ಪ್ರಜಾವಾಣಿ ಪತ್ರಿಕೆ ಪ್ರಾರಂಭವಾದ ದಿನ

0
111

ಪ್ರಜಾವಾಣಿ ಮೊದಲು ಪ್ರಕಟಗೊಂಡದ್ದು 1948ರ ಅಕ್ಟೋಬರ್ 15ರಂದು.

ಉದ್ಯಮಿಗಳಾದ ಕೆ.ಎನ್.ಗುರುಸ್ವಾಮಿ ನೇತೃತ್ವದಲ್ಲಿ ರೂಪುಗೊಂಡ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೊದಲು ಡೆಕ್ಕನ್ ಹೆರಾಲ್ಡ್ ದೈನಿಕವನ್ನು (1948, ಜೂನ್ 17) ಮತು ನಾಲ್ಕು ತಿಂಗಳ ನಂತರ 1948ರ ಅಕ್ಟೋಬರ್ 15ರಂದು ಪ್ರಜಾವಾಣಿ ಕನ್ನಡ ದೈನಿಕವನ್ನು ಪ್ರಕಟಿಸಿತು.

ಪ್ರಜಾವಾಣಿಯ ಮೊದಲ ಸಂಪಾದಕರು ಬಿ.ಪುಟ್ಟಸ್ವಾಮಯ್ಯ. ಅವರ ನಂತರ ಸಂಸ್ಥೆಯ ಜನರಲ್ ಮ್ಯಾನೇಜರ್ ಸಿ.ಜಿ.ಕೆ. ರೆಡ್ಡಿ ಕೆಲಕಾಲ ಸಂಪಾದಕರಾಗಿದ್ದರು. ಟಿ.ಎಸ್. ರಾಮಚಂದ್ರರಾವ್ ಸಂಪಾದಕರಾಗಿ 27 ವರ್ಷಕಾಲ ಪತ್ರಿಕೆಯನ್ನು ಮುನ್ನಡೆಸಿದರು. ಇವರು ಬರೆಯುತ್ತಿದ್ದ ‘ಛೂಬಾಣ’ ಅಂಕಣ ಜನಪ್ರಿಯವಾಗಿತ್ತು. ತಿಳಿಹಾಸ್ಯದಲ್ಲಿ ಚುಚ್ಚುಮಾತಿನಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಆಗುಹೋಗುಗಳಿಗೆ ಟೀಕೆ ಟಿಪ್ಪಣೆಗಳನ್ನು ಛೂಬಾಣ ಒದಗಿಸುತ್ತಿತ್ತು.

ಪ್ರಜಾವಾಣಿ ಜನರಿಗೆ ಲೋಕವಿಚಾರವನ್ನು ಸರಳವಾಗಿ ತಿಳಿಸಿ ಅದರ ಹಿನ್ನಲೆ ಪರಿಣಾಮಗಳ ಬಗೆಗೆ ಮಾಹಿತಿ ನೀಡಿ ಅವರ ವಿಚಾರ ಶಕ್ತಿ ಬೆಳೆಸುವುದಕ್ಕೆ ಆದ್ಯತೆ ನಿಡಿತು. ಅದಕ್ಕೆ ಪೂರಕವಾಗಿ ಹಲವಾರು ಅಂಕಣಗಳು ಆರಂಭಗೊಂಡವು. ಪ್ರಜಾವಾಣಿಯ ವಾಚಕರ ವಾಣಿ ಅತ್ಯಂತ ಪ್ರಭಾವಶಾಲಿ ಎನಿಸಿತ್ತು.

ಅಂದಿನ ದಿನಗಳಲ್ಲಿ ಮುಖ್ಯ ವರದಿಗಾರ ಎಸ್ ವಿ ಜಯಶೀಲರಾವ್, ಆನಂತರದ ದಿನಗಳಲ್ಲಿ ರಘುರಾಂ ಶೆಟ್ಟಿ, ಪಿ.ಕೆ.ಜಾಗೀರ್‍ದಾರ್, ಶ್ರೀಧರ ಆಚಾರ್, ಅರ್ಜುನ್‍ದೇವ್, ಆರ್.ಪಿ. ಜಗದೀಶ್ ಅಂಕಣಗಳನ್ನು ಬರೆಯುತ್ತಿದ್ದರು. ಕ್ರೀಡೆಗಳಿಗೆ ಪೂರ್ಣ ಒಂದು ಪುಟ ಮೀಸಲಾದದ್ದು ಕನ್ನಡದಲ್ಲಿ ಪ್ರಥಮ.

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ, ಹಿರಿಯ ಸಾಹಿತಿಗಳನ್ನು ಪುರಸ್ಕರಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿತು. ನವೋದಯ ಪಂಥ ಚಳುವಳಿಯಿಂದ ಬಂಡಾಯ ಸಾಹಿತ್ಯ ಚಳುವಳಿಯವರೆಗೆ ಸಾಹಿತ್ಯ ಚಳವಳಿಯ ವೇದಿಕೆಯಾಗಿ ‘ಸಾಪ್ತಾಹಿಕ ಪುರವಣಿ’ ಅಗ್ರಸ್ಥಾನ ವಹಿಸಿತು. ಸಾಪ್ತಾಹಿಕ ಪುರವಣಿಯ ವಿಭಾಗದ ಆರಂಭದ ಸಂಪಾದಕರು ಎಂ.ಬಿ.ಸಿಂಗ್. ಇವರು ಮೊಟ್ಟಮೊದಲ ಸಿನಿಮಾ ಪತ್ರಕರ್ತರು ಕೂಡ. ಬಿ.ವಿ.ವೈಕುಂಠರಾಜು, ಜಿ.ಎನ್.ರಂಗನಾಥ ರಾವ್, ಡಿ.ವಿ. ರಾಜಶೇಖರ, ಗಂಗಾಧರ ಮೊದಲಿಯಾರ್, ಪಿ.ಕೆ.ಹರಿಯಬ್ಬೆ, ಲಕ್ಷ್ಮಣ ಕೊಡಸೆ, ರಘುನಾಥ ಚ.ಹ, ಪದ್ಮರಾಜ ದಂಡಾವತಿ ಮುಂತಾದವರು ವಿವಿಧ ಕಾಲಘಟ್ಟಗಳಲ್ಲಿ ಸಾಪ್ತಾಹಿಕ ಪುರವಣಿ ನಿರ್ವಹಿಸಿದರು.

ಪ್ರಜಾವಣಿ ದೀಪಾವಳಿ ಸಂಚಿಕೆಗಳು, ಸಾಹಿತ್ಯ ಸಂಚಿಕೆಗಳ ವೈಶಿಷ್ಟ್ಯಪೂರ್ಣವಾಗಿದ್ದುವು. ಹಲವು ಪ್ರಸಿದ್ಧ ಕತೆಗಾರರು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಮೂಲಕ ಬೆಳಕಿಗೆ ಬಂದರು. ಟಿ ಎಸ್ ರಾಮಚಂದ್ರರಾಯರು (ನಿಧನ : 11.04.1977) ನಿಧನರಾದ ಮೇಲೆ ಸುದ್ದಿ ಸಂಪಾದಕರಾಗಿದ್ದ ವೈ ಎನ್ ಕೃಷ್ಣಮೂರ್ತಿ ಸಂಪಾದಕರಾದರು. ಪ್ರಜಾವಾಣಿ ಸಾಪ್ತಾಹಿಕದಲ್ಲಿದ್ದು ನಂತರ ಸುಧಾ, ಮಯೂರ ಸಂಪಾದಕರಾಗಿದ್ದ ಎಂ. ಬಿ. ಸಿಂಗ್, ಪ್ರಜಾವಾಣಿಗೂ 1980ರಲ್ಲಿ ಸಂಪಾದಕರಾದರು. ಅನಂತರ ಪ್ರಿಂಟರ್ಸ್ ಲಿಮಿಟೆಡ್‍ನ ಮ್ಯಾನೆಜಿಂಗ್ ಡೈರೆಕ್ಟರಾದ ಕೆ ಎನ್ ಹರಿಕುಮಾರ್ ಪ್ರಜಾವಾಣಿಯಲ್ಲದೆ ಸಂಸ್ಥೆಯ ಇತರ ಪ್ರಕಟಣೆಗಳಾದ ಸುಧಾ, ಮಯೂರ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಸಂಪಾದಕರಾದರು. ಮುಂದೆ ಕೆ ಎನ್ ಶಾಂತಕುಮಾರ್ ಪ್ರಜಾವಾಣಿ ಸಂಪಾದಕತ್ವ ವಹಿಸಿದರು. ಈ ಸಂಸ್ಥೆಯ ಪ್ರಜಾವಾಣಿ ಮತ್ತು ಇತರ ನಿಯತಕಾಲಿಕಗಳ ಮೂಲಕ ಅನೇಕ ಬರಹಗಾರರು ಮಾತ್ರವಲ್ಲದೆ ಕಲಾವಿದರೂ ಸಹಾ ಪ್ರಸಿದ್ಧರಾಗಿದ್ದಾರೆ.

ಬೆಂಗಳೂರು ಕೇಂದ್ರವೇ ಅಲ್ಲದೆ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ, ಮಂಗಳೂರು ದಾವಣಗೆರೆ ಕೇಂದ್ರಗಳಿಂದಲೂ ಪ್ರಜಾವಾಣಿ ಆವೃತ್ತಿ ಈಗ ಪ್ರಕಟವಾಗುತ್ತಿದೆ.

LEAVE A REPLY

Please enter your comment!
Please enter your name here