ಮನುಕುಲದ ಉನ್ನತಿಗೆ ಬೇಕಾದಂತಹ ಸಾರ್ವಕಾಲಿಕ ಚಿಂತನೆಗಳು ವಚನ ಸಾಹಿತ್ಯದಲ್ಲಿ ಅಡಗಿವೆ…

0
42

ಮನುಕುಲದ ಉನ್ನತಿಗೆ ಬೇಕಾದಂತಹ ಸಾರ್ವಕಾಲಿಕ ಚಿಂತನೆಗಳು ಹಾಗೂ ಪರಿಹಾರೋಪಾಯಗಳನ್ನು ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಕಟ್ಟಿಕೊಟ್ಟು ಮಾನವ ಕಲ್ಯಾಣಕ್ಕೆ ಕಾರಣರಾಗಿದ್ದಾರೆ ಎಂದು ಬನ್ನಿಹಟ್ಟಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ಜಿ ಎಂ ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು…

ಸಂಡೂರಿನ ಆದರ್ಶ ವಿದ್ಯಾಲಯದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಂಡೂರು ವತಿಯಿಂದ ಏರ್ಪಡಿಸಲಾಗಿದ್ದ ವಚನ ದಿನ -ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ” *ವಚನ ಸಾಹಿತ್ಯ ಮತ್ತು ಜೀವನದ ಮೌಲ್ಯಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಇವರು ಕಾಯಕ ಮತ್ತು ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟು ಸರಳ ಜೀವನವನ್ನು ನಡೆಸಿ ಸಮಾಜದ ಉಳಿತಿಗಾಗಿ ಶ್ರಮಿಸಿದ 12ನೇ ಶತಮಾನದ ಶರಣ- ಶರಣೆಯರು ನೀಡಿದ ವಚನಾನುಭವ, ವಚನ ಸಾಹಿತ್ಯವಾಗಿ ರೂಪುಗೊಂಡು ವಚನ ಧರ್ಮವು ವಿಶ್ವಧರ್ಮವಾಗಿ ಪ್ರಾಶಸ್ತ್ಯ ಪಡೆಯುತ್ತಿರುವುದು ವಚನ ಸಾಹಿತ್ಯದ ಸರ್ವ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು. ದಯೆ, ಕರುಣೆ, ಅಹಿಂಸೆ, ಸತ್ಯ, ಸಂಸ್ಕಾರ ಮೊದಲಾದ ಮಾನವೀಯ ಮೌಲ್ಯಗಳನ್ನು ಹುಟ್ಟುಹಾಕಿದ ಶರಣರ ಅನುಭಾವದ ಬೆಳಕಿನಲ್ಲಿ ನಾವುಗಳು ನಮ್ಮ ಮೈ- ಮನ, ಭಾವ ಹಾಗೂ ಆತ್ಮಗಳನ್ನ ಶುದ್ಧಿಯಾಗಿಸಿಕೊಳ್ಳಬೇಕು ಎಂದ ಇವರು ವಿದ್ಯಾರ್ಥಿಗಳು ಕಾಲದ ಮಹತ್ವವನ್ನರಿತು ಸಾಧನೆಯ ಛಲದೊಂದಿಗೆ ಗುರಿ ಮುಟ್ಟಿ ಆದರ್ಶಮಯ ಬದುಕನ್ನ ಬದುಕಬೇಕು, ವಚನಗಳ ಸಾರವನ್ನು ಅರ್ಥೈಸಿಕೊಂಡು ಹೃದಯವಂತಿಕೆ ಹಾಗೂ ಸಂಸ್ಕಾರಯುತ ನಡವಳಿಕೆಯೊಂದಿಗೆ ಸಮಾಜಕ್ಕೆ ಕೊಡುಗೆಯಾಗಿ ನಿಲ್ಲಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಡೂರಿನ ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಶೆಟ್ಟಿ ಇವರು ” ವಿದ್ಯಾರ್ಥಿಗಳು ಪ್ರತಿದಿನವೂ ಮನೆಯಲ್ಲಿ ಶರಣರ, ದಾರ್ಶನಿಕರ ವಚನಗಳನ್ನ ಆಲಿಸುವ ಮೂಲಕ ಅವುಗಳ ಸಾರವನ್ನು ಅರಿತು ಜೀವಿಸಬೇಕು ಹಾಗೂ ಸಾಧನೆಗೆ ವಚನಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತು ಸಂಡೂರು ತಾಲೂಕು ಘಟಕದ ಅಧ್ಯಕ್ಷರಾದ ಬಿ ನಾಗನಗೌಡ ಇವರು ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮುಖ್ಯ, ಇಂತಹ ಹೃದಯವಂತಿಕೆಯನ್ನು ನೀಡುವ ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಗುರಿ ಸಾಧನೆಯೊಂದಿಗೆ ಬದುಕಿನ ಶ್ರೇಷ್ಠತೆಯನ್ನು ಸಾಧಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸಂಡೂರಿನ ವಿರಕ್ತ ಮಠದ ಪ್ರಭು ಸ್ವಾಮಿ ಗಳು ನುಡಿದಂತೆ ನಡೆದ ಶರಣರ ಬದುಕು ಮಾನವತೆಯ ಸಂದೇಶವನ್ನು ಸಾರುವುದರ ಜೊತೆಗೆ ಮಾನವ ಕೋಟಿಯ ಉನ್ನತಿಗೆ ಬೇಕಾದ ತತ್ವಾದರ್ಶಗಳನ್ನು ಹೊಂದಿವೆ. ಸುತ್ತೂರು ಮಠದ ಶ್ರೀಗಳ ಜನ್ಮದಿನವಾದ ಇಂದು ವಚನ ದಿನವನ್ನಾಗಿ ಆಚರಿಸುತ್ತಿದ್ದು ಇಂತಹ ಕಾರ್ಯಕ್ರಮಗಳು ಸಂಸ್ಕಾರದ ಪಾಠವನ್ನು ನೀಡುವ ಮೂಲಕ ಫಲಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಚನ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಆದರ್ಶ ವಿದ್ಯಾಲಯದ ಮುಖ್ಯ ಗುರುಗಳಾದ ಚಂದ್ರಶೇಖರ್ ರವರು ಹಾಗೂ ಕದಳಿ ಮಹಿಳಾ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷೆ ನೀಲಾಂಬಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಅರಳಿ ಕುಮಾರಸ್ವಾಮಿ, ಸಂಡೂರು ತಾಲೂಕು ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ಗುಟ್ಟೆ ನಳಿನ, ಆದರ್ಶವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು, ನಿವೃತ್ತ ಮುಖ್ಯ ಗುರುಗಳಾದ ಮೃತ್ಯುಂಜಯ,ಸಾವಿತ್ರಮ್ಮ, ಬಾದಾಮಿ, ಪ್ರೇಮ ಲೀಲಾ ಮತ್ತಿತರರು ಉಪಸ್ಥಿತರಿದ್ದರು.

ಆದರ್ಶ ವಿದ್ಯಾಲಯದ ಶಿಕ್ಷಕ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರ. ಶಿಕ್ಷಕ ಭಾಷಾ ಸ್ವಾಗತಿಸಿದರು, ಶಿಕ್ಷಕ ನಾಗರಾಜ್ ವಂದಿಸಿದರು. ಕನ್ನಡ ಶಿಕ್ಷಕ ರವೀಂದ್ರ ಗೌಡ ನಿರೂಪಿಸಿದರು. ಶ.ಸಾ.ಪ. ಸದಸ್ಯರಾದ ಎ. ಎಂ. ಶಿವಮೂರ್ತಿ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಸಂಡೂರಿನ ಕುಮಾರಸ್ವಾಮಿ ಮತ್ತು ಭುಜಂಗ ನಗರದ ತಾಯಪ್ಪ ಸಂಗೀತ ಕಾರ್ಯಕ್ರಮ ನೀಡಿದರು.

LEAVE A REPLY

Please enter your comment!
Please enter your name here