿದರು.

ಬಿಲ್ ಕಡಿತದ ವಿವರ ನೋಟಿಸ್ ಬೋರ್ಡ್ ನಲ್ಲಿ ಅಳವಡಿಸಿ:

ರೈತರ ನೀಡುವ ಕಬ್ಬಿನ ಬಿಲ್ ನಲ್ಲಿ ಟ್ರಾನ್ಸ್ಪೋರ್ಟ್ ಮೊತ್ತವನ್ನು ಕಡಿತ ಮಾಡುವ ಕಾರ್ಖಾನೆಗಳು ಬಿಲ್ ನಲ್ಲಿ ಕಡಿತ ಮಾಡಿದ ವಿವರಗಳನ್ನು ಕಾರ್ಖಾನೆಗಳ ನೋಟಿಸ್ ಬೋರ್ಡ್ ನಲ್ಲಿ ಅಳವಡಿಸಬೇಕು. ಕಳೆದ ವರ್ಷದಿಂದ ಯಾವುದೇ ಕಾರ್ಖಾನೆಗಳು ಬಿಲ್ ನಲ್ಲಿ ಕಡಿತ ಮಾಡಿದ ಮೊತ್ತದ ವಿವರಗಳನ್ನು ರೈತರಿಗೆ ತಿಳಿಸಿಲ್ಲ. ಇದೇ ರೀತಿಯಲ್ಲಿ ಮುಂದುವರೆದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಎಚ್ಚರಿಕೆ ನೀಡಿದರು.

ಸೆಪ್ಟಂಬರ್ 21 ರಂದು 4 ಕಾರ್ಖಾನೆಗಳು ಪ್ರಾರಂಭ ವಾಗಿವೆ. ಈಗಾಗಲೇ ರೈತರ ಕಬ್ಬಿನ ಬಿಲ್ ನಲ್ಲಿ ಕಡಿತ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ರೀತಿಯಲ್ಲಿ ಬೇಕಾಬಿಟ್ಟಿ ಮುಂದುವರಿಯಬಾರದು. ಕಾರ್ಖಾನೆ ಪ್ರಾರಂಭಿಸುವ ಮುನ್ನ ಸಕ್ಕರೆ ಆಯುಕ್ತರ ಅನುಮತಿ ಪಡೆಯಬೇಕು ಹಾಗೂ ಕಾರ್ಖಾನೆ ಪ್ರಾರಂಭಿಸುವ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಸೂಚಿಸಿದರು.

ಕಾರ್ಖಾನೆಗಳು ನಿರ್ದೇಶನ ಪಾಲಿಸಬೇಕು:

ಯಾವುದೇ ಗೊಂದಲ ಸೃಷ್ಟಿಸದೆ, ರೈತರಿಗೆ ಅನುಕೂಲವಾಗುವಂತೆ ಸದರಿ ಸಭೆಯಲ್ಲಿ ಚರ್ಚೆಯಾದ ವಿಷಯದ ನಿರ್ದೇಶನಗಳನ್ನು ಎಲ್ಲಾ ಸಕ್ಕರೆ ಕಾರ್ಖಾನೆಗಳು ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಟ್ರಾನ್ಸ್ಪೋರ್ಟ್ ಹಣವನ್ನು ಕಡಿತಗೊಳಿಸಿ ರೈತರಿಗೆ ಎಫ್.ಆರ್.ಪಿ ಯಂತೆ ನಿಗದಿತ ಬೆಲೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಬರವಣಿಗೆ ಮೂಲಕ ಮಾಹಿತಿ ನೀಡಿ:

ಕಾರ್ಖಾನೆಗಳನ್ನು ಪ್ರಾರಂಭಿಸುವ ಮುನ್ನ ಬರವಣಿಗೆಯ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅದೇ ರೀತಿಯಲ್ಲಿ ರೈತರ ಕಬ್ಬಿನ ಬಿಲ್ ನಲ್ಲಿ ಟ್ರಾನ್ಸ್ಪೋರ್ಟ್ ಮೊತ್ತವನ್ನು ಕಡಿತದ ಕುರಿತು ಸಕ್ಕರೆ ಆಯುಕ್ತರಿಗೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಬಳಿಕ ಜಿಲ್ಲಾಡಳಿತದಿಂದ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ ನೀಡಲಾಗುವದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಕಳೆದ 10 ವರ್ಷಗಳಿಂದ ರೈತರು 2500 ರೂಪಾಯಿ ಕಬ್ಬಿನ ಬೆಲೆ ಪಡೆಯುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಪೆಟ್ರೋಲ್, ಡೀಸೆಲ್, ಟ್ರ್ಯಾಕ್ಟರ್, ಟ್ರಕ್ ಬಾಡಿಗೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಬೆಲೆ ಕೂಡ ಏರಿಕೆಯಾಗಿದೆ ಇದರಿಂದ ರೈತರು ಜೀವನ ಮಾಡಲು ಆಗುತ್ತಿಲ್ಲ. ಅದರಂತೆ ಕನಿಷ್ಠ ಬೆಲೆ 5 ಸಾವಿರ ವರೆಗೆ ನೀಡಿದರೆ ರೈತರು ನೆಮ್ಮದಿಯಿಂದ ಜೀವನ ಮಾಡಬಹುದು ಎಂದು ರೈತ ಮುಖಂಡರು ಮನವಿ ಮಾಡಿಕೊಂಡರು.

ನಿಯಮ ಪಾಲಿಸದ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ:

ಎಫ್.ಆರ್.ಪಿ ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಲಯಂತೆ ಕಬ್ಬಿನ ಬೆಲೆ ನೀಡಲಾಗುತ್ತಿದೆ ಎಂದು ಸಕ್ಕರೆ ಆಯುಕ್ತರಾದ ಶಿವಾನಂದ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು, ಕಾರ್ಖಾನೆಗಳು ಸರಿಯಾದ ಮಾಹಿತಿ ಸಕ್ಕರೆ ಆಯುಕ್ತರಿಗೆ ನೀಡುತ್ತಿಲ್ಲ. ನಿಯಮಗಳನ್ನು ಪಾಲಿಸದ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಮೋಸ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾಡಳಿತ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ರೈತ ಮುಖಂಡರು ವಿನಂತಿಸಿದರು.

ರೈತರು ಖಾಸಗಿ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಬಹುದು:

ರೈತರು ಖಾಸಗಿ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿ ಬಳಿಕ ಕಾರ್ಖಾನೆಗಳ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಿ ವ್ಯತ್ಯಾಸ ಪರೀಕ್ಷಿಸಬಹುದು. ಕೆಲವು ಕಾರ್ಖಾನೆಗಳ ವಿರುದ್ಧ ದೂರುಗಳು ಕೇಳಿ ಬರುತ್ತಿವೆ ಖಾಸಗಿ ವೆಟ್ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿದ ಕಬ್ಬು ತೆಗೆದುಕೊಳ್ಳುತ್ತಿಲ್ಲ. ಕಾರ್ಖಾನೆಗಳು ಈ ರೀತಿಯಲ್ಲಿ ವರ್ತಿಸುವುದು ಸೂಕ್ತವಲ್ಲ. ಕಾರ್ಖಾನೆಗಳ ವೆಟ್ ಬ್ರಿಡ್ಜ್ ಗಳಲ್ಲಿ ಅವ್ಯವಹಾರಗಳು ಕಂಡು ಬಂದರೆ 24 ಗಂಟೆಗಳಲ್ಲಿ ಕಾರ್ಖಾನೆ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ರೈತರಿಗೆ ಭರವಸೆ ನೀಡಿದರು.

ರೈತರು ಕಟಾವು ಮಾಡಿಕೊಂಡು ತಮ್ಮ ವಾಹನಗಳ ಮೂಲಕ ಕಾರ್ಖಾನೆಗಳಿಗೆ ಕಬ್ಬು ತಂದರೆ ಎಫ್.ಆರ್.ಸಿ ನಿಗದಿ ಬೆಲೆಯಂತೆ ಯಾವುದೇ ರೀತಿಯ ಕಡಿತ ಮಾಡದೇ ರೈತರಿಗೆ 100 ಪ್ರತಿಶತ ಬಿಲ್ ಪಾವತಿಸಬೇಕು.
ಕಾರ್ಖಾನೆಯು ಟ್ರಾನ್ಸ್ಪೋರ್ಟ್ ಮಾಡಿದರೆ ಮಾತ್ರ ಬಿಲ್ ನಲ್ಲಿ ಹಣ ಕಡಿತ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್. ವಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಚಿಂದ್ರ ಕುಲಕರ್ಣಿ, ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು, ರೈತ ಸಂಘಟನೆಗಳ ಅಧ್ಯಕ್ಷರು, ರೈತ ಮುಖಂಡರು ಸಭೆಯಲ್ಲಿ ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here